ಕೆಜಿಎಫ್ ಚಿನ್ನದಷ್ಟೇ ಪ್ರಸಿದ್ಧ ಕೊಲ್ಹಾರದ ‘ಕೆನೆ ಮೊಸರು’
ಪ್ರಧಾನಿ ಮೋದಿಯನ್ನೂ ಸೆಳೆದ ವಿಜಯಪುರದ ವಿಶಿಷ್ಟ ಸವಿಯೂಟ!
ವಿಜಯಪುರ: ಅದೊಂದು ಮಹಾನಗರ, ಅಲ್ಲಿ ಬಹುರಾಷ್ಟ್ರೀಯ ಹಾಗೂ ಪ್ರತಿಷ್ಠಿತ ಕಂಪೆನಿಯ ಸಂದರ್ಶನ. ಅನೇಕರು ಸಂದರ್ಶನಕ್ಕೆ ಹಾಜರಾಗಿದ್ದರು. ಆಗ ಸಂದರ್ಶಕ, ಉದ್ಯೋಗಾಕಾಂಕ್ಷಿಗೆ ಯಾವ ಊರು ಎಂದು ಕೇಳುತ್ತಾನೆ. ಆಗ ಆತ ಕೊಲ್ಹಾರ ಎನ್ನುತ್ತಾನೆ. ಆಗ ತಕ್ಷಣವೇ ಸಂದರ್ಶಕ ಯಾವ ಕೊಲ್ಹಾರ? ಚಿನ್ನದ ಗಣಿ ಕೋಲಾರವೋ ಇಲ್ಲ ಮೊಸರಿನ ಕೊಲ್ಹಾರವೋ ಎಂದು ಮರು ಪ್ರಶ್ನೆ ಮಾಡುತ್ತಾನೆ.
ಕೆಜಿಎಫ್ ಚಿನ್ನದ ಗಣಿಯಂತೆಯೇ ಕೊಲ್ಹಾರದ ಕೆನೆ ಮೊಸರು ವರ್ಲ್ಡ್ ಫೇಮಸ್ ಎಂಬುದಕ್ಕೆ ಈ ನಿದರ್ಶನವೇ ಸಾಕ್ಷಿ.
ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಪ್ರತಿಯೊಬ್ಬರೂ ಕೊಲ್ಹಾರ ಕೆನೆಮೊಸರಿಗೆ ಮನಸೋತಿದ್ದುಂಟು. ಸಣ್ಣ ಸಣ್ಣ ಮಣ್ಣಿನ ಗಡಿಗೆಗಳಲ್ಲಿ ಮೊಸರನ್ನು ಆಸ್ವಾದಿಸುವುದರ ಆನಂದವೇ ಬೇರೆ!. ಕೊಲ್ಹಾರ ಪ್ರವೇಶಸಿದಾಗ ನಿಮಗೆ ರಸ್ತೆಯ ಎರಡು ಬದಿಗಳಲ್ಲಿಯೂ ಗಡಿಗೆಗಳಲ್ಲಿ ಮೊಸರು ಮಾರಾಟ ಮಾಡುವ ಅಂಗಡಿಗಳು ಕಾಣಿಸಿಗುತ್ತವೆ.
ನೂರಾರು ಸಂಖ್ಯೆಯಲ್ಲಿ ಸಾಗುವ ವಾಹನಗಳ ಪ್ರಯಾಣಿಕರು ರಸ್ತೆ ಬದಿ ನಿಲ್ಲಿಸಿ ಮೊಸರಿನ ಗಡಿಗೆಗಳನ್ನು ಖರೀದಿಸುವುದುಂಟು. ಇನ್ನೂ ಕೆಲವರು ಈ ಮೊಸರನ್ನು ಸೇವಿಸಲೆಂದೇ ಕೊಲ್ಹಾರಕ್ಕೆ ಪ್ರಯಾಣ ಬೆಳೆಸುವುದುಂಟು. ಬೆಳಗ್ಗೆಯಂತೂ ಈ ಮೊಸರಿನ ಜೊತೆ ಹಸಿ ಅವಲಕ್ಕಿ ಕಲಸಿ ತಿಂದರೆ ಅದರ ಸ್ವಾದ ಹೇಳ ತೀರದು.
ಕೊಲ್ಹಾರದ ವಾತಾವರಣ, ಅಲ್ಲಿನ ನೀರು ಮತ್ತು ಸಾಂಪ್ರದಾಯಿಕ ತಯಾರಿಕಾ ವಿಧಾನದಿಂದಾಗಿ ಈ ಮೊಸರಿಗೆ ಬೇರೆಲ್ಲೂ ಸಿಗದ ವಿಶಿಷ್ಟ ವಾದ ನೈಸರ್ಗಿಕ ಸಿಹಿ ಮತ್ತು ಲಘು ಹುಳಿ ಮಿಶ್ರಿತ ರುಚಿ ಇರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹ ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ ಈ ಪ್ರಸಿದ್ಧ ಕೊಲ್ಹಾರ ಮೊಸರನ್ನು ಸವಿದು ಶ್ಲಾಘಿಸಿದ್ದರು.
