ಮಾಲಿನ್ಯ ನಿಯಂತ್ರಣ ಎಂಬ ಜೋಕ್; ಅದಕ್ಕಿನ್ನು ಥರ್ಡ್ ಪಾರ್ಟಿ ಜೋಕರ್‌ಗಳು
ಪೂರ್ಣ ಪ್ರಮಾಣದ ‘ಆನಿಪರ’ ಸರಕಾರವೊಂದು ಉದಾರೀಕರಣದ ಹೆಸರಿನಲ್ಲಿ ಯಾವುದೇ ಎಗ್ಗಿಲ್ಲದೆ ಮಾಲಿನ್ಯಕಾರಕ ಕೈಗಾರಿಕೆಗಳನ್ನು ದೇಶದ ಮೇಲೆ ಹೇರುತ್ತಿರುವುದರ ಜೊತೆಗೇ, ಈ ಕೈಗಾರಿಕೆಗಳು ಪರಿಸರ ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕಾದ ತನ್ನ ಸಾಂವಿಧಾನಿಕ, ನೈತಿಕ ಜವಾಬ್ದಾರಿಯನ್ನೂ ಕೂಡ ಖಾಸಗಿ ಹಿತಾಸಕ್ತಿಗಳೊಂದಿಗೆ ಹಂಚಿಕೊಳ್ಳಲು ಹೊರಟಿರುವುದು ಬಹಳ ಆತಂಕಕಾರಿ ವಿದ್ಯಮಾನ.
ನೇರವಾಗಿ ಭಾರತ ಸರಕಾರದ ಕಾಲ ಬುಡದಲ್ಲೇ, ರಾಜಧಾನಿ ದಿಲ್ಲಿಯಲ್ಲಿ ಈ ನವೆಂಬರ್‌ನಿಂದೀಚೆಗೆ ನಾಗರಿಕರು ಪ್ರತಿದಿನ 18-20 ಸಿಗರೇಟುಗಳ ಧಂ ಎಳೆದದ್ದಕ್ಕೆ ಸಮನಾದಷ್ಟು ಪ್ರಮಾಣದಲ್ಲಿ ಹೊಗೆ-ಧೂಳು ನುಂಗುತ್ತಿದ್ದಾರೆ. ವಾತಾವರಣದ ವಾಯು ಗುಣಮಟ್ಟ ಸೂಚ್ಯಂಕ AQI) ಸಹ್ಯ ಪ್ರಮಾಣದಲ್ಲಿ ಇರುವುದು ಎಂದರೆ 0 (ಅತ್ಯುತ್ತಮ)-100 (ಸಮಾಧಾನಕರ)ರ ನಡುವೆ ಇರುವುದು. ಆದರೆ ದಿಲ್ಲಿಯಲ್ಲಿ ಈಗ ಅದು 400 (ಗಂಭೀರ) ರಿಂದ 700 (ವಿಷಕಾರಿ)ರ ಮಟ್ಟದಲ್ಲಿದೆ. ದಿಲ್ಲಿ ರಾಜ್ಯ ಸರಕಾರವಾಗಲೀ, ಭಾರತ ಸರಕಾರವಾಗಲೀ ಅಥವಾ ಆ ಎರಡೂ ಸರಕಾರಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಾಗಲೀ, ಈ ಗಂಭೀರ ಸನ್ನಿವೇಶವನ್ನು ನಿಯಂತ್ರಣಕ್ಕೆ ತರುವುದು ತಮ್ಮ ಕೆಲಸವೇ ಅಲ್ಲ ಎಂಬಂತೆ ನಡೆದುಕೊಳ್ಳುತ್ತಿವೆ. ವಾಹನಗಳು ಹೊರಸೂಸುವ ಮಾಲಿನ್ಯ, ಹುಲ್ಲಿನ ಬಣವೆ ಸುಡುವಿಕೆ, ಪಟಾಕಿಗಳು -ಎಲ್ಲ ಸೇರಿ ಎದ್ದಿರುವ ಹೊಗೆ/ಧೂಳು ಚದುರಿ ಹೋಗದಂತೆ ಶೀತಗಾಳಿ ತಡೆಯುತ್ತಿದೆ ಎಂಬ ವಿವರಣೆಯನ್ನು, ರಾಜಕೀಯ ಮೇಲಾಟಗಳ ಜೊತೆ ಪದೇಪದೇ ನೀಡಲಾಗುತ್ತಿದೆ. ನೂರಕ್ಕೆ ನೂರು ನೀತ್ಯಾತ್ಮಕ ವೈಫಲ್ಯದ ಫಲ ಇದು.
ತನ್ನ ಕಾಲಡಿಯಲ್ಲೇ ನಡೆದಿರುವ ಈ ವಿದ್ಯಮಾನವನ್ನು ತನ್ನದೇ ಮಾಲಿನ್ಯ ನಿಯಂತ್ರಣ ವ್ಯವಸ್ಥೆಯ ಮೂಲಕ ನಿಯಂತ್ರಿಸುವಲ್ಲಿ ವಿಫಲಗೊಂಡಿರುವ ಭಾರತ ಸರಕಾರ, ಈಗ ದೇಶದಾದ್ಯಂತ ಮಾಲಿನ್ಯ ನಿಯಂತ್ರಣಕ್ಕೆ ಖಾಸಗಿ ಥರ್ಡ್ ಪಾರ್ಟಿ ಪರಿಸರ ಮಾಲಿನ್ಯ ಆಡಿಟರ್‌ಗಳನ್ನು ನೋಂದಾಯಿಸಿಕೊಳ್ಳಲು ಹೊರಟಿದೆ. ಪೂರ್ಣ ಪ್ರಮಾಣದ ‘ಆನಿಪರ’ ಸರಕಾರವೊಂದು ಉದಾರೀಕರಣದ ಹೆಸರಿನಲ್ಲಿ ಯಾವುದೇ ಎಗ್ಗಿಲ್ಲದೆ ಮಾಲಿನ್ಯಕಾರಕ ಕೈಗಾರಿಕೆಗಳನ್ನು ದೇಶದ ಮೇಲೆ ಹೇರುತ್ತಿರುವುದರ ಜೊತೆಗೇ, ಈ ಕೈಗಾರಿಕೆಗಳು ಪರಿಸರ ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕಾದ ತನ್ನ ಸಾಂವಿಧಾನಿಕ, ನೈತಿಕ ಜವಾಬ್ದಾರಿಯನ್ನೂ ಕೂಡ ಖಾಸಗಿ ಹಿತಾಸಕ್ತಿಗಳೊಂದಿಗೆ ಹಂಚಿಕೊಳ್ಳಲು ಹೊರಟಿರುವುದು ಬಹಳ ಆತಂಕಕಾರಿ ವಿದ್ಯಮಾನ.
ಇದೇ ಆಗಸ್ಟ್ 29ರಂದು ಭಾರತ ಸರಕಾರವು ಒಂದು ಗಜೆಟ್ ಪ್ರಕಟಣೆಯ ಮೂಲಕ, [S.O. 3973 (E)]; ಖಾಸಗಿ ಪರಿಸರ ಆಡಿಟರ್‌ಗಳನ್ನು ನೋಂದಾಯಿಸಿಕೊಂಡು, ಅವರ ಮೂಲಕ ಪರಿಸರ ಆಡಿಟ್‌ಗಳನ್ನು ನಿಭಾಯಿಸುವ ಅವಕಾಶ ಕಲ್ಪಿಸಿದೆ. ದೇಶದ ಎಲ್ಲೆಡೆ ಕೈಗಾರಿಕೆಗಳು, ಉತ್ಪಾದನಾ ಪ್ರಕ್ರಿಯೆಗಳು ಮತ್ತು ಚಟುವಟಿಕೆಗಳು ಪರಿಸರ ಕಾನೂನುಗಳಿಗೆ ಅನುಗುಣವಾಗಿ ನಡೆಯುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಈ ಆಡಿಟರ್‌ಗಳ ಜವಾಬ್ದಾರಿ ಆಗಲಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ 11ರಂದು ಭಾರತ ಸರಕಾರದ ಪರಿಸರ, ಅರಣ್ಯ ಮತ್ತು ಕ್ಲೈಮೇಟ್ ಚೇಂಜ್ ಇಲಾಖೆಯು ಪ್ರಸ್ತಾಪದ ಬಿಡ್‌ಗಳನ್ನು ಆಹ್ವಾನಿಸಿದೆ. (F. No. TA-J-11014/3/2021-IA-LPt.1)
‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ ಹೆಸರಿನಲ್ಲಿ, ಮಾಡಲಾಗಿರುವ ಈ ಪರಿಸರ ಆಡಿಟ್ ನಿಯಮಗಳಲ್ಲಿನ ಬದಲಾವಣೆಯನ್ನು ಸರಕಾರವು ನಂಬಿಕೆ ಆಧರಿತ ಆಡಳಿತದ ತತ್ವಗಳನ್ನಾಧರಿಸಿ ಮಾಡಲಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದೆ ಮತ್ತು ಕೇಂದ್ರ, ರಾಜ್ಯ ಮತ್ತು ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿಗಳ ಜವಾಬ್ದಾರಿಗಳಿಗೆ, ಈ ನೋಂದಾಯಿತ ಆಡಿಟರ್‌ಗಳು ಪೂರಕವಾಗಿ ಕಾರ್ಯಾಚರಿಸಲಿದ್ದಾರೆ ಎಂದು ಹೇಳಿಕೊಂಡಿದೆ.
ಭಾರತ ಸರಕಾರವು ಪರಿಸರ ಮಾಲಿನ್ಯವನ್ನು 2070ರ ಹೊತ್ತಿಗೆ ಶೂನ್ಯಕ್ಕೆ ಇಳಿಸಿಕೊಳ್ಳುವ ಅಂತರ್‌ರಾಷ್ಟ್ರೀಯ ಒಪ್ಪಂದಗಳ ಭಾಗೀದಾರ ಆಗಿರುವ ಹಿನ್ನೆಲೆಯಲ್ಲಿ, ಇಎಸ್‌ಜಿ ಫ್ರೇಮ್ ವರ್ಕ್, ಗ್ರೀನ್ ಫೈನಾನ್ಸ್, ಗ್ರೀನ್ ಕ್ರೆಡಿಟ್ ನಿಯಮಗಳು... ಇತ್ಯಾದಿ ಹಸಿರು ಆರ್ಥಿಕತೆಯ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಈಗಾಗಲೇ ಸೊರಗಿ ಕುಳಿತಿರುವ ಹಾಲಿ ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗೆ ಈ ಎಲ್ಲ ಹೆಚ್ಚುವರಿ ಹೊರೆಗಳನ್ನು ಹೊರುವುದು ಸಾಧ್ಯ ಆಗುವುದಿಲ್ಲ ಎಂಬ ಕಾರಣಕ್ಕೆ ಸರಕಾರ ಈ ಹೊಸ ಹಾದಿಯನ್ನು ಕಂಡುಕೊಂಡಂತೆ ಮೇಲುನೋಟಕ್ಕೆ ಕಾಣಿಸುತ್ತಿದೆ.
ನಮ್ಮ ಹಾಲಿ ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಎಷ್ಟು ಪರಿಣಾಮಕಾರಿ ಎಂಬುದನ್ನು ಸರಕಾರ ಸಂಸತ್ತಿನ ಈ ಚಳಿಗಾಲದ ಅಧಿವೇಶನದಲ್ಲೇ ಬೆತ್ತಲು ಮಾಡಿಕೊಂಡಿದೆ. (ಲೋಕಸಭೆಯ ಚುಕ್ಕೆರಹಿತ ಪ್ರಶ್ನೆ ಸಂಖ್ಯೆ 1355, ದಿನಾಂಕ 8-12-2025) ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ, ತಳ ಮಟ್ಟದಲ್ಲಿ ಕೆಲಸ ಮಾಡಲು ಅಗತ್ಯ ಇರುವ, ವೈಜ್ಞಾನಿಕ-ತಾಂತ್ರಿಕ ಹುದ್ದೆಗಳಲ್ಲಿ ಇರುವ ಕೊರತೆಯ ಬಗ್ಗೆ ಸಂಸದ ಆರ್. ಸಚ್ಚಿದಾನಂದಂ ಅವರಿಗೆ ಉತ್ತರಿಸಿದ ಪರಿಸರ ಖಾತೆಯ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಸಿಪಿಸಿಬಿ) ಶೇ. 16.28 ಹುದ್ದೆಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ(ಎಸ್‌ಪಿಸಿಬಿ) ಶೇ. 47.59 ಹುದ್ದೆಗಳು ಹಾಗೂ ಮಾಲಿನ್ಯ ನಿಯಂತ್ರಣ ಸಮಿತಿಗಳಲ್ಲಿ (ಪಿಸಿಸಿ) ಶೇ. 43.78 ಹುದ್ದೆಗಳು ಖಾಲಿ ಇವೆ. ಹೀಗೆ, ಒಟ್ಟು 6,932 ಮಂಜೂರಾದ ಹುದ್ದೆಗಳಲ್ಲಿ, 3,161 ಹುದ್ದೆಗಳು ಖಾಲಿ ಇವೆ ಎಂದು ಉತ್ತರಿಸಿದ್ದಾರೆ.
ಈಗ ಈ ಪರಿಸರ ಆಡಿಟರ್‌ಗಳ ಅರ್ಹತೆ, ಸ್ಕ್ರೀನಿಂಗ್, ಸರ್ಟಿಫಿಕೇಷನ್, ನೋಂದಣಿ, ಸಾಮರ್ಥ್ಯ ವೃದ್ಧಿ, ಮಾರ್ಗದರ್ಶಿ ಸೂತ್ರಗಳನ್ನೆಲ್ಲ ರೂಪಿಸಲು ಪರಿಸರ ಆಡಿಟ್ ಡೆಸಿಗ್ನೇಟೆಡ್ ಏಜನ್ಸಿ (ಇಎಡಿಎ)ಗಳಿಂದ ಪ್ರಸ್ತಾವವನ್ನು ಆಹ್ವಾನಿಸಲಾಗಿದ್ದು, ಆ ಸಂಸ್ಥೆ ಲಾಭಾಸಕ್ತವಲ್ಲದ ಸ್ವಾಯತ್ತ ಸಂಸ್ಥೆ ಆಗಿರಲಿದೆ ಎಂದು ಸರಕಾರ ತನ್ನ ಬಿಡ್ಡಿಂಗ್ ಆಹ್ವಾನ ಡಾಕ್ಯುಮೆಂಟಿನಲ್ಲಿ ಹೇಳಿಕೊಂಡಿದೆ.
ಇದು ಕಾರ್ಯಯೋಗ್ಯವೆ?
ದೇಶದಲ್ಲಿ ಇಲ್ಲಿಯ ತನಕದ ಪರಿಸರ ಅನುಭವಗಳನ್ನಾಧರಿಸಿ ಹೇಳಬೇಕೆಂದರೆ, ‘ಪರಿಸರ ರಕ್ಷಣೆ’ ಎಂಬುದು ‘ಅಭಿವೃದ್ಧಿ’ಗೆ ವಿರೋಧ ಪದ ಎಂಬ ಕಲ್ಪನೆ ನಮ್ಮ ರಾಜಕಾರಣಿಗಳು ಮತ್ತು ಕಾರ್ಪೊರೇಟ್ ಜಗತ್ತು ಎರಡರಲ್ಲೂ ಇದೆ. ಉದಾರೀಕರಣದ ಆರಂಭದ ಹಂತದಲ್ಲಿ (30 ವರ್ಷ ಹಿಂದೆ), ಕಾರ್ಖಾನೆಗಳನ್ನು ಆರಂಭಿಸುವ ಮೊದಲು ಆ ಪರಿಸರದ ಧಾರಣ ಶಕ್ತಿ ಅಧ್ಯಯನ ಎಂದೆಲ್ಲ ಚರ್ಚೆ ನಡೆಯುತ್ತಿತ್ತು. ಈಗ ಅವೆಲ್ಲ ಕಸದ ಬುಟ್ಟಿ ಸೇರಿವೆ. ಪ್ರತೀ ಕೈಗಾರಿಕೆಯೂ ಒಂದು ಜಾಗವನ್ನು ಆಯ್ಕೆ ಮಾಡಿಕೊಂಡಾಗ, ಅಲ್ಲಿ ಪರಿಸರ ರಕ್ಷಣೆ, ಸ್ಥಳೀಯರಿಗೆ ಉದ್ಯೋಗಾವಕಾಶ ಎಂದೆಲ್ಲ ಮೊಣಕೈಗೆ ಬೆಲ್ಲ ಹಚ್ಚಿಯೇ ಕೆಲಸ ಆರಂಭಿಸಿರುತ್ತದೆ. ಆದರೆ ದುರದೃಷ್ಟವಶಾತ್ ಅವು, ಪರಿಸರ ಸಂರಕ್ಷಣೆಯನ್ನು ಕೇವಲ ಸರಕಾರಕ್ಕೆ ಸಲ್ಲಿಸಬೇಕಾದ ದಾಖಲೆಗಳಿಗೆ ಸೀಮಿತಗೊಳಿಸಿ, ಯದ್ವಾತದ್ವಾ ಪರಿಸರ ಹಾನಿಗೆ ಕಾರಣ ಆಗುತ್ತಿವೆ. ನೆಲದ ಕಾನೂನಿಗೂ ಅವರು ಅತೀತರು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಈಗಂತೂ ಸ್ವತಃ ಸರಕಾರವೇ ಈ ‘ಆನಿ’ ಕಾರ್ಪೊರೇಟ್‌ಗಳ ಬೆಂಗಾವಲಿಗೆ ನಿಂತಿರುವುದರಿಂದ, ಪರಿಸರ ರಕ್ಷಣೆ ಎಂಬುದು ಅರಣ್ಯರೋದನ ಆಗಿ ಉಳಿದಿದೆ. ದೇಶದಾದ್ಯಂತ ನೆಲ-ಜಲ- ವಾಯು-ಪರಿಸರಗಳು ಮನುಷ್ಯ ರೂಪಿತ ವಿನಾಶಕ್ಕೆ ತುತ್ತಾಗುತ್ತಿವೆ. ಈ ಮಾಲಿನ್ಯಕಾರಕ ಕೈಗಾರಿಕೆಗಳ ಆಸುಪಾಸು ವಾಸಿಸುತ್ತಿರುವ ಬಡಪಾಯಿಗಳು ಬರಬಾರದ ಕಾಯಿಲೆಗಳಿಂದ ಪಡಬಾರದ ಪಾಡು ಪಡುತ್ತಿದ್ದಾರೆ.
ಇಂತಹ ಸನ್ನಿವೇಶದಲ್ಲಿ, ಕೈಗಾರಿಕೆಗಳ ಪರಿಸರ ಮಾಲಿನ್ಯ ಆಡಿಟ್‌ಅನ್ನು ಖಾಸಗಿಯವರ ಕೈಗೆ ನೀಡುವುದು ಎಂದರೆ, ಮೀನು ಕಾಯುವ ಕೆಲಸ ಬೆಕ್ಕಿನ ಕೈಗೆ ಕೊಟ್ಟಂತೆ. ನಾಳೆ ಬರಲಿರುವ ಪರಿಸರ ವೃತ್ತಿಪರರು ಒಂದಿಲ್ಲೊಂದು ರೀತಿಯಲ್ಲಿ ವ್ಯವಹಾರ ಹಿತಾಸಕ್ತಿಗಳ ಪರವಾಗಿಯೇ ವರ್ತಿಸಲಿದ್ದಾರೆ ಮತ್ತು ಅವರಿಂದ ನಾಗರಿಕರು ನ್ಯಾಯಕ್ಕಾಗಿ ನಿರೀಕ್ಷಿಸುವುದು ಮೂರ್ಖತನ. ಬೇರೆ ವೃತ್ತಿಪರ ಸನ್ನಿವೇಶಗಳಲ್ಲೂ ಇಂತಹದೇ ಸನ್ನಿವೇಶ ಇರುವುದರಿಂದ, ಪರಿಸರ ವೃತ್ತಿಪರರು ಅದಕ್ಕಿಂತ ಬೇರೆ ರೀತಿಯಲ್ಲಿ ವ್ಯವಹರಿಸಬಹುದೆಂಬ ನಿರೀಕ್ಷೆ ಇರಲು ಸಾಧ್ಯ ಇಲ್ಲ.
