ಪರಿಶಿಷ್ಟ ಅಭ್ಯರ್ಥಿಗಳು ಸ್ವಂತ ಜೇಷ್ಠತೆಯ ಆಧಾರದಲ್ಲಿ ಮುಂಭಡ್ತಿ ಪಡೆದರೆ, ಒಳಮೀಸಲಾತಿಯ ಪರಿಗಣನೆಯಿಲ್ಲ
ಸಮಾಜ ಕಲ್ಯಾಣ ಇಲಾಖೆಯ ನಿಲುವು
ಸಾಂದರ್ಭಿಕ ಚಿತ್ರ | PC: Grok
ಬೆಂಗಳೂರು, ಡಿ.8: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ತಮ್ಮದೇ ಸ್ವಂತ ಜೇಷ್ಠತೆಯಲ್ಲಿ ಮುಂಭಡ್ತಿ ಹೊಂದಿದಲ್ಲಿ ಅಂತಹ ಅಭ್ಯರ್ಥಿಗಳನ್ನು ಒಳ ಮೀಸಲಾತಿ ಲೆಕ್ಕಕ್ಕೆ ಪರಿಗಣಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯು ನಿಲುವು ತಳೆದಿದೆ.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸುವ ಕುರಿತು 2025ರಂದು ಇಲಾಖೆ ಮಟ್ಟದಲ್ಲಿ ನಡೆದಿದ್ದ ಸಭೆಯಲ್ಲಿ ಇಲಾಖಾಧಿಕಾರಿಗಳು ನೀಡಿರುವ ಟಿಪ್ಪಣಿಯಲ್ಲಿ ಮಾಹಿತಿ ಒದಗಿಸಿದ್ದಾರೆ. ವಿಶೇಷವಾಗಿ ಮುಂಭಡ್ತಿಯಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಕುರಿತು ಈ ಸಭೆಯಲ್ಲಿ ಚರ್ಚೆಯಾಗಿದೆ.
ಈ ಸಭೆಗೆ ಇಲಾಖಾಧಿಕಾರಿಗಳು ಒದಗಿಸಿರುವ ಟಿಪ್ಪಣಿ ಪ್ರತಿಯು the-file.inಗೆ ಲಭ್ಯವಾಗಿದೆ.
ಮುಂಭಡ್ತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಕುರಿತು ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿನ ಮಾದರಿ ಕುರಿತು ಸಭೆಯಲ್ಲಿ ಚರ್ಚಿಸಿರುವುದು ಟಿಪ್ಪಣಿ ಪ್ರತಿಯಿಂದ ಗೊತ್ತಾಗಿದೆ.
ಮುಂಭಡ್ತಿಯಲ್ಲಿ ಒಳ ಮೀಸಲಾತಿ :
ತೆಲಂಗಾಣ ರಾಜ್ಯದಲ್ಲಿ 2025ರ ಎಪ್ರಿಲ್ 14ರಿಂದಲೇ ನೇರ ನೇಮಕಾತಿಯಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸಲು ಕ್ರಮ ವಹಿಸಿದೆ.
ಆದರೆ ಮುಂಭಡ್ತಿಯಲ್ಲಿ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಿರುವುದಿಲ್ಲ ಎಂದು ಅಲ್ಲಿನ ಅಧಿಕಾರಿಗಳು ರಾಜ್ಯದ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
ಆಂಧ್ರ ಪ್ರದೇಶ ರಾಜ್ಯದಲ್ಲಿ 2025ರ ಎಪ್ರಿಲ್ 18ರಂದು ನೇರ ನೇಮಕಾತಿಯಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸಲು ಆದೇಶ ಹೊರಡಿಸಿದೆ.
ಅಲ್ಲದೇ ಮುಂಭಡ್ತಿಯಲ್ಲಿಯೂ ಒಳ ಮೀಸಲಾತಿ ಕಲ್ಪಿಸಲು 2025ರ ನವೆಂಬರ್ 27ರಂದು ಆದೇಶ ಹೊರಡಿಸಿದೆ.
ಈ ಎರಡೂ ರಾಜ್ಯಗಳಲ್ಲಿ ಒಳ ಮೀಸಲಾತಿ ಕಾಯ್ದೆಯಲ್ಲಿ ಪ್ರತ್ಯೇಕವಾಗಿ ಮುಂಭಡ್ತಿ ಬಗ್ಗೆ ಉಲ್ಲೇಖಿಸಿಲ್ಲ. ಆದರೆ ಆಂಧ್ರ ಪ್ರದೇಶ ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ The Andhra Pradesh State and Subordinate Service Rules 1996ಕ್ಕೆ ತಿದ್ದುಪಡಿ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ 2025ರ ನವೆಂಬರ್ 27ರಂದು ಮುಂಭಡ್ತಿಯಲ್ಲಿಯೂ ಸಹ ಒಳ ಮೀಸಲಾತಿ ಕಲ್ಪಿಸಿ ಆದೇಶ ಹೊರಡಿಸಿದೆ ಎಂದು ಸಭೆಗೆ ಮಾಹಿತಿ ಒದಗಿಸಿದೆ.