ತಯಾರಿಕೆಯ ಸಾಂಪ್ರದಾಯಿಕ ರಹಸ್ಯ... :
ಕೊಲ್ಹಾರ ಮೊಸರಿನ ವಿಶೇಷತೆಯಿರುವುದೇ ಅದರ ಸಾಂಪ್ರದಾಯಿಕ ತಯಾರಿಕಾ ವಿಧಾನದಲ್ಲಿ. ಯಾವುದೇ ಪ್ಲಾಸ್ಟಿಕ್, ಅಲ್ಯುಮೀನಿಯಂ ಅಥವಾ ಸ್ಟೀಲ್ ಪಾತ್ರೆಗಳಲ್ಲಿ ಇದನ್ನು ಹೆಪ್ಪು ಹಾಕುವುದಿಲ್ಲ. ಬದಲಾಗಿ ನೈಸರ್ಗಿಕ ಮಣ್ಣಿನ ಗಡಿಗೆಗಳನ್ನು ಬಳಸಲಾಗುತ್ತದೆ.ಮಣ್ಣಿನ ಪಾತ್ರೆಗಳಲ್ಲಿರುವ ಸೂಕ್ಷ್ಮ ರಂಧ್ರಗಳು ಹಾಲಿನಲ್ಲಿರುವ ಹೆಚ್ಚುವರಿ ನೀರಿನಂಶವನ್ನು ನಿಧಾನವಾಗಿ ಹೀರಿಕೊಳ್ಳುತ್ತವೆ. ಇದರಿಂದಾಗಿ ಮೊಸರು ಕಲ್ಲಿನಂತೆ ಗಟ್ಟಿಯಾಗಿ, ಕೇಕ್‌ನಂತೆ ಕತ್ತರಿಸುವ ಹದಕ್ಕೆ ಬರುತ್ತದೆ.
ಇಲ್ಲಿನ ಎಮ್ಮೆ ಹಾಲಿನಲ್ಲಿ ಕೊಬ್ಬಿನಾಂಶ ಶೇ. 7ರಿಂದ 9ರಷ್ಟಿರುತ್ತದೆ. ಹಾಲು ಕಾಯಿಸಿ ಸಾಂಪ್ರದಾಯಿಕವಾಗಿ ಮಣ್ಣಿನ ಮಡಕೆ ಅಥವಾ ಗಡಿಗೆಗಳಲ್ಲಿಯೇ ಹೆಪ್ಪು ಹಾಕಲಾಗುತ್ತದೆ. ಮಣ್ಣಿನ ಪಾತ್ರೆಗಳು ಹಾಲಿನಲ್ಲಿರುವ ಹೆಚ್ಚುವರಿ ನೀರಿನಂಶವನ್ನು ನೈಸರ್ಗಿಕವಾಗಿ ಹೀರಿಕೊಳ್ಳುವುದರಿಂದ ಮೊಸರು ಕಲ್ಲಿನಂತೆ ಗಟ್ಟಿಯಾಗಿ, ದಪ್ಪನೆಯ ಕೆನೆಯೊಂದಿಗೆ ಸಿದ್ಧವಾಗುತ್ತದೆ. ಈ ಭಾಗದಲ್ಲಿ ದೊರೆಯುವ ಅತ್ಯುತ್ತಮ ಗುಣಮಟ್ಟದ ಎಮ್ಮೆ ಹಾಲನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಎಮ್ಮೆ ಹಾಲಿನಲ್ಲಿ ಕೊಬ್ಬಿನಾಂಶ ಹೆಚ್ಚಿ ರುವುದರಿಂದ ಮೊಸರಿಗೆ ಅದ್ಭುತವಾದ ಬೆಣ್ಣೆಯಂತಹ ಕೆನೆ ಬರುತ್ತದೆ.
ಗ್ರಾಮೀಣ ಆರ್ಥಿಕತೆಗೆ ಆಸರೆ - ನಂದಿನಿ ಬ್ರ್ಯಾಂಡಿಂಗ್ :
ಸ್ಥಳೀಯ ಹೈನುಗಾರಿಕೆ ಹಾಗೂ ಗ್ರಾಮೀಣ ಕುಟುಂಬಗಳ ಆರ್ಥಿಕತೆಗೆ ಈ ಕೆನೆ ಮೊಸರು ಪ್ರಮುಖ ಜೀವಾಳವಾಗಿದೆ. ನೂರಾರು ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ಇದು ಪ್ರಮುಖ ಜೀವನೋಪಾಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಈ ಮೊಸರಿನ ಅಪಾರ ಬೇಡಿಕೆ ಮತ್ತು ಜನಪ್ರಿಯತೆಯನ್ನು ಗುರುತಿಸಿರುವ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಳ) ಸಂಸ್ಥೆಯು ಸಹ ‘ನಂದಿನಿ ಕೊಲ್ಹಾರ ಮೊಸರು’ ಹೆಸರಿನಲ್ಲಿ ಆಧುನಿಕ ಪ್ಯಾಕೇಜಿಂಗ್ ಮೂಲಕ ಇದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಕೊಲ್ಹಾರದ ಕೆನೆ ಮೊಸರಿನ ಹೆಗ್ಗಳಿಕೆ ಹಾಗೂ ಜನಪ್ರಿಯತೆಗೆ ಹಿಡಿದ ಮತ್ತೊಂದು ಕೈಗನ್ನಡಿಯಾಗಿದೆ.
