ಮಡಿಕೇರಿ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನೋಟಿಸ್ ವಿಚಾರಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ 622 ಮಂದಿ ಅನರ್ಹರಾಗಿದ್ದಾರೆ.

ನೋಟಿಸ್ ವಿಚಾರಣೆ ಸಂದರ್ಭದಲ್ಲಿ ಸಮರ್ಪಕವಾದ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿದ್ದ 622 ಮತದಾರರನ್ನು ಅಂತಿಮ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ. ಆ.24ರಂದು ಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿತ್ತು. ಈ ಸಂದರ್ಭ ಲಾಜಿಕಲ್ ಡಿಸ್ಕ್ರಿಪೆನ್ಸಿ ಮತ್ತು ಅನ್ ಮ್ಯಾಪಿಂಗ್ ಎಂದು ಕೊಡಗು ಜಿಲ್ಲೆಯಲ್ಲಿ 58,883 ಮತದಾರರಿಗೆ ನೋಟಿಸ್ ಜನರೇಟ್ ಮಾಡಲಾಗಿತ್ತು.

ಆ.24 ರಿಂದ ಅ.12ರವರೆಗೆ ನೋಟಿಸ್ ಪಡೆದ ಮತದಾರರ ವಿಚಾರಣೆಗೆ ದಿನಾಂಕ ನಿಗದಿ ಮಾಡಲಾಗಿತ್ತು.

ಮಡಿಕೇರಿ ಕ್ಷೇತ್ರದಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಅಡಿಯಲ್ಲಿ 9,252 ಹಾಗೂ ಅನ್ ಮ್ಯಾಪಿಂಗ್ 9,533 ಮತದಾರರು ಸೇರಿ 18,785 ಮತದಾರರಿಗೆ ನೋಟಿಸ್ ನೀಡಲಾಗಿತ್ತು.

ವಿರಾಜಪೇಟೆ ಕ್ಷೇತ್ರದಲ್ಲಿ 26,558 ಮತದಾರರು ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ 13,550 ಮತದಾರರು ಅನ್ ಮ್ಯಾಪಿಂಗ್ ಮತದಾರರು ಸೇರಿ 40,108 ಮಂದಿಗೆ ನೋಟಿಸ್ ನೀಡಲಾಗಿತ್ತು.ಅ. 12ರವರೆಗೆ ನೋಟಿಸ್ ಪಡೆದ ಮತದಾರರ ವಿಚಾರಣೆ ಪೂರ್ಣಗೊಳಿಸಲಾಗಿತ್ತು.ಇದೀಗ ಪ್ರಕ್ರಿಯೆ ಪೂರ್ಣಗೊಂಡಿದೆ.

ಮಡಿಕೇರಿ ಕ್ಷೇತ್ರದಲ್ಲಿ 157 ಮಂದಿ ಮತದಾರರು ಅನರ್ಹ:

ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 18,779 ಮತದಾರರಿಗೆ ನೋಟಿಸ್ ನೀಡಲಾಗಿತ್ತು.ಈ ಪೈಕಿ 157 ಮತದಾರರು ಅಂತಿಮ ಪಟ್ಟಿಯಲ್ಲಿ ಅವಕಾಶ ಪಡೆಯಲು ಅನರ್ಹರಾಗಿದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ 4,077 ನೋಟಿಸ್ ಪಡೆದ ಮತದಾರರ ಪೈಕಿ 32 ಮಂದಿ ಅನರ್ಹರಾಗಿದ್ದಾರೆ. ಕುಶಾಲನಗರ ತಾಲೂಕಿನಲ್ಲಿ 5,684 ನೋಟಿಸ್ ಪಡೆದ ಮತದಾರರಲ್ಲಿ 27 ಮಂದಿ ಅನರ್ಹರಾಗಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ 9,018 ಮಂದಿ ಮತದಾರರಿಗೆ ನೋಟಿಸ್ ನೀಡಲಾಗಿತ್ತು,ಈ ಪೈಕಿ 98 ಮತದಾರರು ಅನರ್ಹರಾಗಿದ್ದಾರೆ.

ವಿರಾಜಪೇಟೆ ಕ್ಷೇತ್ರದಲ್ಲಿ 465 ಮಂದಿ ಮತದಾರರು ಅನರ್ಹ:

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಲಾಜಿಕಲ್ ಡಿಸ್ಕ್ರಿಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ 40,104 ಮಂದಿ ಮತದಾರರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ತಿಳಿಸಲಾಗಿತ್ತು.ಈ ಪೈಕಿ 465 ಮಂದಿ ಮತದಾರರು ಅನರ್ಹರಾಗಿದ್ದಾರೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಮಡಿಕೇರಿ ತಾಲೂಕಿನಲ್ಲಿ 12,261 ಮತದಾರರಿಗೆ ನೋಟಿಸ್ ನೀಡಲಾಗಿತ್ತು, ಈ ಪೈಕಿ 123 ಅನರ್ಹ ಮತದಾರರನ್ನು ಗುರುತಿಸಲಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ 11,200 ಮತದಾರರಿಗೆ ನೋಟಿಸ್ ನೀಡಲಾಗಿತ್ತು ಈ ಪೈಕಿ 44 ಮಂದಿ ಅನರ್ಹರಾಗಿದ್ದಾರೆ. ಪೊನ್ನಂಪೇಟೆ ತಾಲೂಕಿನಲ್ಲಿ 16,643 ಮತದಾರರಿಗೆ ನೋಟಿಸ್ ನೀಡಲಾಗಿತ್ತು,ಇದರಲ್ಲಿ 298 ಮತದಾರರು ಅನರ್ಹರಾಗಿದ್ದಾರೆ.

ಜಿಲ್ಲೆಯಲ್ಲಿ 6,113 ಮತದಾರರು ಹೆಚ್ಚಳ:

ಜಿಲ್ಲೆಯಲ್ಲಿ ಆ.24ರಂದು ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 4,05,803 ಮತದಾರರು ಇದ್ದರು. ಇದೀಗ ಅ.15ರವರೆಗೆ ಜಿಲ್ಲೆಯಲ್ಲಿ 4,11,916 ಮಂದಿ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಮತದಾರರ ಪೈಕಿ 3,372 ಮಹಿಳಾ ಮತದಾರರು ಹಾಗೂ 2,741ಪುರುಷ ಮತದಾರರು ಇದ್ದಾರೆ.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಸೇರಿಸಿ 2,01,035 ಪುರುಷರು,2,10,877 ಮಹಿಳಾ ಮತದಾರರು ಹಾಗೂ 04 ಇತರ ಮತದಾರರು ಸೇರಿಸಿ 4,11,916 ಮತದಾರರು ಇದ್ದಾರೆ.

ಜಿಲ್ಲೆಯಲ್ಲಿ 29,380 ಅರ್ಜಿ ಸಲ್ಲಿಕೆ:

ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ, ಹೆಸರು ತೆಗೆಯುವಿಕೆ,ತಿದ್ದುಪಡಿ ಸೇರಿ ಜೂ.16ರಿಂದ ಅ.15ರವರೆಗೆ ಒಟ್ಟು 29,380 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಎಸ್‌ಐಆರ್ ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಹಕ್ಕು ಮತ್ತು ಆಕ್ಷೇಪ ಸಲ್ಲಿಸಲು ಸೆ.23ರವರೆಗೆ ಅವಕಾಶ ನೀಡಲಾಗಿತ್ತು. ಸೆ.24ರಿಂದ ಅ.22ವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಗೆ ದಿನಾಂಕ ನಿಗದಿಪಡಿಸಲಾಗಿತ್ತು.ಜಿಲ್ಲೆಯಲ್ಲಿ ಫಾರಂ-6 (ಹೊಸ ಸೇರ್ಪಡೆ) 6,950, ಫಾರಂ-6ಎ- 22, ಫಾರಂ-7 (ಹೆಸರು ತೆಗೆಯುವಿಕೆ) 1,884, ಫಾರಂ-8 (ತಿದ್ದುಪಡಿ) 20,524 ಅರ್ಜಿಗಳು ಸಲ್ಲಿಕೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor