ನಿಜವಾದ ವಿಪಕ್ಷ ನಾಯಕ ಯಾರು?
ಡಿ.ಕೆ.ಶಿವಕುಮಾರ್ ಕೂಡ ಮುಖ್ಯಮಂತ್ರಿ ಯಾದ ಹೊಸದರಲ್ಲಿ ಅಪಾರವಾದ ನಿರೀಕ್ಷೆ ಮೂಡಿಸಿದ್ದರು. ಕೇಂದ್ರ ಸರಕಾರದೊಂದಿಗೆ ಸಂಘರ್ಷವಲ್ಲ- ಸೌಹಾರ್ದದಿಂದ ಅಭಿವೃದ್ಧಿ, ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲು ಪ್ರತ್ಯೇಕವಾದ ಅಧಿಕಾರಿಗಳ ತಂಡ ರೂಪಿಸಿ ಭರವಸೆ ಮೂಡಿಸಿದ್ದರು. ಮುಖ್ಯಮಂತ್ರಿ ಆಗುವ ಮುನ್ನ ‘ಒಮ್ಮೆ ಪೆನ್ನು ಕೊಡಿ’ ಎಂಬ ಮಾತನ್ನು ಹಲವು ಬಾರಿ ಹೇಳಿದ್ದರು. ಅದೇ ರೀತಿ ‘ದೇವರು ಶಾಪವನ್ನೂ ಕೊಡುವುದಿಲ್ಲ, ವರವನ್ನೂ ಕೊಡುವುದಿಲ್ಲ, ಕೇವಲ ಅವಕಾಶವನ್ನು ಕೊಡುತ್ತಾನೆ’ ಎಂದು ಹೇಳಿದ್ದರು. ಅವರ ಮಾತುಗಳನ್ನು ಹತ್ತು ಬಾರಿ ಕೇಳಿದರೆ ಒಮ್ಮೆಯಾದರೂ ‘ಇವರಿಗೂ ಒಂದು ಅವಕಾಶ ಸಿಗಬೇಕು’ ಎನಿಸುತ್ತಿತ್ತು.
ಡಿ.ಕೆ. ಶಿವಕುಮಾರ್ ತಾನೊಬ್ಬ ದೂರದೃಷ್ಟಿಯುಳ್ಳ ನಾಯಕ, ತಾನು ಭ್ರಷ್ಟಾಚಾರ ಸಹಿಸದ ನಾಯಕ, ಎಲ್ಲರನ್ನು ಜೊತೆಗೆ ಕೊಂಡೊಯ್ಯುವ ನಾಯಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ವಿಷಯಗಳಲ್ಲಿ ಅವರು ಊದಿದ್ದ ನಿರೀಕ್ಷೆಯ ಬಲೂನಿಗೆ ಅವರದೇ ಪಕ್ಷದ ಹೈಕಮಾಂಡ್ ಸೂಜಿ ಚುಚ್ಚಿದೆ.
ದೂರದೃಷ್ಟಿಯುಳ್ಳ ನಾಯಕನೊಬ್ಬ ಮಹಿಳೆ ಇಲ್ಲದ ಮಂತ್ರಿ ಮಂಡಲ ರೂಪಿಸಿಕೊಳ್ಳುತ್ತಿರಲಿಲ್ಲ. ‘ನನಗೆ ದುಡ್ಡಿನ ಅಗತ್ಯ ಇಲ್ಲ, ಮೂರು ತಲೆಮಾರಿಗಾಗುವಷ್ಟು ಇದೆ’ ಎಂದು ಸದನದಲ್ಲಿ ಹೇಳುವ, ಭ್ರಷ್ಟಾಚಾರ ಸಹಿಸದ ನಾಯಕನೊಬ್ಬ ತನ್ನ ಸಂಪುಟಕ್ಕೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಎದುರಿಸುತ್ತಿರುವ ವ್ಯಕ್ತಿಯನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವೆ ಎನ್ನುವ ನಾಯಕ ಸರ್ವಪಕ್ಷ ಸಭೆಗೂ ಮುನ್ನವೇ ತಮಿಳುನಾಡು ಮುಖ್ಯಮಂತ್ರಿ ಜೊತೆ ಮಾತುಕತೆಗೆ ಮುಂದಾಗುತ್ತಿರಲಿಲ್ಲ.
