ಭಾರತ-ಚೀನಾ ಗಡಿಯ ಕಾವಲುಗಾರ : ಹಿಮಾಲಯದ ವಿಸ್ಮಯ ನಾಥುಲಾ ಪಾಸ್
ನಾಥುಲಾ ಪಾಸ್(ಸಿಕ್ಕಿಂ) : ಸಿಕ್ಕಿಂ ರಾಜ್ಯದ ಪೂರ್ವ ಭಾಗದಲ್ಲಿರುವ ನಾಥುಲಾ ಪಾಸ್ ಸಮುದ್ರಮಟ್ಟದಿಂದ ಸುಮಾರು 14,140 ಅಡಿ ಎತ್ತರದಲ್ಲಿರುವ ಭಾರತದ ಅತ್ಯಂತ ಮಹತ್ವದ ಗಡಿ ಕಣಿವೆಗಳಲ್ಲಿ ಒಂದು. ಭಾರತ-ಚೀನಾ ಗಡಿಯಲ್ಲಿರುವ ಈ ಪರ್ವತ ದಾಟು, ನೈಸರ್ಗಿಕ ಸೌಂದರ್ಯದ ತಾಣವಾಗಿರುವುದರ ಜೊತೆಗೆ, ದೇಶದ ಭದ್ರತೆ, ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳ ದೃಷ್ಟಿಯಿಂದಲೂ ವಿಶೇಷ ಮಹತ್ವ ಹೊಂದಿದೆ.
‘ನಾಥುಲಾ’ ಎಂಬ ಹೆಸರು ಟಿಬೆಟಿಯನ್ ಭಾಷೆಯಿಂದ ಬಂದಿದ್ದು, ಸಾಮಾನ್ಯವಾಗಿ ‘ಕೇಳುವ ಕಿವಿ’ ಅಥವಾ ‘ಗಾಳಿಯ ಕಿವಿ’ ಎಂಬ ಅರ್ಥಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಶತಮಾನಗಳಿಂದಲೇ ನಾಥುಲಾ ಪಾಸ್ ಸಿಕ್ಕಿಂ ಮತ್ತು ಟಿಬೆಟ್ ನಡುವಿನ ಪ್ರಮುಖ ವ್ಯಾಪಾರ ಮಾರ್ಗವಾಗಿತ್ತು. ಭಾರತೀಯ ಉಪಖಂಡದಿಂದ ಟಿಬೆಟ್‌ಗೆ ತೆರಳುತ್ತಿದ್ದ ವ್ಯಾಪಾರಿಗಳು ಕುದುರೆ, ಉಣ್ಣೆ, ಉಪ್ಪು, ಚಹಾ ಮತ್ತು ಇತರ ವಸ್ತುಗಳನ್ನು ಸಾಗಿಸುತ್ತಿದ್ದರು.
ಬ್ರಿಟಿಷರ ಕಾಲದಲ್ಲಿಯೂ ಈ ಮಾರ್ಗಕ್ಕೆ ಮಹತ್ವವಿತ್ತು. 1903-04ರ ಯಂಗ್‌ಹಸ್ಬೆಂಡ್ ದಂಡಯಾತ್ರೆಯ ಸಂದರ್ಭದಲ್ಲಿ ಬ್ರಿಟಿಷ್ ಪಡೆಗಳು ಟಿಬೆಟ್ ಕಡೆಗೆ ಸಾಗಲು ಈ ಪ್ರದೇಶವನ್ನು ಬಳಸಿದ್ದವು. ಭಾರತ ಸ್ವಾತಂತ್ರ್ಯ ಪಡೆದ ನಂತರವೂ ನಾಥುಲಾ ಮಾರ್ಗವು ಭಾರತ-ಟಿಬೆಟ್ ಸಂಪರ್ಕದಲ್ಲಿ ಪ್ರಮುಖ ಸ್ಥಾನ ಉಳಿಸಿಕೊಂಡಿತ್ತು. 1962ರ ಭಾರತ-ಚೀನಾ ಯುದ್ಧದ ನಂತರ ಗಡಿಯ ಪರಿಸ್ಥಿತಿ ಬದಲಾಗಿದ್ದು, ನಾಥುಲಾ ಸೇರಿದಂತೆ ಹಲವು ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಲಾಯಿತು.