ಪರಿಸರ (ಸಂರಕ್ಷಣೆ) ಕಾಯ್ದೆ 1986 ಮತ್ತು ಅದನ್ನನುಸರಿಸಿ ಬಂದ ಗಾಳಿ, ನೀರು, ವನ ಸಂರಕ್ಷಣಾ ಕಾಯ್ದೆಗಳನ್ನು 40 ವರ್ಷಗಳಲ್ಲಿ ಪೂರ್ಣಪ್ರಮಾಣದಲ್ಲಿ ಜಾರಿಗೆ ತರುವುದಕ್ಕೆ ಭಾರತ ಸರಕಾರಕ್ಕೆ ಸಾಧ್ಯ ಆಗಿಲ್ಲ. ಕಾಯ್ದೆಯನ್ನು ನನೆಗುದಿಗೆ ಹಾಕಿಟ್ಟುಕೊಂಡೇ ಪಶ್ಚಿಮ ಘಟ್ಟಗಳಂತಹ ಪರಿಸರ ಶ್ರೀಮಂತಿಕೆಯ ತಾಣಗಳನ್ನು ಇಂಚಿಂಚಾಗಿ ನಾಶಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಸದ್ಯ ಆಗುತ್ತಿರುವ ಹೊಸ ಬೆಳವಣಿಗೆಗಳನ್ನು ಹೇಗೆ ನೋಡಬೇಕೆಂದರೆ:
ರೇರ್ ಅರ್ಥ್ ಮಿನರಲ್ಸ್ ಹೆಸರಿನಲ್ಲಿ ದೇಶದಾದ್ಯಂತ ನೆಲ ಬಗೆಯಲು ಸಮೀಕ್ಷೆಗಳು ನಡೆಯುತ್ತಿವೆ, ಆಳ ಸಮುದ್ರ ಗಣಿಗಾರಿಕೆಯ ಹೆಸರಲ್ಲಿ ಸಮುದ್ರದ ಒಡಲು ತೋಡುವ ಕೆಲಸಕ್ಕೆ ಸಿದ್ಧತೆಗಳು ಆಗುತ್ತಿವೆ; ದೇಶದಾದ್ಯಂತ ಯಾರದ್ದೋ ಡೇಟಾ ಸಂಗ್ರಹಿಸಿಡಲಿರುವ ಡೇಟಾ ಸೆಂಟರ್‌ಗಳಿಗೆ ವಿದ್ಯುತ್ ಪೂರೈಸುವುದಕ್ಕಾಗಿ ಎಲ್ಲೆಂದರಲ್ಲಿ ನ್ಯೂಕ್ಲಿಯರ್ ವಿದ್ಯುತ್ ಸ್ಥಾವರಗಳು ಬರಲಿವೆ... ಇನ್ನು ಆನಿಗಳಂತೂ ದಿನ ಬೆಳಗಾದರೆ ಲಕ್ಷಾಂತರ ಕೋಟಿ ರೂ.ಗಳ ಹೊಸಹೊಸ ಯೋಜನೆಗಳನ್ನು ಪ್ರಕಟಿಸುತ್ತಿವೆ. ಇವಕ್ಕೆಲ್ಲ ‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ ಘೋಷಣೆಯಡಿ ಫಟಾಫಟ್ ಅನುಮತಿ ನೀಡಬೇಕೆಂದರೆ, ಸಹಜವಾಗಿಯೇ ಸರಕಾರಕ್ಕೆ ತನ್ನ ಕೆಲಸಗಳನ್ನು ‘ಔಟ್‌ಸೋರ್ಸ್’ ಮಾಡಿಕೊಳ್ಳಬೇಕಾದದ್ದು ಅನಿವಾರ್ಯ.
ಒಟ್ಟಿನಲ್ಲಿ ಇದು, ಸರಕಾರ ತನಗೆ ಗೊತ್ತಿದ್ದೂ ಮಾಡಬೇಕಾಗಿರುವ ಅನಿವಾರ್ಯ ಅವಾಂತರಗಳಿಗೆ ತಾನೇ ನೇರ ಹೊಣೆ ಹೊರುವ ಬದಲು, ಬೇರೊಬ್ಬರಿಗೆ ಅದನ್ನು ಔಟ್‌ಸೋರ್ಸ್ ಮಾಡಿ, ಕೇವಲ ಅಂತಿಮ ಒಪ್ಪಿಗೆಯ ಸಹಿ ಮಾಡಿದ ಪಾಪದ ಹೊರೆಯನ್ನು ತಾನು ಹೊತ್ತುಕೊಳ್ಳುವ, ಯಾವತ್ತೂ ಚಾಲ್ತಿಯಲ್ಲಿರುವ ಆಟ ಅಷ್ಟೇ.