ಅವರು ಕೇಳುತ್ತಿದ್ದ ಪೆನ್ನು ಸಿಕ್ಕಿದೆ. ದೇವರು ಅವಕಾಶ ಕೊಟ್ಟಿದ್ದಾನೆ. ನೂರು ಅಡೆತಡೆ ಇರಬಹುದು. ಮೆಟ್ಟಿ ನಿಲ್ಲುವುದೇ ನಿಜವಾದ ನಾಯಕ. ಸಿಕ್ಕಿರುವ ಪೆನ್ನಿನಲ್ಲೇ ಇತಿಹಾಸ ಬರೆಯಬೇಕು. ದೇವರು ಕೊಟ್ಟಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅವೇ ಡಿ.ಕೆ. ಶಿವಕುಮಾರ್ ಹುಟ್ಟು ಹಾಕಿರುವ ನಿರೀಕ್ಷೆಗಳು. ನಿರೀಕ್ಷೆಗಳನ್ನು ನಿಜ ಮಾಡಿದರೆ ಅವರು ಜನರ ಬಳಿ ಮತ್ತೊಮ್ಮೆ ಪೆನ್ನು ಕೇಳಬಹುದು. ದೇವರ ಬಳಿ ಮತ್ತೊಂದು ಅವಕಾಶ ಕೇಳಬಹುದು. ಆದರದು ಸುಲಭವಲ್ಲ, ಡಿ.ಕೆ. ಶಿವಕುಮಾರ್ ಸಮಸ್ಯೆ ಏನೆಂದರೆ ಅದು ಸ್ವತಃ ಅವರೇ! ಹೇಗೆಂದರೆ ಕಾರ್ಯಸಾಧುವಲ್ಲದ ನಿರೀಕ್ಷೆ ಹುಟ್ಟು ಹಾಕುವ ಮೂಲಕ. ಈಡೇರಿಸಲಾಗದ ಮಾತುಗಳನ್ನು ಆಡುವ ಮೂಲಕ.
ಡಿ.ಕೆ. ಶಿವಕುಮಾರ್ ಅವರನ್ನು ಮಾಧ್ಯಮಗಳು ಟ್ರಬಲ್ ಶೂಟರ್ ಎಂದು ವರ್ಣಿಸಿವೆ. ಅವರೂ ಕೂಡ ತಾವೊಬ್ಬ ಟ್ರಬಲ್ ಶೂಟರ್ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈಗವರು ಸ್ವತಃ ಟ್ರಬಲ್‌ಗೆ ಒಳಗಾಗಿದ್ದಾರೆ. ತಾನು ನಿಜ ಅರ್ಥದ ಟ್ರಬಲ್ ಶೂಟರ್ ಎಂದು ಸಾಬೀತುಪಡಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಎಸ್.ಎಂ. ಕೃಷ್ಣ ಸರಕಾರದಲ್ಲಿ ಸೂಪರ್ ಸಿಎಂ ಆಗಿದ್ದ ಅವರಿಗೆ, ಅಹಮದ್ ಪಟೇಲ್ ರಾಜ್ಯಸಭೆ ಚುನಾವಣೆಯಿಂದ ಹಿಡಿದು ಇತ್ತೀಚೆಗೆ ಒಡಿಶಾ ಕಾಂಗ್ರೆಸ್ ಶಾಸಕರನ್ನು ಸುರಕ್ಷಿತವಾಗಿ ಹಿಡಿದಿಟ್ಟುಕೊಳ್ಳುವವರೆಗೆ ಹಲವು ನಿರ್ಣಾಯಕ ಸಂದರ್ಭಗಳಲ್ಲಿ ಸಂಕಷ್ಟಹರಣ ಪಾತ್ರ ನಿರ್ವಹಿಸಿರುವ ಅವರಿಗೆ ಸದ್ಯದ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಇಲ್ಲ ಎಂದು ಹೇಳಲಾಗದು. ಸಾಮರ್ಥ್ಯ ಇದ್ದರೂ ಸಾಧ್ಯವಾಗಿಲ್ಲ ಏಕೆ ಎನ್ನುವುದೇ ಕುತೂಹಲಕಾರಿಯಾದ ಪ್ರಶ್ನೆ.
ಅತಂತ್ರವಾದ ಅಹಿಂದ
ರಾಜ್ಯ ಬಿಜೆಪಿಯ ಒಡಕು ಅಂಗೈ ಹುಣ್ಣು. ಕಾಂಗ್ರೆಸ್ ಕದನ ಒಳಗೇ ಕುದಿಯುತ್ತಿರುವ ಜ್ವಾಲಾಗ್ನಿ. ಬಿಜೆಪಿ ಪರಿಸ್ಥಿತಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಕಾಂಗ್ರೆಸ್ ಸ್ಥಿತಿ ಗೋಚರಿಸುತ್ತಿಲ್ಲ. ಮುಖ್ಯಮಂತ್ರಿಯಾಗುವುದೇ ಜೀವನದ ಪರಮ ಧ್ಯೇಯ ಎಂದುಕೊಂಡಿದ್ದ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಪಕ್ಷದ ಕಡೆ ತಲೆ ಹಾಕುತ್ತಿಲ್ಲ. ಪಕ್ಷದ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ತಮ್ಮ ಪಾಡಿಗೆ ತಾವಿದ್ದಾರೆ. ನಡುವೆ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಮತ್ತು ಎಚ್.ಸಿ. ಮಹದೇವಪ್ಪ ಹಾಗೂ ಸಿದ್ದರಾಮಯ್ಯ ಮತ್ತು ಝಮೀರ್ ಅಹಮದ್ ಖಾನ್ ನಡುವೆ ಕಂದಕ ಸೃಷ್ಟಿಯಾಗಿರುವುದು ಕಾಂಗ್ರೆಸ್ ಪಾಳಯದಲ್ಲಿ ಆತಂಕ ಉಂಟುಮಾಡಿದೆ.
ಹಿಂದೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದ, ಜನಸಂಖ್ಯೆ ದೃಷ್ಟಿಯಲ್ಲಿ ಹೆಚ್ಚು ಕಡಿಮೆ ಸಮನಾಗಿರುವ ಕುರುಬ ಮತ್ತು ವಾಲ್ಮೀಕಿ ಸಮುದಾಯಗಳು ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಕಾರಣಕ್ಕೆ ಒಂದಾಗಿದ್ದವು. ಎಚ್.ಸಿ. ಮಹದೇವಪ್ಪ ಬಗಲಲ್ಲಿ ಇದ್ದುದರಿಂದ ಸಿದ್ದರಾಮಯ್ಯರಿಗೆ ದಲಿತ ಪರ ನಾಯಕ ಎನ್ನುವ ಹೆಸರು ಬಂದಿತ್ತು. ಸಿದ್ದರಾಮಯ್ಯ ಅವರೇ ಕರ್ನಾಟಕದ ನಿಜವಾದ ಮುಸ್ಲಿಮ್ ನಾಯಕ ಎನಿಸಿದ್ದರಿಂದ, ಜೊತೆಯಲ್ಲಿ ಝಮೀರ್ ಅಹಮದ್ ಖಾನ್ ಇದ್ದುದರಿಂದ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತ ಮತಗಳು ಅನಾಯಾಸವಾಗಿ ಬಂದಿದ್ದವು. ಈ ಅಹಿಂದ ಸಮೀಕರಣದಿಂದ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದ್ದಿತ್ತು.
ಆದರೀಗ? ಮುಂದಕ್ಕೆ?? ಇವೇ ರಾಜ್ಯ ಕಾಂಗ್ರೆಸ್ ನಾಯಕರನ್ನು ಕಾಡುತ್ತಿರುವ ಪ್ರಶ್ನೆಗಳು. ಚುನಾವಣೆಗೆ ಹೋಗಬೇಕಿರುವವರನ್ನು ಕಾಡುತ್ತಿರುವ ಪ್ರಶ್ನೆಗಳು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ ಮತ್ತು ಝಮೀರ್ ಅಹಮದ್ ಖಾನ್ ಒಂದಾಗಲಿ ಎಂದು ಕಾಂಗ್ರೆಸಿಗರು ಬಯಸುತ್ತಿದ್ದಾರೆ. ಜೊತೆಗೆ ಒಂದು ಮಾಡುವವರು ಯಾರು? ಅಹಿಂದದ ನಡುವೆ ಮೂಡಿರುವ ಬಿರುಕನ್ನು ಬೆಸೆಯುವವರು ಯಾರು? ಎನ್ನುವ ಪ್ರಶ್ನೆಗಳೂ ಬಾಧಿಸುತ್ತಿವೆ.
