ಪಹಲ್ಗಾಮ್ ದಾಳಿಯಲ್ಲಿನ ಭದ್ರತಾ ವೈಫಲ್ಯದ ಹೊಣೆಯನ್ನು ಲೆಫ್ಟಿನೆಂಟ್ ಗವರ್ನರ್ ಹೊತ್ತುಕೊಳ್ಳುವುದು ಏನನ್ನು ಸೂಚಿಸುತ್ತದೆ?
ಪಹಲ್ಗಾಮ್ ದಾಳಿ ನಿಸ್ಸಂದೇಹವಾಗಿ ಭದ್ರತಾ ವೈಫಲ್ಯವಾಗಿದ್ದು, ಅದರ ಸಂಪೂರ್ಣ ಹೊಣೆ ವಹಿಸಿಕೊಳ್ಳುವುದಾಗಿ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿರುವುದು ಟೀಕೆಗೆ ಗುರಿಯಾಗಿದೆ.
ಮನೋಜ್ ಸಿನ್ಹಾ ರಾಜೀನಾಮೆ ನೀಡಬೇಕು ಮತ್ತು ಜಮ್ಮು ಕಾಶ್ಮೀರದ ಜನರ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಮತ್ತು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಒತ್ತಾಯಿಸಿವೆ.
ಸಿನ್ಹಾ ಹೇಳಿಕೆಗಳು, ಜಮ್ಮು-ಕಾಶ್ಮೀರದಲ್ಲಿನ ಭದ್ರತೆಯ ನೇರ ಉಸ್ತುವಾರಿ ಹೊಂದಿರುವ ಮೋದಿ ನೇತೃತ್ವದ ಕೇಂದ್ರ ಸರಕಾರದಲ್ಲಿನ ಅಧಿಕಾರಿಗಳನ್ನು ರಕ್ಷಿಸುವ ಉದ್ದೇಶದ್ದಾಗಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.
ದಾಳಿ ನಡೆದು 82 ದಿನಗಳ ನಂತರ ಸಿನ್ಹಾ ಈ ಹೊಣೆ ಹೊತ್ತುಕೊಳ್ಳುವ ಮೂಲಕ ಅವರು ದಿಲ್ಲಿಯಲ್ಲಿ ಯಾರನ್ನು ರಕ್ಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಪ್ರಶ್ನಿಸಿದ್ದಾರೆ. ‘‘ಹೊಣೆಗಾರಿಕೆ ಹೊರಲು, ರಾಜೀನಾಮೆ ನೀಡಲು ಅಥವಾ ವಜಾಗೊಳ್ಳಲು ಎಷ್ಟು ದಿನ, ವಾರ, ತಿಂಗಳುಗಳು ಬೇಕು?’’ ಎಂದು ಅವರು ಎಕ್ಸ್ ನಲ್ಲಿ ಕೇಳಿದ್ದಾರೆ.
ಪಹಲ್ಗಾಮ್ ದಾಳಿ ಹೊತ್ತಿನ ಭದ್ರತಾ ಲೋಪದ ಜವಾಬ್ದಾರಿ ಹೊತ್ತುಕೊಂಡಿರುವ ಸಿನ್ಹಾ ಯಾವಾಗ ರಾಜೀನಾಮೆ ನೀಡುತ್ತಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಶಮಾ ಮುಹಮ್ಮದ್ ಕೇಳಿದ್ದಾರೆ. ‘‘ಪ್ರಜಾಪ್ರಭುತ್ವದಲ್ಲಿ, ಜವಾಬ್ದಾರಿ ವಹಿಸಿಕೊಂಡ ನಂತರ ಮುಂದಿನ ಹೆಜ್ಜೆ ರಾಜೀನಾಮೆ’’ ಎಂದು ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಇಮ್ರಾನ್ ನಬಿ ದಾರ್ ಕೂಡ ಸಿನ್ಹಾ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಸಿನ್ಹಾ ಜಮ್ಮು-ಕಾಶ್ಮೀರ ಜನರ ಕ್ಷಮೆಯಾಚಿಸುವಂತೆ ಅವರು ಒತ್ತಾಯಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ದಾಳಿ ನಡೆದಾಗಿನಿಂದ ಇದರ ಹೊಣೆಗಾರಿಕೆಗಾಗಿ ಕೇಂದ್ರ ಸರಕಾರವನ್ನು ತಮ್ಮ ಪಕ್ಷ ಒತ್ತಾಯಿಸುತ್ತಲೇ ಇದೆ ಎಂದು ಸಿಪಿಎಂನ ಎಂ.