×
Ad

ನೀರು, ವಿದ್ಯುತ್ ಕಸಿಯುವ ದತ್ತಾಂಶ ಕೇಂದ್ರಗಳು

Update: 2026-01-23 09:40 IST

ಕರ್ನಾಟಕ ವಿದ್ಯುತ್ ಮತ್ತು ನೀರಿನ ಕೊರತೆ ಇರುವ ರಾಜ್ಯ. ಬೇಸಿಗೆಯಲ್ಲಿ ಗ್ರಾಮಾಂತರ ಮಾತ್ರವಲ್ಲದೆ ನಗರ ಪ್ರದೇಶದಲ್ಲಿಯೂ ಲೋಡ್ ಶೆಡ್ಡಿಂಗ್ ಇರುತ್ತದೆ. ದತ್ತಾಂಶ ಕೇಂದ್ರಗಳು ಸಾಕಷ್ಟು ಉದ್ಯೋಗ ಸೃಷ್ಟಿಸುತ್ತವೆ ಎನ್ನುವುದು ನಿಜ. ಆದರೆ, ಕೃಷಿ ಮತ್ತು ಜೀವಾಧಾರವಾದ ನೀರನ್ನು ಕಸಿದುಕೊಳ್ಳುತ್ತವೆ ಮತ್ತು ವಿದ್ಯುತ್ ಕೊರತೆಗೆ ಕಾರಣವಾಗಲಿದೆ. ಆದ್ದರಿಂದ, ರಾಜ್ಯ ಇಲ್ಲವೇ ಕರಾವಳಿಯಲ್ಲಿ ದತ್ತಾಂಶ ಕೇಂದ್ರಗಳು ಸ್ಥಾಪನೆ ಆಗದಿದ್ದಲ್ಲಿ ಗೋಳಾಡುವ ಅಗತ್ಯವೇನಿಲ್ಲ.

ಕರ್ನಾಟಕಕ್ಕೆ ಡೇಟಾ ಸೆಂಟರ್(ದತ್ತಾಂಶ ಕೇಂದ್ರ)ಗಳು ಕೈತಪ್ಪಿಹೋಗಿ, ಆಂಧ್ರಪ್ರದೇಶದ ಪಾಲಾಗಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಯಿತು. ಕರಾವಳಿ ಜಿಲ್ಲೆಯಲ್ಲಿ ಇವುಗಳ ಸ್ಥಾಪನೆಗೆ ಅತ್ಯುತ್ಸಾಹ ವ್ಯಕ್ತವಾಗಿತ್ತು. ಇದು ಮಾಹಿತಿ ತಂತ್ರಜ್ಞಾನ ಮೇಲುಗೈ ಸಾಧಿಸಿರುವ, ದತ್ತಾಂಶವು ಚಿನ್ನ ಆಗಿರುವ ಯುಗ. ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್)ಯ ಉಬ್ಬರದ ಈ ಕಾಲಮಾನದಲ್ಲಿ ದತ್ತಾಂಶ ಕೇಂದ್ರಗಳು ಅತ್ಯವಶ್ಯ. ಆದರೆ, ವಿದ್ಯುತ್ ಹಾಗೂ ನೀರಿನ ತೀವ್ರ ಕೊರತೆ ಇರುವಲ್ಲಿ ಇವು ಅಗತ್ಯವೇ? ರಾಜಸ್ಥಾನ ಹೊರತುಪಡಿಸಿದರೆ, ಕರ್ನಾಟಕ ಬರಕ್ಕೆ ತುತ್ತಾಗಬಲ್ಲ ಸಾಧ್ಯತೆ ಹೆಚ್ಚು ಇರುವ ಮತ್ತು ನೀರಿನ ತೀವ್ರ ಕೊರತೆ ಇರುವ ದೇಶದ 5 ರಾಜ್ಯಗಳಲ್ಲಿ ಒಂದು.

ದತ್ತಾಂಶ ಕೇಂದ್ರಗಳಲ್ಲಿ ಮಾಹಿತಿ ತಂತ್ರಜ್ಞಾನ(ಐಟಿ)ದ ಮೂಲಸೌಲಭ್ಯಗಳಾದ ಸರ್ವರ್, ಕಂಪ್ಯೂಟರ್ ಸ್ವಿಚ್, ಅಪ್ಲಿಕೇಷನ್ ಶೇಖರಣೆ, ಸಂಶ್ಲೇಷಣೆ ಮತ್ತು ವಿತರಣೆಗೆ ಬೇಕಾದ ರೂಟರ್‌ಗಳು ಇರು ತ್ತವೆ. ಇಮೇಲ್, ಬ್ಯಾಂಕಿಂಗ್ ಸೇವೆಗಳು, ಮೊಬೈಲ್ ಅಪ್ಲಿಕೇಷನ್‌ಗಳು, ಕ್ಲೌಡ್ ಶೇಖರಣೆ ಸೇರಿದಂತೆ ಎಲ್ಲ ಆನ್‌ಲೈನ್ ಸೇವೆಗಳು ದತ್ತಾಂಶ ಕೇಂದ್ರಗಳನ್ನು ಆಧರಿಸಿರುತ್ತವೆ. ಸರ್ವರ್‌ಗಳಲ್ಲಿ ಬಳಕೆ ಯಾಗುವ ವಿದ್ಯುತ್, ಶಾಖವಾಗಿ ಬದಲಾಗುತ್ತದೆ ಮತ್ತು ಶಾಖವನ್ನು ತೆಗೆಯಲು ನೀರು(ಅಂತರ್ಜಲ/ಕೊಳಾಯಿ ನೀರು) ಬಳಸಲಾಗುತ್ತದೆ. ತಜ್ಞರ ಪ್ರಕಾರ, ಒಂದು ಮೆಗಾವ್ಯಾಟ್ ಸಾಮರ್ಥ್ಯದ ದತ್ತಾಂಶ ಕೇಂದ್ರ ವರ್ಷಕ್ಕೆ 26 ದಶಲಕ್ಷ ಲೀಟರ್ ನೀರು ಬಳಸುತ್ತದೆ; ವ್ಯಕ್ತಿಯೊಬ್ಬ ದಿನಕ್ಕೆ 135 ಲೀಟರ್ ನೀರು ಬಳಸುತ್ತಾನೆ ಎಂದುಕೊಂಡರೆ, ಇದು 2 ಲಕ್ಷ ಜನ ವರ್ಷವೊಂದಕ್ಕೆ ಬಳಸುವ ನೀರಿಗೆ ಸಮ. ದತ್ತಾಂಶ ಕೇಂದ್ರಗಳು ನೀರಿನ ಬದಲು ಗಾಳಿಯನ್ನು ಆಧರಿಸಿದ ತಂಪುಗೊಳಿಸುವ ವ್ಯವಸ್ಥೆ(ಏರ್ ಕೂಲಿಂಗ್)ಯನ್ನು ಬಳಸಬಹುದು; ಆದರೆ, ಇವುಗಳ ಚಾಲನೆಗೆ ಅಧಿಕ ವಿದ್ಯುತ್ ಬೇಕಾಗುವುದರಿಂದ, ದುಬಾರಿ; ಆದರೆ, ನೀರು ಉಚಿತವಾಗಿ ಇಲ್ಲವೇ ಸಬ್ಸಿಡಿ ದರದಲ್ಲಿ ದೊರೆಯುತ್ತದೆ. ಇದರಿಂದ ದತ್ತಾಂಶ ಕೇಂದ್ರಗಳು ಹೆಚ್ಚಿದಂತೆ ನೀರಿನ ಬಳಕೆಯೂ ಹೆಚ್ಚುತ್ತಿದೆ.

ಕೃತಕ ಬುದ್ಧಿಮತ್ತೆಯ ಉಬ್ಬರ

ದೇಶದಲ್ಲಿ 1990ರಿಂದಲೇ ದತ್ತಾಂಶ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಅಂತರ್ಜಾಲದ ಬಳಕೆ ಹೆಚ್ಚಳ ಮತ್ತು ಕೃತಕ ಬುದ್ಧಿಮತ್ತೆಯ ಉಬ್ಬರದಿಂದ ದತ್ತಾಂಶ ಶೇಖರಣೆ ಹಾಗೂ ಗಣಕ ಯಂತ್ರಗಳ ಕಾರ್ಯನಿರ್ವಹಣೆ ಸಾಮರ್ಥ್ಯ ಹೆಚ್ಚಿಸಲು ದತ್ತಾಂಶ ಕೇಂದ್ರಗಳು ಅನಿವಾರ್ಯವಾದವು. ಅಮೆರಿಕ ಮೂಲದ ಜಾಗತಿಕ ಸಲಹಾ ಸಂಸ್ಥೆ ಮೆಕಿನ್‌ಸ್ಕಿ (https://www.mck insey.com) ಪ್ರಕಾರ, 2030ರ ಹೊತ್ತಿಗೆ ಶೇ.70ರಷ್ಟು ದತ್ತಾಂಶ ಕೇಂದ್ರಗಳು ಎಐ ಆಧರಿತ ಕೆಲಸಕ್ಕೆ ಬಳಕೆಯಾಗಲಿವೆ. ನಿರ್ವಹಣೆ ವೆಚ್ಚ ಕಡಿಮೆ, ಪರಿಣಿತ ಸಿಬ್ಬಂದಿ ಲಭ್ಯತೆ ಮತ್ತು ಆಯಕಟ್ಟಿನ ಸ್ಥಾನದಲ್ಲಿ ಇರುವುದರಿಂದ ಜಾಗತಿಕ ಸಂಸ್ಥೆಗಳಾದ ಮೈಕ್ರೋಸಾಫ್ಟ್, ಅಮೆಝಾನ್, ಎನ್‌ಟಿಟಿ ಗ್ಲೋಬಲ್, ಎಸ್‌ಟಿ ಟೆಲಿಮೀಡಿಯಾ, ಐರನ್ ಮೌಂಟೇನ್, ಈಕ್ವಿನಿಕ್ಸ್; ದೇಶಿ ಸಂಸ್ಥೆಗಳಾದ ಬಿಎಸ್ಸೆನ್ನೆಲ್(ನೆಕ್ಸ್ಟ್‌ಜೆನ್ ಇನ್‌ಫೈನೆಟ್), ಕಂಟ್ರೋಲ್‌ಎಸ್, ಪೈ ಡೇಟಾ ಸೆಂಟರ್, ವೆಬ್‌ವರ್ಕ್ಸ್, ಏರ್‌ಟೆಲ್, ಅದಾನಿ ಕನೆಕ್ಷ್, ಸಿಫಿ ಟೆಕ್ನಾಲಜೀಸ್ ಅಲ್ಲದೆ ಗೂಗಲ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ರಿಲಯನ್ಸ್ ಇಲ್ಲಿ ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸಿವೆ. ದೇಶದ ಮೊದಲ ಶ್ರೇಣಿಯ ನಗರಗಳಲ್ಲಿ ಅಂದಾಜು 150 ದತ್ತಾಂಶ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಒಟ್ಟು ಸಾಮರ್ಥ್ಯ 1,200-1,300 ಮೆಗಾವ್ಯಾಟ್(ಆಧಾರ: ಇಂಗ್ಲೆಂಡ್ ಮೂಲದ ಬಹುರಾಷ್ಟ್ರೀಯ ಕಂಪೆನಿ ಡಿಲಾಯ್ಟ್‌ನ 2025ರ ವರದಿ). ಆದರೆ, ದತ್ತಾಂಶ ಕೇಂದ್ರದಂಥ ಡಿಜಿಟಲ್ ಮೂಲಸೌಲಭ್ಯ ತನ್ನದೇ ಆದ ಸಮಸ್ಯೆಯೊಟ್ಟಿಗೆ ಬರುತ್ತದೆ. ಇವು ಅಪಾರ ಪ್ರಮಾಣದ ನೀರು ಮತ್ತು ವಿದ್ಯುತ್ ಬಳಸುತ್ತವೆ. ಜಗತ್ತಿನಲ್ಲಿ ನೀರಿನ ಕೊರತೆ ಎದುರಿಸುತ್ತಿರುವ 25 ದೇಶಗಳಲ್ಲಿ ಭಾರತವೂ ಒಂದು ಎಂದು ಅಮೆರಿಕ ಮೂಲದ ವಾಟರ್ ರಿಸೋರ್ಸ್ ಇನ್‌ಸ್ಟಿಟ್ಯೂಟ್‌ನ ಜಲಭೂಪಟ ಹೇಳಿದೆ. ದೇಶದಲ್ಲಿ ಒಟ್ಟು ನೀರಿನ ಅಗತ್ಯ(ಕೈಗಾರಿಕೆ, ಗೃಹಬಳಕೆ, ಕೃಷಿ ಮತ್ತು ಪಶುಸಂಗೋಪನೆ) ಮತ್ತು ಮಳೆ-ಅಂತರ್ಜಲ ಮರುಪೂರಣದ ಅನುಪಾತ ಒತ್ತಡದಲ್ಲಿದೆ. ದತ್ತಾಂಶ ಕೇಂದ್ರಗಳಿಂದ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.

ಇಂಗ್ಲೆಂಡ್ ಮೂಲದ ಸ್ವಯಂಸೇವಾ ಸಂಘಟನೆ ಪ್ಲಾನೆಟ್ ಟ್ರ್ಯಾಕರ್(https://planet-tracker.org) ಪ್ರಕಾರ, ಏಶ್ಯದಲ್ಲಿ ಚೀನಾ, ಭಾರತ ಮತ್ತು ಜಪಾನ್‌ನಲ್ಲಿ ಅತಿ ಹೆಚ್ಚು ದತ್ತಾಂಶ ಕೇಂದ್ರಗಳು ಇವೆ. ದೇಶದ 50ಕ್ಕೂ ಅಧಿಕ ದತ್ತಾಂಶ ಕೇಂದ್ರಗಳು ನೀರಿನ ಕೊರತೆ ಹೆಚ್ಚು ಇರುವ ಪ್ರದೇಶದಲ್ಲಿವೆ. ಉತ್ತರಪ್ರದೇಶದ ನೊಯ್ಡಾದ ಗೌತಮ್ ನಗರದಲ್ಲಿ ಅತ್ಯಧಿಕ, ಅಂದರೆ, 17 ದತ್ತಾಂಶ ಕೇಂದ್ರಗಳಿವೆ(ಡೆನ್ಮಾರ್ಕ್‌ನ ಡೇಟಾ ಸೆಂಟರ್ ಮ್ಯಾಪ್ ಆನ್‌ಲೈನ್ ಮಾಹಿತಿಕೋಶದ ಅಂಕಿಅಂಶ, 2025). ಈ ಕೇಂದ್ರಗಳಿಗೆ 24x7 ನಿರಂತರ ನೀರು ಒದಗಿಸುವುದಾಗಿ ಉತ್ತರಪ್ರದೇಶದ ದತ್ತಾಂಶ ಕೇಂದ್ರಗಳ ಕಾರ್ಯನೀತಿ 2021 ಹೇಳುತ್ತದೆ. ಆದರೆ, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ನೀರಿನ ತೀವ್ರ ಕೊರತೆ ಇರುವ ಪ್ರದೇಶಗಳು ಎಂದು ವರ್ಗೀಕರಿಸಲ್ಪಟ್ಟಿವೆ.

ಬೆಂಗಳೂರಿನ ಪರಿಸ್ಥಿತಿ

ಬೆಂಗಳೂರು ಮತ್ತು ಸುತ್ತಮುತ್ತ 20 (ದೇವನಹಳ್ಳಿ 8, ಬಿಡದಿ ಕೈಗಾರಿಕಾ ಪ್ರದೇಶ 1, ಬೆಂಗಳೂರು ನಗರ ಜಿಲ್ಲೆಯಲ್ಲಿ 11-ಹೂಡಿ, ಕೆ.ಆರ್.ಪುರ, ಗೊರವಿಗೆರೆ, ವೈಟ್‌ಫೀಲ್ಡ್, ಪಟ್ಟಂದೂರು ಅಗ್ರಹಾರ, ವೈಟ್‌ಫೀಲ್ಡ್ -ಹೊಸಕೋಟೆ ರಸ್ತೆ, ಗೆದ್ದಲಹಳ್ಳಿ, ಬಸವನಗುಡಿ, ಬಾಣಸವಾಡಿ, ಬಿಟಿಎಂ ಲೇಔಟ್, ಸಂಜಯನಗರ) ದತ್ತಾಂಶ ಕೇಂದ್ರಗಳಿವೆ. ದೇವನಹಳ್ಳಿ ಸುತ್ತಮುತ್ತ ಸಾಫ್ಟ್‌ವೇರ್, ಹಾರ್ಡ್‌ವೇರ್, ಹಣಕಾಸು ಸೇವೆಗಳು, ವಿಮಾನ ನಿಲ್ದಾಣ, ದತ್ತಾಂಶ ಕೇಂದ್ರಗಳು ಹಾಗೂ ನೂರಾರು ವಸತಿ ಯೋಜನೆಗಳು ತಲೆಯೆತ್ತಿವೆ; ಜಮೀನಿನ ಬೆಲೆ ಚಿನ್ನ ಆಗಿದೆ. ತಾಲೂಕಿನ ಅಕ್ಕಲೇನಹಳ್ಳಿ ಮಲ್ಲೇನಹಳ್ಳಿ ಗ್ರಾಮ(ನಲ್ಲೂರು ಗ್ರಾಮಪಂಚಾಯತ್‌ಗೆ ಸೇರಿದೆ)ದಲ್ಲಿ ಚೆನ್ನೈ ಮೂಲದ ಇಟಿಎಲ್ ಸೆಕ್ಯೂರ್ ಸ್ಪೇಸ್ ಸಂಸ್ಥೆಗೆ ದತ್ತಾಂಶ ಕೇಂದ್ರ ಸ್ಥಾಪಿಸಲು ಅನುಮತಿ ನೀಡಲಾಗಿದೆ. ಇಟಿಎಲ್‌ಗೆ ಅಣ್ಣೇಶ್ವರ ಗ್ರಾಮಪಂಚಾಯತ್ ವಾರ್ಷಿಕ 237 ದಶಲಕ್ಷ ಲೀಟರ್ ನೀರು ಪೂರೈಸಬೇಕಿದ್ದು, ಇದು 5,000 ಜನರ ವಾರ್ಷಿಕ ಅಗತ್ಯಕ್ಕೆ ಸಮ. ಈ ಪ್ರದೇಶದಲ್ಲಿ ಯಾವುದೇ ನದಿ ಇಲ್ಲ; ಅಂತರ್ಜಲ ಪಾತಾಳ ತಲುಪಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿ ವರದಿ ಹೇಳುತ್ತದೆ. ರಾಜ್ಯ ಸರಕಾರ ರೈತರ ಸುದೀರ್ಘ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೈಗಾರಿಕೆಗೆ ಭೂಸ್ವಾಧೀನವನ್ನು ಕೈಬಿಟ್ಟಿತು. ಆದರೆ, ರೈತರ ಬವಣೆ ತೀರಿಲ್ಲ; ಜಮೀನು ತಲುಪಲು ದಾರಿ ಇಲ್ಲದೆ ಮತ್ತು ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ.

ಬೆಂಗಳೂರು ಸುತ್ತಮುತ್ತ ನದಿ ಇಲ್ಲವೇ ಸಮುದ್ರ ಇಲ್ಲ. ಹೀಗಾಗಿ ಅಂತರ್ಜಲ ಹಾಗೂ 100 ಕಿ.ಮೀ. ದೂರದಿಂದ ಬರುವ ಕಾವೇರಿ ನೀರನ್ನು ಆಧರಿಸಿದೆ. ರಾಜಧಾನಿ ಈಗಾಗಲೇ ನೀರಿನ ಕೊರತೆ ಇರುವ ಪ್ರದೇಶ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಮಳೆಯಿಂದ ಮರುದುಂಬುವ ನೀರಿಗಿಂತ ಹೆಚ್ಚು ಅಂತರ್ಜಲವನ್ನು ಎತ್ತಲಾಗುತ್ತಿದೆ. 2024ರ ಬೇಸಿಗೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು. ವೈಟ್‌ಫೀಲ್ಡ್ ದತ್ತಾಂಶ ಕೇಂದ್ರಗಳ ಗುಚ್ಛವಾಗಿದ್ದು, ಡೇಟಾ ಸೆಂಟರ್ ಮ್ಯಾಪ್ ಪ್ರಕಾರ, ಇಲ್ಲಿ 6 ದತ್ತಾಂಶ ಕೇಂದ್ರಗಳಿವೆ. ಜೊತೆಗೆ ಅಂದಾಜು 5,500 ಐಟಿ ಕಂಪೆನಿಗಳಿವೆ. ಕಳೆದ 10 ವರ್ಷದಲ್ಲಿ ಈ ಪ್ರದೇಶದಲ್ಲಿ ನೀರಿನ ಕೊರತೆ ತೀವ್ರಗೊಂಡಿದ್ದು, 6,000 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ವಾರಕ್ಕೊಮ್ಮೆ ಕಾವೇರಿ ನೀರು ಪೂರೈಸಲಾಗುತ್ತಿದೆ. ಹೆಚ್ಚಿನವರು ಖಾಸಗಿ ಟ್ಯಾಂಕರ್ ನೀರು ಆಧರಿಸಿದ್ದಾರೆ; ಬೇಸಿಗೆಯಲ್ಲಿ ಟ್ಯಾಂಕರ್ ನೀರಿನ ಬೆಲೆ ಗಗನ ಮುಟ್ಟುತ್ತದೆ. ದತ್ತಾಂಶ ಕೇಂದ್ರಗಳು ತಮ್ಮ ಪಾಲಿನ ನೀರು ಕಸಿಯುತ್ತಿವೆ ಎನ್ನುವುದು ಜನರಿಗೆ ಗೊತ್ತಿದ್ದಂತೆ ಕಾಣುತ್ತಿಲ್ಲ. ಕರ್ನಾಟಕ ಉದ್ಯೋಗ ಮಿತ್ರ ವೆಬ್‌ಸೈಟ್(https://ebiz.karnataka.gov.in/ebiz) ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಪ್ರಕಾರ, ರಾಮನಗರದ ಒಂದು ಸೇರಿದಂತೆ ಬೆಂಗಳೂರಿನ ದತ್ತಾಂಶ ಕೇಂದ್ರಗಳು ವಾರ್ಷಿಕ 812 ದಶಲಕ್ಷ ಲೀಟರ್ ನೀರು(0.03 ಟಿಎಂಸಿ; 1 ಟಿಎಂಸಿ=28,300 ದಶಲಕ್ಷ ಲೀಟರ್) ಬಳಸುತ್ತವೆ. ಇದು ಅಂದಾಜು ಮಾತ್ರ.

ದುರ್ಬಲ ಅನುಷ್ಠಾನ

ರಾಜ್ಯ 2022ರಲ್ಲಿ ದತ್ತಾಂಶ ಕೇಂದ್ರ ಕಾರ್ಯನೀತಿಯನ್ನು ಅಳವಡಿಸಿಕೊಂಡಿದೆ; ಕರ್ನಾಟಕ ಅನ್ವೇಷಣೆ ಮತ್ತು ತಂತ್ರಜ್ಞಾನ ಸೊಸೈಟಿ(ಕೆಐಟಿಎಸ್) ಕಾರ್ಯನೀತಿಯನ್ನು ಅನುಷ್ಠಾನಗೊಳಿಸುತ್ತಿದೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯಡಿ ಇರುವ ಕರ್ನಾಟಕ ಉದ್ಯೋಗ ಮಿತ್ರ, ಏಕಗವಾಕ್ಷಿ ಮೂಲಕ ಅನುಮತಿ ನೀಡುತ್ತದೆ. ಪರಿಸರ ಅನುಮತಿ ಪಡೆದ ಯೋಜನೆಗಳನ್ನು ರಾಜ್ಯ ಉನ್ನತಾಧಿಕಾರ ಅನುಮತಿ ಸಮಿತಿ ಪರಿಶೀಲಿಸುತ್ತದೆ. ದತ್ತಾಂಶ ಕೇಂದ್ರಗಳು ಅಂತರ್ಜಲ ಬಳಸುವುದಾದರೆ ಕೇಂದ್ರ ಅಂತರ್ಜಲ ಪ್ರಾಧಿಕಾರ(ಸಿಜಿಡಬ್ಲ್ಯುಎ) ಮತ್ತು ಮೇಲ್ಮೈ ನೀರು ಬಳಸುವುದಾದರೆ, ನಿಗದಿತ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಕಾರ್ಯನೀತಿ ಪ್ರಕಾರ, ದತ್ತಾಂಶ ಕೇಂದ್ರಗಳು ಗಾಳಿಯಿಂದ ತಂಪಾಗುವ, ನೀರು ಮತ್ತು ಗಾಳಿ ಎರಡನ್ನೂ ಬಳಸಬಹುದಾದ ಹೈಬ್ರಿಡ್ ಇಲ್ಲವೇ ಕ್ಲೋಸ್ಡ್ ಲೂಪ್ ವ್ಯವಸ್ಥೆಯನ್ನು ಬಳಸಬೇಕು; ಸಂಸ್ಕರಿಸಿದ ನೀರು ಬಳಸಬೇಕು ಹಾಗೂ ಸ್ಥಳದಲ್ಲೇ ಸಂಸ್ಕರಣೆ ಘಟಕ ಸ್ಥಾಪಿಸಿ, ನೀರು ಮರುಬಳಕೆ ಮಾಡಬೇಕು; ತಾವು ಬಳಸುವ ನೀರಿನ ಮೂಲ ಯಾವುದು(ಬಿಡಬ್ಲ್ಯುಎಸ್‌ಎಸ್‌ಬಿ, ರಾಜ್ಯ ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿ ಮಂಡಳಿ ಕೆಐಎಡಿಬಿ, ಸ್ಥಳೀಯ ಸಂಸ್ಥೆಗಳು-ಗ್ರಾಮ ಪಂಚಾಯತ್, ನಗರ/ಪುರಸಭೆ ಇತ್ಯಾದಿ ಇಲ್ಲವೇ ಕೊಳವೆ ಬಾವಿ ಸೇರಿದಂತೆ ಖಾಸಗಿ ಮೂಲ) ಎಂಬುದನ್ನು ಸ್ಪಷ್ಟಪಡಿಸಬೇಕು. ಆದರೆ, ಇಷ್ಟೆಲ್ಲ ನಿಬಂಧನೆಗಳಿದ್ದರೂ, ಅನುಷ್ಠಾನ ದುರ್ಬಲವಾಗಿದೆ.

ದಿನಕ್ಕೆ 24 ಗಂಟೆಯಂತೆ 365 ದಿನವೂ ಕಾರ್ಯನಿರ್ವಹಿಸುವ ದತ್ತಾಂಶ ಕೇಂದ್ರಗಳಲ್ಲಿ ಹೆಚ್ಚಿನವು ಭಾಷ್ಪೀಕರಣ ತಂಪುಗೊಳಿಸುವಿಕೆ ಪ್ರಕ್ರಿಯೆಯನ್ನು ಬಳಸುತ್ತವೆ. ಇದರಲ್ಲಿ ನೀರಿನಿಂದ ಶಾಖವನ್ನು ತೆಗೆಯಲು ತಂಪಾದ ನೀರನ್ನು ನಿರಂತರವಾಗಿ ಪೂರೈಸಬೇಕಾಗುತ್ತದೆ. ಗಾಳಿಯಿಂದ ತಂಪುಗೊಳಿಸುವಿಕೆಯಲ್ಲಿ ಫ್ಯಾನ್ ಬಳಸಲಾಗುತ್ತದೆ; ಇದಕ್ಕೆ ಹೆಚ್ಚು ವಿದ್ಯುತ್ ಅಗತ್ಯವಿದೆ. ಒಂದು ವೇಳೆ ಪಳೆಯುಳಿಕೆ ಇಂಧನ(ಡೀಸೆಲ್ ಜನರೇಟರ್) ಬಳಸಿ ವಿದ್ಯುತ್ ಉತ್ಪಾದಿಸಿದ್ದರೆ, ಅದರಿಂದ ಪರಿಸರ ಹೊರೆ ಹೆಚ್ಚು ಆಗಲಿದೆ. ಆಧುನಿಕ ದತ್ತಾಂಶ ಕೇಂದ್ರಗಳು ಹೊರಹಾಕುವ ಅಪಾರ ಶಾಖವನ್ನು ಸಾಂಪ್ರದಾಯಿಕ ಫ್ಯಾನ್‌ಗಳು ನಿರ್ವಹಿಸಲಾರವು. ಆದ್ದರಿಂದ ದ್ರವ ತಂಪುಗೊಳಿಸುವಿಕೆ ತಂತ್ರಜ್ಞಾನ(ಡೈಎಲೆಕ್ಟ್ರಿಕ್ ದ್ರವದಲ್ಲಿ ಸರ್ವರ್, ಚಿಪ್ ಮತ್ತಿತರ ಸಾಧನಗಳನ್ನು ಮುಳುಗಿಸುವುದು)ವನ್ನು ಬಳಸಲಾಗುತ್ತದೆ. ಈ ದ್ರವ ಶಾಖವನ್ನು ಹೀರಿಕೊಂಡು ವಿನಿಮಯ ಯಂತ್ರಕ್ಕೆ ವರ್ಗಾಯಿಸುತ್ತದೆ. ಬಳಿಕ ತಂಪಾಗಿ, ಮತ್ತೆ ಟ್ಯಾಂಕಿಗೆ ಮರಳುತ್ತದೆ. ಈ ಸಾಧನಗಳು ದುಬಾರಿ.

ದತ್ತಾಂಶ ಕೇಂದ್ರಗಳು ತಾವು ಪುನರ್‌ಬಳಕೆ ನೀರು ಬಳಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತವೆ. ಆದರೆ, ತ್ಯಾಜ್ಯ ನೀರನ್ನು ಸಮರ್ಪಕವಾಗಿ ಸಂಶ್ಲೇಷಿಸದಿದ್ದರೆ, ತಂಪಾಗಿಸುವ ಯಂತ್ರದ ಕೊಳವೆಗಳು ತುಕ್ಕು ಹಿಡಿಯುತ್ತವೆ, ಪಾಚಿ ಕಟ್ಟಿಕೊಳ್ಳುತ್ತದೆ ಮತ್ತು ಸೂಕ್ಷ್ಮಜೀವಿಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ಯಂತ್ರದ ಕ್ಷಮತೆ ಕುಸಿಯುತ್ತದೆ. ಈ ಯಂತ್ರಗಳಲ್ಲಿ ಬಳಸುವ ನೀರು ಶುದ್ಧವಾಗಿರಬೇಕು. ಇವು ಹೇಳುವ ‘ವಾಟರ್ ಆಫ್‌ಸೆಟ್ಟಿಂಗ್’ ಅಂದರೆ, ಒಂದು ಕಡೆ ಬಳಸುವ ನೀರನ್ನು ಇನ್ನೊಂದೆಡೆ ಮರುದುಂಬಿಸುವಿಕೆ ಕೂಡ ಸಮಸ್ಯಾತ್ಮಕ. ಮೈಕ್ರೋಸಾಫ್ಟ್ ಮತ್ತು ಅಮೆಝಾನ್ ತಾವು ಬಳಸಿದ್ದಕ್ಕಿಂತ ಹೆಚ್ಚು ನೀರನ್ನು ಸಮುದಾಯಕ್ಕೆ ವಾಪಸ್ ನೀಡಿರುವುದಾಗಿ ಹೇಳಿಕೊಳ್ಳುತ್ತವೆ. ಅಮೆಝಾನ್ ಬೆಂಗಳೂರಿನ ಯಮರೆ ಹಾಗೂ ಹೈದರಾಬಾದ್‌ನ ಸಾಯಿ ರೆಡ್ಡಿ ಕೆರೆಯನ್ನು ಪುನಶ್ಚೇತನಗೊಳಿಸುತ್ತಿದೆ. 2025ರಿಂದ ಕೆಸರೆತ್ತುವಿಕೆ, ಬದು ನಿರ್ಮಾಣ ಮತ್ತು ತೂಬುಗಳ ದುರಸ್ತಿ ನಡೆಯುತ್ತಿದ್ದು, ಯಮರೆ ಕೆರೆಯಿಂದ ವಾರ್ಷಿಕ 270 ದಶಲಕ್ಷ ಲೀಟರ್ ಹಾಗೂ ಸಾಯಿ ರೆಡ್ಡಿ ಕೆರೆಯಿಂದ 300 ದಶಲಕ್ಷ ಲೀಟರ್ ನೀರು ಮರುತುಂಬಲಾಗುತ್ತಿದೆ ಎಂದು ಹೇಳಿಕೊಂಡಿದೆ. ಸಮಸ್ಯೆ ಏನೆಂದರೆ, ಇದು ಎಲ್ಲೋ ನಾಶವಾದ ಸಮೃದ್ಧ ಕಾಡಿನ ಬದಲು ಇನ್ನೆಲ್ಲೋ ಮರಗಿಡ ನೆಡುವ ಪರಿಹಾರಾತ್ಮಕ ಅರಣ್ಯೀಕರಣದಂತೆ. ತಜ್ಞರ ಪ್ರಕಾರ, ಸರಕಾರ ಅಂತರ್ಜಲ ಎತ್ತುವಿಕೆಯನ್ನು ನಿಯಂತ್ರಿಸಬೇಕು, ಲೆಕ್ಕಿಸಲು ಮೀಟರ್ ಅಳವಡಿಸಬೇಕು ಮತ್ತು ಅಂತರ್ಜಲ ಮರುಪೂರಣಕ್ಕೆ ಒತ್ತು ನೀಡಬೇಕು. ಇದೆಲ್ಲ ಇಲ್ಲಿ ಕನಸೇ ಸರಿ!

ಅಪಾರದರ್ಶಕ ಕಾರ್ಯನಿರ್ವಹಣೆ

ದೇಶದ ಪ್ರಮುಖ ದತ್ತಾಂಶ ಕೇಂದ್ರಗಳ ಪರಿಸರ, ಸಾಮಾಜಿಕ ಮತ್ತು ನಿರ್ವಹಣೆ(ಇಎಸ್‌ಜಿ) ವರದಿಗಳು ಅಪಾರದರ್ಶಕವಾಗಿವೆ; ಅವು ಉಪಯೋಗಿಸಿದ ನೀರು(ತಂಪುಗೊಳಿಸುವ ವ್ಯವಸ್ಥೆಯಲ್ಲಿ ನಷ್ಟವಾದ ನೀರು) ಮತ್ತು ಎತ್ತಿದ ನೀರು(ಮೇಲ್ಮೈ, ಅಂತರ್ಜಲ, ಸಂಸ್ಕರಿಸಿದ ಕುಡಿಯುವ ನೀರು) ಮಾಹಿತಿ ಮಾತ್ರ ನೀಡುತ್ತವೆ. ಏರ್‌ಟೆಲ್‌ನ ನೆಕ್ಸ್‌ಟ್ರಾ 8 ನಗರಗಳಲ್ಲಿ 15 ದತ್ತಾಂಶ ಕೇಂದ್ರಗಳನ್ನು ಹೊಂದಿದೆ. 2025ರ ಇಎಸ್‌ಜಿ ವರದಿಯಲ್ಲಿ ತಾನು 216 ದಶಲಕ್ಷ ಲೀಟರ್ ನೀರು ಬಳಸಿರುವುದಾಗಿ ಹೇಳಿಕೊಂಡಿದೆ. ಆದರೆ, 2022 ಮತ್ತು 2023ರ ವರದಿ ನೀಡಿಲ್ಲ. ಚೆನ್ನೈನಲ್ಲಿ ಅದಾನಿ ಕನೆಕ್ಷ್ 2022ರಲ್ಲಿ ಕಾರ್ಯಾರಂಭ ಮಾಡಿತು. ಆದರೆ, ಇಎಸ್‌ಜಿ ವರದಿ ಸಲ್ಲಿಸಲಿಲ್ಲ. ಬದಲಾಗಿ 2025ರಲ್ಲಿ ಅದರ ಮಾತೃಸಂಸ್ಥೆ ಅದಾನಿ ಎಂಟರ್‌ಪ್ರೈಸಸ್ ತನ್ನೆಲ್ಲ ವ್ಯವಹಾರಕ್ಕೆ 4,390 ದಶಲಕ್ಷ ಲೀಟರ್ ನೀರು ಬಳಸಿರುವುದಾಗಿ ಹೇಳಿಕೊಂಡಿತು. ದೇಶದಲ್ಲಿ 30 ದತ್ತಾಂಶ ಕೇಂದ್ರಗಳನ್ನು ಹೊಂದಿರುವ ಸಿಂಗಾಪುರ ಮೂಲದ ಎಸ್‌ಟಿ ಟೆಲಿಮೀಡಿಯಾ ಗ್ಲೋಬಲ್ ಡೇಟಾ ಸೆಂಟರ್ 2024ರ ಇಎಸ್‌ಜಿ ವರದಿಯನ್ನೇ ಸಲ್ಲಿಸಿಲ್ಲ.

ದತ್ತಾಂಶ ಕೇಂದ್ರಗಳ ಹೆಚ್ಚಳ ಹಾಗೂ ಕೃತಕ ಬುದ್ಧಿಮತ್ತೆಯಿಂದ ವಿದ್ಯುತ್ ಬೇಡಿಕೆ ಹೆಚ್ಚಿದೆ. ಎಐ ದತ್ತಾಂಶ ಕೇಂದ್ರಗಳು ಭಾರೀ ಭಾಷಾ ಮಾದರಿ(ಎಲ್‌ಎಲ್‌ಎಂ)ಗಳ ತರಬೇತಿ ಮತ್ತು ಅಳವಡಿಕೆಗೆ ಗ್ರಾಫಿಕ್ಸ್ ಪ್ರೊಸೆಸಿಂಗ್ ಘಟಕ(ಜಿಪಿಯು)ಗಳ ದಟ್ಟ ಗುಚ್ಛವನ್ನು ಬಳಸುತ್ತವೆ. ಜನರೇಟಿವ್ ಎಐ ಉಬ್ಬರ ಸದ್ಯಕ್ಕೆ ಕಡಿಮೆಯಾಗುವ ಸಾಧ್ಯತೆ ಇಲ್ಲ. ಇದರಿಂದ ವಿದ್ಯುತ್ ಮತ್ತು ನೀರಿನ ಬೇಡಿಕೆ ಹೆಚ್ಚಿದೆ. ಗೂಗಲ್ ಇದಕ್ಕೊಂದು ಪರ್ಯಾಯ ಮಾರ್ಗವನ್ನು ಕಂಡುಕೊಂಡಿದ್ದು, ‘ಸನ್‌ಕ್ಯಾಚರ್’ ಯೋಜನೆಯನ್ನು ರೂಪಿಸಿದೆ. ದತ್ತಾಂಶ ಕೇಂದ್ರಗಳನ್ನು ಅಂತರಿಕ್ಷದಲ್ಲಿ ಸ್ಥಾಪಿಸಿ, ಅವುಗಳನ್ನು ಸೌರಶಕ್ತಿಯಿಂದ ನಡೆಸುವುದು ಕಾರ್ಯತಂತ್ರ. ಅಂತರಿಕ್ಷದಲ್ಲಿ ಕೆಲವು ಕಿಲೋಮೀಟರ್ ಅಂತರದಲ್ಲಿರುವ ಸರಣಿ ಉಪಗ್ರಹಗಳು ಸೂರ್ಯನನ್ನು ನೇರ ರೇಖೆಯಲ್ಲಿಟ್ಟುಕೊಂಡು ಸುತ್ತುತ್ತ ವಿದ್ಯುತ್ ಉತ್ಪಾದಿಸುತ್ತವೆ. ಆದರೆ, ಇದು ಬಲು ದುಬಾರಿ ಮತ್ತು ಮಹತ್ವಾಕಾಂಕ್ಷಿ ಯೋಜನೆ. ಯಶಸ್ವಿಯಾದಲ್ಲಿ ನೀರು ಹಾಗೂ ವಿದ್ಯುತ್ ಇಲ್ಲದೆ ದತ್ತಾಂಶ ಕೇಂದ್ರಗಳನ್ನು ನಿರ್ವಹಿಸುವ ಕಾಲ ಬರಲಿದೆ.

ದೇಶದ ಅಂದಾಜು ಶೇ.85ರಷ್ಟು ಕುಟುಂಬಗಳು ಸ್ಮಾರ್ಟ್‌ಫೋನ್ ಹೊಂದಿವೆ ಮತ್ತು ಶೇ.86ರಷ್ಟು ಮನೆಗಳಲ್ಲಿ ಅಂತರ್ಜಾಲ ಸಂಪರ್ಕ ಇದೆ. ಅಂತರ್ಜಾಲ, ಇಮೇಲ್, ವಾಟ್ಸ್‌ಆ್ಯಪ್, ಫೇಸ್‌ಬುಕ್ ಇತ್ಯಾದಿ ಇಲ್ಲದ ಜಗತ್ತನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ; ದತ್ತಾಂಶ ಕೇಂದ್ರಗಳಿಲ್ಲದೆ ಇವು ಕಾರ್ಯನಿರ್ವಹಿಸಲಾರವು. ಆದರೆ, ಇದಕ್ಕೆ ತೆರಬೇಕಾದ ಬೆಲೆ ಏನು? ತೆರುವವರು ಯಾರು? ಕರ್ನಾಟಕ ವಿದ್ಯುತ್ ಮತ್ತು ನೀರಿನ ಕೊರತೆ ಇರುವ ರಾಜ್ಯ. ಬೇಸಿಗೆಯಲ್ಲಿ ಗ್ರಾಮಾಂತರ ಮಾತ್ರವಲ್ಲದೆ ನಗರ ಪ್ರದೇಶದಲ್ಲಿಯೂ ಲೋಡ್ ಶೆಡ್ಡಿಂಗ್ ಇರುತ್ತದೆ. ದತ್ತಾಂಶ ಕೇಂದ್ರಗಳು ಸಾಕಷ್ಟು ಉದ್ಯೋಗ ಸೃಷ್ಟಿಸುತ್ತವೆ ಎನ್ನುವುದು ನಿಜ. ಆದರೆ, ಕೃಷಿ ಮತ್ತು ಜೀವಾಧಾರವಾದ ನೀರನ್ನು ಕಸಿದುಕೊಳ್ಳುತ್ತವೆ ಮತ್ತು ವಿದ್ಯುತ್ ಕೊರತೆಗೆ ಕಾರಣವಾಗಲಿದೆ. ಆದ್ದರಿಂದ, ರಾಜ್ಯ ಇಲ್ಲವೇ ಕರಾವಳಿಯಲ್ಲಿ ದತ್ತಾಂಶ ಕೇಂದ್ರಗಳು ಸ್ಥಾಪನೆ ಆಗದಿದ್ದಲ್ಲಿ ಗೋಳಾಡುವ ಅಗತ್ಯವೇನಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಾಧವ ಐತಾಳ್

contributor

Similar News