ಕಳೆದ ವಾರ ಡಾ. ಯತೀಂದ್ರ ಸಿದ್ದರಾಮಯ್ಯ ಇದ್ದಕ್ಕಿದ್ದಂತೆ ಸತೀಶ್ ಜಾರಕಿಹೊಳಿ ಮನೆಗೆ ಭೇಟಿ ನೀಡಿದ್ದರು. ಇದೇ ರೀತಿ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿರುವ ಎಚ್.ಸಿ. ಮಹದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್ ಮತ್ತು ತನ್ವೀರ್ ಸೇಠ್ ನಡೆಸುತ್ತಿದ್ದ ಸಭೆಯಲ್ಲೂ ಕಾಣಿಸಿಕೊಂಡಿದ್ದರು. ಅದರಿಂದಾಗಿ ಯತೀಂದ್ರ ಸಿದ್ದರಾಮಯ್ಯ ಬೆಸೆಯುವ ಕಾಯಕಕ್ಕೆ ಮುಂದಾಗಿರಬಹುದು. ಹಿಂದೆ ಅವರೇ ‘ಸತೀಶ್ ಜಾರಕಿಹೊಳಿ ತಮ್ಮ ತಂದೆಯ ಸೈದ್ಧಾಂತಿಕ ಉತ್ತರಾಧಿಕಾರಿ’ ಎಂದು ಹೇಳಿದ್ದುದರಿಂದ ಈಗ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ನಡುವೆ ಮಧ್ಯಸ್ಥಿಕೆ ವಹಿಸುತ್ತಿರಬಹುದು ಎನ್ನುವ ಮಾತು ಕೇಳಿಬಂದಿತ್ತು. ಆದರೆ ಈ ವಿಷಯ ಯತೀಂದ್ರ ಸಿದ್ದರಾಮಯ್ಯ ಅಥವಾ ಸತೀಶ್ ಜಾರಕಿಹೊಳಿ ಕಡೆಯಿಂದ ಖಾತರಿಯಾಗಿಲ್ಲ.
ಒಡಕು ಕಾಂಗ್ರೆಸ್ ಮನೆಯೊಳಗೆ ಮಾತ್ರವಲ್ಲ, ಅಹಿಂದ ಸಂಘಟನೆಯಲ್ಲೂ ಕಾಣಿಸುತ್ತಿದೆ. ಮುಂದಿನ ಸೆಪ್ಟಂಬರ್ 6ಕ್ಕೆ ಅಹಿಂದ ಸಂಘಟನೆ ವಿಶಾಲ ಸ್ವರೂಪ ಪಡೆದುಕೊಂಡು 25 ವರ್ಷ. ಸಂಘಟನೆ 25 ವರ್ಷ ಪೂರೈಸಿದ ಹೊತ್ತಿನಲ್ಲಿ ಮತ್ತೊಂದು ಬೃಹತ್ ಸಮಾವೇಶ ಮಾಡಬೇಕು. ಸಮಾವೇಶಕ್ಕೆ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಝಮೀರ್ ಅಹಮದ್ ಖಾನ್ ಆದಿಯಾಗಿ ಅಹಿಂದ ಸಮುದಾಯದ ಎಲ್ಲಾ ಪ್ರಮುಖ ನಾಯಕರನ್ನು ಆಹ್ವಾನಿಸಬೇಕು. ಶಕ್ತಿ ಪ್ರದರ್ಶನ ಮಾಡಬೇಕು ಎನ್ನುವುದು ಕೆಲವರ ವಾದ. ಸಿದ್ದರಾಮಯ್ಯ ಮಾತ್ರ ಇರಲಿ ಎನ್ನುವುದು ಇನ್ನು ಕೆಲವರ ವಾದ. ಸಿದ್ದರಾಮಯ್ಯ ಅವರನ್ನು ಬಿಟ್ಟು ಮಾಡೋಣ ಎನ್ನುವುದು ಮತ್ತು ಕೆಲವರ ವಾದ. ಒಟ್ಟಿನಲ್ಲಿ ಅಹಿಂದ ಛಿದ್ರ.