ಕೃಷ್ಣಾ ತೀರದ ಸೌಭಾಗ್ಯ: ಕೊಲ್ಹಾರದ ಭೌಗೋಳಿಕ ಹಾಗೂ ಐತಿಹಾಸಿಕ ಹಿನ್ನೆಲೆ
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣವು ಕೃಷ್ಣಾ ನದಿಯ ಫಲವತ್ತಾದ ಪಾತ್ರದಲ್ಲಿದೆ. ನದಿಯ ದಂಡೆಯ ಮೇಲಿರುವ ಹಸಿರು ಮೇವಿನ ಲಭ್ಯತೆ ಮತ್ತು ಇಲ್ಲಿನ ಹವಾಮಾನವು ಉತ್ತಮ ತಳಿಯ ಎಮ್ಮೆಗಳ ಸಾಕಣೆಗೆ ವರವಾಗಿದೆ.
ತಲೆತಲಾಂತರಗಳಿಂದ ಇಲ್ಲಿನ ಜನಪದೀಯ ಕುಟುಂಬಗಳು ಸಾಂಪ್ರದಾಯಿಕ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಕೃಷ್ಣಾ ನದಿ ನೀರು ಮತ್ತು ಇಲ್ಲಿನ ನೈಸರ್ಗಿಕ ವಾತಾವರಣದಲ್ಲಿ ಬೆಳೆಯುವ ಹುಲ್ಲು ತಿಂದ ಎಮ್ಮೆಗಳು ನೀಡುವ ಹಾಲು ಅತ್ಯಂತ ಗಟ್ಟಿಯಾಗಿ, ದಪ್ಪನೆಯ ಕೊಬ್ಬಿನಾಂಶದಿಂದ ಕೂಡಿರುತ್ತದೆ. ಈ ಹಾಲಿನ ಗುಣಮಟ್ಟವೇ ಕೊಲ್ಹಾರ ಮೊಸರಿನ ಗುಣಮಟ್ಟಕ್ಕೆ ಪ್ರಾಥಮಿಕ ಅಡಿಪಾಯ.
ದಿನಂಪ್ರತಿ ಸಾವಿರಾರು ಲೀಟರ್‌ಗಿಂತಲೂ ಹೆಚ್ಚು ಮೊಸರು ಮಾರಾಟವಾಗುತ್ತದೆ. ನೂರಾರು ರೈತ ಕುಟುಂಬಗಳು, ಹಾಲು ಉತ್ಪಾದಕರು, ಮಡಕೆ ತಯಾರಿಸುವ ಕುಂಬಾರರು ಮತ್ತು ರಸ್ತೆಬದಿಯ ವ್ಯಾಪಾರಿಗಳಿಗೆ ಇದು ಪ್ರಮುಖ ಜೀವನೋಪಾಯ. 250 ಗ್ರಾಂನಿಂದ ಹಿಡಿದು 5 ಕೆಜಿ ಸಾಮರ್ಥ್ಯದ ಮಣ್ಣಿನ ಗಡಿಗೆಗಳಲ್ಲಿ ಈ ಮೊಸರು ಲಭ್ಯವಿರುತ್ತದೆ. ಅದರಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ವಿಟಮಿನ್ ಬಿ12ನಿಂದ ಸಮೃದ್ಧವಾಗಿದ್ದು, ನೈಸರ್ಗಿಕ ಶಕ್ತಿಯನ್ನು ನೀಡುತ್ತದೆ.
ಆಧುನಿಕತೆಯಲ್ಲಿ ಎಷ್ಟೇ ಪ್ರಾಸೆಸ್ಡ್ ಡೈರಿ ಉತ್ಪನ್ನಗಳು ಬಂದರೂ, ಸಾಂಪ್ರದಾಯಿಕ ಮಣ್ಣಿನ ಗಡಿಗೆಯಲ್ಲಿ ಸಿದ್ಧವಾಗುವ ಕೊಲ್ಹಾರದ ಕೆನೆ ಮೊಸರಿನ ಜಾಗವನ್ನು ಯಾವುದೂ ತುಂಬಲು ಸಾಧ್ಯವಿಲ್ಲ. ಗ್ರಾಮೀಣ ಆರ್ಥಿಕತೆಯನ್ನು ಗಟ್ಟಿ ಮುಟ್ಟಾಗಿ ಹಿಡಿದಿಟ್ಟಿರುವ ಈ ಕೆನೆ ಮೊಸರು, ಉತ್ತರಕರ್ನಾಟಕದ ಹೆಮ್ಮೆಯ ಸಂಕೇತವಾಗಿ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ.