×
Ad

ವಲಸೆಗೂ, ವಲಸಿಗರಿಗೂ ಬಾದರಾಯಣ ಸಂಬಂಧ

Update: 2025-11-22 10:06 IST

ಭಾರತ ಸರಕಾರವು ಈ ಬಾರಿಯ ವಲಸೆ ಸಮೀಕ್ಷೆಯಲ್ಲಾದರೂ ಈ ಅಸಂಘಟಿತ ಕ್ಷೇತ್ರದ ಸಮಗ್ರ ಮತ್ತು ಸಕಾಲಿಕ ಡೇಟಾಗಳನ್ನು ಸಂಗ್ರಹಿಸಬೇಕು ಮತ್ತು ಅವುಗಳ ಪ್ರಸ್ತುತತೆ ಕಳೆದುಹೋಗುವ ಮುನ್ನವೇ ನೀತಿ ನಿರೂಪಕರಿಗೆ ಸಮೀಕ್ಷೆಯ ಫಲಿತಾಂಶಗಳು ಸಿಗುವಂತೆ ಯೋಜಿಸಬೇಕು.

80ರ ದಶಕದ ಉತ್ತರಾರ್ಧದ ಹೊತ್ತಿಗೆ, ಕರಾವಳಿಯಲ್ಲಿ ಅಂದಿನ ನವೋದ್ಯಮದ ಮಾದರಿ ಯೋಜನೆ ಅನ್ನಿಸಿಕೊಂಡಿದ್ದ ನವಮಂಗಳೂರು ಬಂದರಿನ ಸಮೀಪ ಒಂದೆರಡು ಕಡೆ ಹೆದ್ದಾರಿಯಲ್ಲಿ ನಿರ್ದಿಷ್ಟ ಬಸ್ ಇಳಿದಾಣಗಳಿದ್ದವು. ಸಿಟಿಬಸ್‌ಗಳು ಅಲ್ಲಿಗೆ ತಲುಪಿದಾಗಲೆಲ್ಲ ಬಸ್ ನೌಕರರು ಒಂದು ವ್ಯಂಗ್ಯ ನಗುವಿನೊಂದಿಗೆ ‘ಚಪಾತಿ ನಗರ’ ಎಂದು ಮತ್ತೆ ಮತ್ತೆ ಕೂಗಿಕೊಳ್ಳುತ್ತಿದ್ದರು. ಇದಕ್ಕೆ ಅಂದಿನ ಮಾಧ್ಯಮಗಳ ಉಪ್ಪು-ಖಾರ ಬೇರೆ! ತಾತ್ಕಾಲಿಕ ಡೇರೆಗಳು ತುಂಬಿದ್ದ ಆ ಪ್ರದೇಶಗಳೆಲ್ಲ ಸಂಜೆ ಹೊತ್ತಿನಲ್ಲಿ ರೊಟ್ಟಿ ತಟ್ಟುವ ಸದ್ದಿನಿಂದ ಮಾರ್ದನಿಸುತ್ತಿದ್ದವು. ಉತ್ತರ ಕರ್ನಾಟಕದ ವಲಸೆ ಕಾರ್ಮಿಕರ ಡೇರೆಗಳವು. ಅದಾಗಿ 40 ವರ್ಷಗಳು ಕಳೆದಿವೆ. ಆ ವಲಸಿಗರೀಗ ಕರಾವಳಿಯ ಭಾಗವೇ ಆಗಿ ಸೇರಿಹೋಗಿದ್ದಾರೆ. ಅಂದಿನ ‘ಚಪಾತಿ ನಗರ’ ವ್ಯಂಗ್ಯ ಎಷ್ಟು ಅಸೂಕ್ಷ್ಮ ಸ್ವರೂಪದ್ದೆಂಬುದನ್ನು ಕರಾವಳಿ ಸೇರಿದಂತೆ ದೇಶಕ್ಕೆ ಸ್ವತಃ ಅಮೆರಿಕದ ಅಧ್ಯಕ್ಷ ಟ್ರಂಪ್ ಈಗ ಅರ್ಥ ಮಾಡಿಸತೊಡಗಿದ್ದಾರೆ.

ಈಗೀಗ ಕರಾವಳಿಯಲ್ಲಿ ಎಲ್ಲಿ ಕೇಳಿದರೂ ರಾಜಸ್ಥಾನದ ಮರಗೆಲಸದವರು, ಬಂಗಾಳದ ಟೈಲ್ಸ್ ಕೆಲಸದವರು, ಬಿಹಾರ, ಜಾರ್ಖಂಡ್, ಯುಪಿಯ ಕಟ್ಟಡ ಕಾರ್ಮಿಕರು, ಕ್ಷೌರಿಕರು, ಮತ್ತಿತರ ಕುಶಲ-ಅರೆಕುಶಲಕರ್ಮಿಗಳು, ಈಶಾನ್ಯ ರಾಜ್ಯಗಳ ಹೊಟೇಲು-ಬಾರ್ ಕೆಲಸಗಾರರು ಹೀಗೆ ಸ್ಥಳೀಯ ದುಡಿಮೆಗೆ ವಲಸಿಗರದೇ ಹಿಂಡು. 40 ವರ್ಷಗಳ ಹಿಂದೆ ಬಂದಿದ್ದ ಉತ್ತರ ಕರ್ನಾಟಕದ ಹಲವರು ಇಲ್ಲೀಗ ಭೂಮಾಲಕರೂ, ಉದ್ಯೋಗಪತಿಗಳೂ ಹೌದು.

ಅಂದಹಾಗೆ, ಇಲ್ಲಿದ್ದ ಕರಾವಳಿ ಮೂಲದ ಹೊಸ ತಲೆಮಾರಿನವರೆಲ್ಲ ಇಲ್ಲಿಂದ ವಲಸೆ ತೆರಳುತ್ತಿದ್ದಾರೆ. ಅವರ ಪೈಕಿ ಅತಿ ಕಲಿತು ಟೆಕ್ಕಿಗಳಾದವರು ಅಮೆರಿಕ, ಯುರೋಪಿಗೆ; ಮಧ್ಯಮ ಕಲಿತವರು ಮಧ್ಯ ಪ್ರಾಚ್ಯದ ಅಮೀರಾತಿಗೆ; ಕಡಿಮೆ ಕಲಿತವರು ಮುಂಬೈಗೆ, ಬೆಂಗಳೂರಿಗೆ, ಹೈದರಾಬಾದಿಗೆ ವಲಸೆ ಹೋಗಿದ್ದಾರೆ. ಸದ್ಯಕ್ಕೆ ಊರಲ್ಲಿ ಬಾಕಿ ಉಳಿದಿರುವವರೆಂದರೆ ವೃದ್ಧ ತಂದೆ-ತಾಯಂದಿರು ಮತ್ತು ಇಲ್ಲಿನ ಕುಟುಂಬಗಳ ಅವಶ್ಯಕತೆಗಳನ್ನು ಪೂರೈಸುತ್ತಾ ಇಲ್ಲಿಗೆ ಬಂದು ನೆಲೆಸಿರುವ ವಲಸಿಗರು.

ಐದು ವರ್ಷಗಳ ಹಿಂದೆ ಕೋವಿಡ್ ಬರುವ ತನಕ ಇದೆಲ್ಲ ದೊಡ್ಡ ಸಂಗತಿ ಆಗಿರಲಿಲ್ಲ. ಆದರೆ ಕೋವಿಡ್ ಬೆನ್ನಲ್ಲೇ ಬಂದ ಲಾಕ್‌ಡೌನ್ ಈ ವಲಸೆಯ ಆರ್ಥಿಕ-ಸಾಮಾಜಿಕ ಸಂಕಟಗಳ ವಿಶ್ವರೂಪವನ್ನು ತೆರೆದಿಟ್ಟಿತು. ಸಾಮಾಜಿಕವಾಗಿ ಮೊದಲ ಬಾರಿಗೆ ವಲಸೆ ಎಂಬುದು ಹೊರೆ ಅನ್ನಿಸತೊಡಗಿದ್ದು ಕೋವಿಡ್ ಬಳಿಕವೇ. ಇವೆಲ್ಲ ಬೆಳವಣಿಗೆಗಳು ಫೆಡರಲ್ ವ್ಯವಸ್ಥೆಯೊಂದರಲ್ಲಿ ನೀತ್ಯಾತ್ಮಕ ಬದಲಾವಣೆಗಳಿಗೆ ಕಾರಣ ಆಗುವ ಬದಲು, ದೇಶದ ಜನರ ನಡುವೆ ಭಾಷೆ, ಸಂಸ್ಕೃತಿ, ಭೌಗೋಳಿಕ ಆತಂಕಗಳಿಗೆ, ಹೊರಗಿನವರು-ಒಳಗಿನವರು ಎಂಬ ಸಂಘರ್ಷಕ್ಕೆ ಕಾರಣ ಆಗತೊಡಗಿದ್ದು ಅಧ್ಯಯನ ಯೋಗ್ಯ. ವಲಸಿಗರೆಂದರೆ ನಮ್ಮ ಅವಕಾಶಗಳನ್ನು ಕಸಿದುಕೊಳ್ಳಲು ಬಂದವರು, ಇಲ್ಲಿನ ಕೆಡುಕುಗಳಿಗೆಲ್ಲ ಅವರೇ ಕಾರಣ ಎಂಬ ನರೇಟಿವ್‌ಗಳು ಈಗೀಗ ಬಲಗೊಳ್ಳತೊಡಗಿವೆ. ಸದ್ಯಕ್ಕೆ ದೇಶದಲ್ಲಿ ಢಾಳಾಗಿ ಎದ್ದು ಕಾಣುತ್ತಿರುವ ವಲಸೆ ವಿನ್ಯಾಸ ಎಂದರೆ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಪ. ಬಂಗಾಲ, ಒಡಿಶಾಗಳಿಂದ ತಮಿಳುನಾಡು, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಕೇರಳ ಕಡೆ ಉದ್ಯೋಗ, ಅವಕಾಶಗಳನ್ನು ಅರಸಿಕೊಂಡು ಹರಿದುಬರುತ್ತಿರುವ ಜನಸಾಗರ.

ಚಲನಶೀಲತೆ ಮಾನವ ಬದುಕಿನ ಅವಿಚ್ಛಿನ್ನ ಅಂಗ. ಇದೇನೂ ಹೊಸದಲ್ಲ; ಅನಾದಿಯಿಂದ ಇರುವಂತಹದೇ. ಆದರೆ ವಲಸೆಗೂ ವಲಸಿಗರಿಗೂ ಬಾದರಾಯಣ ಸಂಬಂಧ. ನಗರೀಕರಣ, ಕೃಷಿ ಸಂಕಟಗಳು, ಪರಿಸರ ಸಂಬಂಧಿ ಸಂಗತಿಗಳು, ಉದ್ಯೋಗಾವಕಾಶಗಳಲ್ಲಿ ಆಗಿರುವ ಉದಾರೀಕರಣೋತ್ತರ ಬದಲಾವಣೆಗಳು... ಹೀಗೆ ಹತ್ತಾರು ಕಾರಣಗಳಿಗೆ ವಲಸೆ ಸಂಭವಿಸುತ್ತದೆ. ಸಾಮಾನ್ಯವಾಗಿ, ಒಬ್ಬ ವಲಸಿಗ ಈ ವಲಸೆಯ ತತ್ವ, ಸಿದ್ಧಾಂತ, ಸಂಭಾವ್ಯತೆಗಳನ್ನೆಲ್ಲ ಓದಿ, ತಿಳಿದು ಹೊರಡುವವನಲ್ಲ. ಅವನದು ಕೇವಲ ಬದುಕು ಕಟ್ಟಿಕೊಳ್ಳುವ ಹೋರಾಟ.

ವಲಸೆಯ ಕುರಿತು ಸರಕಾರಿ ಸಮೀಕ್ಷೆ ಅಧ್ಯಯನಗಳು ಭಾರತದಲ್ಲಿ 1955ರಿಂದಲೇ ನಡೆಯುತ್ತಿವೆ. ಆದರೆ, ಉದಾರೀಕರಣದ ಬಳಿಕ ವಲಸೆಯ ವೇಗ ಎಷ್ಟು ಹೆಚ್ಚಿದೆ ಎಂದರೆ, ಪ್ರತೀ ಬಾರಿ ಈ ಸರಕಾರಿ ಅಧ್ಯಯನಗಳು ನಡೆದು, ಡೇಟಾ ಹೊರಬರುವ ಹೊತ್ತಿಗೆ ಇಡಿಯ ದೃಶ್ಯವೇ ಬದಲಾಗಿರುತ್ತದೆ. ಈವತ್ತಿನ ವಲಸೆಯ ಪ್ರಮಾಣದ ಸಣ್ಣದೊಂದು ಚಿತ್ರಣ ಬೇಕೆಂದರೆ, 2011ರಲ್ಲಿ 45 ಕೋಟಿ ಜನ ದೇಶದ ಒಳಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗಿದ್ದರೆ, ಈ ಪ್ರಮಾಣ 2025ರ ಹೊತ್ತಿಗೆ 60 ಕೋಟಿಗೆ ಏರಿದೆ. ಇದು ಬಹುತೇಕ ದೇಶದ ಒಟ್ಟು ಜನಸಂಖ್ಯೆಯ ಶೇ. 40. ಹೀಗೆ ವಲಸೆ ಹೋಗುತ್ತಿರುವವರಲ್ಲಿ ಅಸಂಘಟಿತ ಕಾರ್ಮಿಕರ ಪ್ರಮಾಣ ಅಂದಾಜು 20 ಕೋಟಿ.

ಈ ಬಾರಿ, ಜುಲೈ 2026ರಿಂದ ಜೂನ್ 2027ರ ನಡುವೆ ಒಂದು ವರ್ಷಕಾಲ ಭಾರತ ಸರಕಾರದ ರಾಷ್ಟ್ರೀಯ ಅಂಕಿಸಂಖ್ಯೆಗಳ ಕಚೇರಿಯು (NSO) ದೇಶದಲ್ಲಿ ವಲಸೆಯ ಸಮೀಕ್ಷೆ ನಡೆಸಲಿದೆ. ಈ ಸಮೀಕ್ಷೆಯಲ್ಲಿ ನಗರ-ಗ್ರಾಮೀಣ; ಅಂತರ್‌ರಾಜ್ಯ ವಲಸೆಯ ವಿನ್ಯಾಸ, ವಲಸೆಗೆ ಕಾರಣಗಳು, ವಲಸೆ ವಾಸ್ತವ್ಯದ ಅವಧಿ, ಹಿಂದಿರುಗುವಿಕೆ, ವಲಸೆ ಬಂದವರ ಉದ್ಯೋಗ-ಆದಾಯ ವಿವರಗಳು, ವಲಸೆಯಿಂದ ಅವರ ಕುಟುಂಬದ ಮೇಲೆ ಆಗಿರುವ ಪರಿಣಾಮಗಳ ವಿವರವಾದ ಡೇಟಾ ಸಂಗ್ರಹ ನಡೆಯಲಿದೆ. ಈ ಸಮೀಕ್ಷೆಯ ಫಲಿತಾಂಶಗಳ ಮೂಲಕ ಕಾರ್ಮಿಕರ ಚಲನೆ, ನಗರೀಕರಣದ ಟ್ರೆಂಡ್‌ಗಳು, ವಲಸೆ ದುಡಿತದ ಆದಾಯದ ಹರಿವು, ವಲಸೆ ಜನಸಮುದಾಯಗಳ ಸಾಮಾಜಿಕ-ಆರ್ಥಿಕ ಒಗ್ಗೂಡಿಸುವಿಕೆಗಳ ಕುರಿತು ಒಳನೋಟಗಳು ಸಿಗಲಿವೆ. ಈ ಒಳನೋಟಗಳು ನೀತಿ ನಿರೂಪಕರಿಗೆ, ಯೋಜಕರಿಗೆ, ಸಂಶೋಧಕರಿಗೆ, ಅಭಿವೃದ್ಧಿ ಪರಿಣತರಿಗೆ ನಗರ ಯೋಜನೆ, ವಸತಿ, ಸಾರಿಗೆ, ಉದ್ಯೋಗ ಸೃಷ್ಟಿ, ಸಾಮಾಜಿಕ ಭದ್ರತೆ, ಕೌಶಲ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ನಿರ್ದಿಷ್ಟ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ಸಹಕಾರಿ ಆಗಲಿದೆ ಎಂದು ಭಾರತ ಸರಕಾರ ಹೇಳಿಕೊಂಡಿದೆ. (PIB Release ID: 2189648) ಈ ಬಗ್ಗೆ ಸರಕಾರ ಸಾರ್ವಜನಿಕರ ಅಭಿಪ್ರಾಯ ಕೋರಿದ್ದು, ಅದನ್ನು ಸಲ್ಲಿಸಲು ನವೆಂಬರ್ 30 ಕಡೆಯ ದಿನವಾಗಿದೆ.

