ಯಾರಿಗೆಲ್ಲ ಸಂಸತ್ತೋಫೋಬಿಯಾ?
ಸಂಸತ್ತು ದೇಶದ ಕಾನೂನು-ನೀತಿಗಳ ಚರ್ಚೆ ಆಗಬೇಕಾದ ವೇದಿಕೆ. ಅಲ್ಲಿ ಅದೊಂದನ್ನು ಬಿಟ್ಟು ಬೇರೆಲ್ಲ ನಾಟಕಗಳನ್ನು ನಡೆಸುವುದು ಹೇಗೆಂಬುದರಲ್ಲಿ ಹಾಲಿ ಆಡಳಿತದಲ್ಲಿರುವ ಪಕ್ಷವು ಪಾಂಡಿತ್ಯ ಸಾಧಿಸಿಕೊಂಡಿದೆ. ಕೇವಲ ಸಂಖ್ಯೆಗಳನ್ನಾಧರಿಸಿ ಸದನದಲ್ಲಿ ತೀರ್ಮಾನಗಳು ನಡೆಯುತ್ತಿವೆ. ಮೊದಲೇ ಕಲಾಪಗಳ ಸಮಯವನ್ನು ಕುಂಠಿತಗೊಳಿಸಿಕೊಂಡಿರುವುದರಿಂದ, ಸದನದ ಸಮಯ ಗದ್ದಲಗಳಲ್ಲಿ ಸೋರಿಕೆ ಆದಷ್ಟೂ ಆಡಳಿತ ಪಕ್ಷಕ್ಕೆ ಅನುಕೂಲ.
ಈಗೀಗ ಆಡಳಿತ ಎಂಬುದು, ಅಗತ್ಯ ಹತ್ಯಾರುಗಳನ್ನು ಹಿರಿದು ಮುಂಚೂಣಿಯಲ್ಲಿ ನಡೆಯುತ್ತಾ, ಹಿಂದಿನಿಂದ ಬರುತ್ತಿರುವ ಆನಿಗಳಿಗೆ ಅಡ್ಡಿ-ತಡೆಗಳನ್ನು ನಿವಾರಿಸಿ ಹಾದಿ ಮಾಡಿಕೊಡುವುದು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ನಾಡಿದ್ದು (ಡಿಸೆಂಬರ್, 01) ಸಂಸತ್ತಿನ ಈ ವರ್ಷದ ಚಳಿಗಾಲದ ಅಧಿವೇಶನ ಆರಂಭಗೊಳ್ಳುತ್ತಿದೆ. ಡಿಸೆಂಬರ್ 19ಕ್ಕೆ ಸಮಾಪ್ತಗೊಳ್ಳಲಿರುವ ಈ ಅಧಿವೇಶನದಲ್ಲಿ, ಮಧ್ಯೆ ಬರುವ ರಜೆಗಳನ್ನು ಕಳೆದು ಇರುವ ಸಿಟ್ಟಿಂಗ್‌ಗಳು ಕೇವಲ 15 ದಿನಗಳು. ಈ 15 ದಿನಗಳ ಒಳಗೆ, 10 ಮಹತ್ವದ ಮಸೂದೆಗಳನ್ನು ಸರಕಾರ ಮಂಡಿಸಲಿದ್ದು, ಮತ್ತೆರಡು ಸದನ ಸಮಿತಿಯ ಅಭಿಪ್ರಾಯದೊಡನೆ ಸದನಕ್ಕೆ ಬರಲಿವೆ. ಅವೆಲ್ಲ ಬೇರೆ ಗದ್ದಲಗಳ ನಡುವೆ ಸದನದಲ್ಲಿ ಎಷ್ಟು ವಿವರವಾಗಿ ಚರ್ಚೆ ಆದಾವು ಎಂಬುದನ್ನು ಊಹಿಸಲು ಕಷ್ಟ ಇಲ್ಲ. ವಿರೋಧ ಪಕ್ಷಗಳು ಈಗಾಗಲೇ ತಮ್ಮ ‘ವೋಟ್ ಚೋರಿ’, SIR ಮತ್ತಿತರ ಅಜೆಂಡಾಗಳೊಂದಿಗೆ ಸನ್ನದ್ಧವಾಗಿ ಕುಳಿತಿವೆ. ಅಂತಿಮವಾಗಿ, ಯಾವುದೇ ಚರ್ಚೆ ನಡೆಯದೆ ಹನ್ನೆರಡು ಮಸೂದೆಗಳನ್ನು ‘ಪಾಸ್’ ಮಾಡಿ ಜನರ ಮೇಲೆ ಹೇರಲು ನಮ್ಮ ಜನಪ್ರತಿನಿಧಿಗಳು ಸನ್ನದ್ಧರಾಗಿ ಕುಳಿತಿದ್ದಾರೆ.
ಈ ಬಾರಿ ಸದನದಲ್ಲಿ ಮಂಡನೆ ಆಗಲಿರುವ ಹತ್ತು ಮಸೂದೆಗಳತ್ತ ಕಣ್ಣಾಡಿಸಿ. ಉದ್ಯಮ ವಲಯಕ್ಕೆ ನಿಯಮಗಳನ್ನು ಸರಳೀಕರಿಸಿ ಕೊಡಲಿರುವ ಕಾರ್ಪೊರೇಟ್ ಕಾನೂನುಗಳ ತಿದ್ದುಪಡಿ ಮಸೂದೆ-2025; ಸ್ಟಾಕ್ ಮಾರುಕಟ್ಟೆಯ ವಿವಿಧ ಕಾನೂನುಗಳನ್ನೆಲ್ಲ ಏಕೀಕರಿಸಲಿರುವ ದಿ ಸೆಕ್ಯುರಿಟೀಸ್ ಮಾರ್ಕೆಟ್ ಕೋಡ್ ಬಿಲ್-2025; ವಿಮಾರಂಗದಲ್ಲಿ ವಿದೇಶೀ ಹೂಡಿಕೆ ಮತ್ತು ಲೈಸನ್ಸ್ ಸರಳೀಕರಣದ ಉದ್ದೇಶ ಹೊಂದಿರುವ ವಿಮಾ ಕಾನೂನುಗಳ ತಿದ್ದುಪಡಿ ಮಸೂದೆ-2025; ಶಿಕ್ಷಣ ರಂಗದ ವಿವಿಧ ನಿಯಂತ್ರಕ ಸಂಸ್ಥೆಗಳನ್ನು ಬುಟ್ಟಿಗೆಸೆದು ಒಂದು ಉನ್ನತ ಶಿಕ್ಷಣ ಆಯೋಗ ರಚಿಸುವ ಉದ್ದೇಶ ಇರುವ ಭಾರತದ ಉನ್ನತ ಶಿಕ್ಷಣ ಆಯೋಗ ಮಸೂದೆ-2025; ದೇಶದ ಎಲ್ಲೆಡೆ ವಿದ್ಯುತ್ ಉತ್ಪಾದನೆಗೆ ಅನುಕೂಲ ಆಗುವಂತೆ ಅಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು ಖಾಸಗಿಯವರಿಗೆ ಅವಕಾಶ ಮಾಡಿಕೊಡುವ ಅಣು ವಿದ್ಯುತ್ ಮಸೂದೆ-2025; ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಭೂ ಸ್ವಾಧೀನವನ್ನು ಹೆಚ್ಚು ಸಲೀಸಾಗಿಸುವ ಉದ್ದೇಶ ಇರುವ ರಾಷ್ಟ್ರೀಯ ಹೆದ್ದಾರಿಗಳ (ತಿದ್ದುಪಡಿ) ಮಸೂದೆ-2025; ಸಂವಿಧಾನದಲ್ಲಿ 