×
Ad

ಆರೆಸ್ಸೆಸ್‌ ಅನ್ನು ನಿಷೇಧಿಸದೆ ನಿಯಂತ್ರಿಸಿದ 'ತಮಿಳುನಾಡು ಮಾದರಿ'

Update: 2025-10-17 17:54 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಮೊದಲು ತನ್ನ ಪ್ರಚೋದನಾಕಾರಿ ಭಾಷಣಗಳಿಗಾಗಿ ಹೆಸರಾಗಿರುವ ಆರೆಸ್ಸೆಸ್ ಪದಾಧಿಕಾರಿ ಕಲ್ಲಡ್ಕ ಪ್ರಭಾಕರ ಭಟ್ ಅವರು ವಿಹಿಂಪ ಕಾರ್ಯಕ್ರಮವೊಂದರಲ್ಲಿ ‘ಕೇಸರಿ ಧ್ವಜವು ಒಂದಲ್ಲ ಒಂದು ದಿನ ತ್ರಿವರ್ಣ ಧ್ವಜದ ಬದಲಿಗೆ ರಾಷ್ಟ್ರಧ್ವಜದ ಸ್ಥಾನವನ್ನು ಅಲಂಕರಿಸಲಿದೆ’ ಎಂದು ಘೋಷಿಸಿದ್ದರು.

ಅದೇ ವರ್ಷ ಭಟ್ ಅವರನ್ನು ಮಂಗಳೂರು ವಿವಿಯ ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಇದು ಆರೆಸ್ಸೆಸ್ ಸಿದ್ಧಾಂತವು ಹೇಗೆ ಸಾರ್ವಜನಿಕ ಸಂಸ್ಥೆಗಳನ್ನು ಆಳವಾಗಿ ಪ್ರವೇಶಿಸಿದೆ ಎನ್ನುವುದನ್ನು ಬಹಿರಂಗಗೊಳಿಸಿತ್ತು.

ಆರೆಸ್ಸೆಸ್ ಸುದೀರ್ಘ ಕಾಲದಿಂದಲೂ ತನ್ನನ್ನು ಸಾಂಸ್ಕೃತಿಕ ಮತ್ತು ರಾಷ್ಟ್ರವಾದಿ ಸಂಘಟನೆಯನ್ನಾಗಿ ಬಿಂಬಿಸಿ ಕೊಂಡಿದೆ. ಆದರೆ ಅದರ ದಾಖಲೆ ಬೇರೆಯದೇ ಕಥೆಯನ್ನು ಹೇಳುತ್ತಿದೆ. ವರ್ಷಗಳಿಂದಲೂ ಅದರ ಹಲವಾರು ನಾಯಕರು ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ ಮತ್ತು ಜಾತ್ಯೀತತವಾದದ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆಗಾಗ್ಗೆ ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ವಿಭಜನಕಾರಿ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಮುಸ್ಲಿಮರು ಮತ್ತು ಕ್ರೈಸ್ತ ಸಮುದಾಯಗಳ ವಿರುದ್ಧ ಹಿಂಸಾಚಾರದ ಘಟನೆಗಳಲ್ಲಿ ಅದರ ಪಾತ್ರವನ್ನು ನ್ಯಾಯಾಂಗ ಆಯೋಗಗಳು ಮತ್ತು ಮಾನವ ಹಕ್ಕು ಗುಂಪುಗಳು ವಿವರವಾಗಿ ದಾಖಲಿಸಿವೆ.

ಆರೆಸ್ಸೆಸ್ ಜಾಲ: ರಾಜಕೀಯ ಉದ್ದೇಶಗಳನ್ನು ಹೊಂದಿರುವ ಸಾಂಸ್ಕೃತಿಕ ರಂಗ

ಆರೆಸ್ಸೆಸ್ ದಶಕಗಳಿಂದಲೂ ತನ್ನನ್ನು ಸಾಂಸ್ಕೃತಿಕ ಆಂದೋಲನ ಎಂದು ಬಣ್ಣಿಸಿಕೊಂಡಿದೆ, ಆದರೆ ಅದರ ಕಾರ್ಯಾಚರಣೆಗಳು ಹೆಚ್ಚು ರಾಜಕೀಯ ಸ್ವರೂಪವನ್ನೇ ತೋರಿಸುತ್ತಿವೆ.

ಸಾರ್ವಜನಿಕ ಸ್ಥಳಗಳಲ್ಲಿ ದೈನಂದಿನ ಶಾಖೆಗಳು, ಅರೆಸೈನಿಕ ಶೈಲಿಯ ಕವಾಯತುಗಳು, ಸೈದ್ಧಾಂತಿಕ ತರಬೇತಿ ಬೈಠಕ್‌ಗಳು, ಮತ್ತು ದೇವಸ್ಥಾನಗಳು ಹಾಗೂ ಶಿಕ್ಷಣ ಸಂಸ್ಥೆಗಳ ವಿಶಾಲ ಜಾಲದ ಮೂಲಕ ಆರೆಸ್ಸೆಸ್ ಹಿಂದು ಸಮಾಜದಲ್ಲಿ ವ್ಯಾಪಕ ಪ್ರಭಾವದ ವ್ಯವಸ್ಥೆಯನ್ನು ನಿರ್ಮಿಸಿದೆ.

ಆರೆಸ್ಸೆಸ್ ಸಾಮಾನ್ಯ ಸಮಯಗಳಲ್ಲಿ ಸಾಂಸ್ಕೃತಿಕ ಅಥವಾ ಧಾರ್ಮಿಕ ಸಂಸ್ಥೆಯಾಗಿ ಕಾಣಿಸಿಕೊಳ್ಳುತ್ತದೆ. ಕೋಮು ಗಲಭೆಗಳ ಸಂದರ್ಭದಲ್ಲಿ ತನ್ನ ಕಾರ್ಯಕರ್ತರನ್ನು ಪದಾತಿ ಸೈನಿಕರನ್ನಾಗಿ ಪರಿವರ್ತಿಸುತ್ತದೆ. ಚುನಾವಣೆಗಳ ಸಮಯಗಳಲ್ಲಿ ಬಿಜೆಪಿಯ ಚುನಾವಣಾ ಯಂತ್ರವಾಗಿ ಕಾರ್ಯ ನಿರ್ವಹಿಸುತ್ತೆ. ತನ್ನ ಪಾತ್ರಗಳನ್ನು ತಕ್ಷಣ ಬದಲಿಸುವ ಆರೆಸ್ಸೆಸ್‌ನ ಸಾಮರ್ಥ್ಯವು ಅದನ್ನು ಇತರ ಯಾವುದೇ ಸಂಘಟನೆಗಳಿಗಿಂತ ಭಿನ್ನವಾಗಿಸಿದೆ. ಈ ಪರಿವರ್ತನಾ ಗುಣಲಕ್ಷಣವು ಆರೆಸ್ಸೆಸ್‌ಗೆ ಸರಿಸಾಟಿಯಲ್ಲದ ವ್ಯಾಪ್ತಿ ಮತ್ತು ಶಕ್ತಿಯನ್ನು ನೀಡಿದೆ.

ಜಾತ್ಯತೀತ ಸರಕಾರಗಳಿಗೆ ಎಚ್ಚರಿಕೆಯ ಗಂಟೆ

ಇತ್ತೀಚಿನ ವರ್ಷಗಳಲ್ಲಿ ಜಾತ್ಯತೀತ, ಬಿಜೆಪಿಯೇತರ ಸರಕಾರಗಳು ಆರೆಸ್ಸೆಸ್‌ಗೆ ಅನಿಯಂತ್ರಿತವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವುದರ ಅಪಾಯಗಳನ್ನು ಅರಿತುಕೊಳ್ಳುತ್ತಿವೆ.

ಅಧಿಕಾರಿಗಳು ಆಗಾಗ್ಗೆ ಇತರ ಸಂಘಟನೆಗಳನ್ನು ನಿರ್ಬಂಧಿಸುತ್ತಾರಾದರೂ ಈ ವರ್ಷ ಸಂಪೂರ್ಣ ಪೋಲಿಸ್ ಮತ್ತು ಆಡಳಿತಾತ್ಮಕ ಬೆಂಬಲದೊಂದಿಗೆ ಕರ್ನಾಟಕದಲ್ಲಿ ನಡೆದ ಆರೆಸ್ಸೆಸ್ ನ ಸಾವಿರಾರು ವಿಜಯದಶಮಿ ರ‍್ಯಾಲಿಗಳು ಎಚ್ಚರಿಕೆಯ ಗಂಟೆಯಾಗಿವೆ.

ಸಾವಿರಾರು ಜನರು ಸೇರಿದ್ದ ಬೃಹತ್ ರ‍್ಯಾಲಿಗಳು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆಯವರು ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವಂತೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಆರೆಸ್ಸೆಸ್ ಅನ್ನು ನಿರ್ಬಂಧಿಸಿರುವ ತಮಿಳುನಾಡಿನ ಮಾದರಿಯನ್ನು ಅಧ್ಯಯನ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ತಮಿಳುನಾಡು ಮಾದರಿ: ನಿಷೇಧಿಸದೆ ನಿರ್ಬಂಧ

ಡಿಎಂಕೆ ನೇತೃತ್ವದ ತಮಿಳುನಾಡು ಸರಕಾರವು ಕಾನೂನು ಸವಾಲುಗಳನ್ನು ಆಹ್ವಾನಿಸಬಹುದಾದ ಸಂಪೂರ್ಣ ನಿಷೇಧದ ಬದಲು ಕಾರ್ಯಕಾರಿ ಆದೇಶಗಳು, ಪೋಲಿಸ್ ನಿರ್ದೇಶನಗಳು, ಆಡಳಿತಾತ್ಮಕ ಮಾರ್ಗಸೂಚಿಗಳು ಮತ್ತು ಇಲಾಖಾ ಸುತ್ತೋಲೆಗಳನ್ನು ಬಳಸಿಕೊಳ್ಳುವ ಮೂಲಕ ಪ್ರಾಯೋಗಿಕ, ಕಡಿಮೆ ಸಂಘರ್ಷದ ಮಾದರಿಯನ್ನು ಅನುಸರಿಸಿದೆ. ತಮಿಳುನಾಡು ಸರಕಾರಿ ಕಚೇರಿಗಳು, ಶಾಲೆಗಳು ಮತ್ತು ಸಾರ್ವಜನಿಕ ಮೈದಾನಗಳಲ್ಲಿ ಆರೆಸ್ಸೆಸ್ ಪ್ರವೇಶವನ್ನು ಸದ್ದಿಲ್ಲದೆ ನಿರ್ಬಂಧಿಸಿದೆ.

ತಮಿಳುನಾಡು ಮಾದರಿಯು ವಿಭಜನಕಾರಿ ಸಂಘಟನೆಗಳು ಒಡ್ಡುವ ಅಪಾಯಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಸೈದ್ಧಾಂತಿಕವಾಗಿ ವಶಪಡಿಸಿಕೊಳ್ಳುವುದನ್ನು ತಡೆಯಲು ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಅದು ಮೂಲತಃ ಆಡಳಿತ ಆಧಾರಿತ ಪರಿಹಾರವಾಗಿದೆಯೇ ಹೊರತು ರಾಜಕೀಯ ಸಂಘರ್ಷವಲ್ಲ.

ತಮಿಳುನಾಡು ಕೈಗೊಂಡಿರುವ ಪ್ರಮುಖ ಕ್ರಮಗಳು

► ಸರಕಾರಿ ಶಾಲಾ ಆವರಣಗಳ ಬಳಕೆಗೆ ನಿರ್ಬಂಧ

►ಬಾಹ್ಯ ಭಾಷಣಕಾರರ ಕುರಿತು ವಿವಾದಗಳ ಬಳಿಕ ಶಾಲಾ ಶಿಕ್ಷಣ ಇಲಾಖೆಯು ಸೆ.2024ರಲ್ಲಿ ಶಾಲಾ ಮಖ್ಯೋಪಾಧ್ಯಾಯರಿಗೆ ನಿರ್ದೇಶನವನ್ನು ಹೊರಡಿಸಿ ಪೂರ್ವಾನುಮತಿಯಿಲ್ಲದೆ ಶಾಲಾ ಮೈದಾನಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಹೊರಗಿನವರಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಾಗಿ ಸೂಚಿಸಿದೆ.

►ಆಗಿನಿಂದ ಸ್ಥಳೀಯ ಅಧಿಕಾರಿಗಳು ಸರಕಾರಿ ಆವರಣಗಳಲ್ಲಿ ಆರೆಸ್ಸೆಸ್ ಶಾಖೆಗಳನ್ನು ಮತ್ತು ಶಾಲೆಗಳಿಗೆ ಸಂಬಂಧಿಸದ ಚಟುವಟಿಕೆಗಳನ್ನು ನಿಲ್ಲಿಸಲು ಈ ನಿಯಮವನ್ನು ಬಳಸುತ್ತಿದ್ದಾರೆ.

ನಿಯಮ ಉಲ್ಲಂಘಿಸಿದ ಆರೆಸ್ಸೆಸ್ ಸದಸ್ಯರ ಬಂಧನ

ಅ.2025ರಲ್ಲಿ ಚೆನ್ನೈನ ಪೊರೂರಿನಲ್ಲಿ ಅನುಮತಿಯಲ್ಲದೆ ಸರಕಾರಿ ಶಾಲೆಯಲ್ಲಿ ಪೂಜೆ ಮತ್ತು ಶಾಖೆಯನ್ನು ನಡೆಸಿದ್ದಕ್ಕಾಗಿ 39 ಆರೆಸ್ಸೆಸ್ ಸದಸ್ಯರನ್ನು ಬಂಧಿಸಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ಸರಕಾರಿ ಸಂಸ್ಥೆಯೊಂದರಲ್ಲಿ ವಿಜಯದಶಮಿ ಶಾಖೆಯನ್ನು ನಡೆಸಲು ಪ್ರಯತ್ನಿಸಿದ್ದಕ್ಕಾಗಿ 47 ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಈ ಕ್ರಮಗಳು ಸೈದ್ಧಾಂತಿಕ ಸಮಾವೇಶಕ್ಕಾಗಿ ಸಾರ್ವಜನಿಕ ಆಸ್ತಿಯನ್ನು ಬಳಸುವಂತಿಲ್ಲ ಎಂಬ ನಿಯಮವನ್ನು ಇನ್ನಷ್ಟು ಬಲಗೊಳಿಸಿವೆ.

ಸರಕಾರಿ ಆವರಣಗಳಲಿ ಆರೆಸ್ಸೆಸ್ ಶಾಖೆಗಳು ಮತ್ತು ಸಮಾವೇಶಗಳಿಗೆ ನಿಷೇಧ

ಸಾರ್ವಜನಿಕ ಸ್ಥಳಗಳಲ್ಲಿ ಸೈದ್ಧಾಂತಿಕ ಬೋಧನೆಯನ್ನು ತಡೆಯಲು ಮತ್ತು ಸರಕಾರಿ ಸಂಸ್ಥೆಗಳಲ್ಲಿ ಜಾತ್ಯತೀತತೆಯನ್ನು ಕಾಯ್ದುಕೊಳ್ಳಲು ತಮಿಳುನಾಡು ಸರಕಾರವು ಆರೆಸ್ಸೆಸ್ ಸರಕಾರಿ ಭೂಮಿ, ಕಟ್ಟಡಗಳು ಅಥವಾ ಅನುದಾನಿತ ಸಂಸ್ಥೆಗಳಲ್ಲಿ ಶಾಖೆಗಳು, ತರಬೇತಿ ಶಿಬಿರಗಳು ಅಥವಾ ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿಷೇಧಿಸಿದೆ.

ಫೆ.2023ರಲ್ಲಿ ಆರೆಸ್ಸೆಸ್‌ನೊಂದಿಗೆ ಸಂಯೋಜಿತ ಇತರ ಸಂಘಟನೆಗಳಿಗೆ ನಿರ್ಬಂಧಗಳನ್ನು ವಿಸ್ತರಿಸಿದ ತಮಿಳುನಾಡು ಉನ್ನತ ಶಿಕ್ಷಣ ಇಲಾಖೆಯು ಎಬಿವಿಪಿಯಂತಹ ಆರೆಸ್ಸೆಸ್‌ನೊಂದಿಗೆ ಸಂಯೋಜಿತ ವಿದ್ಯಾರ್ಥಿ ಸಂಘಟನೆಗಳು ಸ್ಪಷ್ಟ ಅನುಮತಿಯಿಲ್ಲದೆ ಕಾಲೇಜು ಕ್ಯಾಂಪಸ್‌ಗಳನ್ನು ಯಾವುದೇ ಸೈದ್ಧಾಂತಿಕ ಅಥವಾ ರಾಜಕೀಯ ಚಟುವಟಿಕೆಗಳಿಗೆ ಬಳಸುವುದನ್ನು ನಿಷೇಧಿಸಿ ಅಧಿಸೂಚನೆಯನ್ನು ಹೊರಡಿಸಿತ್ತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ,ವಿಶೇಷವಾಗಿ ಅಣ್ಣಾ ವಿವಿ ಮತ್ತು ಮದ್ರಾಸ್ ವಿವಿಗಳಂತಹ ಸರಕಾರಿ ವಿವಿಗಳಲ್ಲಿ ಜಾತ್ಯತೀತ ನೀತಿಯನ್ನು ಎತ್ತಿಹಿಡಿಯುವಂತೆ ಉಪಕುಲಪತಿಗಳು ಮತ್ತು ಕಾಲೇಜು ಮುಖ್ಯಸ್ಥರಿಗೆ ಅಧಿಸೂಚನೆಯಲ್ಲಿ ನಿರ್ದೇಶನ ನೀಡಲಾಗಿತ್ತು. ಎಲ್ಲ ವಿವಿಗಳು ಮತ್ತು ಸಂಯೋಜಿತ ಕಾಲೇಜುಗಳಿಗೆ ಅನ್ವಯವಾಗುವ ಈ ಆದೇಶವು ಶಿಕ್ಷಣ ಸಂಸ್ಥೆಗಳ ಆವರಣಗಳಲ್ಲಿ ಶಿಕ್ಷಣೇತರ ಅವಧಿಗಳಲ್ಲಿ ಆರೆಸ್ಸೆಸ್ ಶಾಖೆಗಳನ್ನು ಅಥವಾ ಅಂತಹುದೇ ಸಮಾವೇಶಗಳನ್ನು ಪರಿಣಾಮಕಾರಿಯಾಗಿ ನಿಷೇಧಿಸುತ್ತದೆ.

ಪಥ ಸಂಚಲನಗಳು ಮತ್ತು ರ‍್ಯಾಲಿಗಳಿಗೆ ಅನುಮತಿ ನಿರಾಕರಣೆ

ಗಾಂಧಿ ಜಯಂತಿಯಂದು ತಮಿಳುನಾಡು ಸರಕಾರವು ಕಾನೂನು ಮತ್ತು ಸುವ್ಯವಸ್ಥೆ ಕಾರಣಗಳನ್ನು ಉಲ್ಲೇಖಿಸಿ ರಾಜ್ಯಾದ್ಯಂತ ಆರೆಸ್ಸೆಸ್ ಪಥಸಂಚಲನಗಳಿಗೆ ಅನುಮತಿಯನ್ನು ನಿರಾಕರಿಸಿತ್ತು. ಪರಿಹಾರ ಕೋರಿ ಆರೆಸ್ಸೆಸ್ ಮದ್ರಾಸ್ ಹೈಕೋರ್ಟ್‌ನ ಮೊರೆ ಹೋಗುವಂತಾಗಿತ್ತು.

ಮದ್ರಾಸ್ ಹೈಕೋರ್ಟ್ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ದುರುಪಯೋಗವನ್ನು ತಡೆಗಟ್ಟಲು ಆರೆಸ್ಸೆಸ್ ಪಥ ಸಂಚಲನಗಳ ಮೇಲೆ 12 ಕಠಿಣ ಷರತ್ತುಗಳನ್ನು ವಿಧಿಸಿತ್ತು. ದ್ವೇಷ ಭಾಷಣದ ಮೇಲೆ ನಿಷೇಧ, ಕಟ್ಟುನಿಟ್ಟಾಗಿ ನಿಯೋಜಿತ ಮಾರ್ಗದಲ್ಲಿಯೇ ಸಾಗುವುದು ಮತ್ತು ಸ್ಥಳವನ್ನು ಅವಲಂಬಿಸಿ ಭಾಗಿಯಾಗುವ ಜನರ ಮೇಲೆ 100ರಿಂದ 500ರಷ್ಟು ಮಿತಿ ಈ ನಿರ್ಬಂಧಗಳಲ್ಲಿ ಸೇರಿದ್ದವು. ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರರವರೆಗೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿತ್ತು ಹಾಗೂ ಭದ್ರತಾ ವ್ಯವಸ್ಥೆಗಳಿಗಾಗಿ ಕಾರ್ಯಕ್ರಮಕ್ಕೆ 48 ದಿನಗಳ ಮೊದಲು ಭಾಗಿಯಾಗುವವರ ಪಟ್ಟಿಯನ್ನು ಆರೆಸ್ಸೆಸ್ ಸಲ್ಲಿಸುವುದು ಅಗತ್ಯವಾಗಿತ್ತು. ರಸ್ತೆ ಅಥವಾ ಸಂಚಾರವನ್ನು ತಡೆಯದಂತೆ,ಶಬ್ದ ಮಟ್ಟ 50 ಡೆಸಿಬಲ್‌ಗಳನ್ನು ಮೀರದಂತೆ ಮತ್ತು ಸಾಧ್ಯವಿದ್ದಲ್ಲಿ ಕಂಪೌಂಡ್ ಗೋಡೆಗಳಿಂದ ಸುತ್ತುವರಿದ ಸ್ಥಳಗಳನ್ನು ಬಳಸುವಂತೆ ಸಂಘಟಕರಿಗೆ ಸೂಚಿಸಲಾಗಿತ್ತು. ಪ್ರತಿ ಕಾರ್ಯಕ್ರಮದ ಬಳಿಕ ಆವರಣವನ್ನು ಸ್ವಚ್ಛಗೊಳಿಸುವ ಮತ್ತು ಮರುಸ್ಥಾಪಿಸುವ ಹೊಣೆಗಾರಿಕೆಯನ್ನು ಅವರ ಮೇಲೆ ಹೊರಿಸಲಾಗಿತ್ತು.

ನಿರ್ಬಂಧಗಳನ್ನು ಪಾಲಿಸಲು ಕಾನೂನು ಪರಿಹಾರದ ಬಳಕೆ

ಬಳಿಕ ಹೈಕೋರ್ಟ್ ವಿಜಯ ದಶಮಿ ಸಂದರ್ಭದಲ್ಲಿ 58 ಸ್ಥಳಗಳಲ್ಲಿ ಪಥ ಸಂಚಲನಕ್ಕೆ ಅನುಮತಿ ನೀಡುವಂತೆ ಪೋಲಿಸರಿಗೆ ನಿರ್ದೇಶಿಸಿತ್ತು, ಆದರೆ ಸರಕಾರದ ಸಂಪೂರ್ಣ ಪ್ರತಿರೋಧವನ್ನು ಅದು ಟೀಕಿಸಿತ್ತು.

ನಂತರ ತಮಿಳುನಾಡು ಸರಕಾರವು ನ್ಯಾಯಸಮ್ಮತ ನಿರ್ಬಂಧಗಳನ್ನು ಹೇರುವ ತನ್ನ ಅಧಿಕಾರವನ್ನು ಎತ್ತಿ ಹಿಡಿಯುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಇದು ಸಾರ್ವಜನಿಕ ಸುವ್ಯವಸ್ಥೆಯನ್ನು ಕದಡುವ ಅಥವಾ ಸಾಂಸ್ಥಿಕ ತಟಸ್ಥತೆಗೆ ಭಂಗವನ್ನುಂಟು ಮಾಡುವ ಚಟುವಟಿಕೆಗಳನ್ನು ನಿಯಂತ್ರಿಸಲು ಲಭ್ಯವಿರುವ ಪ್ರತಿಯೊಂದೂ ಕಾನೂನು ಮತ್ತು ಆಡಳಿತಾತ್ಮಕ ಮಾರ್ಗವನ್ನು ಬಳಸಿಕೊಳ್ಳುವಲ್ಲಿ ಆ ರಾಜ್ಯದ ಬದ್ಧತೆಯನ್ನು ತೋರಿಸುತ್ತದೆ.

ರಾಜ್ಯ ಗುಪ್ತಚರ ವಿಭಾಗದಿಂದ ಕಟ್ಟುನಿಟ್ಟಿನ ನಿಗಾ

ತಮಿಳುನಾಡು ರಾಜ್ಯ ಗುಪ್ತಚರ ವಿಭಾಗವು ಆರೆಸ್ಸೆಸ್‌ನ ಚಟುವಟಿಕೆಗಳ ಮೇಲೆ ಸಕ್ರಿಯವಾಗಿ ನಿಗಾಯಿರಿಸುತ್ತದೆ ಮತ್ತು ಗೃಹ ಇಲಾಖೆಗೆ ತ್ರೈಮಾಸಿಕ ವರದಿಗಳನ್ನು ಸಲ್ಲಿಸುತ್ತದೆ. ಇವುಗಳ ಆಧಾರದಲ್ಲಿ ಸ್ಥಳೀಯ ಅಧಿಕಾರಿಗಳು ಆಗಾಗ್ಗೆ ಮಧ್ಯಪ್ರವೇಶಿಸಿ ಸರಕಾರದ ನಿರ್ದೇಶನಗಳನ್ನು ಉಲ್ಲಂಘಿಸುವ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ ಅಥವಾ ನಿರಾಕರಿಸಿದ್ದಾರೆ. ಉದಾಹರಣೆಗೆ 2024ರಲ್ಲಿ 15 ಆರೆಸ್ಸೆಸ್ ಶಾಖೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಚುನಾವಣೆಗಳಿಗೆ ಮುನ್ನ ಗೃಹ ಇಲಾಖೆಯ ಸುತ್ತೋಲೆಯು ಅಸ್ತಿತ್ವದಲ್ಲಿರುವ ನಿರ್ಬಂಧಗಳನ್ನು ಪುನರುಚ್ಚರಿಸಿತ್ತು ಮತ್ತು ಸರಕಾರಿ ಚುನಾವಣಾ ಕಚೇರಿಗಳು ಅಥವಾ ಮತಗಟ್ಟೆಗಳನ್ನು ಯಾವುದೇ ರೂಪದಲ್ಲಿ ಆರೆಸ್ಸೆಸ್ ತರಬೇತಿ ಮತ್ತು ಕ್ರೋಡೀಕರಣಕ್ಕೆ ಬಳಸುವುದನ್ನು ನಿರ್ದಿಷ್ಟವಾಗಿ ನಿಷೇಧಿಸಿತ್ತು. ಮಾರ್ಚ್ 2025ರಲ್ಲಿ ಸರಕಾರವು ಸಾರ್ವಜನಿಕ ಸಭಾಂಗಣಗಳಲ್ಲಿ ಆರೆಸ್ಸೆಸ್ ಕಾರ್ಯಕ್ರಮಗಳು ನಡೆಯುತ್ತಿವೆ ಎಂಬ ವರದಿಗಳ ಬಳಿಕ ಈ ನಿರ್ಬಂಧಗಳನ್ನು ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆಯು ನಿರ್ವಹಿಸುವ ದೇವಸ್ಥಾನಗಳು ಸೇರಿದಂತೆ ಅರೆ-ಸರಕಾರಿ ಆವರಣಗಳಿಗೆ ವಿಸ್ತರಿಸಿತ್ತು. ಪೋಲಿಸ್ ಅಂಕಿಅಂಶಗಳ ಪ್ರಕಾರ 2023 ಮತ್ತು 2025ರ ನಡುವೆ ನೂರಕ್ಕೂ ಅಧಿಕ ಆರೆಸ್ಸೆಸ್ ಕಾರ್ಯಕ್ರಮಗಳಿಗೆ ಅನುಮತಿಗಳನ್ನು ನಿರಾಕರಿಸಲಾಗಿದೆ.

ತಮಿಳುನಾಡು ಮಾದರಿಯು ಕರ್ನಾಟಕಕ್ಕೆ ಜಾತ್ಯತೀತ ಆಡಳಿತದ ಪಾಠವಾಗಿದೆ

ಕರ್ನಾಟಕ ಮತ್ತು ಇತರ ಜಾತ್ಯತೀತ ಸರಕಾರಗಳಿಗೆ ತಮಿಳುನಾಡು ಮಾದರಿಯು ನೇರ ಸಂಘರ್ಷದಲ್ಲಿ ತೊಡಗದೆ ಅಥವಾ ನಿರ್ದಿಷ್ಟ ಗುಂಪನ್ನು ವಿಶೇಷವಾಗಿ ಗುರಿಯಾಗಿಕೊಳ್ಳಲಾಗಿದೆ ಎಂಬ ಆರೋಪಗಳಿಗೆ ಅವಕಾಶ ನೀಡದೇ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಮಾರ್ಗಸೂಚಿಯಾಗಿದೆ. ಈ ನಿಲುವನ್ನು ಅಳವಡಿಸಿಕೊಳ್ಳುವುದು ರಾಜಕೀಯ ಶತ್ರುತ್ವವಲ್ಲ,ಅದು ರಾಜ್ಯದ ಸಾಂವಿಧಾನಿಕ ಅಧಿಕಾರವನ್ನು ಮರುದೃಢಪಡಿಸಿಕೊಳ್ಳುವ ಕ್ರಮವಾಗಿದೆ. ಸೈದ್ಧಾಂತಿಕ ಸಂಘಟನೆಯೊಂದು ಸಂಪೂರ್ಣ ಪೋಲಿಸ್ ಮತ್ತು ಆಡಳಿತಾತ್ಮಕ ಬೆಂಬಲದೊಂದಿಗೆ ಬೃಹತ್ ರ‍್ಯಾಲಿಗಳನ್ನು ನಡೆಸಿದಾಗ, ಕ್ರೋಡೀಕರಣಕ್ಕಾಗಿ ಶಾಲೆಗಳು ಮತ್ತು ದೇವಸ್ಥಾನಗಳನ್ನು ಬಳಸಿದಾಗ ಮತ್ತು ಧರ್ಮವನ್ನು ರಾಜಕೀಯ ಬಲವನ್ನಾಗಿ ಪರಿವರ್ತಿಸಿದಾಗ ಅದು ಸಾಂಸ್ಕೃತಿಕ ಆಂದೋಲನವಾಗಿ ಉಳಿಯುವುದಿಲ್ಲ,ಅದು ಪ್ರಜಾಸತ್ತಾತ್ಮಕ ಆಡಳಿತಕ್ಕೇ ಸವಾಲಾಗುತ್ತದೆ.

ರಾಜ್ಯದ ಜಾತ್ಯತೀತ ಸ್ವರೂಪವನ್ನು ರಕ್ಷಿಸಲು ಕಾನೂನಿನ ವ್ಯಾಪ್ತಿಯೊಳಗೆ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಸಾಧ್ಯ ಎನ್ನುವುದನ್ನು ತಮಿಳುನಾಡು ತೋರಿಸಿದೆ. ಕರ್ನಾಟಕ ಮತ್ತು ಇತರ ಸರಕಾರಗಳು ಅದೇ ಸ್ಪಷ್ಟತೆ ಮತ್ತು ಧೈರ್ಯದೊಂದಿಗೆ ಈ ಮಾದರಿಯನ್ನು ಪುನರಾವರ್ತಿಸಬಲ್ಲವೇ ಎನ್ನುವುದು ಅವುಗಳ ರಾಜಕೀಯ ಇಚ್ಛಾಶಕ್ತಿ ಮತ್ತು ಸಂವಿಧಾನಕ್ಕೆ ಬದ್ಧತೆಯ ಪರೀಕ್ಷೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹರೀಶ್ ಎಚ್.ಕೆ.

contributor

Similar News