ಹಾಗೆ ಮಾಡಿದ್ರೆ ಡಿಕೆಶಿಯೇ ನಿರಾಳರಾಗಿರುತ್ತಿದ್ದರು!
ಡಿ.ಕೆ. ಶಿವಕುಮಾರ್ ತಮ್ಮ ರಾಜಕೀಯ ವೈರಿಗಳ ಕುರಿತು More Strong More Enemies, Less Strong Less Enemies ಎನ್ನುವ ಮಾತು ಹೇಳುತ್ತಿರುತ್ತಾರೆ. ಆದರೀಗ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಪೂರ್ಣ ಪ್ರಮಾಣದ ಸಂಪುಟ ರಚಿಸಿಕೊಳ್ಳಲು ಎರಡು ತಿಂಗಳು ಬೇಕಾಯಿತು. ಎರಡನೇ ಹಂತದಲ್ಲಿ ಮಂತ್ರಿಯಾದವರಿಗೆ ಖಾತೆ ಹಂಚಲು ವಾರವಾದರೂ ಸಾಧ್ಯವಾಗಿಲ್ಲ. ಸದ್ಯಕ್ಕೆ ‘ಯಾವುದೇ ಸಂದರ್ಭದಲ್ಲಿ ಆಗಬಹುದು’ ಎನ್ನುವ ಖಚಿತವಲ್ಲದ ಉತ್ತರಗಳು ಮಾತ್ರ ಸಿಗುತ್ತಿವೆ. ಸದ್ಯದ ಕಾಂಗ್ರೆಸ್ ಪರಿಸ್ಥಿತಿ More Intervene More Confusion ಎನ್ನುವಂತಾಗಿದೆ.
ತುಂಬಾ ಜನ ಕೈಹಾಕಿದರೆ, ಕೆಲಸ ಮಾಡುವವರಿಗಿಂತ ಹೇಳಿಕೊಡುವವರೇ ಜಾಸ್ತಿಯಾದರೆ ಯಾವ ಅಡುಗೆ ತಾನೇ ರುಚಿಯಾಗಿರಲು ಸಾಧ್ಯ? ಒಟ್ಟಿನಲ್ಲೀಗ ಅಡುಗೆ ಕೆಟ್ಟಿದೆ. ಇದಕ್ಕೆ ಹೈಕಮಾಂಡ್ ಹಾದಿಯಾಗಿ ಹಲವರು ಕಾರಣರಿರಬಹುದು. ಆದರೆ ರಾಜ್ಯದ ಜನಕ್ಕೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವವರು ಮಾತ್ರವೇ ಉತ್ತರದಾಯಿ.
ಸಂಪುಟ ವಿಸ್ತರಣೆ ಎಂಬ ಗಜಪ್ರಸವದ ಬಳಿಕ ಮೊದಲ ಗೊಂದಲ ಉಂಟಾಗಿದ್ದು ಪಟ್ಟಿಯಲ್ಲಿದ್ದ ಹಿಂದುಳಿದ ಮೊಗವೀರ ಜಾತಿಯ ಮಂಕಾಳ ವೈದ್ಯ ಅವರನ್ನು ತೆಗೆದುಹಾಕಿ ಪ್ರಬಲ ಲಿಂಗಾಯತ (ಸಾದರ) ಸಮುದಾಯದ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಸೇರಿಸಿದಾಗ. ಲಿಂಗಾಯತರ ಪೈಕಿಯೇ ಒಬ್ಬರನ್ನು ಕೈಬಿಟ್ಟು ಇನ್ನೊಬ್ಬರಿಗೆ ಅವಕಾಶ ಕೊಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆ ನಂತರವೂ ಆರು ಮಂದಿ ಲಿಂಗಾಯತ ಸಚಿವರು ಸಂಪುಟದಲ್ಲಿ ಉಳಿದುಕೊಳುತ್ತಿದ್ದರು. ಅದರಿಂದಾಗಿ ಲಿಂಗಾಯತರಿಗೆ ಅನ್ಯಾಯವಾಯಿತು ಎನ್ನುವ ಪ್ರಮೇಯ ಉದ್ಭವಿಸುತ್ತಿರಲಿಲ್ಲ.
ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯ ಎರಡೂವರೆ ವರ್ಷದವರೆಗೆ ಕುರುಬ ಜಾತಿಯವರನ್ನು ಮಂತ್ರಿ ಮಾಡಿರಲಿಲ್ಲ. ಸಮುದಾಯದ ಒತ್ತಡ ಹೆಚ್ಚಾದಾಗ ‘ಕುರುಬರ ಪೈಕಿ ನಾನು ಮುಖ್ಯಮಂತ್ರಿಯಾಗಿರುವಾಗ ಮಂತ್ರಿಗಳು ಏಕೆ ಬೇಕು?’ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಈಗ ಡಿ.ಕೆ. ಶಿವಕುಮಾರ್ ಒಕ್ಕಲಿಗ ಜಾತಿಯ ನಾನೇ ಮುಖ್ಯಮಂತ್ರಿ ಇರುವಾಗ ‘ಐವರು ಸಚಿವರು ಏಕೆ ಬೇಕು?’ ಎಂದು ಒಬ್ಬಿಬ್ಬರನ್ನು ಕೈಬಿಟ್ಟು ಬೇರೆಯವರಿಗೆ ಅವಕಾಶ ಕೊಡಬಹುದಿತ್ತು. ಹಾಗೆ ಮಾಡಿದ್ದರೆ ಡಿ.ಕೆ. ಶಿವಕುಮಾರ್ ಅವರೇ ಹೆಚ್ಚು ನಿರಾಳರಾಗಿರುತ್ತಿದ್ದರು. ಏಕೆಂದರೆ ಈಗ ಹೆಚ್ಚು ಸಮಸ್ಯೆ ಎದುರಿಸುತ್ತಿರುವವರು ಕೂಡ ಅವರೇ ಆಗಿದ್ದಾರೆ. ಕಡೆಯ ಪಕ್ಷ ಸಾಮಾಜಿಕ ನ್ಯಾಯವನ್ನು ಗುತ್ತಿಗೆ ಪಡೆದಂತೆ ಮಾತನಾಡುವ ಕಾಂಗ್ರೆಸ್ ಪಕ್ಷವಾದರೂ ಮುಖ್ಯಮಂತ್ರಿಗಳಿಗೆ ಅಂಥದೊಂದು ಸೂಚನೆಯನ್ನು ನೀಡಬಹುದಿತ್ತು.
ಒಂದೊಮ್ಮೆ ಮುಂದುವರಿದ ಲಿಂಗಾಯತ ಅಥವಾ ಒಕ್ಕಲಿಗ ನಾಯಕನೊಬ್ಬನ ಹೆಸರನ್ನು ತೆಗೆದು ಆ ಸ್ಥಾನವನ್ನು ಹಿಂದುಳಿದ ಜಾತಿಗೆ ಕೊಟ್ಟಿದ್ದರೆ ಆಗ ಏನಾಗುತ್ತಿತ್ತು? ‘ಏನೋ’ ಆಗುತ್ತಿತ್ತು. ಏಕೆಂದರೆ ಅವರು ಮುಂದುವರಿದವರು. ಬಲಾಢ್ಯರು. ಅವರ ಪರ ಕೇಳಲು ಸ್ವಾಮೀಜಿಗಳಿದ್ದಾರೆ, ವಕಾಲತ್ತು ವಹಿಸಲು ಹಲವು ಬಗೆಯ ವಕೀಲರಿದ್ದಾರೆ. ಅಗತ್ಯಬಿದ್ದರೆ ಉದ್ಯಮಿಗಳೂ ಅಖಾಡಕ್ಕೆ ಇಳಿಯುತ್ತಾರೆ. ಹಿಂದುಳಿದವರ ಪರ ಮೆಲ್ಲಗೆ ಮನವಿ ಮಾಡುವುದಕ್ಕೂ ಯಾರೂ ಗತಿ ಇಲ್ಲ.
ಪಟ್ಟಿಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಹೆಸರು ಕಣ್ತಪ್ಪಿನಿಂದ ಬಿಟ್ಟು ಹೋಗಿರಲಿಲ್ಲ. ಎರಡು ವಾರಗಳ ಹಿಂದೆ ಇದೇ ಅಂಕಣದಲ್ಲಿ ದಾವಣಗೆರೆ ಉಪ ಚುನಾವಣೆ ಗೊಂದಲಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕೋಳಿ-ಕುರಿಗಳನ್ನು ಬಲಿ ಪಡೆಯಲಾಗಿದೆ, ಈಗ ಹುಲಿ-ಸಿಂಹಗಳ ತಲೆ ಉರುಳಬಹುದು, ಕಡೆಗಳಿಗೆಯ ‘ಕಸರತ್ತು’ ನಡೆದರೆ ಮಾತ್ರ ಅವು ಬದುಕುಳಿಯಬಹುದು ಎಂದು ಬರೆಯಲಾಗಿತ್ತು. ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಝಮೀರ್ ಅಹಮದ್ ಖಾನ್ ಎಂಬ ಹುಲಿ-ಸಿಂಹಗಳು ಕಡೆಗಳಿಗೆಯ ಕಸರತ್ತಿನ ಮೂಲಕವೇ ಸಂಪುಟ ಸೇರಿವೆ. ಕೋಳಿ-ಕುರಿಗಳ ಬಲಿ ನಡೆಯುತ್ತಲೇ ಇರುತ್ತದೆ.
ಅದಕ್ಕೆ ಇನ್ನೊಂದು ಉದಾಹರಣೆ ಸಂಪುಟದಲ್ಲಿ ಮಹಿಳೆಗೆ ಸ್ಥಾನ ಕೊಡಿಸಬೇಕು, ಎಂ. ಕೃಷ್ಣಪ್ಪ ಅಥವಾ ಅವರ ಪುತ್ರ ಪ್ರಿಯಾ ಕೃಷ್ಣಗೆ ಅವಕಾಶ ಕೊಡಬೇಕು ಎನ್ನುವ ಕಾರಣಕ್ಕೆ ಪರಿಶಿಷ್ಟ ಪಂಗಡದ
ಬಿ. ನಾಗೇಂದ್ರ ಅಥವಾ ಮುಸ್ಲಿಮರ ಪೈಕಿ ಯಾರನ್ನಾದರೂ ಒಬ್ಬರನ್ನು ರಾಜೀನಾಮೆ ಕೊಡಿಸಲಾಗುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ. ಹಾಗಾದರೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಪರ ಗಟ್ಟಿಯಾಗಿ ನಿಂತಿರುವ ಅಹಿಂದ ವರ್ಗವೇ ಗುರಿಯಾದಂತಾಗುತ್ತದೆ.
ಯಾರನ್ನೇ ತೆಗೆದರೂ ಅವರದೇ ಸಮುದಾಯದ ಇನ್ನೊಬ್ಬರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಸಮರ್ಥಿಸಿಕೊಳ್ಳಬಹುದು. ಪ್ರಶ್ನೆ ಅದಲ್ಲ; ಯಾವುದೇ ಜಾತಿಯ ಮುಖ್ಯಮಂತ್ರಿ ಇರಲಿ, ಆ ಸಮುದಾಯಕ್ಕೆ ಕಡಿಮೆ ಪ್ರಾತಿನಿಧ್ಯ ಕೊಟ್ಟರೆ ಸಾಲದೇ? ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅಗ್ರಪಾಲು ಹೊಂದಿರುವ ಸಮುದಾಯಗಳು ಸಂಪುಟದಲ್ಲೂ ಪ್ರಾಬಲ್ಯ ಸಾಧಿಸುವುದು ನ್ಯಾಯವೇ-ಸಾಮಾಜಿಕ ನ್ಯಾಯವೇ? ಎನ್ನುವುದು.
ಒಂದೇ ವಾರಕ್ಕೆ ಅಪ್ಪ-ಮಕ್ಕಳು ಮಾಜಿ!
ಪ್ರಬಲ ಸಮುದಾಯದವರನ್ನು ಕೈಬಿಡಬೇಕು ಎನ್ನುವ ಕಾರಣಕ್ಕೆ ಮಾಗಡಿಯ ಬಾಲಕೃಷ್ಣ ಅಂಥವರನ್ನು ಮಾಜಿ ಮಾಡುವುದು ಸಮಯೋಚಿತ ಎನಿಸದು. ಐದು ಬಾರಿ ಗೆದ್ದಿರುವ ಎಚ್.ಸಿ. ಬಾಲಕೃಷ್ಣ ಅವರ ತಂದೆ ಎಚ್.ಜಿ. ಚನ್ನಪ್ಪ ಕೂಡ ಮಾಜಿ ಸಚಿವರು. ಮೂರು ಬಾರಿ ಗೆದ್ದಿದ್ದ ಅವರು
ಎಸ್.ಆರ್ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ ಅದು ಎಳೇ ದಿನ. ಈಗ ಹರಡುತ್ತಿರುವ ದಟ್ಟ ವದಂತಿಗಳಂತೆ ಬಾಲಕೃಷ್ಣ ರಾಜೀನಾಮೆ ನೀಡಿದರೆ ಅವರು ಕೂಡ ತಂದೆಯ ರೀತಿ ಒಂದು ವಾರಕ್ಕಷ್ಟೇ ಮಂತ್ರಿಯಾದಂತಾಗುತ್ತದೆ.
ಬ್ರಾಹ್ಮಣರಿಗೆ ಅನ್ಯಾಯವಾಯಿತೇ?
ಇದೇ ವೇಳೆ ಬ್ರಾಹ್ಮಣರಿಗೆ ಸಂಪುಟದಲ್ಲಿ ಅನ್ಯಾಯವಾಗಿದೆ ಎಂದು ಕೆಲವರು ಕಣ್ಣೀರು ಸುರಿಸುತ್ತಿದ್ದಾರೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಮಾಧ್ಯಮದಲ್ಲಿ ಬ್ರಾಹ್ಮಣರ ಪ್ರಭಾವ ದಟ್ಟವಾಗಿದೆ. ಸಂಪುಟದಲ್ಲಿ ಮಂತ್ರಿ ಸ್ಥಾನ ಇಲ್ಲದ ಮಾತ್ರಕ್ಕೆ ಅವರ ಹಿತಾಸಕ್ತಿಗಳಿಗೆ ಏನೇನೂ ಧಕ್ಕೆ ಆಗುವುದಿಲ್ಲ. ಅಧಿಕಾರ ಬೇಕಿರುವುದು ಅಬಲರಿಗೆ; ಈಗಾಗಲೇ ಬಲಿತಿರುವ, ಎಲ್ಲೆಡೆ ಬೇರೂರಿರುವ ಬ್ರಾಹ್ಮಣರಿಗಲ್ಲ ಎನ್ನುವುದು ಕನಿಷ್ಠ ಪ್ರಜ್ಞೆ.
ತಿರುಗುಬಾಣವಾದ ‘ಕೊಟ್ಟ ಮಾತು’!
ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿ ಎಂದು ಹೈಕಮಾಂಡ್ ಎದುರು ಪಟ್ಟು ಹಾಕಿ ಪಟ್ಟ ಗಿಟ್ಟಿಸಿಕೊಂಡ ಡಿಕೆ ಶಿವಕುಮಾರ್ ಅವರಿಗೆ ಈಗ ಅದೇ ‘ಕೊಟ್ಟ ಮಾತು’ ತಿರುಗುಬಾಣವಾಗಿದೆ. ಮಂತ್ರಿ ಆಗಲೇಬೇಕು ಎಂದು ಸಿಡಿದೆದ್ದಿರುವ ಎಂ. ಕೃಷ್ಣಪ್ಪ, ಟಿ.ಬಿ. ಜಯಚಂದ್ರ ಅವರು ಡಿ.ಕೆ. ಶಿವಕುಮಾರ್ ಎದುರು ‘ಕೊಟ್ಟ ಮಾತಿನಂತೆ ನಡೆದುಕೊಳ್ಳಿ’ ಎನ್ನುವ ದಾಳವನ್ನೇ ಉರುಳಿಸುತ್ತಿದ್ದಾರೆ. ಲಕ್ಷ್ಮಣ ಸವದಿ ವಿಷಯದಲ್ಲಿ ಮಾತು ಉಳಿಸಿಕೊಳ್ಳುವುದಾದರೆ ನಮ್ಮ ವಿಷಯದಲ್ಲಿ ಏಕಿಲ್ಲ? ಎಂದು ಪ್ರಶ್ನಿಸುತ್ತಿದ್ದಾರೆ. ಪ್ರಶ್ನೆ ಮಾಡಿ ಉತ್ತರವನ್ನು ಮಾತ್ರ ನಿರೀಕ್ಷಿಸುತ್ತಿಲ್ಲ. ಫಲಿತಾಂಶವೇ ಬೇಕು ಎಂದು ಹಠ ಹಿಡಿದಿದ್ದಾರೆ. ಡಿ.ಕೆ. ಶಿವಕುಮಾರ್ ಅನಿವಾರ್ಯವಾಗಿ ದಿಲ್ಲಿ ನಾಯಕರ ಕಡೆ ನೋಡುತ್ತಿದ್ದಾರೆ. ಆದರೆ ದಿಲ್ಲಿ ನಾಯಕರು ಕರ್ನಾಟಕದ ಕಡೆ ನೋಡಬೇಕಲ್ಲಾ? ಅದಕ್ಕೆ ಇನ್ನೆಷ್ಟು ಸಮಯ ತೆಗೆದುಕೊಳ್ಳುತ್ತಾರೋ?
ಸಮಯ ಬಹಳ ಮುಖ್ಯ
ಸಂಪುಟ ವಿಸ್ತರಣೆ ಕಸರತ್ತು ಎರಡು ತಿಂಗಳು ನಡೆದಿತ್ತು. ಗಾಯತ್ರಿ ಶಾಂತೇಗೌಡ ಕಾನೂನು ಹೋರಾಟದಲ್ಲಿ ಜಯಿಸಿ ಸಂಪುಟ ಸೇರಲು ಅರ್ಹರಾಗಿದ್ದೇ ಸಂಪುಟ ವಿಸ್ತರಣೆಗೆ ಎರಡು ದಿನವಿರುವಾಗ. ಎರಡು ದಿನಗಳ ಹಿಂದಷ್ಟೇ ಅರ್ಹರಾದ ಅವರ ಹೆಸರು ಸೇರ್ಪಡೆಯಾಗಿದೆ ಎಂದರೆ ಅಲ್ಲಿವರೆಗೂ ಬೇರೆ ಯಾವ ಮಹಿಳೆ ಹೆಸರನ್ನು ಪರಿಗಣಿಸಿರಲಿಲ್ಲವೇ? ಪರಿಗಣಿಸಿದ್ದರೆ ಆ ಮಹಿಳೆ ಯಾರು? ಅವರ ಹೆಸರು ಗಾಯತ್ರಿ ಶಾಂತೇಗೌಡ ಹೆಸರು ಬದಿಗೆ ಸರಿಯುತ್ತಿದ್ದಂತೆ ಮುನ್ನೆಲೆಗೆ ಬರಬೇಕಿತ್ತು. ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದ ಅಸೂಕ್ಷ್ಮತೆಗೆ ಉದಾಹರಣೆ. ಯಾವ ಸಂದರ್ಭದಲ್ಲೂ ಮಹಿಳೆಯರನ್ನು ಕಡೆಗಣಿಸಬಾರದು. ಅವರಿಗೆ ಅವಕಾಶಗಳನ್ನು ಕೊಡುತ್ತಿರುವುದೇ ಕಡಿಮೆ. ಆ ಕಡಿಮೆ ಅವಕಾಶಗಳನ್ನಾದರೂ ನಿರ್ಲಕ್ಷಿಸಬಾರದು. ಕಡೆಯ ಪಕ್ಷ ಮಹಿಳಾ ಮೀಸಲಾತಿ ಬಗ್ಗೆ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಾದರೂ ಹಾಗೆ ಮಾಡಬಾರದು. ಆದರಿದು ಕಾಂಗ್ರೆಸಿಗೆ ಅರ್ಥವಾಗುವುದಿಲ್ಲ.
ಅಡಗಿ ಕೂತಿರುವ ಅತೃಪ್ತಿ
ಸಂಪುಟ ವಿಸ್ತರಣೆ ಬಳಿಕ ದುತ್ತನೆ ಹೊತ್ತಿಕೊಂಡಿದ್ದ ಬೆಂಕಿ ಆರಿದಂತೆ ಕಾಣುತ್ತಿದೆ. ಆದರೆ ಬೂದಿ ಮುಚ್ಚಿದ ಕೆಂಡದಂತೆ ಅತೃಪ್ತಿ ಒಳಗೊಳಗೆ ಅಡಗಿ ಕುಳಿತಿದೆ. ರಾಮಲಿಂಗಾರೆಡ್ಡಿ, ಕೆ.ಎಚ್. ಮುನಿಯಪ್ಪ ಅವರ ಖಾತೆ ಬದಲಾವಣೆಯ ಬೇಡಿಕೆ ನಿಂತಿಲ್ಲ. ಹಾಗೆಯೇ ಸಂಪುಟ ವಿಸ್ತರಣೆ ವೇಳೆ ಸರಿದೂಗಿಸಲಾಗುವುದು ಎನ್ನುವ ಭರವಸೆಯೊಂದಿಗೆ ಸುಮ್ಮನಾಗಿದ್ದ ಕೃಷ್ಣ ಬೈರೇಗೌಡ ಈಗ ಬಿಡಿಎ ಮತ್ತು ಬಿಎಂಆರ್‌ಡಿಎ ಜವಾಬ್ದಾರಿಗಳನ್ನು ಕೇಳುತ್ತಿದ್ದಾರೆ. ಜೊತೆಗೆ ಡಾ. ಜಿ. ಪರಮೇಶ್ವರ್ ಅವರಿಗೆ ಜನಸಾಮಾನ್ಯರ ಕೆಲಸ ಮಾಡಬಹುದಾದ ಕಂದಾಯ ಇಲಾಖೆ ಬೇಡವಾಗಿದೆ. ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಬಹುದಾದ ಕೈಗಾರಿಕೆ ಖಾತೆ ಬೇಕಾಗಿದೆ. ಯಾರ ಅಸಮಾಧಾನ, ಯಾವ ಸಂದರ್ಭದಲ್ಲಿ, ಯಾವ ರೀತಿ ಹೊರಬರುತ್ತದೋ ಗೊತ್ತಿಲ್ಲ.
22ದಿನ ದಿಲ್ಲಿಯಲ್ಲೇ ಠಿಕಾಣಿ!
ಮಂತ್ರಿ ಸ್ಥಾನಕ್ಕೆ ಹಲವರು ಹಲವು ಬಗೆಯ ಲಾಬಿ ಮಾಡಿದ್ದಾರೆ. ಮೂರೇ ದಿನಕ್ಕಾಗುವಷ್ಟು ಬಟ್ಟೆ ತೆಗೆದುಕೊಂಡು ದಿಲ್ಲಿಗೆ ಹೋಗಿದ್ದವರು ಅಲ್ಲಿ ಬಟ್ಟೆ ಇಲ್ಲದೆ ಪರದಾಡಿದ್ದಾರೆ. ಆದರೆ ಮಂತ್ರಿಯಾಗದೆ ಬೆಂಗಳೂರಿಗೆ ವಾಪಸ್ ಹೋಗಲ್ಲ ಎಂದು ಶಪಥ ಗೈದವರಂತೆ ದಿಲ್ಲಿಯಲ್ಲೇ ಠಿಕಾಣಿ ಹೂಡಿದ್ದವರು ವಿಜಯಾನಂದ ಕಾಶಪ್ಪನವರ್. ಅವರು ಬರೋಬ್ಬರಿ 22 ದಿನ ದಿಲ್ಲಿಯಲ್ಲೇ ಇದ್ದರು. ಪ್ರಾರ್ಥನೆಯೋ, ಪ್ರಯತ್ನವೋ ಕಡೆಗವರು ಮಂತ್ರಿಯಾಗಿದ್ದಾರೆ.
ಆಫ್ ದಿ ರೆಕಾರ್ಡ್!
ಸಂಪುಟ ವಿಸ್ತರಣೆ ವಿಳಂಬವಾಗಿದ್ದರಿಂದ ಹಲವಾರು ಗೊಂದಲಗಳು ಹುಟ್ಟಿಕೊಂಡಿವೆ. ಜೊತೆಗೀಗ ಖಾತೆ ಹಂಚಿಕೆ ತಡವಾಗುತ್ತಿರುವುದು ಇನ್ನೊಂದಷ್ಟು ಗೊಂದಲಗಳ ಹುಟ್ಟಿಗೆ ಕಾರಣವಾಗುತ್ತಿದೆ. ಡಾ. ಯತೀಂದ್ರ ಸಿದ್ದರಾಮಯ್ಯ ಆರೋಗ್ಯ ಅಥವಾ ವೈದ್ಯಕೀಯ ಖಾತೆಗೆ ಬದಲಾಗಬಹುದು, ಯು.ಟಿ. ಖಾದರ್ ನಗರಾಭಿವೃದ್ಧಿ ಖಾತೆಗೆ ಮಂತ್ರಿಯಾಗಬಹುದು, ರಾಮಲಿಂಗಾರೆಡ್ಡಿ ಒತ್ತಡಕ್ಕೆ ಮಣಿದರೆ ಚಲುವರಾಯಸ್ವಾಮಿ ಜಲಸಂಪನ್ಮೂಲ ಖಾತೆ ವಹಿಸಿಕೊಳ್ಳಬೇಕಾಗಬಹುದು ಎನ್ನುವ ವದಂತಿಗಳು ಹರಿದಾಡುತ್ತಿವೆ. ಖಚಿತ ಮಾಹಿತಿಗಳನ್ನು ನೀಡದಿದ್ದರೆ ವದಂತಿಗಳು ಉಚಿತ. ಅದು ಕೂಡ ಕಾಂಗ್ರೆಸ್ ಪಕ್ಷಕ್ಕೆ ಅರ್ಥವಾಗುವುದಿಲ್ಲ.