×
Ad

ಗ್ರಾಮ ಪಂಚಾಯಿತಿ ʼಬಿ ಖಾತಾʼ ರದ್ದು

Update: 2025-12-08 19:52 IST

ಸಾಂದರ್ಭಿಕ ಚಿತ್ರ | PC : gemini AI

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ 2025ರ ನಿಯಮಗಳ ಪ್ರಕಾರ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಇನ್ನು ಮುಂದೆ ʼಬಿ ಖಾತಾʼ ಸೃಷ್ಟಿಸಲು ಅವಕಾಶ ಇರುವುದಿಲ್ಲ.

ಗ್ರಾಮೀಣ ಪ್ರದೇಶದ ಗ್ರಾಮ ಪಂಚಾಯಿತಿಗಳಲ್ಲಿ ಪ್ರಸ್ತುತ ಕಟ್ಟಿಕೊಂಡಿರುವ ಲಕ್ಷಾಂತರ ಮನೆಗಳಿಗೆ ಮುಂದಿನ ವರ್ಷದಿಂದ ಮನೆ ತೆರಿಗೆ ಕೂಡ ಅವಕಾಶ ಇರುವುದಿಲ್ಲ. 11B ಆಸ್ತಿಗಳಿಗೆ ಜನ ಈಗ ಕಂದಾಯ ಕಟ್ಟುತ್ತಿದ್ದರು ಅದರಿಂದ ಪ್ರಯೋಜನ ಇರಲಿಲ್ಲ.

ಆದರೆ ಗ್ರಾಮ ಮಲೆನಾಡಿನ ಬಹುತೇಕ ಗ್ರಾಮ ಪಂಚಾಯತಿಗಳಿಗೆ ತೆರಿಗೆ ಸಂಗ್ರಹ ಆಗುತ್ತಿರುವುದು ಬಿ ಖಾತಾ ತೆರಿಗೆಯಿಂದ. ಬಿ ಖಾತಾ ತೆರಿಗೆ ರದ್ದಾಗಿರುವುದರಿಂದ ಗ್ರಾಮ ಪಂಚಾಯತಿಗಳಿಗೆ ಲಕ್ಷಾಂತರ ತೆರಿಗೆ ನಷ್ಟವಾಗಲಿದೆ. ಉದಾಹರಣೆಗೆ ಕೊಪ್ಪ ತಾಲ್ಲೂಕು ಜಯಪುರ ಗ್ರಾಮ ಪಂಚಾಯತ್‌ ಪ್ರಸಕ್ತ ವರ್ಷದಲ್ಲಿ ಕಟ್ಟಡಗಳ ತೆರಿಗೆಯಿಂದ ಅಂದಾಜು 32 ಲಕ್ಷ ಆದಾಯ ನಿರೀಕ್ಷೆ ಮಾಡಿದೆ.

ಪಂಚಾಯತ್‌ ವ್ಯಾಪ್ತಿಯಲ್ಲಿ ಇರುವ 2165 ಕಟ್ಟಡಗಳಲ್ಲಿ ಕೇವಲ 40 ಶೇಕಡಾ ಕಟ್ಟಡಗಳಿಗೆ ಮಾತ್ರ ಇ ಸ್ವತ್ತು ಆಗಿದೆ ಉಳಿದ 60 ಶೇಕಡಾ ಮನೆಗಳು ಬಿ ಖಾತಾ ಆಗಿ ಉಳಿದುಕೊಂಡಿದೆ. ಇದರಿಂದ ಜಯಪುರ ಗ್ರಾಮ ಪಂಚಾಯತ್‌ ತನ್ನ ಸ್ವಂತ ಕಟ್ಟಡಗಳ ತೆರಿಗೆಯಿಂದ ಸುಮಾರು 18 ಲಕ್ಷ ಆದಾಯ ಕಳೆದುಕೊಳ್ಳಲಿದೆ.

ಪಂಚಾಯತ್ ರಾಜ್ 17-10-2025 ಅಧಿಸೂಚನೆ ಹೊರಡಿಸಿದ ನಿಯಮದಂತೆ ಬಿ ಖಾತಾ ಎಂಬುದು ಅಸ್ತಿತ್ವದಲ್ಲಿ ಇರುವುದಿಲ್ಲ. ಇದರಿಂದ ಅನೇಕ ಪಂಚಾಯಿತಿಗಳ ಅಭಿವೃದ್ಧಿಗೆ ಭಾರೀ ಹಿನ್ನಡೆ ಆಗಲಿದೆ.

ಗ್ರಾಮ ಪಂಚಾಯತಿಗಳು ಇನ್ನೂ ಮುಂದೆ ಸರಕಾರಿ ಭೂಮಿ, ಅರಣ್ಯ ಭೂಮಿ, ಸರಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಯಾವುದೇ ಸ್ಥಳ, ಯಾವುದೇ ಶಾಸನ ಬದ್ಧ ಸ್ಥಳ ಅಥವಾ ಸಂಸ್ಥೆಗೆ ಸೇರಿರುವ ಆಸ್ತಿಯಾಗಿದ್ದರೆ ಅಂತಹ ಆಸ್ತಿಗಳನ್ನು ತಂತ್ರಾಂಶದಿಂದ ಕೈಬಿಡುವುದು ಮತ್ತು ಅಂತಹ ಆಸ್ತಿಗಳಿಂದ ತೆರಿಗೆಯನ್ನು ಪಡೆಯತಕ್ಕದ್ದಲ್ಲ ಎಂದು ನಿಯಮ ಜಾರಿಗೆ ತಂದಿದೆ.

ಈ ನಿಯಮಗಳ ಅನುಸಾರ ಕೊಪ್ಪ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ 30 ಸಾವಿರ ಕಟ್ಟಡಗಳಲ್ಲಿ ಕೇವಲ 10 ಸಾವಿರ ಕಟ್ಟಡಗಳಿಗೆ ಇ ಸ್ವತ್ತು ಸೃಷ್ಟಿಯಾಗಿದೆ.

ನರಸಿಂಹರಾಜಪುರ ತಾಲ್ಲೂಕಿನ 25 ಸಾವಿರ ಕಟ್ಟಡಗಳಲ್ಲಿ 8 ಸಾವಿರ ಕಟ್ಟಡಗಳಿಗೆ ಇ ಸ್ವತ್ತು ರಚಿಸಲಾಗಿದೆ. ಶೃಂಗೇರಿ ತಾಲ್ಲೂಕಿನ 9 ಸಾವಿರ ಮನೆಗಳಲ್ಲಿ ಶೇಕಡಾ 30 ರಿಂದ 35 ಕಟ್ಟಡಗಳಿಗೆ ಮಾತ್ರ ಇ ಸ್ವತ್ತು ನಿಗದಿಯಾಗಿದೆ.

ಕೊಪ್ಪ ತಾಲ್ಲೂಕಿನ 22 ಪಂಚಾಯಿತಿಗಳಿಂದ ಕಟ್ಟಡಗಳ ತೆರಿಗೆ ನಿರೀಕ್ಷೆ 3 ಕೋಟಿ. ಹೊಸ ನಿಯಮದಂತೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳು ಸುಮಾರು 2 ಕೋಟಿ ರೂಪಾಯಿ ತೆರಿಗೆ ಕಳೆದುಕೊಳ್ಳಲಿದೆ. ನರಸಿಂಹರಾಜಪುರ ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳಲ್ಲಿ ಪ್ರಸಕ್ತ ವರ್ಷದ ಕಟ್ಟಡಗಳ ತೆರಿಗೆ ನಿರೀಕ್ಷೆ ಸುಮಾರು 2.75 ಕೋಟಿ. ಹೊಸ ನಿಯಮದಂತೆ ಸುಮಾರು 1.50 ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ.

ಸರಕಾರ ಈ ನಷ್ಟವನ್ನು ಭರಿಸಲು ಗ್ರಾಮ ಪಂಚಾಯಿತಿಗಳಿಗೆ ಯಾವುದೇ ಪರ್ಯಾಯ ಆರ್ಥಿಕ ಮೂಲ ಕಂಡು ಕೊಂಡಿಲ್ಲ. ಅರಣ್ಯ ಕಾಯ್ದೆ ಕಗ್ಗಟ್ಟಿನಿಂದ ಹೊಸದಾಗಿ ಗ್ರಾಮ ಠಾಣ ಅಥವಾ ಹೊಸ ಕಂದಾಯ ಗ್ರಾಮಗಳನ್ನು ಸೃಷ್ಟಿಸಲು ಅಸಾಧ್ಯವಾಗಿದೆ. ಅರಣ್ಯ ಇಲಾಖೆಯ ಕಾಯ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಸಡಿಲಗೊಳಿಸಿದರೆ ಗ್ರಾಮೀಣ ಪ್ರದೇಶದ ಬಹುತೇಕ ಆಸ್ತಿಗಳಿಗೆ ದಾಖಲೆ ನೀಡಲು ಗ್ರಾಮ ಪಂಚಾಯತಿಗಳಿಗೆ ಅವಕಾಶ ದೊರಕಲಿದೆ. ಜನರಿಗೆ ದಾಖಲೆ ಮತ್ತು ಪಂಚಾಯತಿಗಳಿಗೆ ತೆರಿಗೆ ಎರಡೂ ಲಭ್ಯವಾಗಲಿದೆ.

ಸಮಸ್ಯೆ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಮತ್ತು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ಹೋಗಿರುವ ಸದಸ್ಯರು ಪರಿಷತ್ತಿನಲ್ಲಿ ಧ್ವನಿ ಎತ್ತಿ ರಾಜ್ಯದ ಗ್ರಾಮ ಪಂಚಾಯತಿಗಳಿಗೆ ನ್ಯಾಯ ಒದಗಿಸಬೇಕು.

ಎಂ.ಯೂಸುಫ್ ಪಟೇಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ.ಯೂಸುಫ್ ಪಟೇಲ್

contributor

Similar News