ವೈ. ತಾರಿಗಾಮಿ ಹೇಳಿದ್ದಾರೆ. 26 ನಾಗರಿಕರ ಹತ್ಯೆಗೆ ಕಾರಣವಾದ ಲೋಪದ ಬಗ್ಗೆ ಸರಕಾರ ವಿವರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಭದ್ರತಾ ಲೋಪವಾಗಿದೆ ಎಂದು ನಂಬಲು ಸಾಕಷ್ಟು ಆಧಾರಗಳಿವೆ. ಈಗ ಲೆಫ್ಟಿನೆಂಟ್ ಗವರ್ನರ್ ಇದನ್ನು ಒಪ್ಪಿಕೊಂಡಿರುವಾಗ, ಇತರ ಎಲ್ಲರನ್ನೂ ಹೊಣೆಗಾರರನ್ನಾಗಿ ಮಾಡಬೇಕು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಭದ್ರತಾ ವೈಫಲ್ಯ ಎಂದು ಒಪ್ಪಿಕೊಳ್ಳುವ ಮೂಲಕ ಸಿನ್ಹಾ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತಮ್ಮ ನೇರ ನಿಯಂತ್ರಣದಲ್ಲಿರುವ ಭದ್ರತಾ ಸಂಸ್ಥೆಗಳನ್ನೇ ಇದೇ ಮೊದಲ ಬಾರಿಗೆ ದೂಷಿಸಿದಂತಾಗಿದೆ.
‘‘ಇದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿ. ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ, ಇದು ನಿಸ್ಸಂದೇಹವಾಗಿ ಭದ್ರತಾ ವೈಫಲ್ಯವಾಗಿತ್ತು’’ ಎಂದು ಸಿನ್ಹಾ ಹೇಳಿದ್ದಾರೆ.
‘‘ದಾಳಿಯ ಉದ್ದೇಶ ಕೋಮು ವಿಭಜನೆ ಸೃಷ್ಟಿಸುವುದು ಮತ್ತು ದೇಶದ ಇತರ ಭಾಗಗಳಲ್ಲಿನ ಜಮ್ಮು-ಕಾಶ್ಮೀರದ ಜನರ ವಿರುದ್ಧ ಪ್ರತೀಕಾರಕ್ಕೆ ಪ್ರಚೋದಿಸುವುದಾಗಿತ್ತು’’ ಎಂದು ಸಿನ್ಹಾ ಹೇಳಿದ್ದರು.
ಪಹಲ್ಗಾಮ್ ದಾಳಿಯ ನಂತರ, ದೇಶದ ಹಲವೆಡೆ ಕಾಶ್ಮೀರಿ ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಇತರರ ಮೇಲೆ ಕಿರುಕುಳ ಮತ್ತು ಹಲ್ಲೆಯ ಹಲವಾರು ಘಟನೆಗಳು ವರದಿಯಾಗಿದ್ದವು.
ಭಯೋತ್ಪಾದಕರನ್ನು ಗುರುತಿಸಲಾಗಿದೆ ಮತ್ತು ತನಿಖಾ ಸಂಸ್ಥೆಗಳು ಅವರ ಜಾಡು ಹಿಡಿದಿವೆ ಎಂದು ಕೂಡ ಸಿನ್ಹಾ ಹೇಳಿದ್ದರು.
ಪಹಲ್ಗಾಮ್ ದಾಳಿಯಾಗಿ ಇಷ್ಟು ಸಮಯದ ನಂತರ ಎಲ್‌ಜಿ ಭದ್ರತಾ ವೈಫಲ್ಯ ಒಪ್ಪಿಕೊಳ್ಳುತ್ತಿರುವುದು ಮತ್ತು ಅದರ ಹೊಣೆ ಹೊರುತ್ತಿರುವುದು ಲೆಕ್ಕಾಚಾರದ ನಡೆಯೇ ಎಂಬ ಪ್ರಶ್ನೆಯೂ ಮೂಡದೇ ಇರುವುದಿಲ್ಲ. ಹಾಗಾಗಿಯೇ, ಇದು ದಿಲ್ಲಿಯಲ್ಲಿನ ಯಾರನ್ನು ರಕ್ಷಿಸುವ ಆಟ ಎಂಬ ಕಾಂಗ್ರೆಸ್ ಪ್ರಶ್ನೆ ಬಹಳ ಮಹತ್ವ ಪಡೆಯುತ್ತದೆ.
ಇದರ ನಡುವೆಯೇ, ಹುತಾತ್ಮರ ದಿನವನ್ನು ಆಚರಿಸಲು ಅವಕಾಶ ನೀಡದ ಸಿನ್ಹಾ ನಡೆ ಕೂಡ ವ್ಯಾಪಕ ಟೀಕೆಗೆ ಒಳಗಾಗಿದೆ.
