×
Ad

ಪಕ್ಷದ ಕಚೇರಿಯಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ: ಬಿಜೆಪಿ ಮುಖಂಡನಿಗೆ ನೋಟಿಸ್

Update: 2025-05-26 07:47 IST

PC: x.com/ndtv

ಲಕ್ನೋ: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಮಹಿಳೆಯೊಬ್ಬರ ಜೊತೆಗೆ ಅಸಭ್ಯವಾಗಿ ವರ್ತಿಸಿದ ವಿಡಿಯೊ ವೈರಲ್ ಆದ ಬೆನ್ನಲ್ಲೇ ಪಕ್ಷ ಕಳಂಕಿತ ಮುಖಂಡನಿಗೆ ನೋಟಿಸ್ ನೀಡಿದೆ.

ಪಕ್ಷದ ಕಾರ್ಯಕರ್ತರು ಈ ವಿಡಿಯೊವನ್ನು ನಾಚಿಕೆಗೇಡು ಎಂದು ಆರೋಪಿಸಿ, ಬಿಜೆಪಿ ಮುಖಂಡರಿಗೆ ದೂರು ನೀಡಿದ್ದರು. ಬಿಜೆಪಿ ಜಿಲ್ಲಾ ಮುಖ್ಯಸ್ಥ ಅಮರ್ ಕಿಶೋರ್ ಕಶ್ಯಪ್, ಈ ಘಟನೆ ಬಗ್ಗೆ ಏಳು ದಿನಗಳ ಒಳಗಾಗಿ ವಿವರಣೆ ನೀಡಬೇಕು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.

ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೊದಿಂದ ಪಕ್ಷದ ಘನತೆಯ ಮೇಲೆ ಋಣಾತ್ಮಕ ಪರಿಣಾಮ ಎದುರಾಗುತ್ತಿದ್ದು, ಇದು ಅಶಿಸ್ತು ಎಂಬುದಾಗಿ ಪರಿಗಣಿಸಲ್ಪಡುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ ಶುಕ್ಲ ನೋಟಿಸ್ ನಲ್ಲಿ ವಿವರಿಸಿದ್ದಾರೆ. ಅಧ್ಯಕ್ಷರ ಸೂಚನೆ ಮೇರೆಗೆ ಈ ನೋಟಿಸ್ ನೀಡಲಾಗುತ್ತಿದ್ದು, ಏಳು ದಿನಗಳ ಒಳಗಾಗಿ ಸೂಕ್ತ ವಿವರಣೆ ನೀಡದಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಏಪ್ರಿಲ್ 12ರಂದು ಈ ವಿಡಿಯೊ ರೆಕಾರ್ಡ್ ಮಾಡಲಾಗಿದ್ದು, ಅಸ್ವಸ್ಥತೆ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯಲು ಮಹಿಳೆ ಜಾಗ ಕೇಳಿದ್ದರು ಎನ್ನುವುದು ಕಶ್ಯಪ್ ಅವರ ವಿವರಣೆ. ಆಕೆಯ ಮನವಿ ಮೇರೆಗೆ ಕಾರಿನಲ್ಲಿ ಕಚೇರಿಗೆ ಕರೆತಂದಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕಾರಿನಲ್ಲಿ ಕಚೇರಿ ಎದುರು ಬಂದಿಳಿದ ಮಹಿಳೆಯ ಜತೆಗಿದ್ದ ಮುಖಂಡ ಆಕೆಯ ಭುಜದ ಮೇಲೆ ಕೈಹಾಕಿಕೊಂಡು ತೆರಳುತ್ತಿರುವ ಹಾಗೂ ಆಕೆಯನ್ನು ಆಲಂಗಿಸಿಕೊಂಡಿರುವುದು ಸಿಸಿಟಿವಿ ವಿಡಿಯೊದಲ್ಲಿ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News