‘ಆದರೆ ಯಾವುದೇ ಒಂದು ವೃಂದದಲ್ಲಿ 5 ಹುದ್ದೆಗಳು ಮುಂಭಡ್ತಿ ಅನ್ವಯಿಸುವುದಿಲ್ಲ. 6 ಮತ್ತು ಅದಕ್ಕಿಂತ ಹೆಚ್ಚು ಹುದ್ದೆಗಳು ಇದ್ದಲ್ಲಿ ಮಾತ್ರ ಅನ್ವಯವಾಗುತ್ತದೆ’ ಎಂದು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ರಾಜ್ಯದಲ್ಲಿ ಮುಂಭಡ್ತಿ ಮೀಸಲಾತಿ ಹೇಗಿದೆ? :
ರಾಜ್ಯದಲ್ಲಿ ಮುಂಭಡ್ತಿಯಲ್ಲಿ ಮೀಸಲಾತಿ ನೀತಿ 1978ರ ಪ್ರಕಾರ ಎ ವೃಂದದ ಕಿರಿಯ ಶ್ರೇಣಿವರೆಗೆ ಮಾತ್ರ ಮೀಸಲಾತಿ ಅನ್ವಯಿಸುತ್ತದೆ. ಅದೇ ರೀತಿ ರಾಜ್ಯ ನಾಗರಿಕ ಸೇವೆಗಳಲ್ಲಿನ ಹುದ್ದೆಗಳಿಗೆ ಮೀಸಲಾತಿಯ ಆಧಾರದ ಮೇಲೆ ಭಡ್ತಿ ಪಡೆದ ಸರಕಾರಿ ನೌಕರರಿಗೆ ಕರ್ನಾಟಕದಲ್ಲಿ ತತ್ಪರಿಣಾಮಕಾರಿ ಜೇಷ್ಠತೆಯ ವಿಸ್ತರಣೆ ಕಾಯ್ದೆ 17 ಜಾರಿಯಲ್ಲಿದೆ. ಮುಂಭಡ್ತಿಯಲ್ಲಿ ಸಮತಳ ಮೀಸಲಾತಿ ಇರುವುದಿಲ್ಲ ಎಂದು ಹೇಳಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ತಮ್ಮದೇ ಸ್ವಂತ ಜೇಷ್ಠತೆಯಲ್ಲಿ ಮುಂಭಡ್ತಿ ಹೊಂದಿದಲ್ಲಿ ಅಂತ ಅಭ್ಯರ್ಥಿಗಳನ್ನು ಮೀಸಲಾತಿ ಲೆಕ್ಕಕ್ಕೆ ಪರಿಗಣಿಸುವುದಿಲ್ಲ ಎಂದು ಇಲಾಖೆಯು ಸಭೆಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
ಸರಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿ ವಿವಿಧ ಉಪ ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು ಎಂಪಿರಿಕಲ್ ದತ್ತಾಂಶ ಪಡೆಯಲು ಸಚಿವ ಸಂಪುಟವು ನಿರ್ಧರಿಸಿತ್ತು. ಅಲ್ಲದೇ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಮುಂದಿನ ತೀರ್ಮಾನದವರೆಗೂ ಹೊರಡಿಸಬಾರದು ಎಂದು ಸಚಿವ ಸಂಪುಟವು ಸೂಚಿಸಿತ್ತು.
2025ರ ಆಗಸ್ಟ್ 19ರಂದು ನಡೆದಿದ್ದ ಸಚಿವ ಸಂಪುಟವು ಒಪ್ಪಿಗೆ ನೀಡಿದ್ದರ ಪ್ರಕಾರ ಪ್ರವರ್ಗ ಎ ರಲ್ಲಿನ (101 ಜಾತಿಗಳ ಪಟ್ಟಿಯಲ್ಲಿನ 16 ಜಾತಿಗಳು) ಶೇ.6ರಷ್ಟು ಮೀಸಲಾತಿ, ಪ್ರವರ್ಗ ಬಿ ಯಲ್ಲಿ ಸಮುದಾಯಗಳು ( 101 ಜಾತಿಗಳ ಪಟ್ಟಿಯಲ್ಲಿನ 19 ಜಾತಿಗಳು) ಶೇ. 6, ಪ್ರವರ್ಗ ಸಿ ಯಲ್ಲಿನ ಸಮುದಾಯಗಳು (101 ಜಾತಿಗಳ ಪಟ್ಟಿಯಲ್ಲಿನ 63 ಜಾತಿಗಳು) ಶೇ. 5 ಸೇರಿ ಒಟ್ಟಾರೆ ಶೇ. 17ರಷ್ಟು ಮೀಸಲಾತಿ ಹಂಚಿಕೆ ಮಾಡಿ ಆದೇಶಿಸಿತ್ತು.
ಈ ಮಧ್ಯೆ ಹೈಕೋರ್ಟ್‌ನ ಮಧ್ಯಂತರ ಆದೇಶದ ಪ್ರಕಾರ ಸರಕಾರವು ಕ್ರಮ ಕೈಗೊಂಡಿತ್ತು. 2015ರ ಅಕ್ಟೋಬರ್ 16ರಂದು ನೀಡಿದ್ದ ಮಧ್ಯಂತರ ಆದೇಶದಲ್ಲಿ ನೇಮಕಾತಿ ಪ್ರಕ್ರಿಯೆ ಮಾತ್ರ ಮುಂದುವರಿಸಲು ಹಾಗೂ ಯಾವುದೇ ವ್ಯಕ್ತಿಗೆ ನೇಮಕಾತಿ ಆದೇಶ ನೀಡಬಾರದು ಎಂದು ಆದೇಶಿಸಿತ್ತು ಎಂದು ಸಭೆಗೆ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
ಒಳ ಮೀಸಲಾತಿ ಬಗ್ಗೆ ಕಾಯ್ದೆಯನ್ನು ರೂಪಿಸುವ ಸಲುವಾಗಿ ಈಗಾಗಲೇ ಕರಡು ವಿಧೇಯಕ ತಯಾರಿಸಿದೆ. ರಿಟ್ ಅರ್ಜಿ 200448/2025ರಲ್ಲಿ ವಿಚಾರಣೆ ನಡೆಸಿದ್ದ ಉಚ್ಚ ನ್ಯಾಯಾಲಯವು 2025ರ ನವೆಂಬರ್ 19 ಮತ್ತು 27ರಂದು ಮಧ್ಯಂತರ ಆದೇಶ ಹೊರಡಿಸಿದೆ. ಈ ಆದೇಶಗಳಲ್ಲಿ ಮೀಸಲಾತಿ ಪರಿಷ್ಕರಣೆ ಆದೇಶದ ಅಧಿನಿಯಮ ಜಾರಿಗೆ ತಾತ್ಕಾಲಿಕ ತಡೆ ನೀಡಿ ಆದೇಶ ಹೊರಡಿಸಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು 2026ರ ಜನವರಿ 22ಕ್ಕೆ ನಿಗದಿಪಡಿಸಿದೆ.
2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 1.05 ಕೋಟಿಯಲ್ಲಿ 7.29 ಲಕ್ಷ ಜನರು ಯಾವುದೇ ಉಪ ಜಾತಿಗಳನ್ನು ನಮೂದಿಸಿಲ್ಲ. ಅಲ್ಲದೆ ಸರಕಾರಿ ಸೇವೆಗಳು ಮತ್ತು ಶಿಕ್ಷಣದಲ್ಲಿ 4 ಗುಂಪುಗಳಿಗೆ ಸೇರಿದ ವ್ಯಕ್ತಿಗಳ ಸಮರ್ಪಕ ಅಥವಾ ವಾಸ್ತವ ಪ್ರಾತಿನಿಧ್ಯದ ಬಗ್ಗೆ ಯಾವ ಅಂಕಿ ಅಂಶವೂ ಇರಲಿಲ್ಲ. ಅಲ್ಲದೆ 2011ರ ಜನಗಣತಿಯಂತೆಯೇ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಕಾಂಗ್ರೆಸ್ ಸರಕಾರವು ಸಮರ್ಥಿಸಿಕೊಂಡಿತ್ತು.
ಸದಾಶಿವ ಆಯೋಗದ ವರದಿ ಶಿಫಾರಸುಗಳು ಪ್ರಸ್ತುತವಾಗಿಲ್ಲ ಎಂದು ಹಿಂದಿನ ಬಿಜೆಪಿ ಸರಕಾರ ಆದೇಶ ಹೊರಡಿಸಿತ್ತು.
ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಬಗ್ಗೆ ಭಾರತ ಸಂವಿಧಾನಕ್ಕೆ ಅನುಚ್ಛೇದ 341ರಲ್ಲಿ ತಿದ್ದುಪಡಿ ಮೂಲಕ Clasue (3)ನ್ನು ಸೇರಿಸಲು ಭಾರತ ಸರಕಾರಕ್ಕೆ ಶಿಫಾರಸು ಮಾಡುವ ಸಂಬಂಧ ತೆರೆದಿರುವ ಕಡತದಲ್ಲಿ ಈ ಆದೇಶದ ಅಂಶವನ್ನು ಉಲ್ಲೇಖಿಸಿರುವುದನ್ನು ಸ್ಮರಿಸಬಹುದು.