ಧಾರವಾಡ : ಪ್ರತೀ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 50 ರೂ. ಪಾವತಿಸುವುದಾಗಿ ಭರವಸೆ ನೀಡಿದ್ದ ನಾಲ್ಕು ಸಕ್ಕರೆ ಕಾರ್ಖಾನೆಗಳು ಧಾರವಾಡ ಜಿಲ್ಲೆಯ ರೈತರಿಗೆ ಒಟ್ಟು 3.15 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಈ ಮೂಲಕ ಗುರ್ಲಾಪುರ ಕಬ್ಬು ಬೆಳೆಗಾರರ ಹೋರಾಟದ ಸಂದರ್ಭದಲ್ಲಿ ಸರಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ನೀಡಿದ್ದ ಭರವಸೆ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ ಎಂದು ಕಬ್ಬು ಬೆಳೆಗಾರರ ಸಂಘ ಆರೋಪಿಸಿವೆ.

ಬಾಕಿ ಹಣ ಪಾವತಿಸುವಂತೆ ರೈತರು ಹಾಗೂ ರೈತ ಸಂಘಟನೆಗಳು ಹಲವು ಬಾರಿ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಹಣ ಪಾವತಿಯಾಗಿಲ್ಲ ಎಂದೂ ದೂರಿವೆ.

ಧಾರವಾಡ ಜಿಲ್ಲೆಯ ರೈತರು ಕಳೆದ ಹಂಗಾಮಿನಲ್ಲಿ ವಿವಿಧ ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿದ ಕಬ್ಬಿಗೆ ಸಂಬಂಧಿಸಿದಂತೆ ಹೆಚ್ಚುವರಿ 50 ರೂ.ಯಂತೆ ಈ ಮೊತ್ತ ಬಾಕಿ ಉಳಿದಿದೆ. ವಿಎನ್‌ಐಪಿ ಶುಗರ್ಸ್ 1.25 ಕೋಟಿ ರೂ., ನಿರಾಣಿ (ಎಂಆರ್‌ಎನ್) ಶುಗರ್ಸ್ 49 ಲಕ್ಷ ರೂ., ಮೈಲಾರ ಶುಗರ್ಸ್ 66.65 ಲಕ್ಷ ರೂ. ಹಾಗೂ ಜಿಎಂ ಶುಗರ್ಸ್ 75 ಲಕ್ಷ ರೂ. ಸೇರಿದಂತೆ ಒಟ್ಟು 3,15,65,000 ರೂ. ರೈತರಿಗೆ ಪಾವತಿಯಾಗಬೇಕಿದೆ.

 ಗುರ್ಲಾಪುರ ಹೋರಾಟದ ಭರವಸೆ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರು ಅಹೋರಾತ್ರಿ ಹೋರಾಟ ನಡೆಸಿ, ಪ್ರತೀ ಟನ್ ಕಬ್ಬಿಗೆ 3,500 ರೂ. ದರ ನೀಡುವಂತೆ ಆಗ್ರಹಿಸಿದ್ದರು. ಈ ಹೋರಾಟಕ್ಕೆ ರೈತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.

ಹೋರಾಟದ ಸಂದರ್ಭದಲ್ಲಿ ರೈತರ ಬೇಡಿಕೆಗೆ ಸ್ಪಂದಿಸಿದ್ದ ಸರಕಾರ, ಪ್ರತೀ ಟನ್ ಕಬ್ಬಿಗೆ ಸರಕಾರದಿಂದ 50 ರೂ. ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಹೆಚ್ಚುವರಿಯಾಗಿ 50 ರೂ. ಪಾವತಿಸುವುದಾಗಿ ಭರವಸೆ ನೀಡಿತ್ತು. ಬಳಿಕ ಪ್ರತಿ ಟನ್ ಕಬ್ಬಿಗೆ 3,300 ರೂ. ದರ ನಿಗದಿ ಪಡಿಸಲಾಗಿದ್ದು, ಸುಮಾರು ಒಂಭತ್ತು ದಿನಗಳ ಹೋರಾಟ ಅಂತ್ಯಗೊಂಡಿತ್ತು. ಭರವಸೆಯಂತೆ ಕೆಲವು ಕಾರ್ಖಾನೆಗಳು ಹೆಚ್ಚುವರಿ ಹಣ ಪಾವತಿಸಿವೆ. ಆದರೆ, ವಿಎನ್‌ಐಪಿ ಶುಗರ್ಸ್, ನಿರಾಣಿ (ಎಂಆರ್‌ಎನ್) ಶುಗರ್ಸ್, ಮೈಲಾರ ಶುಗರ್ಸ್ ಹಾಗೂ ಜಿಎಂ ಶುಗರ್ಸ್ ತಮ್ಮ ಪಾಲಿನ ಪ್ರತೀ ಟನ್‌ಗೆ 50 ರೂ.ಯಂತೆ ಪಾವತಿಸಬೇಕಾದ ಹಣವನ್ನು ಇನ್ನೂ ಬಾಕಿ ಉಳಿಸಿಕೊಂಡಿವೆ ಎನ್ನಲಾಗಿವೆ.

ಒಂದು ವಾರದ ಗಡುವು: ಬಾಕಿ ಹಣ ಪಾವತಿಸು ವಂತೆ ರೈತರು ಹಲವು ಬಾರಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ಸಭೆ ನಡೆಸಿದ್ದು, ಬಾಕಿ ಹಣವನ್ನು ಒಂದು ವಾರದೊಳಗೆ ಪಾವತಿಸುವಂತೆ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸರಕಾರದ ಭರವಸೆ ಹಾಗೂ ಜಿಲ್ಲಾಧಿಕಾರಿ ಸೂಚನೆಯ ನಂತರವಾದರೂ ಕಾರ್ಖಾನೆಗಳು ಬಾಕಿ ಹಣ ಪಾವತಿಸಿ ಸಂಕಷ್ಟಕ್ಕೆ ಸ್ಪಂದಿಸಬೇಕೆಂಬುದು ರೈತರ ಒತ್ತಾಯವಾಗಿದೆ.

‘ಸರಕಾರದ ದರದಂತೆ ಹಣ ಪಾವತಿಸಬೇಕು’

‘ಧಾರವಾಡ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳಿಲ್ಲ. ಹೀಗಾಗಿ ಬೇರೆ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳು ಸರಕಾರ ನಿಗದಿಪಡಿಸಿದ ದರದಲ್ಲೇ ಕಬ್ಬು ಖರೀದಿಸುವುದಾಗಿ ಭರವಸೆ ನೀಡಿ ರೈತರಿಂದ ಕಬ್ಬು ಪಡೆದಿವೆ. ಆದರೆ, ಇದೀಗ ಸರಕಾರದ ನಿರ್ಧಾರದಂತೆ ಪಾವತಿಸಬೇಕಾದ ಪ್ರತೀ ಟನ್‌ಗೆ 50 ರೂ. ಬಾಕಿ ಉಳಿಸಿಕೊಂಡು ರೈತರನ್ನು ಸತಾಯಿಸುತ್ತಿವೆ. ಶೀಘ್ರವೇ ಬಾಕಿ ಹಣ ಪಾವತಿಸಿ ರೈತರ ಹಿತ ಕಾಪಾಡಬೇಕು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಬೆಳಗಾಂವಕರ ಒತ್ತಾಯಿಸಿದ್ದಾರೆ.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮುಹಮ್ಮದ್ ರಫೀಕ್, ಬೀಳಗಿ

contributor