ತನ್ನ ಯಾವತ್ತೂ ವಾಸಸ್ಥಾನದಿಂದ (usual place of residence- UPR) ಅರ್ಥಾತ್ ಆರು ತಿಂಗಳು ಅಥವಾ ಹೆಚ್ಚು ಕಾಲ ನೆಲೆ ನಿಂತ ಜಾಗದಿಂದ ವಾಸಸ್ಥಳ ಬದಲಾಯಿಸಿರುವ ವ್ಯಕ್ತಿಯನ್ನು ‘ವಲಸಿಗ’ ಎಂದು ವ್ಯಾಖ್ಯಾನಿಸಿ ನಡೆಯಲಿರುವ ಈ ಸಮೀಕ್ಷೆ, ಸಾಕಷ್ಟು ಮಿತಿಗಳನ್ನು ಹೊಂದಿರುವುದು ಮೇಲುನೋಟಕ್ಕೇ ಗೋಚರಿಸುತ್ತದೆ. ಭಾರತ ಸರಕಾರ ‘ease of doing business’ ಒದಗಿಸುವ ಹೆಸರಿನಲ್ಲಿ ಉದಾರೀಕರಣೋತ್ತರ ಕಾರ್ಮಿಕ ನೀತಿಗಳನ್ನು ಕಾರ್ಪೊರೇಟ್‌ಗಳ ಪರವಾಗಿ ಸಡಿಲುಗೊಳಿಸುತ್ತಾ ಬಂದಿದೆ. ಮೊನ್ನೆ (ಅಕ್ಟೋಬರ್ 08)ಸರಕಾರ ಬಿಡುಗಡೆಗೊಳಿಸಿರುವ ‘ಶ್ರಮಶಕ್ತಿ ನೀತಿ- 2025’ನ್ನು ಸರಕಾರದ ಪರಿವಾರ ಸಂಘಟನೆಗಳು ಬಿಟ್ಟು ಬೇರೆಲ್ಲರೂ ತಿರಸ್ಕರಿಸಿದ್ದಾರೆ. ಸರಕಾರದ ಈ ದೂರದೃಷ್ಟಿ ರಹಿತ ವಲಸೆ/ಕಾರ್ಮಿಕ ನೀತಿಗಳ ಕಾರಣದಿಂದಾಗಿ ಉದ್ಯಮಪತಿಗಳಿಗೆ ಸಸ್ತಾ, ಫ್ಲೆಕ್ಸಿಬಲ್, ಚಲನಶೀಲ ಕಾರ್ಮಿಕರು ಸಿಗತೊಡಗಿದ್ದಾರೆ; ದಲ್ಲಾಳಿಗಳ ಕೈ ಮೇಲಾಗಿದೆ. ಹಾಗಾಗಿ, ವಲಸೆ ಕಾರ್ಮಿಕರು ಕಡಿಮೆ ಸಂಬಳಕ್ಕೆ, ದಿನದ ನಿಗದಿಗಿಂತ ಹೆಚ್ಚು ಅವಧಿಗೆ, ಅಸುರಕ್ಷಿತ ವಾತಾವರಣಗಳಲ್ಲಿ ದುಡಿಯುವಂತಾಗಿದೆ. ಅಸಂಘಟಿತ-ಅಪಾಯಕಾರಿ ಕೆಲಸಗಳಿಗೆ ಈ ವಲಸೆ ಕಾರ್ಮಿಕರನ್ನು ಬಳಸಲಾಗುತ್ತಿದೆ; ಉದ್ಯೋಗಸ್ಥಳದಲ್ಲಿ ಅಪಾಯಕ್ಕೆ ಸಿಲುಕಿ ಅವರ ಸಾವುನೋವುಗಳು ಸಂಭವಿಸುತ್ತಿರುವ ಸಂಗತಿಗಳು ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತಿವೆ. ವಲಸಿಗರು ಗುತ್ತಿಗೆದಾರರನ್ನು ಅವಲಂಬಿಸಿರುವುದರಿಂದ, ಅವರಿಗೆ ಕಾರ್ಮಿಕರಾಗಿ ತಮ್ಮ ಹಕ್ಕು ಪಡೆಯುವುದಕ್ಕೂ ಅವಕಾಶ ಇಲ್ಲ. ಇದೆಲ್ಲದರ ಫಲವಾಗಿ, ದಲ್ಲಾಳಿಗಳಿಂದ ಸಂಬಳ ಕಳ್ಳತನ, ಸಾಲಕ್ಕೆ ಜೀತ ಮೊದಲಾದ ಸಂಕಟಗಳನ್ನು ಅವರು ಎದುರಿಸಬೇಕಾಗುತ್ತದೆ.

ಭಾರತ ಸರಕಾರವು ಈ ಬಾರಿಯ ವಲಸೆ ಸಮೀಕ್ಷೆಯಲ್ಲಾದರೂ ಈ ಅಸಂಘಟಿತ ಕ್ಷೇತ್ರದ ಸಮಗ್ರ ಮತ್ತು ಸಕಾಲಿಕ ಡೇಟಾಗಳನ್ನು ಸಂಗ್ರಹಿಸಬೇಕು ಮತ್ತು ಅವುಗಳ ಪ್ರಸ್ತುತತೆ ಕಳೆದುಹೋಗುವ ಮುನ್ನವೇ ನೀತಿ ನಿರೂಪಕರಿಗೆ ಸಮೀಕ್ಷೆಯ ಫಲಿತಾಂಶಗಳು ಸಿಗುವಂತೆ ಯೋಜಿಸಬೇಕು. ವಲಸೆಗೂ ವಲಸಿಗರಿಗೂ ಸಂಬಂಧವನ್ನೇ ಗುರುತಿಸಲಾಗದ ಸಮೀಕ್ಷೆ ನಡೆದು ಪ್ರಯೋಜನ ಇಲ್ಲ. ವಲಸೆ ಇಂದು ವಾಸ್ತವ. ಈ ಅಸಂಘಟಿತ ವಲಯಕ್ಕೆ ತಮ್ಮ ಶಿಕ್ಷಣ, ಆರೋಗ್ಯ, ಕೌಶಲ ವೃದ್ಧಿಗಳಂತಹ ಹಕ್ಕುಗಳು ಸಿಗಬೇಕು. ಇಂದು ದೇಶದ ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಈ ವಲಸೆ ಕಾರ್ಮಿಕರಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಭದ್ರತೆಗಳು ಸಿಗುವಂತಾಗಬಲ್ಲ ದೂರದೃಷ್ಟಿ ಇರಿಸಿಕೊಂಡು ಮುಂಬರುವ ವಲಸೆ ಸಮೀಕ್ಷೆ ನಡೆಯುವಂತಾಗಲಿ.

ಕೋವಿಡ್ ಲಾಕ್‌ಡೌನ್ ಅವಾಂತರದ ಬಳಿಕ ವಲಸೆ ಸಮಸ್ಯೆಯತ್ತ ಮೊದಲ ಬಾರಿಗೆ ಕಣ್ಣು ತೆರೆದಿರುವ ಸರಕಾರ, ಈ ವಲಸೆ ಕಾರ್ಮಿಕರಿಗಾಗಿ ಕೆಲವು ಟೋಕನ್ ಕ್ರಮಗಳನ್ನಷ್ಟೇ ಕೈಗೊಂಡಿದೆ ಹೊರತು ನೀತ್ಯಾತ್ಮಕ ತಳಹದಿಯ ತೀರ್ಮಾನಗಳನ್ನು ಇನ್ನೂ ಮಾಡಿಲ್ಲ. ‘ಒಂದು ದೇಶ-ಒಂದು ಪಡಿತರ ಚೀಟಿ’ ಏಕಾಕಿ ವಲಸಿಗರಿಗೆ (ಅಂತಹವರೇ ಹೆಚ್ಚಿನವರು) ದೊಡ್ಡ ಪ್ರಯೋಜನ ತಂದಿಲ್ಲ. ‘ಇ-ಶ್ರಮ ಪೋರ್ಟಲ್’ ಇನ್ನೂ ತಲುಪಬೇಕಾದಷ್ಟು ತಳಮಟ್ಟಕ್ಕೆ ತಲುಪಿಲ್ಲ. ಕಡಿಮೆ ವೆಚ್ಚದ ಗುಂಪು ಬಾಡಿಗೆ ಮನೆ ಸಂಕೀರ್ಣಗಳನ್ನು (ARHC) ವಲಸಿಗರಿಗಾಗಿ ರಚಿಸಿಕೊಡುವ ಸರಕಾರದ ಚಿಂತನೆ ಇನ್ನೂ ಆಶ್ವಾಸನೆಯ ಮಟ್ಟದಲ್ಲೇ ಉಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಾಜಾರಾಂ ತಲ್ಲೂರು

contributor

Similar News