ಮುನಿದಿರುವವರನ್ನು ಬೆಸೆಯುವ ವಿಚಾರದಲ್ಲಿ ಯತೀಂದ್ರ ಸಿದ್ದರಾಮಯ್ಯ ಪ್ರಯತ್ನ ಎಷ್ಟು ಗಂಭೀರವಾಗಿದೆ? ಇನ್ನೊಬ್ಬ ಹಿಂದುಳಿದ ವರ್ಗದ ನಾಯಕ, ದಲಿತರು ಮತ್ತು ಅಲ್ಪಸಂಖ್ಯಾತರ ಪರ ನಿಲ್ಲುವ ನಾಯಕ, ಅಹಿಂದಕ್ಕೆ ನಾಯಕತ್ವ ನೀಡಬಲ್ಲ ಸಾಮರ್ಥ್ಯವುಳ್ಳ ನಾಯಕ ಬಿ.ಕೆ. ಹರಿಪ್ರಸಾದ್ ಅಹಿಂದ ಬಲಪಡಿಸಲು ಏನು ಮಾಡುತ್ತಾರೆ? ಸಿದ್ದರಾಮಯ್ಯ ನಂತರ ಅಹಿಂದ ಸಂಘಟನೆಯನ್ನು ಮುನ್ನಡೆಸಲು ಮುಂದಡಿ ಇಟ್ಟು ಸದ್ಯ ತಟಸ್ಥವಾಗಿರುವ ಸತೀಶ್ ಜಾರಕಿಹೊಳಿ ನಡೆ ಏನು? ಮುಖ್ಯವಾಗಿ ಚುನಾವಣಾ ರಾಜಕೀಯದಿಂದ ದೂರ ಇದ್ದರೂ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವೆ ಎಂದಿರುವ ಸಿದ್ದರಾಮಯ್ಯ ನಿಲುವೇನು? ಇವರನ್ನು ಹೊರತುಪಡಿಸಿ ಅಹಿಂದ ಸಮುದಾಯಗಳ ಪೈಕಿ ಬೇರೆ ಯಾರಿಗೆ ಆಸಕ್ತಿ, ಕಾಳಜಿ, ಬದ್ಧತೆ ಇದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅದರಿಂದಾಗಿ ಅಹಿಂದ ಈಗ ಅತಂತ್ರ.
ವಿಪಕ್ಷ ನಾಯಕ ಯಾರು?
ಕಣ್ಣಿಗೆ ಕಾಣುವ ಪಾತ್ರಧಾರಿ ಆರ್. ಅಶೋಕ್ ಅಲ್ಲ, ಸೂತ್ರಧಾರ ಎಚ್.ಡಿ. ಕುಮಾರಸ್ವಾಮಿ ಅವರೇ ನಿಜವಾದ ಪ್ರತಿಪಕ್ಷದ ನಾಯಕ ಎನ್ನುತ್ತಾರೆ ಬಿಜೆಪಿಯವರು. ಇದೇ ರೀತಿ ಇನ್ನೊಂದು ಟ್ವಿಸ್ಟ್ ಇದೆ. ಬಹಳ ಜನ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ನಾಯಕರು ವಿಧಾನ ಮಂಡಲದ ಅಧಿವೇಶನದಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದುಕೊಂಡಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್‌ಗಿಂತ ಜಾಸ್ತಿ ರಾಜ್ಯ ಬಿಜೆಪಿ ನಾಯಕರನ್ನು ಅದರಲ್ಲೂ ಆರ್. ಅಶೋಕ್ ಅವರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವವರು ಎಚ್.ಡಿ ಕುಮಾರಸ್ವಾಮಿಯಂತೆ.
ಮುಖ್ಯಮಂತ್ರಿಯಾದ ಮೊದಲ ಅಧಿವೇಶನದಲ್ಲೇ ಡಿ.ಕೆ. ಶಿವಕುಮಾರ್ ಅವರಿಗೆ ಮುಜುಗರ ಆಗಬೇಕು. ಸುಗಮವಾಗಿ ಸದನ ನಡೆಸಲಿಲ್ಲ ಎಂಬ ಅಪಖ್ಯಾತಿಯಾಗಬೇಕು ಎಂದು ಅಶೋಕ್ ಅವರನ್ನು ಕುಮಾರಸ್ವಾಮಿ ಎತ್ತಿಕಟ್ಟಿದ್ದಾರೆ. ಸದನದ ವಿಷಯದಲ್ಲಿ ವಿಜಯೇಂದ್ರ ಮಾತು ನಡೆಯಲ್ಲ ಎಂದು ತೋರಿಸಲು ಅಶೋಕ್ ಕೂಡ ಕುಮಾರಸ್ವಾಮಿ ಹೇಳಿದಂತೆ ಕೇಳುತ್ತಿದ್ದಾರೆ ಎನ್ನುವ ಗುಸು ಗುಸು ಬಿಜೆಪಿ ನಾಯಕರ ನಡುವೆ ಕೇಳಿಬರುತ್ತಿದೆ.
ಕಳೆದ ಶುಕ್ರವಾರ ಪಕ್ಷದಿಂದ ಕಪ್ಪು ಟಿ ಶರ್ಟ್ ತೊಟ್ಟು ಸದನಕ್ಕೆ ಹೋಗಬೇಕು ಎಂದು ನಿರ್ಧರಿಸಲಾಯಿತು. ಆದರೆ ಬಹುತೇಕ ಶಾಸಕರಿಗೆ ಇಷ್ಟ ಇರಲಿಲ್ಲ. ಕಪ್ಪು ಬಣ್ಣದ ಬಟ್ಟೆ ತೊಟ್ಟು ಸದನದ ಒಳಗೆ ಹೋಗಲು ಪ್ರಯತ್ನಿಸಿದರೆ ಮಾರ್ಷಲ್ ಗಳು ತಡೆಯುತ್ತಾರೆ. ಬಲವಂತ ಮಾಡಿದರೆ ಎಳೆದಾಟವಾಗುತ್ತದೆ. ನಮ್ಮನ್ನು ಹೊರಗೆ ಹಾಕುತ್ತಾರೆ. ಇದೆಲ್ಲಾ ಏಕೆ ಬೇಕು? ಸರಕಾರ ನಾಗೇಂದ್ರ ರಾಜೀನಾಮೆ ಪಡೆಯುವುದಿಲ್ಲ ಎನ್ನುವುದು ಖಾತರಿಯಾಗಿರುವುದರಿಂದ ಬರದ ವಿಚಾರ ಚರ್ಚೆ ಮಾಡಿದರೆ ಒಳ್ಳೆಯದು. ಬರದ ವಿಚಾರ ಮಾಡದಿದ್ದರೆ ಜನ ನಮ್ಮ ಬಗ್ಗೆಯೂ ಬೇಸರ ಮಾಡಿ.ಕೆ.ೂಳ್ಳುತ್ತಾರೆ ಎನ್ನುವ ಅಭಿಪ್ರಾಯ ಶಾಸಕರದ್ದಾಗಿತ್ತು. ಆದರೆ ಅವರು ಯಾರಿಗೆ ಹೇಳಬೇಕು? ಎತ್ತು ಏರಿಗೆ ಎಳೆದರೆ, ಎಮ್ಮೆ ನೀರಿಗೆ ಎಳೆಯುತ್ತೆ ಎನ್ನುವಂತಾಗಿದೆ ರಾಜ್ಯ ಬಿಜೆಪಿ ಪರಿಸ್ಥಿತಿ. ಅಶೋಕ್ ಒಂದು ತೀರ, ವಿಜಯೇಂದ್ರ ಇನ್ನೊಂದು ತೀರ. ಶಾಸಕರ ಗೋಳು ಅಪಾರ.
ಆಫ್ ದಿ ರೆಕಾರ್ಡ್
ಕೆಲವರನ್ನು ಸಮಸ್ಯೆಗಳು ಹುಡುಕಿಕೊಂಡು ಬರುತ್ತವೆ. ಇನ್ನು ಕೆಲವರು ಸಮಸ್ಯೆಗಳನ್ನು ಹಡುಕಿಕೊಂಡು ಹೋಗಿ ಪೀಕಲಾಟಕ್ಕೆ ಸಿಲುಕುತ್ತಾರೆ. ಝಮೀರ್ ಅಹಮದ್ ಖಾನ್ ಎರಡನೇ ಪೈಕಿ. ಅವರು ಸಂಪುಟ ಸೇರುವುದೇ ಕಷ್ಟವಾಗಿತ್ತು. ಹೇಗೋ ಮಂತ್ರಿಯಾದರು. ಆದರೆ ಮಂತ್ರಿಯಾಗುತ್ತಿದ್ದಂತೆ ತಮ್ಮ ನಿಜವಾದ ವರಸೆ ತೋರಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೊಡಲಿಲ್ಲ ಎನ್ನುವ ಕೋಪಕ್ಕೆ ಸ್ವಾತಂತ್ರ್ಯ ದಿನಾಚರಣೆ ವೇಳೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹೋಗಲ್ಲ ಎಂದು ಪತ್ರ ಬರೆದರು. ಅವರೇ ಖುದ್ದಾಗಿ ಕೆರೆದು ಮಾಡಿಕೊಂಡಿರುವ ಗಾಯಕ್ಕೆ ಮುಲಾಮು ಸಿಗುವುದಿಲ್ಲ. ಪತ್ರ ಒಂದು ನೆಪ. ಸಿದ್ದರಾಮಯ್ಯ ಒತ್ತಡ ನಿಜವಾದ ಕಾರಣ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಇದು ಅವರ ಮಂತ್ರಿ ಸ್ಥಾನದ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕು.