ಮೂಲತಃ ಚಕ್ಕಿಲಿಯನ್ ಸಮುದಾಯ ತಮಿಳುನಾಡಿನಿಂದ ಬಂದವರಾಗಿದ್ದು, ತಮಿಳಿನ ಅರುಂಧತಿಯಾರ್ ಸಮುದಾಯಕ್ಕೆ ಹತ್ತಿರದವರಂತೆ ಕಾಣುತ್ತಾರೆ. ತೆಲುಗು ಮಾತನಾಡುವ ಇವರಿಗೂ ಮತ್ತು ಅರುಂಧತಿಯಾರ್ ಸಮುದಾಯಕ್ಕೂ ಸಾಂಸ್ಕೃತಿಕವಾಗಿ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಮಾನವಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

‘ಚಪ್ಪಲಿ ಹೊಲಿಯುವ’ ಅನ್ನುವ ಬದಲು ‘ಚಪ್ಪಲಿ ತೊಳೆಯುವ’ ಎಂದಿರುವುದಕ್ಕೆ ಕಾರಣವಿದೆ!? ಬೆಂಗಳೂರಿನ ಕಲಾಸಿಪಾಳ್ಯಂ ಫುಟ್‌ಪಾತ್‌ಗಳಲ್ಲಿ ಸಾಲುಸಾಲು ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು, ಆ ಅಂಗಡಿಗಳ ಮುಂದೆ ರಾಶಿರಾಶಿ ಹಳೇ ಬೂಟು, ಚಪ್ಪಲಿಗಳನ್ನು ಹಾಕಿಕೊಂಡು, ಒಂದು ಬಕೆಟ್ ಅಥವಾ ಡಬ್ಬದಲ್ಲಿ ನೀರು ತುಂಬಿಕೊಂಡು ಹಳೆಯ ಚಪ್ಪಲಿಗಳನ್ನು ನೆನೆಸುತ್ತಾ ಉಜ್ಜಿ ಉಜ್ಜಿ ತೊಳೆಯುತ್ತಿರುತ್ತಾರೆ! ಹಳೇ ಚಪ್ಪಲಿ, ಬೂಟುಗಳನ್ನು ಕೊಂಡುತಂದು ನೀರಲ್ಲಿ ನೆನೆಸಿ, ತೊಳೆದು, ಹರಿದಿರುವ ಕಡೆ ಹೊಲಿದು ರಿಪೇರಿ ಮಾಡಿ, ಪಾಲಿಶ್ ಹಾಕಿ, ಅವನ್ನು ಹೊಸದರಂತೆ ಮಾಲಿಶ್ ಮಾಡಿ ಮಾರುತ್ತಾ ಹೊಟ್ಟೆಹೊರೆಯುವವರು ‘ಚಕ್ಕಿಲಿಯನ್’ ಸಮುದಾಯದವರು. ಈಗಲೂ ನೀವು ಬೆಂಗಳೂರಿನ ಕಲಾಸಿಪಾಳ್ಯದ ಕಡೆ ಹೋದರೆ ಚಕ್ಕಿಲಿಯನ್ ಸಮುದಾಯದವರನ್ನು ಕಣ್ಣಾರೆ ನೋಡಬಹುದು.

