ರಚನಾತ್ಮಕ ಅಂತರವನ್ನು ಸರಿಪಡಿಸುವ ʻವಿಬಿ-ಜಿ ರಾಮ್ ಜಿʼ ಕಾಯ್ದೆ-2025
(ಫೋಟೊ: @ChouhanShivraj/X)
ʻವಿಕಸಿತ ಭಾರತ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಯೋಜನೆ (ಗ್ರಾಮೀಣ) ಕಾಯ್ದೆ-2025ʼಕ್ಕೆ ಭಾರತದ ರಾಷ್ಟ್ರಪತಿ ಅವರು ಅನುಮೋದನೆ ನೀಡಿದ್ದಾರೆ. ಆ ಮೂಲಕ ಶಾಸನಬದ್ಧ ವೇತನ ಉದ್ಯೋಗ ಖಾತರಿಯನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಸಬಲೀಕರಣ, ಏಕೀಕರಣದ ಮತ್ತು ಪರಿಪೂರ್ಣತೆ ಆಧರಿತ ಯೋಜನೆ ಅನುಷ್ಠಾನದ ಮೂಲಕ ಗ್ರಾಮೀಣ ಜೀವನೋಪಾಯಕ್ಕೆ ಮತ್ತಷ್ಟು ಶಕ್ತಿ ತುಂಬಲಾಗಿದೆ. ಸದೃಢ ಮತ್ತು ಸ್ವಾವಲಂಬಿ ಗ್ರಾಮೀಣ ಭಾರತ ನಿರ್ಮಾಣಕ್ಕೆ ಅನುವು ಮಾಡಲಾಗಿದೆ.
ಕೆಲವರಿಂದ ತಪ್ಪು ಗ್ರಹಿಕೆ
ʻವಿಬಿ-ಜಿ ರಾಮ್ ಜಿʼ ಕಾಯ್ದೆಯು ಜಾರಿಯಾದ ಬಳಿಕವೂ ಕೆಲವರು ಕೂಲಂಕಷ ಪರಿಶೀಲನೆ ರಹಿತವಾದ ಊಹಾ ಪೋಹಗಳನ್ನು ಮುಂದಿಟ್ಟಿದ್ದಾರೆ. ಈ ಕಾಯ್ದೆಯ ಮೂಲಕ ಉದ್ಯೋಗ ಖಾತರಿಯನ್ನು ದುರ್ಬಲಗೊಳಿಸಲಾಗಿದೆ; ವಿಕೇಂದ್ರೀಕರಣ ಮತ್ತು ಬೇಡಿಕೆ ಆಧಾರಿತ ಉದ್ಯೋಗದ ಹಕ್ಕುಗಳನ್ನು ಸಮಾಲೋಚನೆಯಿಲ್ಲದೆ ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಜೊತೆಗೆ ಈ ಸುಧಾರಣೆಯು ಪುನರ್ ರಚನೆ ಸೋಗಿನಲ್ಲಿ ವಿತ್ತೀಯ ನಿಧಿ ಕಡಿತವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಪ್ರತಿಯೊಂದು ಪ್ರತಿಪಾದನೆಯೂ ಕಾಯ್ದೆಯ ಸತ್ವ ಮತ್ತು ಉದ್ದೇಶವನ್ನು ತಪ್ಪಾಗಿ ಗ್ರಹಿಸಿದ್ದರಿಂದ ಹೊರಹೊಮ್ಮಿದೆ.
ಜನಕಲ್ಯಾಣ ಮತ್ತು ಅಭಿವೃದ್ಧಿಯು ಪರಸ್ಪರ ವಿರೋದ್ಧ ಆಯ್ಕೆಗಳು ಎಂಬ ಊಹೆ ಹಾಗೂ ಪರಿಕಲ್ಪನೆಯಲ್ಲಿನ ದೋಷವು ಈ ತಪ್ಪು ಗ್ರಹಿಕೆಗೆ ಕಾರಣವಾಗಿದೆ. ಆದರೆ, ಹೊಸ ಕಾಯಿದೆಯನ್ನು ಇದಕ್ಕೆ ವಿರುದ್ಧವಾದ ತಿಳಿವಳಿಕೆಯ ಮೇಲೆ ರೂಪಿಸಲಾಗಿದೆ. ಮತ್ತಷ್ಟು ಹೆಚ್ಚಿನ ಶಾಸನಬದ್ಧ ಜೀವನೋಪಾಯದ ಖಾತರಿಯನ್ನು ಹೊಂದಿರುವ ಜನಕಲ್ಯಾಣ ಮತ್ತು ಅಭಿವೃದ್ಧಿ, ದೀರ್ಘಬಾಳಿಕೆಯ ಮೂಲಸೌಕರ್ಯ ಸೃಷ್ಟಿ ಮತ್ತು ಉತ್ಪಾದಕತೆ ಹೆಚ್ಚಳದ ಮೇಲೆ ಹೊಸ ಕಾಯಿದೆ ನಿಂತಿದೆ. ಇದು ಪರಸ್ಪರ ಬಲವರ್ಧನೆಗೆ ಬೆಂಬಲಿಸುತ್ತದೆ. ಆದಾಯ ಬೆಂಬಲ, ಆಸ್ತಿ ಸೃಷ್ಟಿ, ಕೃಷಿ ಸ್ಥಿರತೆ ಮತ್ತು ದೀರ್ಘಕಾಲೀನ ಗ್ರಾಮೀಣ ಉತ್ಪಾದಕತೆಯನ್ನು ನಿರಂತರವಾಗಿ ಪರಿಗಣಿಸಲಾಗುತ್ತದೆ. ಇದು ಮಹತ್ವಾಕಾಂಕ್ಷೆಯ ವಾಕ್ಚಾತುರ್ಯವಲ್ಲ, ಬದಲಿಗೆ ಶಾಸನಬದ್ಧ ವಿನ್ಯಾಸವನ್ನು ಆಧರಿಸಿದ ಕಾರ್ಯವಿಧಾನವಾಗಿದೆ.
