×
Ad

ತೆಲಂಗಾಣ ಜಾತಿ ಸಮೀಕ್ಷೆ: ದತ್ತಾಂಶಗಳು ಮತ್ತು ಟೀಕೆಗಳು

Update: 2025-08-05 10:47 IST

ತೆಲಂಗಾಣದ ಜಾತಿ ಸಮೀಕ್ಷೆ ಒಂದು ಮಹತ್ವದ ಪ್ರಗತಿಪರ ಹೆಜ್ಜೆ ಆಗಿದ್ದರೂ, ಅದರ ನಿರ್ವಹಣೆಯಲ್ಲಿ ನಡೆದ ನಿರ್ದಿಷ್ಟ ತಪ್ಪುಗಳು ಮತ್ತು ಮಾಹಿತಿಯ ಪಾರದರ್ಶಕತೆಯ ಕೊರತೆ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳು ಇಂತಹ ಜಾತಿ ಸಮೀಕ್ಷೆಗಳನ್ನು ಮುಂದೆ ಕೈಗೊಳ್ಳುವಾಗ ತೆಲಂಗಾಣದ ಅನುಭವದಿಂದ ಪಾಠ ಕಲಿಯಬೇಕು.

ತೆಲಂಗಾಣ ಕಾಂಗ್ರೆಸ್ ಸರಕಾರ ಇತ್ತೀಚೆಗೆ ನಡೆಸಿದ ಜಾತಿ ಸಮೀಕ್ಷೆಯು ವಿರೋಧ ಪಕ್ಷಗಳಿಂದ ನಿಖರತೆ, ವೈಜ್ಞಾನಿಕ ವಿಧಾನ ಮತ್ತು ರಾಜಕೀಯ ಕೈವಾಡ ಮುಂತಾದ ಆರೋಪಗಳನ್ನು ಎದುರಿಸುತ್ತಿದೆ, ಜೊತೆಗೆ ಗೌಪ್ಯತೆಯ ಸುತ್ತ ಕಳವಳಗಳನ್ನು ಸಹ ಎತ್ತಿದೆ.

ಕರ್ನಾಟಕ ಮತ್ತು ಬಿಹಾರದಲ್ಲಿಯೂ ಇದೇ ರೀತಿಯ ಪ್ರಯೋಗಗಳು ಆಗಿವೆ. ತೆಲಂಗಾಣದ ಸಾಮಾಜಿಕ, ಆರ್ಥಿಕ, ಉದ್ಯೋಗ ಮತ್ತು ರಾಜಕೀಯ ಸಮೀಕ್ಷೆಯನ್ನು ಜಾತಿ ಸಮೀಕ್ಷೆ ಎಂದೂ ಕರೆಯಲಾಗುತ್ತದೆ, ಇದು 3.54 ಕೋಟಿ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ, ರಾಜಕೀಯ ಮತ್ತು ಜಾತಿಗಳ ಸ್ಥಿತಿಯನ್ನು ಸಮಗ್ರವಾಗಿ ವಿವರಿಸುವ ಗುರಿಯನ್ನು ಹೊಂದಿದೆ.

ಸರಕಾರವು ಉದ್ದೇಶಿತ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳನ್ನು ಸಕ್ರಿಯಗೊಳಿಸಲು ವಿಶೇಷವಾಗಿ ಹಿಂದುಳಿದ ವರ್ಗಗಳಿಗೆ ದೃಢವಾದ ದತ್ತಾಂಶಗಳನ್ನು ಸಂಗ್ರಹಿಸುವ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ.

ಸಂಪೂರ್ಣ ಸಮೀಕ್ಷೆಯ ವರದಿಯನ್ನು ವಿಧಾನಸಭೆಯಲ್ಲಿ ಅದರ ಸಮಗ್ರ ಚರ್ಚೆ ಮತ್ತು ಮತಕ್ಕೆ ಹಾಕುವ ಉದ್ದೇಶದಿಂದ ಮಂಡಿಸಲಿಲ್ಲ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಸಮೀಕ್ಷೆಯ ಪ್ರಮುಖ ಅಂಶಗಳ ಸ್ಥೂಲ ಸಮೀಕ್ಷೆಯನ್ನು ಮಾತ್ರ ಮಂಡಿಸಿದರು. ಪ್ರಾಥಮಿಕವಾಗಿ ಜಾತಿ ಸಂಯೋಜನೆಯ ಶೇಕಡಾವಾರು ಲೆಕ್ಕಗಳ ಮೇಲೆ ಮಾತ್ರ ಕೇಂದ್ರೀಕರಿಸಿದರು. ವಿವರವಾದ ವೈಯಕ್ತಿಕ-ಮಟ್ಟದ ದತ್ತಾಂಶವನ್ನು ತಡೆಹಿಡಿಯಲು ದತ್ತಾಂಶ ಗೌಪ್ಯತೆಯ ಹಿತಾಸಕ್ತಿ ಕಾರಣವೆಂದು ಅವರು ಉಲ್ಲೇಖಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ. 42ರಷ್ಟು ಮೀಸಲಾತಿಯನ್ನು ಘೋಷಿಸುವಾಗ ರೆಡ್ಡಿಯವರು ಇದನ್ನು ವಿಧಾನಸಭೆಯಲ್ಲಿ ಅನುಮೋದನೆ ಆಗಬೇಕಾಗಿರುವ ಶಾಸಕಾಂಗ ಪ್ರಸ್ತಾವನೆ ಎಂದು ಪರಿಗಣಿಸುವುದರ ಬದಲು, ಪಕ್ಷದ ನೀತಿ-ನಿರ್ಧಾರವಾಗಿ ರೂಪಿಸಿಕೊಂಡರು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಹೆಚ್ಚಿಸಲು ಸಂಭವನೀಯ ಶಾಸನದ ಬಗ್ಗೆ ಅವರು ಸುಳಿವು ನೀಡಿದ್ದರೂ ಯಾವುದೇ ನಿರ್ದಿಷ್ಟ ಮಸೂದೆಯನ್ನು ಮಂಡಿಸಲಾಗಿಲ್ಲ.

ಆದರೂ, ಕೇಂದ್ರ ಸರಕಾರವು ಇದೇ ರೀತಿಯ ರಾಷ್ಟ್ರವ್ಯಾಪಿ ಜಾತಿ ಮತ್ತು ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ನಡೆಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.

ಸಮೀಕ್ಷೆಯ ವಿಧಾನ ಮತ್ತು ಫೈಂಡಿಂಗ್ಸ್

ನವೆಂಬರ್ 6, 2024ರಂದು ಪ್ರಾರಂಭಿಸಲಾದ ಈ ಸಮೀಕ್ಷೆಯನ್ನು ತೆಲಂಗಾಣದ ನಿವಾಸಿಗಳ ವಿವರವಾದ ಜನಸಂಖ್ಯೆ ಮತ್ತು ಸಾಮಾಜಿಕ- ಆರ್ಥಿಕ ಚಿತ್ರಣವನ್ನು ಕಂಡುಕೊಳ್ಳಲು ರೂಪಿಸಲಾಗಿದೆ. 50 ದಿನಗಳಲ್ಲಿ 94,261 ಗಣತಿದಾರರನ್ನು ತಲಾ 150 ಮನೆಗಳ ಗಣತಿ ಬ್ಲಾಕ್‌ಗೆ ನಿಯೋಜಿಸಿ ರಾಜ್ಯಾದ್ಯಂತ ಮನೆ-ಮನೆಯ ದತ್ತಾಂಶ ಸಂಗ್ರಹಣೆ ಮಾಡಲಾಯಿತು.

ಆರಂಭಿಕ ಗುರಿ 1,15,71,457 ಕುಟುಂಬಗಳಾಗಿದ್ದರೆ, ಸಮೀಕ್ಷೆಯು ಅಂತಿಮವಾಗಿ 1,12,15,134 ಕುಟುಂಬಗಳನ್ನು ಒಳಗೊಂಡಿದ್ದು ಶೇ. 96.9ರಷ್ಟು ವ್ಯಾಪ್ತಿಯನ್ನು ಸಾಧಿಸಿದೆ. ನಿರೀಕ್ಷಿತ ವ್ಯಾಪ್ತಿಗಿಂತ ಸ್ವಲ್ಪ ಕಡಿಮೆಯಾಗಲು ಪ್ರಾಥಮಿಕವಾಗಿ ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮಿತಿಗಳಲ್ಲಿ ಕಡಿಮೆಯಾಗಿರುವುದೇ ಕಾರಣವಾಗಿದೆ.

ಈ ಸಮೀಕ್ಷೆಯು 57 ಪ್ರಶ್ನೆಗಳ ಪ್ರಶ್ನಾವಳಿಗಳನ್ನು ಬಳಸಿಕೊಂಡಿದ್ದು, ಜಾತಿ, ಧರ್ಮ, ಆರ್ಥಿಕ ಸ್ಥಿತಿ, ಉದ್ಯೋಗ, ಶಿಕ್ಷಣ ಮತ್ತು ರಾಜಕೀಯ ಸಂಬಂಧದಂತಹ ಅಂಶಗಳ ಕುರಿತು 3,54,75,554 ವ್ಯಕ್ತಿಗಳಿಂದ ದತ್ತಾಂಶವನ್ನು ಸಂಗ್ರಹಿಸಿದೆ. ಮುಖ್ಯವಾಗಿ ಪ್ರಶ್ನಾವಳಿಯು ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ‘ಜಾತಿ ಇಲ್ಲ’ ಮತ್ತು ‘ಧರ್ಮ ಇಲ್ಲ’ ಆಯ್ಕೆಗಳನ್ನು ಒಳಗೊಂಡಿತ್ತು.

ನವೆಂಬರ್ 11ರಿಂದ ಡಿಸೆಂಬರ್ 25, 2024ರ ನಡುವೆ 76,000 ಗಣತಿದಾರರು ಸಂಗ್ರಹಿಸಿದ ದತ್ತಾಂಶಗಳನ್ನು ಡಿಜಿಟಲೀಕರಣ ಗೊಳಿಸಲಾಗಿದೆ.

ಫೆಬ್ರವರಿ 4, 2025ರಂದು ರೆಡ್ಡಿಯವರು ಶಾಸಕಾಂಗ ಸಭೆಯಲ್ಲಿ ಈ ಕೆಳಗಿನ ಪ್ರಮುಖ ಜಾತಿ ಸಂಯೋಜನೆಯ ಶೋಧನೆಗಳನ್ನು (ಫೈಂಡಿಂಗ್ಸ್) ಘೋಷಿಸಿದರು.

ದತ್ತಾಂಶದ ಉದ್ದೇಶಗಳು ಮತ್ತು ಉದ್ದೇಶಿತ ಬಳಕೆ

ಕಾಂಗ್ರೆಸ್ ಸರಕಾರವು ಜಾತಿ ಸಮೀಕ್ಷೆಯ ಪ್ರಾಥಮಿಕ ಗುರಿ ಪುರಾವೆ ಆಧಾರಿತ ನೀತಿ ನಿರೂಪಣೆ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಸಂಪನ್ಮೂಲಗಳು ಮತ್ತು ಪ್ರಯೋಜನಗಳ ಸಮಾನ ವಿತರಣೆಯನ್ನು ಬೆಂಬಲಿಸಲು ಪ್ರಾಯೋಗಿಕ ದತ್ತಾಂಶವನ್ನು ಸಂಗ್ರಹಿಸುವುದಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ. ‘‘ವಿವಿಧ ಜಾತಿಗಳು, ವಿಶೇಷವಾಗಿ ಹಿಂದುಳಿದ ವರ್ಗಗಳು, ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಅನುಭೋಗಿಸಲು ಸಾಧ್ಯವಾಗುವಂತೆ ನಿಖರವಾದ ದತ್ತಾಂಶ ಸಂಗ್ರಹವನ್ನು ಸಿದ್ಧಪಡಿಸುವುದು ಈ ಸಮೀಕ್ಷೆಯ ಗುರಿಯಾಗಿದೆ’’ ಎಂದು ರೆಡ್ಡಿ ಹೇಳಿದರು.

ದತ್ತಾಂಶ ಆಧಾರಿತ ಆಡಳಿತದ ಮೇಲಿನ ಈ ಮಹತ್ವ ಕುರಿತು ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರೂ ಧ್ವನಿಗೂಡಿಸಿದರು. ಅವರು ‘‘ಕುಟುಂಬಗಳ ಸಮೀಕ್ಷೆಯ ದತ್ತಾಂಶವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಇತರ ದುರ್ಬಲ ವರ್ಗಗಳ ಕಲ್ಯಾಣ ನೀತಿಗಳನ್ನು ರೂಪಿಸುವಲ್ಲಿ ಬಳಸಲಾಗುವುದು’’ ಎಂದು ದೃಢಪಡಿಸಿದರು.

ಸರಕಾರವು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸುವ ಸಾಧ್ಯತೆಗೆ ಸಮೀಕ್ಷೆಯಲ್ಲಿ ಕಂಡುಬಂದ ಅಂಕಿ ಅಂಶಗಳು ನೇರವಾಗಿ ಸಂಬಂಧಿಸಿವೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಶೇ. 42ರಷ್ಟು ಮೀಸಲಾತಿಯನ್ನು ರೆಡ್ಡಿ ಘೋಷಿಸಿದರು. ಸಮೀಕ್ಷೆಯ ದತ್ತಾಂಶವು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹೆಚ್ಚಿಸುವ ಮೀಸಲಾತಿ ಭವಿಷ್ಯದಲ್ಲಿ ವಿಸ್ತರಿಸುವ ಬಗ್ಗೆ ತಿಳಿಸುತ್ತದೆ ಎಂದು ಅವರು ಸೂಚಿಸಿದರು.

ರಾಜಕೀಯ ಪ್ರತಿಕ್ರಿಯೆಗಳು ಮತ್ತು ವಿವಾದಗಳು

ಸಮೀಕ್ಷೆಯ ಫಲಿತಾಂಶಗಳು ಬಿಡುಗಡೆಯಾದ ತಕ್ಷಣ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದವು. ಭಾರತ ರಾಷ್ಟ್ರ ಸಮಿತಿ ಮತ್ತು ಭಾರತೀಯ ಜನತಾ ಪಕ್ಷ ಸಮೀಕ್ಷೆಯ ವಿಧಾನ ಮತ್ತದರ ಶೋಧನೆಗಳ ಬಗ್ಗೆ ಕಟುವಾದ ಟೀಕೆಯನ್ನು ಪ್ರಾರಂಭಿಸಿದವು.