ಮೂಲತಃ ಚಕ್ಕಿಲಿಯನ್ ಸಮುದಾಯ ತಮಿಳುನಾಡಿನಿಂದ ಬಂದವರಾಗಿದ್ದು, ತಮಿಳಿನ ಅರುಂಧತಿಯಾರ್ ಸಮುದಾಯಕ್ಕೆ ಹತ್ತಿರದವರಂತೆ ಕಾಣುತ್ತಾರೆ. ತೆಲುಗು ಮಾತನಾಡುವ ಇವರಿಗೂ ಮತ್ತು ಅರುಂಧತಿಯಾರ್ ಸಮುದಾಯಕ್ಕೂ ಸಾಂಸ್ಕೃತಿಕವಾಗಿ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಮಾನವಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಅಂತೆಯೇ ಕರ್ನಾಟಕದಲ್ಲಿ ಮಾದಿಗ ಸಮುದಾಯಕ್ಕೂ ಮತ್ತು ಚಕ್ಕಿಲಿಯನ್ ಸಮುದಾಯಕ್ಕೂ ನಡುವೆ ಸಾಂಸ್ಕೃತಿಕವಾಗಿ ಹೆಚ್ಚು ಸಾಮ್ಯಗಳಿವೆ. ಅದೇ ರೀತಿ ಎಚ್.ಎ. ಸ್ಟುವರ್ಟ್ ಹೇಳುವ ಪ್ರಕಾರ ‘ಚಕ್ಕಿಲಿಯನ್ನರು ತೆಲುಗು ರಾಜ್ಯದ ಮಾದಿಗರಿಗೆ ಹೋಲುವಂತಹ, ತಮಿಳು ಜಿಲ್ಲೆಗಳಲ್ಲಿ ಕಂಡುಬರುವ ಚರ್ಮಕಾರರಾಗಿದ್ದಾರೆ. ಚಕ್ಕಿಲಿಯನ್ನರು ತೆಲುಗು ಮತ್ತು ಕನ್ನಡ ಜಿಲ್ಲೆಗಳಿಂದ ವಲಸೆ ಬಂದವರಂತೆ ಕಾಣುತ್ತಾರೆ. ಚಕ್ಕಿಲಿಯನ್ನರು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳನ್ನು ಮಾತನಾಡುವವರಾಗಿದ್ದು, ಸಾಮಾಜಿಕವಾಗಿ ಅತ್ಯಂತ ಕೆಳಸ್ತರದಲ್ಲಿ ಇದ್ದಾರೆ. ಇವರ ಮತ್ತು ಪರೈಯರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ, ಹೆಸರಿಗೆ ಶೈವರಂತೆ ಕಾಣುವ ಇವರು ವಾಸ್ತವದಲ್ಲಿ ಭೂತಾರಾಧಕರು, ಇವರು ತಂಗಡಿ ಗಿಡವನ್ನು ವಿಶೇಷ ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ.

ಅಬ್ಬೆ ದುಬೋಯಿಸ್ ಅವರು ‘ಚಕ್ಲರ್ ಅಥವಾ ಚಮ್ಮಾರರು ಪರೈಗಳಿಗಿಂತ ಕೀಳುದರ್ಜೆಯವರೆಂದು ಪೆನಿನ್ಸುಲಾದ ಎಲ್ಲೆಡೆ ಪರಿಗಣಿಸಲಾಗುತ್ತದೆ. ಇವರು ಕುಡಿತ ಮತ್ತು ವ್ಯಭಿಚಾರದ ವ್ಯಸನಿಗಳಾಗಿದ್ದಾರೆ, ಇವರಿರುವ ಗ್ರಾಮಗಳು ಸಂಜೆಯಾದಾಕ್ಷಣ ಹೊಡೆದಾಟ ಮತ್ತು ಚೀರಾಟಗಳ ಶಬ್ದಗಳಿಂದ ಪ್ರತಿಧ್ವನಿಸುತ್ತವೆ’ ಎಂದು ಅತ್ಯಂತ ಕೆಟ್ಟದಾಗಿ ದಾಖಲಿಸುತ್ತಾ ಹೋಗುತ್ತಾರೆ.

1868ರ ಮಧುರೈ ಕೈಪಿಡಿಯಲ್ಲಿ ‘ಚರ್ಮವನ್ನು ಹದಗೊಳಿಸುವವರು ಮತ್ತು ಚಪ್ಪಲಿಗಳನ್ನು, ಕುದುರೆಯ ಜೀನು ಹಾಗೂ ಚರ್ಮದ ಇತರ ವಸ್ತುಗಳನ್ನು ತಯಾರಿಸುವವರು. ಅವರು ಕುಡಿತ ಹಾಗೂ ಇತರ ಕೆಟ್ಟ ಚಟಗಳ ವ್ಯಸನಿಗಳು. ಅವರ ನೀತಿಗಳು ಬಹಳ ಕೆಟ್ಟದಾಗಿವೆ. ಅತ್ಯಂತ ಕುತೂಹಲಕರ ಸಂಗತಿಯೆಂದರೆ ಇವರ ಮಹಿಳೆಯರು ‘ಪದ್ಮಿನಿ’ ರೀತಿಯವರು; ಅಂದರೆ ಇವರು ವಿಲಕ್ಷಣವಾದ ಮುಖ ಸೌಂದರ್ಯ ಹಾಗೂ ಆಕಾರವನ್ನು ಹೊಂದಿರುತ್ತಾರೆ ಮತ್ತು ತುಂಬಾ ಸದಾಚಾರಿಗಳೂ ಆಗಿರುತ್ತಾರೆ. ತುಂಬಾ ಪ್ರಚಲಿತವಿರುವ ಸಂಗತಿಯೇನೆಂದರೆ ಇವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶದ, ಮುಖ್ಯವಾಗಿ ಪರಮಗುಡಿಯ ಸುತ್ತಮುತ್ತಲಿನ ಸ್ಥಳಗಳಲ್ಲಿರುವ ಜಮೀನ್ದಾರರು ಹಾಗೂ ಶ್ರೀಮಂತರು ಇವರೊಂದಿಗೆ ಗುಪ್ತಸಂಬಂಧವನ್ನು ಇರಿಸಿಕೊಂಡಿರುತ್ತಾರೆ. ಇವರಿಗೆ ಸಂಬಂಧಿಸಿದಂತೆ ತಮಿಳು ಗಾದೆಯೊಂದು ಪ್ರಚಲಿತದಲ್ಲಿದೆ ‘ಪ್ರಾಯಕ್ಕೆ ಬಂದಾಗ ಚಕ್ಕಿಲಿ ಹುಡುಗಿ ಹಾಗೂ ಸಾಸಿವೆ ತೆನೆಯೂ ಸುಂದರವಾಗಿರುತ್ತದೆ...’ ಮುಂತಾಗಿ ಚಕ್ಕಿಲಿಯನ್ನರ ಕುರಿತು ಕೈಪಿಡಿಯಲ್ಲಿ ದ್ವಂದ್ವಾತ್ಮಕವಾಗಿ ದಾಖಲಿಸಲಾಗಿದೆ!

ವಿಶೇಷವೆಂದರೆ ಮದ್ರಾಸಿನಲ್ಲಿದ್ದ ಚಕ್ಕಿಲಿಯನ್ ಪುರುಷರು ತಮ್ಮ ಹಣೆಯ ಮೇಲೆ ಮಾತ್ರವಲ್ಲ, ಎದೆ ಹಾಗೂ ದೇಹದ ಮೇಲ್ಭಾಗಗಳ ಮೇಲೆಯೂ ತಮ್ಮ ಹೆಸರು, ಸಾಂಪ್ರದಾಯಿಕ ಚಿನ್ಹೆಗಳಷ್ಟನ್ನೇ ಅಲ್ಲ ತಾವು ಇಷ್ಟಪಡುವ ನರ್ತಕಿಯರ ಹೆಸರುಗಳ ಸಮೇತ ಹಚ್ಚೆ ಹಾಕಿಸಿಕೊಳ್ಳುತ್ತಾರೆ! ಮತ್ತೊಂದು ಕುತೂಹಲಕರ ವಿಷಯವೆಂದರೆ ಚಕ್ಕಿಲಿಯನ್ನರ ಪುರುಷರು ಬಲಪಂಥೀಯ ಧೋರಣೆಯವರಾದರೆ, ಬಣಾಧಾರಿತ ದೊಂಬಿಯ ಸಂಪೂರ್ಣ ಅವಧಿಯಲ್ಲಿ ಚಕ್ಕಿಲಿ ಮಹಿಳೆಯರು ತಮ್ಮ ಪತಿಯಿಂದ ಪ್ರತ್ಯೇಕವಾಗಿಯೇ ಉಳಿದರು ಮತ್ತು ವೈವಾಹಿಕ ಹಕ್ಕುಗಳನ್ನು ನಿರಾಕರಿಸಿದ ಬಗ್ಗೆ ‘ಮ್ಯಾನುಯಲ್ ಆಫ್ ದ ಮದುರ ಡಿಸ್ಟ್ರಿಕ್ಟ್’ ದಾಖಲಿಸಿದೆ.

ಚಕ್ಕಿಲಿಯನ್ನರ ಪ್ರಮುಖ ದೇವರುಗಳೆಂದರೆ ಮಧುರೈ ವೀರನ್, ಮಾರಿಯಮ್ಮ, ಮುನೇಶ್ವರ, ದ್ರೌಪದಿ ಹಾಗೂ ಗಂಗಮ್ಮ. ಇವರು ಸಾಂಸ್ಕೃತಿಕವಾಗಿ ಮಾದಿಗರಿಗೆ ಎಷ್ಟೇ ಹತ್ತಿರವಿದ್ದರೂ ಮಾತಂಗಿಯನ್ನು ಪೂಜಿಸುವುದಿಲ್ಲ. ಹಿಂದೊಮ್ಮೆ ಜನಗಣತಿ ನಡೆಸಿದಾಗ ಚಕ್ಕಿಲಿಯನ್ನರು ತಮ್ಮನ್ನು ಪಗಡೈ, ಮದಾರಿ(ಜಂಬ ಅಥವಾ ಅಹಂಕಾರ) ಹಾಗೂ ರಣವೀರನ್(ವೀರ ಯೋಧ) ಎಂದು ದಾಖಲಿಸಿದ್ದಾರೆ.

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಚಕ್ಕಿಲಿಯನ್ನರನ್ನು ಚಪ್ಪಲಿ, ತಮಟೆ ಮತ್ತು ಕೃಷಿಗೆ ಬೇಕಾದ ಚರ್ಮದ ಸಲಕರಣೆಗಳನ್ನು ತಯಾರಿಸುವ ಚರ್ಮಕಾರರೆಂದೇ ಗುರುತಿಸಲಾಗಿದೆ. ‘ಚಕ್ರಿಕ’ ಅಂದರೆ ಸಂಸ್ಕೃತದಲ್ಲಿ ‘ಚಪ್ಪಲಿ ಹೊಲಿಯುವವನು’ ಎಂದರ್ಥವಂತೆ. ಈ ಕಾರಣಕ್ಕೆ ಚಕ್ಕಿಲಿಯನ್ ಎಂಬ ಹೆಸರು ಬಂತಂತೆ. ಕರ್ನಾಟಕದಲ್ಲಿ ಪ್ರಮುಖವಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮೈಸೂರು ಮತ್ತು ಬಳ್ಳಾರಿಯಲ್ಲಿ ಚಕ್ಕಿಲಿಯನ್ ಸಮುದಾಯವಿದೆ. ಡಾ.ಅಂಬೇಡ್ಕರ್‌ರವರು ಗುರುತಿಸಿರುವಂತೆ ಈ ಸಮುದಾಯದಲ್ಲಿ ಒಂದಿವೀರನ್, ಪಗಡೈ, ಮಧುರೈ ವೀರನ್‌ರಂತಹ ವೀರರಿದ್ದಾರೆ. ಭೂರಹಿತ ಈ ದಲಿತ ಸಮುದಾಯ ಕೇವಲ ಹದಿನೈದರಿಂದ ಇಪ್ಪತ್ತು ಸಾವಿರ ಇರಬಹುದು. ಈ ಸಮುದಾಯ ಇಂದಿಗೂ ಅಸ್ಪಶ್ಯತೆಯನ್ನು ಅನುಭವಿಸುತ್ತಿದೆ. ಸಾಮಾಜಿಕವಾಗಿಯಂತೂ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ ಎಂಬುದು ವಿಪರ್ಯಾಸ.

(ಅಂಕಣಕಾರರು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಹಿರಿಯ ವಕೀಲರು, ಚಿಂತಕರು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿ.ಎಸ್. ದ್ವಾರಕಾನಾಥ್

contributor