ಉದ್ಯೋಗದ ಕಾನೂನುಬದ್ಧ ಹಕ್ಕನ್ನು ದುರ್ಬಲಗೊಳಿಸಲಾಗಿದೆ ಎಂಬ ಅಭಿಪ್ರಾಯ ಸರಿಯಲ್ಲ. ಈ ಕಾಯ್ದೆಯು ಉದ್ಯೋಗ ಖಾತರಿಯ ಶಾಸನಬದ್ಧ ಮತ್ತು ನ್ಯಾಯಸಮ್ಮತ ಗುಣಲಕ್ಷಣವನ್ನು ಉಳಿಸಿಕೊಳ್ಳುತ್ತದೆ ಮತ್ತು ಅದರ ಜಾರಿಯನ್ನು ಬಲಪಡಿಸುತ್ತದೆ. ಉದ್ಯೋಗ ಅರ್ಹತೆಯನ್ನು ಮೊಟಕುಗೊಳಿಸುವ ಬದಲು, ಅರ್ಹತೆಯನ್ನು 100 ರಿಂದ 125 ದಿನಗಳಿಗೆ ವಿಸ್ತರಿಸಲಾಗಿದೆ. ಈ ಹಿಂದೆ ಅನರ್ಹತೆ ಮೂಲಕ ನಿರುದ್ಯೋಗ ಭತ್ಯೆಯನ್ನು ನಿರಾಕರಿಸಲು ಅವಕಾಶವಿತ್ತು. ಈಗ ಅಂತಹ ಅರ್ಹತೆ ನಿರಾಕರಣೆ ಷರತ್ತುಗಳನ್ನು ತೆಗೆದುಹಾಕಲಾಗಿದೆ. ಜೊತೆಗೆ ಕ್ಷಿಪ್ರ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಬಲಪಡಿಸಲಾಗಿದೆ. ಈ ಸುಧಾರಣೆಯು ಶಾಸನಬದ್ಧ ಭರವಸೆ ಮತ್ತು ವಾಸ್ತವತೆಯ ನಡುವಿನ ದೀರ್ಘಕಾಲದ ಅಂತರವನ್ನು ಪರಿಹರಿಸುತ್ತದೆ.
ಹೊಸ ಯೋಜನೆಯಲ್ಲಿ ಬೇಡಿಕೆ ಆಧಾರಿತ ಉದ್ಯೋಗವನ್ನು ಕೈಬಿಡಲಾಗಿದೆ ಎಂದು ವಾದಿಸಲಾಗಿದೆ. ಇದು ಆಧಾರರಹಿತ. ಕಾರ್ಮಿಕರ ಕಡೆಯಿಂದ ಕೆಲಸಕ್ಕಾಗಿ ಬೇಡಿಕೆ ಸೃಷ್ಟಿಯಾಗುವುದು ಮುಂದುವರಿಯುತ್ತದೆ. ಆದರೆ ಹೊಸ ಯೋಜನೆಯಲ್ಲಿ ಈ ನಿಟ್ಟಿನಲ್ಲಿ ಒಂದು ಬದಲಾವಣೆ ಎಂದರೆ ಕೇವಲ ಸಂಕಷ್ಟ ಎದುರಾದ ನಂತರವಷ್ಟೇ ಕೆಲಸಕ್ಕಾಗಿ ಬೇಡಿಕೆ ಸೃಷ್ಟಿಯಾಗುವುದಿಲ್ಲ. ಮುಂಚಿತವಾಗಿ ಉದ್ಯೋಗ ಸೃಜನೆಯನ್ನು ಕಾರ್ಯಗತಗೊಳಿಸುವ ಮೂಲಕ, ಸಕ್ರಿಯ ಭಾಗವಹಿಸುವಿಕೆ ಹೊಂದಿರುವ ಗ್ರಾಮ ಮಟ್ಟದ ಯೋಜನೆಯ ಮೂಲಕ ಹೊಸ ಯೋಜನೆಯು ಕಾರ್ಮಿಕರು ಉದ್ಯೋಗವನ್ನು ಹುಡುಕಿದಾಗ ಅವರಿಗೆ ಅದು ಖಚಿತವಾಗಿ ಲಭ್ಯವಾಗುತ್ತದೆ. ಇಲ್ಲಿ ಆಡಳಿತಾತ್ಮಕ ಸಿದ್ಧತೆಯಿಲ್ಲದ ಕಾರಣ ಉದ್ಯೋಗ ನಿರಾಕರಿಸುವ ಸಂದರ್ಭ ಬರುವುದಿಲ್ಲ. ಈ ಯೋಜನೆಯು, ಈ ಅರ್ಥದಲ್ಲಿ, ಬೇಡಿಕೆಯನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ, ಅದು ಅದನ್ನು ಕಾರ್ಯಗತಗೊಳಿಸುತ್ತದೆ.