ಭಾರತ ರಾಷ್ಟ್ರ ಸಮಿತಿಯ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ಸಮೀಕ್ಷೆಯು ದೋಷಗಳಿಂದ ಕೂಡಿದೆ ಮತ್ತು ಉದ್ದೇಶಪೂರ್ವಕವಾಗಿ ಹಿಂದುಳಿದ ವರ್ಗಗಳ ಜನಸಂಖ್ಯೆಯನ್ನು ಕಡಿಮೆ ಎಣಿಸಲಾಗಿದೆ ಎಂದು ಆರೋಪಿಸಿದ್ದಾರೆ. ಕೆ.ಟಿ. ರಾಮರಾವ್ ಪ್ರಸ್ತುತ ಸಮೀಕ್ಷೆಯು ಹಿಂದಿನ ಸರಕಾರ ನಡೆಸಿದ 2014ರ ಸಮಗ್ರ ಕುಟುಂಬ ಸಮೀಕ್ಷೆಯಲ್ಲಿ ಎಣಿಸಿದ್ದ ಹಿಂದುಳಿದ ವರ್ಗಗಳ ದತ್ತಾಂಶಗಳನ್ನು ಶೇಕಡವಾರು ಪ್ರಮಾಣಕ್ಕೆ ಹೋಲಿಸಿದ್ದಾರೆ. ಹಿಂದುಳಿದ ವರ್ಗಗಳ ಪ್ರಾತಿನಿಧ್ಯವನ್ನು ಕಡಿಮೆ ಮಾಡಲು ಮತ್ತು ಸಂಸತ್ತನ್ನು ದಾರಿ ತಪ್ಪಿಸಲು ಕಾಂಗ್ರೆಸ್ ದತ್ತಾಂಶದಲ್ಲಿ ಕೈಚಳಕ ತೋರಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಭಾಜಪ ಈ ಆರೋಪಗಳನ್ನು ಪುನರುಚ್ಚರಿಸಿತು. ಈ ಸಮೀಕ್ಷೆಯು ಹಿಂದುಳಿದ ವರ್ಗಗಳ ಹಿತಾಸಕ್ತಿಗಳನ್ನು ಬಲಿಕೊಟ್ಟು ಮುಸ್ಲಿಮ್ ಸಮುದಾಯವನ್ನು ಸಮಾಧಾನ ಪಡಿಸುವ ಲೆಕ್ಕಾಚಾರದ ತಂತ್ರವೆಂದು ರೂಪಿಸಿತು. ರಾಜ್ಯಸಭಾ ಸದಸ್ಯ ಕೆ. ಲಕ್ಷ್ಮಣ್ ಅವರು ಸಮೀಕ್ಷೆಯು ಹಿಂದುಳಿದ ವರ್ಗಗಳ ಜನಸಂಖ್ಯೆಯ ಅಂಕಿ-ಅಂಶಗಳನ್ನು ತೀವ್ರವಾಗಿ ಕಡಿತಗೊಳಿಸಿದೆ ಮತ್ತು ಅದೇ ಸಮಯದಲ್ಲಿ ಮುಸ್ಲಿಮರ ಗಣನೀಯ ಭಾಗವನ್ನು ಹಿಂದುಳಿದ ವರ್ಗಗಳೊಡನೆ ವರ್ಗೀಕರಿಸಿದೆ ಎಂದು ವಾದಿಸಿದರು. ‘ಹಿಂದೂ ಹಿಂದುಳಿದ ವರ್ಗ’ ಮತ್ತು ‘ಮುಸ್ಲಿಮ್ ಹಿಂದುಳಿದ ವರ್ಗ’ ಎಂಬ ಇವೆರಡರ ನಡುವೆ ವ್ಯತ್ಯಾಸವನ್ನು ತೋರಿಸಲು ಸಾಂವಿಧಾನಿಕ ಆಧಾರವೇನು ಎಂದು ಪ್ರಶ್ನಿಸಿದರು. ಮಂಡಲ್ ಆಯೋಗದ ಶಿಫಾರಸುಗಳನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದೂ ಆರೋಪಿಸಿದರು.

ಕಾಂಗ್ರೆಸ್ ಪಕ್ಷದೊಳಗೂ ವಿವಾದ ಭುಗಿಲೆದ್ದಿತು. ಕಾಂಗ್ರೆಸ್ ಎಂಎಲ್‌ಸಿ ಟಿ. ಮಲ್ಲಣ್ಣ ಅವರು ನಾಟಕೀಯವಾಗಿ ಪ್ರತಿಭಟನೆ ಕೈಗೊಂಡು ಸಮೀಕ್ಷಾ ವರದಿಯ ಪ್ರತಿಗಳನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿದರು. ‘‘ಸರಕಾರವು ಮುಂದುವರಿದ ಜಾತಿಗಳಿಗೆ ಅನುಕೂಲಕರವಾದ ಪಕ್ಷಪಾತದಿಂದ ಕೂಡಿದ ಸಮೀಕ್ಷೆ ನಡೆಸುತ್ತಿದೆ ಮತ್ತು 2014ರ ಸಮಗ್ರ ಕುಟುಂಬ ಸಮೀಕ್ಷೆಯ ಸಮಗ್ರತೆಯನ್ನು ಸರಿಗಟ್ಟಲು ವಿಫಲವಾಗಿದೆ’’ ಎಂದು ಅವರು ಆರೋಪಿಸಿದರು. ಮಲ್ಲಣ್ಣನವರ ಈ ಕ್ರಮ ಕಾಂಗ್ರೆಸ್‌ನೊಳಗೆ ಖಂಡನೆಗೆ ಗುರಿಯಾಯಿತು. ಇದರ ಪರಿಣಾಮ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಪಕ್ಷದ ಶಿಸ್ತು ಕ್ರಮ ಸಮಿತಿಯಿಂದ ಶೋಕಾಸ್ ನೋಟಿಸ್ ಜಾರಿಯಾಯಿತು ಮತ್ತು ಅವರನ್ನು ಪಕ್ಷದಿಂದ ಹೊರಹಾಕಲೂ ಕಾರಣವಾಯಿತು.

ಮಾದಿಗ ಹಕ್ಕುಗಳಿಗಾಗಿ ಪ್ರತಿಪಾದಿಸುವ ಪ್ರಮುಖ ನಾಯಕ ಮಂದ ಕೃಷ್ಣ ಮಾದಿಗ, ಮಾದಿಗ ಸಮುದಾಯಕ್ಕೆ ಶೇ. 9ರಷ್ಟು ಮೀಸಲಾತಿ ನೀಡುವ ಸರಕಾರದ ಪ್ರಸ್ತಾವವನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಈ ಸಮೀಕ್ಷೆಯು ಪರಿಶಿಷ್ಟ ಜಾತಿಗಳಲ್ಲಿ ಉಪ ವರ್ಗೀಕರಣದ ಕುರಿತು ನಡೆಯುತ್ತಿರುವ ಚರ್ಚೆಯನ್ನು ಮತ್ತಷ್ಟು ಹೆಚ್ಚಿಸಿತು. ಅವರು ಶೇ. 11ರಷ್ಟು ಕೋಟಾವನ್ನು ಒತ್ತಾಯಿಸಿದರು. ಇದು ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಜನಸಂಖ್ಯೆಯ ಪಾಲಿಗೆ ಅನುಗುಣವಾಗಿರುತ್ತದೆ. ಸರಕಾರವು ಮಾದಿಗರ ಪ್ರಾತಿನಿಧ್ಯವನ್ನು ಉದ್ದೇಶಪೂರ್ವಕವಾಗಿ ಕಡಿಮೆಗೊಳಿಸಲು, ಮಾಲಾ ಸಮುದಾಯಕ್ಕೆ ಒಲವು ತೋರಿಸುತ್ತಿದೆ ಎಂದು ಆರೋಪಿಸಿದರು. ಈ ವಿಷಯದ ಬಗ್ಗೆ ಆರೋಗ್ಯ ಸಚಿವ ದಾಮೋದರ ರಾಜ ನರಸಿಂಹ ಅವರ ನಿಷ್ಕ್ರಿಯತೆಯನ್ನು ಅವರು ಟೀಕಿಸಿದರು. ಮಾದಿಗ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಅವರನ್ನು ಸಂಪುಟದಿಂದ ಕೈ ಬಿಡಲು ಒತ್ತಾಯಿಸಿದರು.

ದತ್ತಾಂಶ ಗೌಪ್ಯತೆ ಮತ್ತು ಪಾರದರ್ಶಕತೆಯ ಕಳವಳ

ಸಂಪೂರ್ಣ ಸಮೀಕ್ಷೆಯ ದತ್ತಾಂಶವನ್ನು ತಡೆ ಹಿಡಿಯುವ ಸರಕಾರದ ನಿರ್ಧಾರವು ಪಾರದರ್ಶಕತೆ ಮತ್ತು ದತ್ತಾಂಶ ಗೌಪ್ಯತೆಯ ಸುತ್ತಲಿನ ಪ್ರತ್ಯೇಕ ವಿವಾದವನ್ನು ಹುಟ್ಟುಹಾಕಿತು. ವಿಧಾನಸಭೆ ಅಧಿವೇಶನದಲ್ಲಿ ವೈಯಕ್ತಿಕ ಮಟ್ಟದ ದತ್ತಾಂಶವನ್ನು ಹೊಂದಿರುವ ಸಮೀಕ್ಷೆಯ 4ನೇ ಸಂಪುಟವನ್ನು ದತ್ತಾಂಶ ಗೌಪ್ಯತೆಯ ನಿರ್ಬಂಧಗಳಿಂದಾಗಿ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ರೆಡ್ಡಿ ಹೇಳಿದ್ದಾರೆ. ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದನ್ನು ತಡೆಯುವ ಸರಕಾರ ಮತ್ತು ವ್ಯಕ್ತಿಗಳ ನಡುವಿನ ಕರಾರಿನ ಒಪ್ಪಂದವನ್ನು ಅವರು ಉಲ್ಲೇಖಿಸಿದ್ದಾರೆ. ಆದರೂ ಸಮೀಕ್ಷೆಯ ವಿಧಾನದ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಳ್ಳಲು ಅವರು ಪ್ರಸ್ತಾಪಿಸಿದರು. ಅಗತ್ಯ ಕಾನೂನು ಒಪ್ಪಿಗೆಯನ್ನು ಪಡೆದ ನಂತರ ವಿಧಾನದ ರೂಪುರೇಖೆ, ಬಳಸಿದ ಸಂಪನ್ಮೂಲಗಳು ಮತ್ತು ಇತರ ಕಾರ್ಯಾಚರಣೆಯ ಅಂಶಗಳನ್ನು ವಿವರಿಸುವ ಸಮೀಕ್ಷೆಯ ವರದಿಯ 3 ಸಂಪುಟಗಳನ್ನು ಮಂಡಿಸಲು ರಾಜ್ಯ ಸರಕಾರ ಸಿದ್ಧವಾಗಿದೆ ಎಂದು ರೆಡ್ಡಿ ಸ್ಪಷ್ಟಪಡಿಸಿದರು.

ಜಾತಿ ಸಮೀಕ್ಷೆಯ ಐತಿಹಾಸಿಕ ಮತ್ತು ಕಾನೂನು ಪರಿಸ್ಥಿತಿ

ತೆಲಂಗಾಣ ಜಾತಿ ಸಮೀಕ್ಷೆಯ ಸುತ್ತಲಿನ ವಿವಾದವನ್ನು ಭಾರತದಲ್ಲಿ ಜಾತಿ ಎಣಿಕೆಯ ವಿಶಾಲವಾದ ಐತಿಹಾಸಿಕ ಮತ್ತು ಕಾನೂನು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರರು 1872ರಿಂದ 1931ರವರೆಗೆ ದಶವಾರ್ಷಿಕ ಜಾತಿ ಆಧಾರಿತ ಜನಗಣತಿಯನ್ನು ನಡೆಸಿದರು, ಈ ದತ್ತಾಂಶವನ್ನು ಆಡಳಿತ ಮತ್ತು ನಿಯಂತ್ರಣ ಉದ್ದೇಶಗಳಿಗಾಗಿ ಬಳಸಿಕೊಂಡರು. ಹೆಚ್ಚು ಸಮಾನ ಪ್ರಾತಿನಿಧ್ಯಕ್ಕಾಗಿ ಬೇಡಿಕೆಗಳನ್ನು ಉತ್ತೇಜಿಸುವ ಮೇಲ್ಜಾತಿಯ ಪ್ರಾಬಲ್ಯದ ವ್ಯಾಪ್ತಿಯನ್ನು ಐತಿಹಾಸಿಕ ದತ್ತಾಂಶವು ಬಹಿರಂಗಪಡಿಸಿದೆ.

ಆದರೂ, ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ಸರಕಾರವು ಸಾಮಾನ್ಯ ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ನಿಲ್ಲಿಸಿತು, ಜಾತಿ ರಹಿತ ಸಮಾಜ ಮತ್ತು ರಾಷ್ಟ್ರೀಯ ಏಕತೆಯ ಕಲ್ಪನೆಯನ್ನು ಉತ್ತೇಜಿಸಲು ಎಂದು ಹೇಳಲಾಯಿತು. ಸಂವಿಧಾನದ ಆದೇಶದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ದತ್ತಾಂಶ ಸಂಗ್ರಹ ಮುಂದುವರಿಯಿತು. ಜಾತಿ ಸಮೀಕ್ಷೆಗಳನ್ನು ನಡೆಸುವ ಸಮಕಾಲೀನ ಪ್ರಯತ್ನಗಳು ಗಮನಾರ್ಹ ಕಾನೂನು ಸವಾಲುಗಳನ್ನು ಎದುರಿಸುತ್ತಿವೆ. ಸರ್ವೋಚ್ಚ ನ್ಯಾಯಾಲಯ ಮೀಸಲಾತಿಯ ಮೇಲಿನ ಶೇ.50ರ ಮಿತಿಯ ಮೀಸಲಾತಿ ನೀತಿಗಳನ್ನು ವಿಸ್ತರಿಸಲು ಜಾತಿ ದತ್ತಾಂಶದ ಬಳಕೆಯನ್ನು ಮಿತಿಗೊಳಿಸುತ್ತಿದೆ. ತನ್ನದೇ ಆದ ಜಾತಿ ಸಮೀಕ್ಷೆಯ ದತ್ತಾಂಶವನ್ನು ಆಧರಿಸಿ, ಕೋಟಾಗಳನ್ನು ಹೆಚ್ಚಿಸುವ ಬಿಹಾರದ ಪ್ರಯತ್ನವನ್ನು ಪಾಟ್ನಾ ಉಚ್ಚ ನ್ಯಾಯಾಲಯ ತಿರಸ್ಕರಿಸಿರುವುದು ಇದಕ್ಕೆ ಉದಾಹರಣೆಯಾಗಿದೆ.

ಮುಗಿಸುವ ಮುನ್ನ..

ತೆಲಂಗಾಣದ ಜಾತಿ ಸಮೀಕ್ಷೆ ಒಂದು ಮಹತ್ವದ ಪ್ರಗತಿಪರ ಹೆಜ್ಜೆ ಆಗಿದ್ದರೂ, ಅದರ ನಿರ್ವಹಣೆಯಲ್ಲಿ ನಡೆದ ನಿರ್ದಿಷ್ಟ ತಪ್ಪುಗಳು ಮತ್ತು ಮಾಹಿತಿಯ ಪಾರದರ್ಶಕತೆಯ ಕೊರತೆ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳು ಇಂತಹ ಜಾತಿ ಸಮೀಕ್ಷೆಗಳನ್ನು ಮುಂದೆ ಕೈಗೊಳ್ಳುವಾಗ ತೆಲಂಗಾಣದ ಅನುಭವದಿಂದ ಪಾಠ ಕಲಿಯಬೇಕು.

ಆಧಾರ: Thewire

Tags:    

Writer - ಕೆ.ಎನ್. ಲಿಂಗಪ್ಪ

contributor

Editor - ಕೆ.ಎನ್. ಲಿಂಗಪ್ಪ

contributor

Byline - ಕೆ.ಎನ್. ಲಿಂಗಪ್ಪ

contributor

Similar News