ವಿಜಯಪುರ : ಜೀವಂತವಾಗಿದ್ದರೂ ‘ಮರಣ ಹೊಂದಿದ್ದಾರೆ’ ಎಂದು ಹೇಳಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು (ಡಿಲೀಟ್) ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶಿಫಾರಸು ಮಾಡಿದ್ದ ಪಟ್ಟಿಯಲ್ಲಿದ್ದ ಹಲವು ವ್ಯಕ್ತಿಗಳು ಸ್ವತಃ ಬಹಿರಂಗ ಸಭೆಯಲ್ಲಿ ಪ್ರತ್ಯಕ್ಷರಾಗಿ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಚಿತ್ರನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಅವರ ನೇತೃತ್ವದಲ್ಲಿ ಎಸ್‌ಐಆರ್‌ಪ್ರಕ್ರಿಯೆಯ ಗೊಂದಲಗಳ ವಿರುದ್ಧ ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಅಧಿವೇಶನದಲ್ಲಿ ಈ ಘಟನೆ ನಡೆದಿದೆ.

ಸಭೆಯಲ್ಲಿ ಭಾಗವಹಿಸಿದ್ದ ಅಬ್ದುಲ್ ರಜಾಕ್, ಹುಸೇನಸಾಬ್, ಬಾಗವಾನ ಸೇರಿದಂತೆ ಹಲವು ಮತದಾರರು ತಮ್ಮ ಆಧಾರ್ ಕಾರ್ಡ್‌ಗಳನ್ನು ಪ್ರದರ್ಶಿಸುವ ಮೂಲಕ, ತಾವು ಜೀವಂತವಾಗಿದ್ದೇವೆ ಎಂಬುದನ್ನು ಬಹಿರಂಗವಾಗಿ ಸಾಬೀತುಪಡಿಸಿದರು.

ಕೆಲ ದಿನಗಳ ಹಿಂದಷ್ಟೇ ನಗರ ಶಾಸಕರು ತಮ್ಮ ಅಧಿಕೃತ ಲೆಟರ್ ಹೆಡ್‌ನಲ್ಲಿ ಈ ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ತಿಳಿಸಿ, ಮತದಾರರ ಪಟ್ಟಿಯಿಂದ ಹೆಸರು ತೆರವುಗೊಳಿಸಲು ಮನವಿ ನೀಡಿದ್ದರು ಎನ್ನಲಾಗಿದೆ. ಆದರೆ ಇದೀಗ ಸ್ವತಃ ಮತದಾರರೇ ಸಭೆಗೆ ಆಗಮಿಸಿ ಆಧಾರ್ ಕಾರ್ಡ್ ತೋರಿಸಿರುವುದರಿಂದ, ಈ ಮನವಿಯ ಸತ್ಯಾಸತ್ಯತೆಯನ್ನು ಚುನಾವಣಾಧಿಕಾರಿಗಳು ಹಾಗೂ ತಾಲೂಕು ಆಡಳಿತವೇ ಅಧಿಕೃತವಾಗಿ ಸ್ಪಷ್ಟಪಡಿಸಬೇಕಿದೆ.

ಸದ್ಯ ಜೀವಂತ ವ್ಯಕ್ತಿಗಳನ್ನೇ ಮೃತರೆಂದು ಬಿಂಬಿಸಿ ಮತದಾನದ ಹಕ್ಕು ಕಸಿಯಲು ಯತ್ನಿಸಲಾಗಿದೆ ಎಂಬ ಆರೋಪ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ.

ನಮ್ಮ ದೇಶದಲ್ಲಿ ನಡೆಯುತ್ತಿರುವ ದೊಡ್ಡ ದುರಂತವಿದು. ನೋಡಿ, ಈ ವ್ಯಕ್ತಿ ಜೀವಂತವಾಗಿಯೇ ಇದ್ದಾನೆ, ಭೂತ ಅಲ್ಲ! ಬೇಕಿದ್ದರೆ ಮುಟ್ಟಿ ನೋಡಿ. ಈ ವ್ಯಕ್ತಿ ಮರಣವನ್ನಪ್ಪಿದ್ದಾನೆ ಎಂದು ಡಿಲೀಟ್ ಮಾಡಲು ಲೆಟರ್ ಕೊಟ್ಟಿದ್ದಾರೆ ಎಂದರೆ ಏನರ್ಥ? ಇಂತಹ ಅನ್ಯಾಯವನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ

-ಪ್ರಕಾಶ್ ರಾಜ್, ನಟ ಹಾಗೂ ಹೋರಾಟಗಾರ


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಖಾಜಾಮೈನುದ್ದೀನ್ ಪಟೇಲ್

contributor