ಅಧಿಕಾರ ಕೇಂದ್ರೀಕರಣದ ಆರೋಪ ಮಾಡುವವರು, ಬಹುಶಃ ಈ ಕಾನೂನಿನ ರಚನಾ ಸ್ವರೂಪವನ್ನು ಕಡೆಗಣಿಸಿ ದಂತೆ ಕಾಣುತ್ತದೆ. ಗ್ರಾಮ ಪಂಚಾಯಿತಿಗಳು ಪ್ರಾಥಮಿಕ ಯೋಜನೆ ಮತ್ತು ಅನುಷ್ಠಾನ ಪ್ರಾಧಿಕಾರಗಳಾಗಿ ಉಳಿದಿವೆ ಮತ್ತು ಗ್ರಾಮ ಸಭೆಗಳು ಸ್ಥಳೀಯ ಯೋಜನೆಗಳ ಮೇಲೆ ಅನುಮೋದನೆಯ ಅಧಿಕಾರವನ್ನು ಉಳಿಸಿಕೊಂಡಿವೆ. ಹೊಸ ಯೋಜನೆಯಲ್ಲಿ ಬದಲಾಗಿರುವ ಒಂದು ಸಂಗತಿಯೆಂದರೆ, ವಿಕೇಂದ್ರೀಕೃತ ಯೋಜನೆಯು ಇನ್ನು ಮುಂದೆ ತಾತ್ಕಾಲಿಕ ಅಥವಾ ಸಾಂದರ್ಭಿಕವಾಗಿರುವುದಿಲ್ಲ. ಬದಲಿಗೆ, ರಚನಾತ್ಮಕ ಮತ್ತು ಭಾಗವಹಿಸುವ ಪ್ರಕ್ರಿಯೆಯಾಗಿ ಸಾಂಸ್ಥಿಕ ರೂಪ ಪಡೆಯುತ್ತದೆ. ʻವಿಕಸಿತ ಗ್ರಾಮ ಪಂಚಾಯತ್ ಯೋಜನೆʼಗಳನ್ನು ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಒಟ್ಟುಗೂಡಿಸಲಾಗುತ್ತದೆ, ಇದು ಕ್ಷೇತ್ರಗಳಾದ್ಯಂತ ಸಮನ್ವಯ, ಏಕೀಕರಣ ಮತ್ತು ಗೋಚರತೆಯನ್ನು ಸಕ್ರಿಯಗೊಳಿಸುತ್ತದೆ. ಸ್ಥಳೀಯ ಆದ್ಯತೆಗಳನ್ನು ದಮನ ಮಾಡಲು ಅವಕಾಶವಿರುವುದಿಲ್ಲ. ಹೊಸ ಕಾಯಿದೆಯಲ್ಲಿ ಯೋಜನೆಯ ಸುಸಂಬದ್ಧತೆ ವಿಚಾರವಷ್ಟೇ ಕೇಂದ್ರೀಕೃತವಾಗಿರುತ್ತದೆ, ಆದರೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವು ಸ್ಥಳೀಯವಾಗಿ ಉಳಿಯುತ್ತದೆ. ಇದು ವಿಕೇಂದ್ರೀಕರಣವನ್ನು ದುರ್ಬಲಗೊಳಿಸದೆಯೇ ವಿಘಟನೆಯನ್ನು ಸರಿಪಡಿಸುತ್ತದೆ.
ಸಮಾಲೋಚನೆಯಿಲ್ಲದೆ ಸುಧಾರಣೆಯನ್ನು ಕೈಗೊಳ್ಳಲಾಗಿದೆ ಎಂಬ ವಾದಗಳು ಸಹ ಅಷ್ಟೇ ಅಸಂಗತವಾಗಿವೆ. ಈ ವಿಧೇಯಕ ಮಂಡನೆಗೂ ಮುನ್ನ ರಾಜ್ಯ ಸರ್ಕಾರಗಳೊಂದಿಗೆ ವ್ಯಾಪಕ ಸಮಾಲೋಚನೆಗಳು, ತಾಂತ್ರಿಕ ಕಾರ್ಯಾಗಾರಗಳು ಮತ್ತು ಬಹು-ಪಾಲುದಾರರ ಚರ್ಚೆಗಳು ನಡೆದವು. ಇದಲ್ಲಿನ ಪ್ರಮುಖ ವಿನ್ಯಾಸ ವೈಶಿಷ್ಟ್ಯಗಳು - ಗ್ರಾಮ ಯೋಜನಾ ರಚನೆಗಳು, ಒಮ್ಮುಖ ಕಾರ್ಯವಿಧಾನಗಳು ಮತ್ತು ಡಿಜಿಟಲ್ ಆಡಳಿತ ವ್ಯವಸ್ಥೆಗಳನ್ನು ರಾಜ್ಯಗಳ ಪ್ರತಿಕ್ರಿಯೆ ಮತ್ತು ಹಲವು ವರ್ಷಗಳ ಅನುಷ್ಠಾನದಿಂದ ಪಡೆದ ಪಾಠಗಳಿಂದ ರೂಪಿಸಲಾಗಿದೆ.
ಹಂಚಿಕೆ, ಪಾಲಿನಲ್ಲಿ ಹೆಚ್ಚಳ
ಕಳೆದ ದಶಕದಲ್ಲಿ ಉದ್ಯೋಗ ಖಾತರಿಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ ಎಂಬ ಆರೋಪವು ವಾಸ್ತವಕ್ಕೆ ದೂರವಾದುದು. ಬಜೆಟ್ ಹಂಚಿಕೆಯು 2013-14ರಲ್ಲಿದ್ದ 33,000 ಕೋಟಿ ರೂ.ಗಳ ಮಟ್ಟದಿಂದ 2024-25ರಲ್ಲಿ 286,000 ಕೋಟಿ ರೂ.ಗೆ ಏರಿದೆ. ಸೃಷ್ಟಿಯಾದ ಮಾನವ ದಿನಗಳ ಸಂಖ್ಯೆಯೂ 2013-14ರ ಅವಧಿಯಲ್ಲಿ 1,660 ಕೋಟಿ ಇದ್ದದ್ದು ಈಗ 3,210 ಕೋಟಿಗೆ ಏರಿದೆ. ಬಿಡುಗಡೆ ಮಾಡಲಾದ ಕೇಂದ್ರದ ನಿಧಿ ಪ್ರಮಾಣವೂ 2.13 ಲಕ್ಷ ಕೋಟಿ ರೂ.ಗಳಿಂದ 8.53 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ. ಜೊತೆಗೆ, ಪೂರ್ಣ ಗೊಂಡ ಕಾಮಗಾರಿಗಳ ಸಂಖ್ಯೆ 153 ಲಕ್ಷದಿಂದ 862 ಲಕ್ಷಕ್ಕೆ ಏರಿಕೆಯಾಗಿದೆ. ಮಹಿಳೆಯರ ಭಾಗವಹಿಸುವಿಕೆ ಶೇ.48ರಿಂದ ಶೇ.56.73ಕ್ಕೆ ಏರಿದೆ. ಶೇ.99 ಕ್ಕೂ ಹೆಚ್ಚು ಹಣ ವರ್ಗಾವಣೆ ಆದೇಶಗಳು ಈಗ ಸಕಾಲಿಕವಾಗಿ ಸೃಷ್ಟಿಯಾಗುತ್ತಿವೆ ಮತ್ತು ಸುಮಾರು ಶೇ.99 ರಷ್ಟು ಸಕ್ರಿಯ ಕಾರ್ಮಿಕರು ಆಧಾರ್ ಆಧರಿತ ಪಾವತಿ ವ್ಯವಸ್ಥೆಗೆ ಸಂಪರ್ಕ ಹೊಂದಿದ್ದಾರೆ. ಈ ಪ್ರವೃತ್ತಿಗಳು ನಿರಂತರ ಬದ್ಧತೆ ಮತ್ತು ಸುಧಾರಿತ ವಿತರಣೆಯನ್ನು ಸೂಚಿಸುತ್ತವೆಯೇ ಹೊರತು ನಿರ್ಲಕ್ಷ್ಯವನ್ನಲ್ಲ.