240ನೇ ವಿಧಿಗೆ ತಿದ್ದುಪಡಿ ಮಾಡುವ ಮೂಲಕ ಚಂಡಿಗಡದಲ್ಲಿ ಶಾಸನಸಭೆ ಇಲ್ಲದಂತೆ ಮಾಡುವ ಸಂವಿಧಾನದ 131ನೇ ತಿದ್ದುಪಡಿ ಮಸೂದೆ-2025; ವಾಣಿಜ್ಯ ವ್ಯವಹಾರಗಳಲ್ಲಿ ವಿವಾದಗಳೆದ್ದಾಗ ಅವನ್ನು ಸುಲಭ ಹಾದಿಯಲ್ಲಿ ಪರಿಹರಿಸಲು ದಿ ಆರ್ಬಿಟರೇಷನ್ ಆಂಡ್ ಕನ್‌ಸೀಲಿಯೇಷನ್ ತಿದ್ದುಪಡಿ ಮಸೂದೆ, 2025; ಮಣಿಪುರ ಜಿಎಸ್‌ಟಿ ತಿದ್ದುಪಡಿ ಮಸೂದೆ-2025 - ಇವಿಷ್ಟು ಸಂಸತ್ತಿನಲ್ಲಿ ಹೊಸದಾಗಿ ಮಂಡನೆ ಆಗಲಿರುವ ಮಸೂದೆಗಳು.
ಇವಲ್ಲದೆ ಎರಡು ಮಸೂದೆಗಳನ್ನು ಈಗಾಗಲೇ ಸಂಸತ್ತಿನಲ್ಲಿ ಹೋದ ಅಧಿವೇಶನದಲ್ಲಿ ಮಂಡಿಸಿ, ಸದನ ಸಮಿತಿಗಳ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಅವು ಈಗ ಸಮಿತಿಯ ಅಭಿಪ್ರಾಯದೊಂದಿಗೆ ಸದನಕ್ಕೆ ಮರಳಿ ಬರುವ ನಿರೀಕ್ಷೆ ಇದೆ. ಆ ಎರಡು ಮಸೂದೆಗಳೆಂದರೆ, ದಿವಾಳಿ ಕಂಪೆನಿಗಳ ವಿಲೇವಾರಿ ಸುಗಮಗೊಳಿಸುವ ದಿ ಇನ್ಸಾಲ್ವೆನ್ಸಿ ಆಂಡ್ ಬ್ಯಾಂಕ್‌ರಪ್ಸಿ ಕೋಡ್ ತಿದ್ದುಪಡಿ ಮಸೂದೆ-2025; ಮತ್ತು ವ್ಯವಹಾರಗಳಲ್ಲಿ ತಪ್ಪೆಸಗಿದವರಿಗೆ ಜೈಲು ಶಿಕ್ಷೆಗಳಿಂದ ವಿನಾಯಿತಿ ಕೊಡಿಸುವ ಜನವಿಶ್ವಾಸ (ಪ್ರಾವಧಾನಗಳ ತಿದ್ದುಪಡಿ) ಮಸೂದೆ-2025.