ಉಮರ್ ಅಬ್ದುಲ್ಲಾ ನೇತೃತ್ವದ ಸರಕಾರದ ಹಲವಾರು ಸಚಿವರು, ಶಾಸಕರು ಮತ್ತು ವಿರೋಧ ಪಕ್ಷದ ಪ್ರಮುಖ ನಾಯಕರನ್ನು ಜುಲೈ 13ರ ಕಾಶ್ಮೀರ ಹುತಾತ್ಮರ ದಿನ ಆಚರಿಸದಂತೆ ಗೃಹಬಂಧನದಲ್ಲಿ ಇರಿಸಲಾಗಿತ್ತು.
ಬ್ರಿಟಿಷರ ಕಾಲದಲ್ಲಿ, ಆಗಿನ ಜಮ್ಮು-ಕಾಶ್ಮೀರದ ರಾಜ ಹರಿ ಸಿಂಗ್ ವಿರುದ್ಧ ನಡೆದ ಪ್ರತಿಭಟನೆಯ ವೇಳೆ 1931ರ ಜುಲೈ 13ರಂದು ಕಾಶ್ಮೀರದಲ್ಲಿ ಹತ್ಯಾಕಾಂಡ ನಡೆದಿತ್ತು.
ಆ ಹುತಾತ್ಮರ ದಿನ ಆಚರಿಸಲು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅನುಮತಿ ನಿರಾಕರಿಸಿದ್ದರು. ಶ್ರೀನಗರದ ಹಲವಾರು ಭಾಗಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಯಿತು ಮತ್ತು ಹುತಾತ್ಮರ ಸಮಾಧಿಯ ಕಡೆಗೆ ಹೋಗಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿತ್ತು.
ಇದಕ್ಕೂ ಮೊದಲು, ಪ್ರತೀ ವರ್ಷ ಜುಲೈ 13ರಂದು ಹುತಾತ್ಮರ ಸಮಾಧಿಯಲ್ಲಿ ಪುಷ್ಪ ನಮನ ಸಲ್ಲಿಸಲಾಗುತ್ತಿತ್ತು. 1931ರಲ್ಲಿ ಹತ್ಯೆಯಾದವರ ಸ್ಮರಣಾರ್ಥ ರಾಜಕೀಯ ನಾಯಕರು ಗೌರವ ಸಲ್ಲಿಸುತ್ತಿದ್ದರು ಮತ್ತು ಸಾರ್ವಜನಿಕ ಸಭೆಗಳು ನಡೆಯುತ್ತಿದ್ದವು. ಆದರೆ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದಾಗಿನಿಂದ ಮತ್ತು ಹಿಂದಿನ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದಾಗಿನಿಂದ ಹುತಾತ್ಮರ ಸಮಾಧಿಯಲ್ಲಿ ಯಾವುದೇ ಕಾರ್ಯಕ್ರಮ ನಿಷೇಧಿಸಲಾಯಿತು.
ಆದರೆ ಈ ಬಾರಿ ಚುನಾಯಿತ ಸರಕಾರ ಅಧಿಕಾರದಲ್ಲಿತ್ತು. ಪ್ರಮುಖ ರಾಜಕೀಯ ಪಕ್ಷಗಳು ಜುಲೈ 13ರಂದು ಹಳೆಯ ಶ್ರೀನಗರ ನಗರದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಲು ನಿರ್ಧರಿಸಿದ್ದವು. ಆದರೆ ಬಿಜೆಪಿ ಇದರ ಅಧಿಕೃತ ಆಚರಣೆಗೆ ವಿರೋಧ ವ್ಯಕ್ತಪಡಿಸಿತ್ತು.
ಕಾಶ್ಮೀರದ ಸಿಎಂ ಉಮರ್ ಅಬ್ದುಲ್ಲಾ ಅವರನ್ನು ಅಲ್ಲಿನ ಪೊಲೀಸರು ನಡೆಸಿಕೊಂಡ ರೀತಿ ವ್ಯಾಪಕ ಖಂಡನೆಗೆ ಒಳಗಾಯಿತು. ಮುಖ್ಯಮಂತ್ರಿಯೇ ಗೋಡೆ ಹಾರಿ ಪೊಲೀಸರ ಜೊತೆ ಜಟಾಪಟಿ ಎದುರಿಸಿ ಹುತಾತ್ಮರಿಗೆ ಗೌರವ ಸಲ್ಲಿಸಲು ತಲುಪಬೇಕಾಯಿತು.
ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಈ ನಿರ್ಬಂಧ ಮತ್ತು ಗೃಹಬಂಧನಗಳನ್ನು ತೀವ್ರವಾಗಿ ಖಂಡಿಸಿದರು. ‘‘ಹುತಾತ್ಮರಾದವರ ಸ್ಮಾರಕಕ್ಕೆ ಭೇಟಿ ನೀಡಲು ನಮಗೆ ಅವಕಾಶ ನಿರಾಕರಿಸಿರಬಹುದು. ಆದರೆ ನಾವು ಅವರ ತ್ಯಾಗಗಳನ್ನು ಮರೆಯುವುದಿಲ್ಲ’’ ಎಂದು ಸಿಎಂ ಅಬ್ದುಲ್ಲಾ ಎಕ್ಸ್‌ನಲ್ಲಿ ಬರೆದಿದ್ದಾರೆ.
ಪಿಡಿಪಿ ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡದಂತೆ ಗೃಹಬಂಧನಕ್ಕೆ ಒಳಪಡಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಜುಲೈ 13 ದೇಶಾದ್ಯಂತ ಅಸಂಖ್ಯಾತ ಇತರರಂತೆ ದಬ್ಬಾಳಿಕೆಯ ವಿರುದ್ಧ ಬಂಡಾಯವೆದ್ದ ನಮ್ಮ ಹುತಾತ್ಮರು ಯಾವಾಗಲೂ ನಮ್ಮ ನಾಯಕರಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರದಲ್ಲಿ ನಿರ್ಬಂಧ ಎನ್ನುವುದು ಜನಜೀವನವನ್ನು ಎಂಥ ಸ್ಥಿತಿಯಲ್ಲಿಟ್ಟಿದೆ ಎಂಬುದನ್ನು ಕಾಣಿಸುವ ವೀಡಿಯೊ ಒಂದು ವೈರಲ್ ಆಗಿದೆ. ದಕ್ಷಿಣ ಕಾಶ್ಮೀರ ಹೆದ್ದಾರಿಯಲ್ಲಿ ಮೂರ್ಛೆ ರೋಗದಿಂದ ಬಳಲುತ್ತಿರುವ ಮಗುವಿನ ಪೋಷಕರು ಆಸ್ಪತ್ರೆಗೆ ಹೋಗಲು ಬಿಡುವಂತೆ ಭದ್ರತಾ ಸಿಬ್ಬಂದಿಯನ್ನು ಕೇಳುತ್ತಿರುವುದು ಕರುಳು ಕತ್ತರಿಸುವಂತಿದೆ. ಆದರೆ ಆತ ಮಾತ್ರ, ಅವರ ಸ್ಥಿತಿಯ ಬಗ್ಗೆ ಅತ್ಯಂತ ನಿರ್ಲಕ್ಷ್ಯ ತೋರಿಸುತ್ತಾನೆ.
ಕಾಶ್ಮೀರಿಗಳು ಯಾವಾಗಲೂ ಯಾತ್ರಿಕರನ್ನು ಪೂರ್ಣ ಹೃದಯದಿಂದ ಸ್ವಾಗತಿಸುತ್ತಲೇ ಇರುವವರು. ಆದರೆ, ಅವರ ಪಾಲಿಗೆ ಮಾತ್ರ ಅಲ್ಲಿನ ನಿರ್ಬಂಧಗಳು ಒಮ್ಮೊಮ್ಮೆ ಇಂಥ ತಲ್ಲಣ ತರುತ್ತಿವೆ. ಭದ್ರತಾ ನಿರ್ಬಂಧಗಳ ಹೆಸರಿನಲ್ಲಿ ವೈದ್ಯಕೀಯ ತುರ್ತಿನ ಹೊತ್ತಿನಲ್ಲೂ ಹೀಗೆ ಕಟುವಾಗಿ ಇರುವುದು ಹೇಗೆ ಸಾಧ್ಯ?
ಇಂಥ ಘಟನೆಗಳು ಮಾರಕವಾಗಬಹುದು. ಭದ್ರತೆ ಹೆಸರಿನ ನಿರ್ಬಂಧ ಜನರ ಜೀವಕ್ಕೆ ಅಪಾಯ ತರುವಂತಾಗಬಾರದು.
ಕಾಶ್ಮೀರಿಗಳು ವಿಚಿತ್ರ ಅಸಹಾಯಕತೆ ಮತ್ತು ಭಯದಿಂದ ಬದುಕುವ ಪರಿಸ್ಥಿತಿ ಇದೆಯೆಂಬುದೇ ಸಂಕಟ ತರುವ ಸಂಗತಿಯಾಗಿದೆ.