ಆದಾಗ್ಯೂ ಕಾಲಾನಂತರದಲ್ಲಿ ಸ್ಪಷ್ಟವಾದ ಒಂದು ಸಂಗತಿಯೆಂದರೆ, ಯೋಜನೆಯ ಅನುಷ್ಠಾನದ ಅನುಭವವು ಹಿಂದಿನ ಯೋಜನೆಗಳಲ್ಲಿದ್ದ ರಚನಾತ್ಮಕ ದೌರ್ಬಲ್ಯಗಳನ್ನು ಬಹಿರಂಗಪಡಿಸಿದೆ. ಸಾಂದರ್ಭಿಕ ಉದ್ಯೋಗ, ನಿರುದ್ಯೋಗ ಭತ್ಯೆಯ ದುರ್ಬಲ ಜಾರಿಗೊಳಿಸುವಿಕೆ, ಛಿದ್ರಗೊಂಡ ಆಸ್ತಿ ಸೃಷ್ಟಿ ಮತ್ತು ನಕಲು ನೋಂದಣಿಗಳ ಸಾಧ್ಯತೆ ತಪ್ಪಿದೆ. ಬರಗಾಲದ ವರ್ಷಗಳು, ವಲಸೆಯ ಹೆಚ್ಚಳ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದಂತಹ ಅವಧಿಗಳಲ್ಲಿ ಈ ದೌರ್ಬಲ್ಯಗಳು ಸ್ಪಷ್ಟವಾಗಿ ಗೋಚರವಾಗಿವೆ.
ಹೊಸ ಕಾಯ್ದೆಯಡಿ ಹಣಕಾಸಿನ ಪುನರ್ ರಚನೆಯನ್ನು ನಿಧಿಯ ಕಡಿತ ಎಂದು ತಪ್ಪಾಗಿ ನಿರೂಪಿಸಲಾಗಿದೆ. ಕೇಂದ್ರ ಸರ್ಕಾರದ ಕೊಡುಗೆ ಹೆಚ್ಚುತ್ತಿದೆ - ಕೇಂದ್ರದ ಪಾಲು 86,000 ಕೋಟಿ ರೂ.ಗಳಿಂದ ಸುಮಾರು 295,000 ಕೋಟಿ ರೂ.ಗೆ ಏರುತ್ತದೆ, ಇದು ಗ್ರಾಮೀಣ ಉದ್ಯೋಗಕ್ಕೆ ನಿರಂತರ ಮತ್ತು ಹೆಚ್ಚಿದ ಬೆಂಬಲವನ್ನು ಒತ್ತಿಹೇಳುತ್ತದೆ. 60:40 ಧನಸಹಾಯ ಮಾದರಿಯು ದೀರ್ಘಕಾಲದಿಂದ ಅನುಸರಿಸಿಕೊಂಡು ಬಂದಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳ ರಚನೆಯನ್ನು ಹೊಂದಿದೆ. ಇದೇವೇಳೆ, ಈಶಾನ್ಯ ಮತ್ತು ಹಿಮಾಲಯದ ತಪ್ಪಲಿನ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ 90:10 ಅನುಪಾತದ ಧನಸಹಾಯ ರಚನೆಯನ್ನು ಯೋಜನೆ ಒಳಗೊಂಡಿದೆ. ಈ ಅನುದಾನ ಪಾಲುದಾರಿಕೆಯು ಹಣಕಾಸಿನ ಕಡಿತವನ್ನು ಸೂಚಿಸುವ ಬದಲು, ಹಂಚಿಕೆಯ ಜವಾಬ್ದಾರಿ ಮತ್ತು ಉತ್ತರದಾಯಿತ್ವವನ್ನು ಬಲಪಡಿಸುತ್ತದೆ.
ನಿಯಮಗಳಲ್ಲಿ ಸೂಚಿಸಲಾದ ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ರಾಜ್ಯವಾರು ನಿಧಿ ಹಂಚಿಕೆಗಳನ್ನು ನಿರ್ಧರಿಸಲಾಗುತ್ತದೆ. ನಿಯಮ ಆಧಾರಿತ ಪ್ರಮಾಣಕ ಹಂಚಿಕೆಯ ಮೂಲಕ ಸಮಾನತೆಯನ್ನು ಖಾತ್ರಿಪಡಿಸಲಾ ಗುತ್ತದೆ. ರಾಜ್ಯಗಳನ್ನು ಕೇವಲ ಅನುಷ್ಠಾನ ಏಜೆನ್ಸಿಗಳಾಗಿ ಪರಿಗಣಿಸದೆ ಅಭಿವೃದ್ಧಿಯ ಪಾಲುದಾರರಾಗಿ ಪರಿಗಣಿಸ ಲಾಗುತ್ತದೆ, ಶಾಸನಬದ್ಧ ಚೌಕಟ್ಟಿನೊಳಗೆ ತಮ್ಮದೇ ಆದ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿ ಸಲು ರಾಜ್ಯಗಳಿಗೆ ಅಧಿಕಾರ ನೀಡಲಾಗುತ್ತದೆ. ಈ ಯೋಜನೆಯಲ್ಲಿ ನಮ್ಯತೆಯನ್ನು ಸ್ಪಷ್ಟವಾಗಿ ಸಂರಕ್ಷಿಸಲಾಗಿದೆ. ನೈಸರ್ಗಿಕ ವಿಕೋಪಗಳು ಅಥವಾ ಇತರ ಅಸಾಧಾರಣ ಸಂದರ್ಭಗಳಲ್ಲಿ ರಾಜ್ಯಗಳು ವಿಶೇಷ ಸಡಿಲಿಕೆಗಳನ್ನು ಶಿಫಾರಸು ಮಾಡಬಹುದು, ಇದರಲ್ಲಿ ಅನುಮತಿಸಬಹುದಾದ ಕೆಲಸಗಳ ದಿನಗಳ ವಿಸ್ತರಣೆ ಮತ್ತು ಉದ್ಯೋಗದ ತಾತ್ಕಾಲಿಕ ಹೆಚ್ಚಳವೂ ಸೇರಿದೆ. ನಿಯಮಾಧರಿತ ಹಂಚಿಕೆ ಮತ್ತು ಸಂದರ್ಭೋಚಿತ ಬದಲಾವಣೆಗೆ ಅವಕಾಶದ ಮೂಲಕ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಅನುಗುಣವಾದ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ.