ಹಲವು ದಶಕಗಳ ಬಳಿಕ 2006ರಲ್ಲಿ ನಾಥುಲಾ ಮೂಲಕ ಸೀಮಿತ ಗಡಿ ವ್ಯಾಪಾರ ಪುನರಾರಂಭ ಗೊಂಡಿತು. ಇದು ಭಾರತ-ಚೀನಾ ಸಂಬಂಧಗಳಲ್ಲಿ ಪ್ರಮುಖ ಬೆಳವಣಿಗೆಯಾಗಿತ್ತು. ಇಲ್ಲಿ ಭಾರತೀಯ ಸೇನೆ ಮತ್ತು ಗಡಿ ಭದ್ರತಾ ವ್ಯವಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ.
ಎತ್ತರದ ಪ್ರದೇಶದಲ್ಲಿ ರಸ್ತೆ, ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಸೇನಾ ಚಲನವಲನಕ್ಕೂ ತುರ್ತು ಪರಿಸ್ಥಿತಿಗಳ ನಿರ್ವಹಣೆಗೂ ಸಹಕಾರಿಯಾಗಿದೆ. ಪ್ರವಾಸಿಗರಿಗೆ ನಾಥುಲಾ ನಿಯಂತ್ರಿತ ಪ್ರದೇಶವಾಗಿದ್ದು, ಪ್ರವೇಶಕ್ಕೆ ಅಗತ್ಯ ಅನುಮತಿಗಳನ್ನು ಪಡೆಯಬೇಕಾಗುತ್ತದೆ.
ಕಣ್ಮನ ಸೆಳೆಯುವ ಪರ್ವತ ಪಯಣ :
ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಕ್‌ನಿಂದ ನಾಥುಲಾ ಪಾಸ್ ಕಡೆಗಿನ ಪಯಣವೇ ಒಂದು ಅದ್ಭುತ ಪ್ರಕೃತಿ ಅನುಭವ. ಎತ್ತರಕ್ಕೆ ಸಾಗುತ್ತಿದ್ದಂತೆ ಹಸಿರು ಬೆಟ್ಟಗಳ ನಡುವೆ ಹಾದುಹೋಗುವ ತಿರುವು-ಮುರುವುಗಳ ರಸ್ತೆ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಒಂದೆಡೆ ಆಳವಾದ ಕಣಿವೆಗಳು, ಮತ್ತೊಂದೆಡೆ ಮೋಡಗಳನ್ನು ಚುಂಬಿಸುವ ಪರ್ವತ ಶಿಖರಗಳು ಕಾಣಿಸುತ್ತವೆ.
ದಾರಿಯುದ್ದಕ್ಕೂ ಪೈನ್ ಮರಗಳು, ಜಲಪಾತಗಳು ಹಾಗೂ ಮಂಜಿನಿಂದ ಆವೃತವಾದ ಬೆಟ್ಟಗಳು ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಕೆಲವೆಡೆ ಮೋಡಗಳು ರಸ್ತೆಯನ್ನೇ ಆವರಿಸಿಕೊಂಡು ಪಯಣಕ್ಕೆ ರೋಮಾಂಚನ ತುಂಬುತ್ತವೆ. ಎತ್ತರ ಹೆಚ್ಚಿದಂತೆ ಹವಾಮಾನವೂ ಬದಲಾಗುತ್ತಾ, ಹಿಮದ ದೃಶ್ಯಗಳು ಕಾಣಿಸಿಕೊಳ್ಳುತ್ತವೆ. ಗ್ಯಾಂಗ್ಟಕ್‌ನಿಂದ ನಾಥುಲಾ ಪಾಸ್‌ವರೆಗಿನ ಈ ಪರ್ವತ ರಸ್ತೆ, ಸಿಕ್ಕಿಂ ಪ್ರವಾಸದ ಅತ್ಯಂತ ಸ್ಮರಣೀಯ ಅನುಭವಗಳಲ್ಲಿ ಒಂದಾಗಿದೆ.
ಹಿಮದ ನಡುವೆ ಸೈನಿಕರ ಬದುಕು :
ನಾಥುಲಾದಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರಿಗೆ ಪ್ರಕೃತಿಯೇ ದೊಡ್ಡ ಸವಾಲು. ವರ್ಷವಿಡೀ ಕಡಿಮೆ ತಾಪಮಾನ, ಹಿಮಪಾತ, ಬಿರುಗಾಳಿ, ಆಮ್ಲಜನಕದ ಕೊರತೆ ಮತ್ತು ಕಡಿದಾದ ಪರ್ವತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಎದುರಾಗುತ್ತದೆ. ಚಳಿಗಾಲದಲ್ಲಿ ಭಾರಿ ಹಿಮಪಾತದಿಂದ ರಸ್ತೆ ಸಂಪರ್ಕವೂ ಅಸ್ತವ್ಯಸ್ತವಾಗುತ್ತದೆ. ಎತ್ತರದ ಪ್ರದೇಶಕ್ಕೆ ಹೊಸದಾಗಿ ತೆರಳುವ ಸೈನಿಕರಿಗೆ ದೇಹವು ಕಡಿಮೆ ಆಮ್ಲಜನಕದ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ.
ಕ್ಷಣಕ್ಷಣಕ್ಕೂ ಬದಲಾಗುವ ಹವಾಮಾನ :
ನಾಥುಲಾದ ಹವಾಮಾನ ಅತ್ಯಂತ ಕಠಿಣ ಮತ್ತು ಅನಿಶ್ಚಿತ. ಬೇಸಿಗೆಯಲ್ಲಿಯೂ ತಾಪಮಾನ ತೀವ್ರವಾಗಿ ಇಳಿಯಬಹುದು. ಚಳಿಗಾಲದಲ್ಲಿ ಪ್ರದೇಶವು ದಟ್ಟ ಹಿಮದಿಂದ ಆವೃತವಾಗುತ್ತದೆ. ಹಿಮಪಾತದ ಜೊತೆಗೆ ದಟ್ಟ ಮಂಜು ಮತ್ತು ಬಲವಾದ ಗಾಳಿಯಿಂದ ದೃಶ್ಯಮಾನತೆ ಕಡಿಮೆಯಾಗುತ್ತದೆ. ಚಳಿಗಾಲದ ಅವಧಿಯಲ್ಲಿ ಭಾರಿ ಹಿಮಪಾತವಾಗಿ, ತಾಪಮಾನ ಶೂನ್ಯಕ್ಕಿಂತಲೂ ಹಲವು ಡಿಗ್ರಿಗಳಷ್ಟು ಕೆಳಗೆ ಇಳಿಯುತ್ತದೆ. ರಸ್ತೆಗಳು ಹಿಮದಿಂದ ಮುಚ್ಚಿಕೊಳ್ಳುತ್ತವೆ. ನಾಥುಲಾದ ಪ್ರಮುಖ ವೈಶಿಷ್ಟ್ಯವೆಂದರೆ ಒಂದೇ ದಿನದಲ್ಲಿ ಹವಾಮಾನ ಹಲವು ಬಾರಿ ಬದಲಾಗುವುದು.
ಭಾರತ-ಚೀನಾ ಸಂಘರ್ಷ :
1962ರ ಭಾರತ-ಚೀನಾ ಯುದ್ಧದ ಕೆಲವೇ ವರ್ಷಗಳ ಬಳಿಕ 1967ರಲ್ಲಿ ಇಲ್ಲಿ ನಡೆದ ಸಂಘರ್ಷವು ನಾಥುಲಾ ಗಡಿಯ ಅತ್ಯಂತ ಪ್ರಮುಖ ಸೈನಿಕ ಘಟನೆಗಳಲ್ಲಿ ಒಂದಾಗಿದೆ. ಭಾರತವು ಗಡಿಯಲ್ಲಿ ಮುಳ್ಳುತಂತಿ ಬೇಲಿ ನಿರ್ಮಿಸಲು ಮುಂದಾದಾಗ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಸೆ.11ರಂದು ಬೇಲಿ ನಿರ್ಮಾಣದ ವಿಚಾರದಲ್ಲಿ ಎರಡೂ ಕಡೆಯ ಸೈನಿಕರ ನಡುವೆ ಘರ್ಷಣೆ ಆರಂಭವಾಯಿತು.
ಪರಿಸ್ಥಿತಿ ತೀವ್ರಗೊಂಡು ಗುಂಡಿನ ದಾಳಿ ಮತ್ತು ಫಿರಂಗಿ ದಾಳಿ ನಡೆಯಿತು. ಸೆ.11ರಿಂದ 14ರವರೆಗೆ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ ಸುಮಾರು 80-88 ಸೈನಿಕರು ಹಾಗೂ ಚೀನಾದ 300ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದರು ಎಂದು ಹೇಳಲಾಗುತ್ತದೆ. ಇದಾದ ಕೆಲವೆ ದಿನಗಳಲ್ಲಿ ಅ.1ರಂದು ಸಮೀಪದ ಚೋಲಾ ಪ್ರದೇಶದಲ್ಲಿಯೂ ಮತ್ತೊಂದು ಸಂಘರ್ಷ ನಡೆಯಿತು. ಇದರಿಂದ ಸಿಕ್ಕಿಂ ಗಡಿಯಲ್ಲಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಿತು.
1967ರ ಈ ಘಟನೆಗಳ ನಂತರ ನಾಥುಲಾ-ಚೋ ಲಾ ಪ್ರದೇಶದಲ್ಲಿ ಗಡಿಯ ಸ್ಥಿತಿ ಹೆಚ್ಚು ಬಿಗಿಯಾದರೂ, 1967ರ ನಂತರ ಹಲವು ದಶಕಗಳ ಕಾಲ ಈ ರೀತಿಯ ದೊಡ್ಡ ಪ್ರಮಾಣದ ಸಶಸ್ತ್ರ ಸಂಘರ್ಷ ನಾಥುಲಾದಲ್ಲಿ ನಡೆದಿಲ್ಲ.
ಭಾರತದ ಗಡಿಯನ್ನು ಸಂರಕ್ಷಿಸಿದ ಯೋಧರು :
1967ರಲ್ಲಿ ಭಾರತ-ಚೀನಾ ಸಂಘರ್ಷದ ವೇಳೆ ಮೇಜರ್ ಜನರಲ್ ಸಾಗತ್ ಸಿಂಗ್ ಪ್ರಮುಖ ಕಮಾಂಡರ್ ಆಗಿದ್ದರು. ನಾಥುಲಾ ಪ್ರದೇಶದ ಬ್ರಿಗೇಡ್ ಮಟ್ಟದ ಜವಾಬ್ದಾರಿ ಬ್ರಿಗೇಡಿಯರ್ ಎಂ.ಎಂ.ಎಸ್.ಬಕ್ಷಿ ಅವರ ಅಧೀನದಲ್ಲಿತ್ತು. ಮುಂಚೂಣಿ ಘಟಕವಾದ 2 ಗ್ರೆನೇಡಿಯರ್ಸ್‌ನ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ರೈ ಸಿಂಗ್ ಆಗಿದ್ದರು. ಈ ಸಂಘರ್ಷದಲ್ಲಿ ಮೇಜರ್ ಜನರಲ್ ಸಾಗತ್ ಸಿಂಗ್ ಅವರ ಕಮಾಂಡ್ ಪ್ರಮುಖವಾಗಿತ್ತು. ನಾಥುಲಾದಲ್ಲಿದ್ದ ಭಾರತೀಯ ಪಡೆಗಳಿಗೆ ತಮ್ಮ ಸ್ಥಾನಗಳನ್ನು ದೃಢವಾಗಿ ಹಿಡಿದಿಟ್ಟುಕೊಳ್ಳುವಂತೆ ನೀಡಲಾದ ಕಮಾಂಡ್ ಮತ್ತು ನಿರ್ಧಾರಗಳು ಸಂಘರ್ಷದ ಸಂದರ್ಭದಲ್ಲಿ ಮಹತ್ವ ಪಡೆದವು.