×
Ad

ಕಲಬುರಗಿ ಜಿಲ್ಲೆಯಲ್ಲಿ 9.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ

Update: 2025-06-06 15:21 IST

ಕಲಬುರಗಿ: ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಬೀಳುವ ಮೂಲಕ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ರೈತರು ಬಿತ್ತುವ ಕಾರ್ಯಕ್ಕೆ ಸಜ್ಜಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಕೃಷಿ ಇಲಾಖೆಯ ಮೂಲಗಳ ಪ್ರಕಾರ, ಪ್ರಸಕ್ತ ಸಾಲಿನಲ್ಲಿ ಒಟ್ಟು 9.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಅದರಲ್ಲಿ ವಾಣಿಜ್ಯ ಬೆಳೆಗಳ ಪೈಕಿ ಪ್ರಮುಖ ಬೆಳೆಗಳಾದ ತೊಗರಿ 6.33 ಲಕ್ಷ ಹೆಕ್ಟೇರ್, ಹೆಸರು 52 ಸಾವಿರ, ಹುರುಳಿ 75, ಉದ್ದು 25, ಅವರೇಕಾಯಿ 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ. ಉಳಿದ ಪ್ರದೇಶಗಳಲ್ಲಿ ಇತರ ಬೆಳೆಗಳನ್ನು ಬೆಳೆಯುವ ಯೋಜನೆ ಈ ವರ್ಷ ನಡೆಯಲಿದೆ.

ಅವಧಿಗೂ ಮೊದಲೇ ಮುಂಗಾರು ಮಳೆ: ರಾಜ್ಯಾದ್ಯಂತ ಅವಧಿಗೂ ಮೊದಲೇ ಮುಂಗಾರು ಮಳೆಯು ಸುರಿದಿದ್ದು, ಇತ್ತ ಕಲ್ಯಾಣ ಕರ್ನಾಟಕದ ಕೇಂದ್ರ ಜಿಲ್ಲೆ ಕಲಬುರಗಿಯಲ್ಲೂ ವಾಡಿಕೆಗಿಂತ ಶೇ.150ರಷ್ಟು ಹೆಚ್ಚುವರಿ ಮಳೆಯಾಗಿದೆ. ಅವಧಿಗೆ ಮುನ್ನವೇ ಬಿದ್ದ ಮುಂಗಾರಿನ ಪರಿಣಾಮ ಜಿಲ್ಲೆಯ ಬಹುತೇಕ ಹೊಲಗಳು ಕೆಸರಿನ ಗದ್ದೆಗಳಾಗಿ ಮಾರ್ಪಟ್ಟಿದ್ದು, ಕೃಷಿ ಚಟುವಟಿಕೆ ಕೈಗೊಳ್ಳಲು ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಮೇ 26ರಂದೇ ತೊಗರಿ ನಾಡು ಕಲಬುರಗಿಗೆ ಮುಂಗಾರು ಪ್ರವೇಶವಾಗಿದ್ದು, 56 ಮಿ.ಮೀ ಪೂರ್ವ ಮುಂಗಾರು ಹಾಗೂ 159 ಮಿ.ಮೀ. ಒಟ್ಟಾರೆ ಮಳೆ ಜಿಲ್ಲೆ ಕಂಡಿದೆ. ಇಲ್ಲಿಯವರೆಗೆ ಶೇ.150ರಷ್ಟು ಹೆಚ್ಚುವರಿ ಮಳೆ ಬಿದ್ದಿದೆ. ಆದ್ದರಿಂದ ಈ ಬಾರಿ ಬಂಪರ್ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಸುಮಾರು 9.17 ಲಕ್ಷ ಹೇಕ್ಟರ್ ಪ್ರದೇಶದಷ್ಟು ಬಿತ್ತನೆ ಕೈಗೊಳ್ಳುವ ಗುರಿ ಹೊಂದಲಾಗಿದ್ದು, ಜೂನ್ ಎರಡು ಅಥವಾ ಮೂರನೇಯ ವಾರದಲ್ಲಿ ಬಿತ್ತನೆಗೆ ಚುರುಕು ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ಈಗಾಗಲೇ, ಸುರಿದ ನಿರಂತರ ಮಳೆಗೆ ರೈತರ ಜಮೀನು ತೇವಗೊಂಡಿವೆ. ಮುಂಗಾರು ಪ್ರವೇಶವಾದರು ಬಿತ್ತನೆ ಕಾರ್ಯ ಪ್ರಾರಂಭಿಸುವಷ್ಟು ಭೂಮಿ ಹದಗೊಂಡಿಲ್ಲ. ಹೀಗಾಗಿ, ಕೃಷಿ ಚಟುವಟಿಕೆಗಳಿಗೆ ರೈತ ಕೈಹಾಕುತ್ತಿಲ್ಲ ಎನ್ನಲಾಗಿದೆ. ಹೆಚ್ಚಿನ ಹದಗೊಂಡಿರುವ ಭೂಮಿಗಳಲ್ಲಿ ಬಿತ್ತನೆ ಕಾರ್ಯ ಶುರು ಮಾಡಬಹುದು ಎಂದು ಕೃಷಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಳಂದ ತಾಲೂಕಿನ ನಿಂಬರ್ಗ ವ್ಯಾಪ್ತಿಯಲ್ಲಿ, ಚಿಂಚೋಳಿ, ಅಫ್ಝಲಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕೊಂಚ ಮಟ್ಟಿಗೆ ಭೂಮಿ ಹಸಿಯಾಗಿರುವುದರಿಂದ ಬಿತ್ತನೆ ಕಾರ್ಯ ಪ್ರಾರಂಭವಾಗಿವೆ.

ನಕಲಿ ಬಿತ್ತನೆ ಬೀಜಗಳ ಮಾರಾಟಕ್ಕೆ ಕಡಿವಾಣ ಹಾಕಿ

ಮುಂಗಾರು ಪ್ರವೇಶಕ್ಕೆ ಮುನ್ನವೇ ಬೀಜಗಳನ್ನು ರೈತರಿಗೆ ವಿತರಿಸಬೇಕು, ಆದರೆ ಇಲಾಖೆಯ ಅಧಿಕಾರಿಗಳು ಬಿತ್ತನೆ ಪ್ರಾರಂಭಕ್ಕೂ ಮುನ್ನ ಕೊಡುತ್ತಿದ್ದಾರೆ. ಒಂದೇ ಕೃಷಿ ಕೇಂದ್ರದಲ್ಲಿ 25ಕ್ಕೂ ಹೆಚ್ಚು ಗ್ರಾಮಗಳನ್ನು ಬರುವುದರಿಂದ ಎಲ್ಲರಿಗೂ ಬೀಜಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಹಾಗಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀಜ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ರೈತ ಮುಖಂಡರು ಆಗ್ರಹಿಸಿದ್ದಾರೆ. ಅಲ್ಲದೆ, ಜಿಲ್ಲೆಯ ಕೃಷಿ ಕೇಂದ್ರಗಳಲ್ಲಿ ಉದ್ದೇಶಪೂರ್ವಕವಾಗಿ ಬೀಜಗಳ ಕೊರತೆ ಎಂದು ಹೇಳಲಾಗುತ್ತಿದೆ. ಇದರಿಂದ ಖಾಸಗಿ ಆಗ್ರೋ ಏಜೆನ್ಸಿಗಳಲ್ಲಿ ಹೆಚ್ಚಿನ ಬೆಲೆಯಲ್ಲಿ ಖರೀದಿಸಬೇಕಾದ ಅನಿವಾರ್ಯ ಎದುರಾಗಿದೆ. ಎರಡು ಕಡೆಗಳಲ್ಲೂ ಕಳಪೆ ಬೀಜಗಳ ಮಾರಾಟವಾಗುತ್ತಿದೆ. ಇದನ್ನ ತಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ತೊಗರಿ, ಹೆಸರು, ಉದ್ದು, ಸೋಯಾ, ಅವರೆ, ಸೂರ್ಯಕಾಂತಿ, ಮೆಕ್ಕೆಜೋಳ ಮತ್ತು ಭತ್ತ ಸೇರಿದಂತೆ 22 ಸಾವಿರ ಕ್ವಿಂಟಲ್ ಗೂ ಅಧಿಕ ಬೀಜ ಶೇಖರಣೆ ಮಾಡಲಾಗಿದೆ. ಜತೆಗೆ ಡೀಲರ್ ಗಳು ಸಹ 54 ಸಾವಿರ ಕ್ವಿಂಟಲ್ ಬೀಜಗಳನ್ನು ದಾಸ್ತಾನು ಮಾಡಿದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿ ಬೀಜದ ಕೊರತೆ ಇಲ್ಲ. ಜೂನ್ ಮೊದಲ ವಾರದಿಂದಲೇ ಬೀಜ ವಿತರಣೆ ಕಾರ್ಯ ನಡೆಯುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.

ಈ ಬಾರಿ ಬಂಪರ್ ಬೆಳೆಯ ನಿರೀಕ್ಷೆ

ಕಲಬುರಗಿ ಜಿಲ್ಲೆಯಾದ್ಯಂತ 9.17 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಈ ವರ್ಷ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಉತ್ತಮ ಬೆಳೆ ನಿರೀಕ್ಷೆಯಿದೆ. ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ರಿಯಾಯಿತಿ ದರದಲ್ಲಿ ಪೂರೈಸಲಾಗುತ್ತಿರುವ ಬಿತ್ತನೆ ಬೀಜಗಳನ್ನು ಖರೀದಿಸಿ ಬಿತ್ತನೆಗೆ ಬಳಸಬೇಕು. ಭೂಮಿ ಸಂಪೂರ್ಣ ಹದಗೊಂಡರೆ ಮಾತ್ರ ಬಿತ್ತನೆ ಮಾಡಿ.

-ಸಮದ್ ಪಟೇಲ್, ಜಂಟಿ ಕೃಷಿ ನಿರ್ದೇಶಕ, ಕಲಬುರಗಿ

ಹೊಸ ತಳಿಯಬೀಜ ವಿತರಿಸುವುದಾಗಿ ಸುಳ್ಳು ಹೇಳುತ್ತಾರೆ

ಪ್ರತೀ ವರ್ಷ ತೊಗರಿಯ ಹೊಸ ತಳಿಯ ಬೀಜ ವಿತರಿಸುವುದಾಗಿ ಕೃಷಿ ಅಧಿಕಾರಿಗಳು ಸುಳ್ಳು ಹೇಳುತ್ತಾರೆ. ಹೊಸ ತಳಿಯ ಬೀಜಗಳು ಮಾರ್ಕೆಟ್ ನಲ್ಲಿ ಹುಡುಕಿದರೂ ಸಿಗುವುದಿಲ್ಲ. ಅಲ್ಲದೆ, ಮಾರುಕಟ್ಟೆಗಳಲ್ಲಿ ಕಳಪೆ ಬೀಜ, ರಾಸಾಯನಿಕ ಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತಿದೆ. ಇವರ ವಿರುದ್ಧ ಅಧಿಕಾರಿಗಳು ದಿಟ್ಟ ಕ್ರಮ ಕೈಗೊಳ್ಳಬೇಕು.

-ಭೀಮಾಶಂಕರ ಮಾಡಿಯಾಳ, ರೈತ ಮುಖಂಡ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ದಸ್ತಗೀರ ನದಾಫ್ ಯಳಸಂಗಿ

contributor

Similar News