ಈ ಕಾಯ್ದೆಯು ಗರಿಷ್ಠ ಬಿತ್ತನೆ ಮತ್ತು ಕೊಯ್ಲು ಋತುಗಳಲ್ಲಿ, ಒಂದು ಹಣಕಾಸು ವರ್ಷದಲ್ಲಿ 60 ದಿನಗಳವರೆಗೆ ಕಾಮಗಾರಿಗಳನ್ನು ಕೈಗೊಳ್ಳದ ಅವಧಿಯನ್ನು ಮುಂಚಿತವಾಗಿ ಘೋಷಿಸಲು ರಾಜ್ಯಗಳಿಗೆ ಅಧಿಕಾರ ನೀಡುತ್ತದೆ. ಕೃಷಿ-ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಜಿಲ್ಲೆಗಳು, ಬ್ಲಾಕ್‌ಗಳು ಅಥವಾ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ವಿಭಿನ್ನ ಅಧಿಸೂಚನೆಗಳನ್ನು ಹೊರಡಿಸಬಹುದು. ಆ ಮೂಲಕ ಸುಧಾರಿತ ಉದ್ಯೋಗ ಖಾತರಿ ಯೋಜನೆಯು ಕೃಷಿ ಕಾರ್ಯಾಚರಣೆಗಳಿಗೆ ಪೂರಕವಾಗಿರುವುದನ್ನು ಖಚಿತಪಡಿಸುತ್ತದೆ.
ಯು.ಪಿ.ಎ. ದಾಖಲೆ
ತನ್ನ ಮೊದಲ ಅಧಿಕಾರಾವಧಿಯಿಂದಲೇ ಕಾಂಗ್ರೆಸ್ ನೇತೃತ್ವದ ʻಯು.ಪಿ.ಎ.ʼ ಸರ್ಕಾರವು ʻಮನರೇಗಾʼ ವಿಚಾರದಲ್ಲಿ ನುಡಿದಂತೆ ನಡೆಯಲು ವಿಫಲವಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ "ದಿನಕ್ಕೆ 100 ರೂ.ಗಳ ನೈಜ ವೇತನದಂತೆ ಕನಿಷ್ಠ 100 ದಿನಗಳ ಕೆಲಸ"ದ ಭರವಸೆ ನೀಡಲಾಗಿದ್ದರೂ, ಸರ್ಕಾರವು 2009ರ ಆರಂಭದಲ್ಲೇ ವೇತನವನ್ನು 100 ರೂ.ಗೆಮಿತಿಗೊಳಿಸಿತು. ಅಷ್ಟೇ ಅಲ್ಲದೆ, ಹಣದುಬ್ಬರ ಮತ್ತು ಹೆಚ್ಚುತ್ತಿರುವ ಗ್ರಾಮೀಣ ಸಂಕಷ್ಟಗಳನ್ನು ನಿರ್ಲಕ್ಷಿಸಿ ಹಲವು ವರ್ಷಗಳವರೆಗೆ ಅದೇ ಮಟ್ಟದಲ್ಲಿ ಮುಂದುವರಿಸಿತು. ಈ ಯೋಜನೆಯಡಿಯಲ್ಲಿ ರಾಜ್ಯಗಳು ಅನಿಯಂತ್ರಿತವಾಗಿ ವರ್ತಿಸುತ್ತಿವೆ ಎಂದು ಕೇಂದ್ರ ಸರ್ಕಾರ ಬಹಿರಂಗವಾಗಿ ಒಪ್ಪಿಕೊಂಡಿತು ಮತ್ತು 'ವಿವೇಚನಾರಹಿತ ಹೆಚ್ಚಳ'ಕ್ಕೆ ರಾಜ್ಯ ಸರ್ಕಾರಗಳನ್ನು ದೂಷಿಸುವ ಮೂಲಕ ವೇತನ ಸ್ಥಗಿತಗೊಳಿಸುವಿಕೆಯನ್ನು ಸಮರ್ಥಿಸಿಕೊಂಡಿತು. ಇದು ಆಡಳಿತದ ಗಂಭೀರ ವೈಫಲ್ಯವನ್ನು ಬಹಿರಂಗಪಡಿಸಿತು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ತನ್ನದೇ ರಾಜ್ಯ ಸರ್ಕಾರಗಳನ್ನು ಸಹ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ʻಮನರೇಗಾʼದಲ್ಲಿ ನಿಧಿ ದುರ್ಬಳಕೆ, ನಕಲಿ ಜಾಬ್ ಕಾರ್ಡ್‌ಗಳ ಸೃಷ್ಟಿ ಮತ್ತು ಆರ್ಥಿಕ ಸೋರಿಕೆಗಳಿಗೆ ಅವಕಾಶ ಮಾಡಿಕೊಟ್ಟಿತು.