ಈ ಹನ್ನೆರಡಕ್ಕೆ ಹನ್ನೆರಡು ಮಸೂದೆಗಳು ಕೂಡ ಉದ್ಯಮ-ಕೈಗಾರಿಕಾ ವಲಯದ ಅಗತ್ಯಗಳನ್ನು, ಅಭೀಷ್ಟಗಳನ್ನು ಪೂರೈಸುವ ಮಸೂದೆಗಳಾಗಿದ್ದು, ಇವುಗಳ ಪೈಕಿ ಜನರ ಅಹವಾಲು-ಬದುಕನ್ನು ಸುಗಮ ಮಾಡುವ ಉದ್ದೇಶ ಇರುವ ಒಂದೇ ಒಂದು ಮಸೂದೆ ಕಾಣಿಸುತ್ತಿಲ್ಲ. ಜನರಿಗೆ ಚುನಾವಣಾ ಕಾಲದಲ್ಲಿ ಒಂದಿಷ್ಟು ಮೊಣಕೈಗೆ ಬೆಲ್ಲ ಸವರಿ, ಧರ್ಮ-ಜಾತಿ-ಕೋಮು ಇತ್ಯಾದಿ ಅಫೀಮು ತಿನ್ನಿಸಿಬಿಟ್ಟರೆ ಜನ ತಮ್ಮ ಪಾಡಿಗೆ ತಾವು ಕಚ್ಚಾಡಿಕೊಳ್ಳುತ್ತಿರುತ್ತಾರೆ, ಆಳುವವರ ಸುದ್ದಿಗೆ ಬರುವುದಿಲ್ಲ ಎಂಬುದು ಜನಪ್ರತಿನಿಧಿಗಳಿಗೆ ಈಗ ಸ್ಪಷ್ಟವಾಗಿ ಗೊತ್ತಾಗಿದೆ. ಇನ್ನು ಇದನ್ನೆಲ್ಲ ಸಾರ್ವಜನಿಕರ ಗಮನಕ್ಕೆ ತರುವ ಜವಾಬ್ದಾರಿ ತಮ್ಮದು ಎಂದು ಘೋಷಿಸಿಕೊಂಡಿರುವ ಸಂವಿಧಾನದ ನಾಲ್ಕನೇ ಕಂಬ ತಾವೆಂದು ಹೇಳಿಕೊಳ್ಳುತ್ತಿರುವ ಮಾಧ್ಯಮಗಳಿಗೆ ಬಿಸ್ಕಿಟ್ ಎಸೆದು, ಅವುಗಳಿಗೆಲ್ಲ ‘ಡಿಯರ್ ಮೀಡಿಯಾ’ ಸಾಕುನಾಯಿಗಳ ತರಬೇತಿ ನೀಡಲಾಗಿದೆ; ಹಲ್ಲು ಕೀಳಲಾಗಿದೆ.
ಸಂಸತ್ತು ದೇಶದ ಕಾನೂನು-ನೀತಿಗಳ ಚರ್ಚೆ ಆಗಬೇಕಾದ ವೇದಿಕೆ. ಅಲ್ಲಿ ಅದೊಂದನ್ನು ಬಿಟ್ಟು ಬೇರೆಲ್ಲ ನಾಟಕಗಳನ್ನು ನಡೆಸುವುದು ಹೇಗೆಂಬುದರಲ್ಲಿ ಹಾಲಿ ಆಡಳಿತದಲ್ಲಿರುವ ಪಕ್ಷವು ಪಾಂಡಿತ್ಯ ಸಾಧಿಸಿಕೊಂಡಿದೆ. ಕೇವಲ ಸಂಖ್ಯೆಗಳನ್ನಾಧರಿಸಿ ಸದನದಲ್ಲಿ ತೀರ್ಮಾನಗಳು ನಡೆಯುತ್ತಿವೆ. ಮೊದಲೇ ಕಲಾಪಗಳ ಸಮಯವನ್ನು ಕುಂಠಿತಗೊಳಿಸಿಕೊಂಡಿರುವುದರಿಂದ, ಸದನದ ಸಮಯ ಗದ್ದಲಗಳಲ್ಲಿ ಸೋರಿಕೆ ಆದಷ್ಟೂ ಆಡಳಿತ ಪಕ್ಷಕ್ಕೆ ಅನುಕೂಲ. ಕಳೆದ ಐದು ವರ್ಷಗಳಲ್ಲಿ, ಸಂಸತ್ತಿನ ಚಳಿಗಾಲದ ಅಧಿವೇಶನ 20 ದಿನಗಳಿಗಿಂತ ಹೆಚ್ಚಿನ ಅವಧಿಗೆ ನಡೆದೇ ಇಲ್ಲ; ಮೂರು ಬಾರಿ ನಿಗದಿತ ಅವಧಿಗಿಂತ ಮೊದಲೇ ಸಂಸತ್ತನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಸಂಸತ್ತಿನ ಪ್ರತಿಪಕ್ಷಗಳು ಕೂಡ ಕಳೆದ 11 ವರ್ಷಗಳಲ್ಲಿ, ಸಂಸತ್ ಕಲಾಪದಲ್ಲಿ ದೇಶಹಿತ ಕಾಪಾಡುವುದು ಹೇಗೆ ಎಂಬ ಬಗ್ಗೆ ಒಂದು ಖಚಿತವಾದ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ಸೋತಿವೆ. ಮಾಧ್ಯಮ ತುತ್ತೂರಿಗಳು ಸಂಸತ್ತಿನ ಗದ್ದಲಕ್ಕೆಲ್ಲ ಪ್ರತಿಪಕ್ಷಗಳೇ ಕಾರಣ ಎಂದು ಬಿಂಬಿಸುತ್ತಿರುವುದರಿಂದ ಆಡಳಿತ ಪಕ್ಷದ ರಾಗಕ್ಕೆ, ಸರಿದಂಡಿಯಾದ ಹಿನ್ನೆಲೆ ಸಂಗೀತ ದೊರೆತಂತಾಗಿದೆ. ಆಡಳಿತಪಕ್ಷ -ಪ್ರತಿಪಕ್ಷಗಳೆರಡಕ್ಕೂ ಸಂಸತ್ತು ನಡೆಯುವುದು ಬೇಕಾಗಿಲ್ಲ; ಜನರಿಗೆ ಉತ್ತರದಾಯಿ ಆಗುವುದು ಬೇಕಾಗಿಲ್ಲ. ಜನ ಈ ಪಕ್ಷ ರಾಜಕೀಯಸ್ಥರನ್ನು ಬದಿಗೆ ಸರಿಸಿ, ತಮ್ಮ ಆಶೋತ್ತರಗಳ ಪ್ರತಿನಿಧಿಗಳನ್ನು ಆಯ್ದು ಸಂಸತ್ತಿಗೆ ಕಳುಹಿಸುವ ತನಕ, ಈ ‘ಸಂಸತ್ತೋಫೋಬಿಯಾ’ ಸ್ಥಿತಿಯಲ್ಲಿ ಬದಲಾವಣೆ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇವನ್ನೆಲ್ಲ ಸಾರ್ವಜನಿಕವಾಗಿ ಚರ್ಚಿಸುವುದೇ ಕ್ಲೀಷೆ ಅನ್ನಿಸತೊಡಗಿದೆ.
ಗಮನಿಸಬೇಕಾದ ಸಂಗತಿಗಳು
ಚಳಿಗಾಲದ ಅಧಿವೇಶನ ಮುಗಿಯುವ ಹೊತ್ತಿಗೆ ಮೇಲೆ ಹೇಳಿದ ಮಸೂದೆಗಳಲ್ಲಿ ಹಲವು ಕಾಯ್ದೆಗಳಾಗಿರಬಹುದು. ಆದರೆ, ಆ ಪ್ರತಿಯೊಂದು ಕಾಯ್ದೆ, ದೇಶದ ಆಡಳಿತ ಇಂದು ಜನಸಾಮಾನ್ಯರಿಂದ ಎಷ್ಟು ದೂರ ಸರಿದಿದೆ ಎಂಬುದಕ್ಕೆ ದ್ಯೋತಕವಾಗಿ ನಿಲ್ಲಲಿದೆ. (ಗಮನಿಸಿ: ಈ ಬಹುತೇಕ ಮಸೂದೆಗಳ ಸಾಧಕ-ಬಾಧಕಗಳನ್ನು ಇದೇ ಅಂಕಣದಲ್ಲಿ ಈ ಹಿಂದೆ ಬಿಡಿಬಿಡಿಯಾಗಿ ಚರ್ಚಿಸಲಾಗಿದೆ.)
ಎಲ್ಲಕ್ಕಿಂತ ಮುಖ್ಯವಾಗಿ ಅಣು ವಿದ್ಯುತ್ ಸ್ಥಾವರಗಳ ತಿದ್ದುಪಡಿ ಕಾಯ್ದೆಯನ್ನು ಗಮನಿಸಿ. ದೇಶ ಇಂದು ಬಹುತೇಕ ವಿದ್ಯುತ್ ಸ್ವಾವಲಂಬಿ ಆಗಿರುವಾಗ, ಏಕಾಏಕಿ ಇಷ್ಟೊಂದು ಹೆಚ್ಚುವರಿ ವಿದ್ಯುತ್ ಯಾಕೆ ಬೇಕು ಎಂದು ಕೇಳಿದರೆ, ನಮಗೆ ಕಾಣಿಸುವುದು ಅಗಾಧ ಪ್ರಮಾಣದ ವಿದ್ಯುತ್ ತಿನ್ನುವ ಡೇಟಾ ಸೆಂಟರ್‌ಗಳು. ಸ್ವತಃ ಮಾಲಿನ್ಯಕಾರಕಗಳಾದ ಈ ಡೇಟಾ ಸೆಂಟರ್‌ಗಳಿಗೆ ವಿದ್ಯುತ್ ಪೂರೈಸಲು ಅಪಾಯಕಾರಿ ಅಣುವಿದ್ಯುತ್ ಸ್ಥಾವರಗಳನ್ನು ಖಾಸಗಿಯವರಿಗೆ ತೆರೆಯಲಾಗುತ್ತಿದೆ. ನಮ್ಮೂರಿಗೆ ಅವು ಬರುವುದಿದ್ದರೆ ನಾವು ಅಗತ್ಯ ನೆನಪಿಸಿಕೊಳ್ಳಬೇಕಾಗಿರುವುದು ಉಕ್ರೇನಿನ ಚೆರ್ನೊಬೈಲ್ (1986) ಮತ್ತು ಜಪಾನಿನ ಫುಕುಷಿಮಾ (2011) ದುರಂತಗಳನ್ನು. ಯಾರ ಉಪಕಾರಕ್ಕೆಂದು ನಾವು ಈ ಪ್ರಮಾಣದ ಅಪಾಯಗಳನ್ನು ಮೈಗೆಳೆದುಕೊಳ್ಳಬೇಕು?
ಟೆಲಿಕಾಂ ರಂಗದಲ್ಲಿ ವಿದೇಶೀ ಹೂಡಿಕೆ ಆಹ್ವಾನಿಸಿದ ಬಳಿಕ ಇಂದು ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ನಂತಹ ಸಂಸ್ಥೆಗಳ ಸ್ಥಿತಿ ಏನಾಗಿದೆ ಎಂಬುದು ಕಣ್ಣೆದುರೇ ಇರುವಾಗ, ವಿಮಾ ರಂಗದಲ್ಲಿ ವಿದೇಶೀ ಹೂಡಿಕೆಗೆ ಅವಕಾಶ ತೆರೆದರೆ ಎಲ್‌ಐಸಿ ಸ್ಥಿತಿ ಏನಾಗಲಿದೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಎಲ್‌ಐಸಿಯನ್ನು ಕಡೆಗೆ ಯಾವುದಾದರೊಂದು ಆನಿ ಕೈಗೆ ಒಪ್ಪಿಸುವ ಹಾದಿಯಲ್ಲಿ ಇದೊಂದು ಖಚಿತ ಹೆಜ್ಜೆ ಅಷ್ಟೇ.
ಶಿಕ್ಷಣ ಕ್ಷೇತ್ರದಲ್ಲಿUGC, AICTE, NCTEಗಳನ್ನೆಲ್ಲ ಒಟ್ಟು ಸೇರಿಸಿ, ಒಂದು ಉನ್ನತ ಶಿಕ್ಷಣ ಆಯೋಗ ರೂಪಿಸುವ ಕಾಯ್ದೆ ಜಾರಿಗೆ ಬಂದರೆ, ಶಿಕ್ಷಣ ನೀತಿಗಳನ್ನು ಕೇಂದ್ರೀಕರಿಸುವ ಮೂಲಕ, ಸಂವಿಧಾನದ ಜಂಟಿಪಟ್ಟಿಯಲ್ಲಿ ಬರುವ ಶಿಕ್ಷಣ ಕ್ಷೇತ್ರವನ್ನು ಭಾರತ ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ. ಈಗಾಗಲೇ ಜಂಟಿಪಟ್ಟಿಯ ಹಲವು ಸಂಗತಿಗಳನ್ನು ಭಾರತ ಸರಕಾರ ರಾಜ್ಯಗಳ ಕೈಯಿಂದ ಕಿತ್ತುಕೊಂಡಾಗಿದೆ. ಹಣಕಾಸಿನ ಮೇಲೆ ಹಿಡಿತ, ವಿವಿಗಳ ಸ್ವಾಯತ್ತೆಯ ಮೇಲೆ ರಾಜಕೀಯದ ನೆರಳು... ಇವೆಲ್ಲ ಈ ಕಾಯ್ದೆಯ ಸಂಭಾವ್ಯ ಪರಿಣಾಮಗಳು.
ಇನ್ನು ಜನ ವಿಶ್ವಾಸ ಕಾಯ್ದೆ ಹಾಗೂ ರಿಪೀಲಿಂಗ್ ಆಂಡ್ ಅಮೆಂಡಿಂಗ್ ಮಸೂದೆಗಳು ವ್ಯವಹಾರಸ್ಥರ ತಪ್ಪುಗಳಿಗೆ ಈ ತನಕ ಇದ್ದ ಜೈಲು ಶಿಕ್ಷೆಗಳಿಂದ ಅವರನ್ನು ಪಾರು ಮಾಡಲಿದೆ. ಇಂತಹ ಹಲವು ಕಾಯ್ದೆಗಳು (ಉದಾ: ಅರಣ್ಯ-ಪರಿಸರ ಸಂಬಂಧಿ ಕೆಲವು ಕಾಯ್ದೆಗಳು- ಈ ಬಗ್ಗೆ ಕೂಡ ಈ ಹಿಂದೆ ಇದೇ ಅಂಕಣದಲ್ಲಿ ಚರ್ಚಿಸಲಾಗಿತ್ತು.) ವ್ಯವಹಾರಸ್ಥರು, ಲಾಭಕೋರರನ್ನು ಇಂತಹ ತಪ್ಪುಗಳನ್ನು ಮಾಡುವಂತೆ ಪ್ರೋತ್ಸಾಹಿಸಿದರೂ ಅಚ್ಚರಿ ಇಲ್ಲ.
ಇದಕ್ಕೆಲ್ಲ ಸರಕಾರ ‘‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’’ ಎಂದು ಕರೆಯುವುದೇ ಕುಚೋದ್ಯದ ಸಂಗತಿ. ಇಂತಹವೆಲ್ಲ ಚರ್ಚೆ ಆಗಬೇಕಾದಲ್ಲಿ ಚರ್ಚೆ ಆಗದೆ, ನೇರವಾಗಿ ಕಾನೂನಾಗುತ್ತಿವೆ ಎಂಬುದೂ ದೇಶದ ಜನರ ಅರಿವಿಗೆ ಬರದಷ್ಟು ದೂರಕ್ಕೆ ನಾವು ತಲುಪಿದ್ದೇವೆ.