ʻಯುಪಿಎ-2ʼ ಅವಧಿಯಲ್ಲಿ ಯೋಜನೆಯ ಬಗೆಗಿನ ಬದ್ಧತೆ ಸ್ಥಿರವಾಗಿ ಕುಸಿಯಿತು. 2010-11ರಲ್ಲಿ 2,40,100 ಕೋಟಿ ರೂ.ಗಳಷ್ಟಿದ್ದ ಬಜೆಟ್ ಹಂಚಿಕೆಯನ್ನು 2012-13ರ ವೇಳೆಗೆ 33,000 ಕೋಟಿ ರೂ.ಗೆ ಇಳಿಸಲಾಯಿತು. 2013ರಲ್ಲಿ ಸಂಸತ್ತಿನಲ್ಲಿ ನೀಡಿದ ಉತ್ತರದಲ್ಲಿ ಸಹಾಯಕ ಸಚಿವರಾಗಿದ್ದ ರಾಜೀವ್ ಶುಕ್ಲಾ ಅವರು, ʻಮನರೇಗಾʼ ಅಡಿಯಲ್ಲಿ ಉದ್ಯೋಗ ಸೃಷ್ಟಿಯು 2010-11ರಲ್ಲಿ 7.55 ಕೋಟಿ ಕಾರ್ಮಿಕರಿಂದ 2013ರ ನವೆಂಬರ್ ವೇಳೆಗೆ ಕೇವಲ 6.93 ಕೋಟಿಗೆ ಕುಸಿದಿದೆ ಎಂದು ಒಪ್ಪಿಕೊಂಡಿದ್ದರು. ವಿಳಂಬವಾದ ನಿಧಿ ಬಿಡುಗಡೆಗಳು, ಪಾವತಿಗಳಲ್ಲಿ ಪಾರದರ್ಶಕತೆಯ ಕೊರತೆ ಮತ್ತು ಆಡಳಿತಾತ್ಮಕ ನಿರಾಸಕ್ತಿಯು ಕಾರ್ಮಿಕರಲ್ಲಿ ಉದ್ಯೋಗ ಶೋಧದ ಉತ್ಸಾಹ ಕುಂದಿಸಿತು. ಇದು ಕಾಯ್ದೆಯಡಿ ಭರವಸೆ ನೀಡಲಾದ ಶಾಸನಬದ್ಧ ಉದ್ಯೋಗ ಖಾತರಿಯನ್ನು ನೇರವಾಗಿ ದುರ್ಬಲಗೊಳಿಸಿತು.
ʻಕಂಟ್ರೋಲರ್ ಮತ್ತು ಆಡಿಟರ್ ಜನರಲ್ʼ(ಸಿ.ಎ.ಜಿ.) ಅವರ 2013ರ ವರದಿಯು ಯು.ಪಿ.ಎ. ವರ್ಷಗಳಲ್ಲಿ ʻಮನರೇಗಾʼ ಯೋಜನೆಯ ನೈಜ ಸ್ಥಿತಿಯನ್ನು ಬಹಿರಂಗಪಡಿಸಿದೆ. ವ್ಯಾಪಕವಾದ ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. 4.33 ಲಕ್ಷಕ್ಕೂ ಹೆಚ್ಚು ನಕಲಿ ಅಥವಾ ದೋಷಯುಕ್ತ ಜಾಬ್ ಕಾರ್ಡ್‌ಗಳು, ಲೆಕ್ಕವಿಲ್ಲದ ಹಣ ಹಿಂಪಡೆಯುವಿಕೆ ಮತ್ತು ಅನಿಯಮಿತ ಕೆಲಸದಿಂದ ಸಾವಿರಾರು ಕೋಟಿ ನಷ್ಟವಾ ಗಿದೆ. 23 ರಾಜ್ಯಗಳಲ್ಲಿ ವೇತನ ವಿಳಂಬವಾಗಿದೆ ಅಥವಾ ನಿರಾಕರಿಸಲಾಗಿದೆ ಮತ್ತು ಭಾರತದ ಅರ್ಧಕ್ಕಿಂತ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಕಳಪೆ ದಾಖಲೆ ನಿರ್ವಹಣೆಯಾಗಿದೆ ಎಂದು ವರದಿಯು ಹೇಳಿತ್ತು. ಗ್ರಾಮೀಣ ಬಡವರ ಸಂಖ್ಯೆ ಅತಿ ಹೆಚ್ಚಾಗಿರುವ ಬಿಹಾರ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಹಂಚಿಕೆಯಾದ ನಿಧಿಯಲ್ಲಿ ಕೇವಲ ಶೇ.20 ರಷ್ಟು ಮಾತ್ರ ಬಳಸಿಕೊಂಡಿದ್ದವು. ಇದು ಯೋಜನೆಯು ಹೆಚ್ಚು ಅಗತ್ಯವಿರುವ ಸ್ಥಳದಲ್ಲಿ ನಿಖರ ವಾಗಿ ವಿಫಲವಾಗಿರುವುದನ್ನು ಸಾಬೀತುಪಡಿಸಿದೆ.
ಜನಕಲ್ಯಾಣ ಮತ್ತು ಅಭಿವೃದ್ಧಿಯ ನಡುವಿನ ಆಯ್ಕೆ ಎಂಬ ಚರ್ಚೆಯನ್ನು ಮುಂದಿಡುವುದು ಕೃತಿಮ ದ್ವಂದ್ವದ ಸೃಷ್ಟಿಯೇ ಸರಿ. ಜೀವನೋಪಾಯದ ಖಾತರಿಯು ಜನಕಲ್ಯಾಣಕ್ಕೆ ಅಡಿಪಾಯವಾದಾಗ ಮತ್ತು ದೀರ್ಘ ಬಾಳಿಕೆಯ ಗ್ರಾಮೀಣ ಮೂಲಸೌಕರ್ಯ ಸೃಷ್ಟಿ ಮತ್ತು ಉತ್ಪಾದಕತೆಯು ಅಭಿವೃದ್ಧಿಗೆ ಅಡಿಪಾಯವಾದಾಗ, ಜನಕಲ್ಯಾಣ ಮತ್ತು ಅಭಿವೃದ್ಧಿ ಎರಡೂ ಸಹ ಪರಸ್ಪರ ಸ್ಪರ್ಧಿಗಳಾಗುವ ಬದಲು ಪರಸ್ಪರ ಅವಲಂಬಿತ ವಿಷಯಗಳಾಗುತ್ತವೆ. ನಿರೀಕ್ಷಿತ ರೀತಿಯಲ್ಲಿ ಪ್ರಯೋಜನ ತಲುಪಿಸುವಲ್ಲಿ ವಿಫಲವಾದ ಯೋಜನೆಯನ್ನು ಮುಂದುವರಿಸಬೇಕೇ ಅಥವಾ ಅಭಿವೃದ್ಧಿಯ ಮೂಲಕ ಜನಕಲ್ಯಾಣವನ್ನು ಒದಗಿಸುವ, ಸಮಗ್ರ ಉದ್ಯೋಗ ಖಾತರಿ ಒದಗಿಸುವ ಆಧುನಿಕ ಯೋಜನೆಯನ್ನಾಗಿ ಅದನ್ನು ಮಾರ್ಪಡಿಸಬೇಕೆ ಎಂಬುದು ಇಲ್ಲಿ ಮೂಲ ಪ್ರಶ್ನೆಯಾಗಿದೆ. ಹೊಸ ಕಾಯ್ದೆಯು ಕೆಲಸ ಮಾಡುವ ಕಾನೂನು ಬದ್ಧ ಹಕ್ಕನ್ನು ಸಂರಕ್ಷಿಸುತ್ತದೆ, ಅರ್ಹತೆಗಳನ್ನು ವಿಸ್ತರಿಸುತ್ತದೆ, ಕಾರ್ಮಿಕರ ರಕ್ಷಣೆಯನ್ನು ಬಲಪಡಿಸುತ್ತದೆ. ಜೊತೆಗೆ ಹಲವು ವರ್ಷಗಳ ಅನುಷ್ಠಾನದ ಮೂಲಕ ಬಯಲಾದ ರಚನಾತ್ಮಕ ದೌರ್ಬಲ್ಯಗಳನ್ನು ಸರಿಪಡಿಸುತ್ತದೆ. ಇದು ಧ್ವಂಸ ಮಾಡುವ ಕೃತ್ಯವಲ್ಲ, ಬದಲಿಗೆ ಅನುಭವದ ಆಧಾರದ ಮೇಲೆ ನವೀಕರಿಸುವ ಪ್ರಕ್ರಿಯೆ.
- ಶಿವರಾಜ್ ಸಿಂಗ್ ಚೌಹಾಣ್
ಲೇಖಕರು, ಭಾರತ ಸರ್ಕಾರದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು.