ರಿತ್ವಿಕ್ ಘಟಕ್ 100: ನೋವಿಗದ್ದಿದ, ಸ್ಪಂದನಶೀಲ ಕ್ಯಾಮರಾ
ರಿತ್ವಿಕ್ ಘಟಕ್ ಹುಟ್ಟಾ ಮೂರ್ತಿಭಂಜಕ. 50ನೇ ವಯಸ್ಸಿನಲ್ಲಿ ಸಾಯುವ ಮುನ್ನ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಹೆಜ್ಜೆ ಗುರುತು ಮೂಡಿಸಿದ್ದರು. ಅವರ ಕೊಡುಗೆಗಳಿಗೆ ಪರ್ಯಾಯವೇ ಇಲ್ಲ; ಸ್ಪರ್ಧಿಗಳು ಇಲ್ಲ ಹಾಗೂ ನಕಲು ಮಾಡುವವರು ಕೂಡ ಇಲ್ಲ. ‘ಬಾರಿ ಥೇಕೆ ಪಾಲಿಯೆ’(1958)ರಿಂದ ಆರಂಭಗೊಂಡ ಅವರ ಚಿತ್ರಯಾನದಲ್ಲಿ ಮೂಡಿದ ಎಲ್ಲ ಕೃತಿಗಳೂ ರಾಜಿಯಾಗದ ಪ್ರವೃತ್ತಿ, ಸೈದ್ಧಾಂತಿಕ ಬದ್ಧತೆ, ಸ್ವಾತಂತ್ರ್ಯದ ಹಂಬಲ, ನಿರಾಶ್ರಿತರು-ಜನಸಾಮಾನ್ಯರ ಬಗ್ಗೆ ಕಾಳಜಿ ಮತ್ತು ನಿರಂತರ ಹೋರಾಟದ ಪ್ರತೀಕವಾಗಿವೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಜೀವವಿಮೆ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ, ಸುರಕ್ಷತೆಯ ಖಾತರಿಯಿಲ್ಲದ ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿಯವರಿಗೆ ಅನುಮತಿ ನೀಡುವಿಕೆ ಮಸೂದೆಯಲ್ಲದೆ, ಗ್ರಾಮೀಣರ ಜೀವನಾಡಿಯಾಗಿದ್ದ ನರೇಗಾದ ಹೆಸರು ಬದಲಿಸಿ ವಿರೂಪಗೊಳಿಸಲಾಗಿದೆ. ಜನಸಾಮಾನ್ಯರ ಹಿತಾಸಕ್ತಿಗೆ ಧಕ್ಕೆ ತರುವ ಇಂಥ ಮಸೂದೆಗಳ ನಡುವೆಯೇ ಕಟ್ಟಾ ಸಿದ್ಧಾಂತಿ, ಮೂರ್ತಿಭಂಜಕ ಮತ್ತು ಸಿನೆಮಾ ಮಾಧ್ಯಮವನ್ನು ಮಾನವೀಯಗೊಳಿಸಿದ ಚಿತ್ರ ನಿರ್ದೇಶಕ ರಿತ್ವಿಕ್ ಘಟಕ್ ನೂರು ವರ್ಷ(ನವೆಂಬರ್ 4, 1925- ಫೆಬ್ರವರಿ 6, 1976) ಪೂರೈಸಿದ್ದಾರೆ.
ಬಂಗಾಳದ ಖ್ಯಾತ ತ್ರಿವಳಿ ನಿರ್ದೇಶಕರಲ್ಲಿ ಘಟಕ್ ಕಿರಿಯರು(ಸತ್ಯಜಿತ್ ರೇ, ಮೃಣಾಲ್ ಸೇನ್ ಇನ್ನಿಬ್ಬರು). ರಾಜಕೀಯ ನಂಬಿಕೆಯಷ್ಟೇ ತೀವ್ರತೆ-ಬದ್ಧತೆಯಿಂದ ಸಿನೆಮಾ ಮಾಡುತ್ತಿದ್ದ ಅವರ ಜತೆಗಾರರಿಗೆ ಕೂಡ ಅವರ ತೀವ್ರ ಕ್ರಾಂತಿಕಾರಿ ಆಲೋಚನೆಗಳನ್ನು ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ; ಹೀಗಾಗಿ, ಸೈದ್ಧಾಂತಿಕ ಏಕಾಂಗಿತನ ಅನುಭವಿಸಬೇಕಾಯಿತು. ಘಟಕ್ ಹುಟ್ಟಾ ಮೂರ್ತಿಭಂಜಕ. 50ನೇ ವಯಸ್ಸಿನಲ್ಲಿ ಸಾಯುವ ಮುನ್ನ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಹೆಜ್ಜೆ ಗುರುತು ಮೂಡಿಸಿದ್ದರು. ಅವರ ಕೊಡುಗೆಗಳಿಗೆ ಪರ್ಯಾಯವೇ ಇಲ್ಲ; ಸ್ಪರ್ಧಿಗಳು ಇಲ್ಲ ಹಾಗೂ ನಕಲು ಮಾಡುವವರು ಕೂಡ ಇಲ್ಲ. ‘ಬಾರಿ ಥೇಕೆ ಪಾಲಿಯೆ’(1958)ರಿಂದ ಆರಂಭಗೊಂಡ ಅವರ ಚಿತ್ರಯಾನದಲ್ಲಿ ಮೂಡಿದ ಎಲ್ಲ ಕೃತಿಗಳೂ ರಾಜಿ ಯಾಗದ ಪ್ರವೃತ್ತಿ, ಸೈದ್ಧಾಂತಿಕ ಬದ್ಧತೆ, ಸ್ವಾತಂತ್ರ್ಯದ ಹಂಬಲ, ನಿರಾಶ್ರಿತರು-ಜನಸಾಮಾನ್ಯರ ಬಗ್ಗೆ ಕಾಳಜಿ ಮತ್ತು ನಿರಂತರ ಹೋರಾಟದ ಪ್ರತೀಕವಾಗಿವೆ.
ಚಿತ್ರಯಾನ
ರಿತ್ವಿಕ್ ತಂದೆ ಸುರೇಶ್ ಚಂದ್ರ ಘಟಕ್ ಜಿಲ್ಲಾ ಮ್ಯಾಜಿಸ್ಟ್ರೇಟ್, ಕವಿ ಮತ್ತು ನಾಟಕಕಾರ; ತಾಯಿ ಇಂದುಬಾಲಾ ದೇವಿ. ದೇಶ ವಿಭಜನೆ ಬಳಿಕ ಢಾಕಾದಿಂದ ಭಾರತಕ್ಕೆ ವಲಸೆ. ಪತ್ನಿ ಸುರಮಾ ಮತ್ತು ಮಕ್ಕಳು ಸಂಹಿತಾ(ಸಾಕ್ಷ್ಯಚಿತ್ರ ನಿರ್ದೇಶಕಿ), ಸುಶ್ಮಿತಾ ಹಾಗೂ ಮಗ ರಿತಬನ್(ಚಿತ್ರ ನಿರ್ಮಾಪಕ). ಘಟಕ್ ಅವರಿಗೆ ವೇದ, ಭಾರತೀಯ ಸಂಸ್ಕೃತಿ/ ಸಂಪ್ರದಾಯಗಳ ಆಳವಾದ ಜ್ಞಾನ ಇದ್ದಿತ್ತು. ಅವರ ಚಿತ್ರಗಳಲ್ಲಿ ಬಂಗಾಳದ ವಿಭಜನೆ, ಅದರ ಮಾನುಷ ದುರಂತಗಳು ಮತ್ತು ಸಾಂಸ್ಕೃತಿಕ ನಷ್ಟ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಸ್ಪ್ಯಾನಿಷ್ ಮತ್ತು ಮೆಕ್ಸಿಕೋ ಚಿತ್ರ ನಿರ್ದೇಶಕ ಲೂಯಿಸ್ ಬುನುಯಲ್ ಅವರ ಸಿನೆಮಾ ‘ನಜರಿನ್’ (1959) ಅವರ ಮೆಚ್ಚಿನ ಚಿತ್ರ. ಸ್ವೀಡಿಷ್ ನಿರ್ದೇಶಕ ಇಂಗ್ಮರ್ ಬರ್ಗ್‌ಮನ್ ಸಿನೆಮಾಗಳ ಬಗ್ಗೆ ಅವರಿಗೆ ಹೆಚ್ಚು ಒಲವು ಇರಲಿಲ್ಲ; ಬರ್ಗ್‌ಮನ್ ಸಿನೆಮಾಗಳಲ್ಲಿನ ಧಾರ್ಮಿಕತೆಯನ್ನು ತಳ್ಳಿ ಹಾಕಿದ್ದರು. ಬಾರಿ ಥೇಕೆ ಪಾಲಿಯೆ, ಅಜಾಂತ್ರಿಕ್(1958), ಮೇಘೆ ಡಾಕಾ ತಾರಾ(1960), ಕೋಮಲ್ ಗಾಂಧಾರ್(1961), ಸುಬರ್ಣರೇಖಾ(1965), ತಿತಾಸ್ ಏಕ್ತಿ ನದಿರ್ ನಾಮ್(1973), ನಾಗರಿಕ್ ಮತ್ತು ಜುಕ್ಟಿ ತಕ್ಕೋ ಔರ್ ಗಪ್ಪೊ(1977). ನಾಗರಿಕ್ 1952ರಲ್ಲೇ ನಿರ್ಮಾಣಗೊಂಡಿದ್ದರೂ ಬಿಡುಗಡೆಯಾಗಿದ್ದು ಸೆಪ್ಟಂಬರ್ 20, 1977ರಲ್ಲಿ. 7 ಚಿತ್ರಗಳಿಗೆ ಕಥೆ/ಚಿತ್ರಕತೆ(ಮುಸಾಫಿರ್, ಮಧುವತಿ, ಸ್ವರಲಿಪಿ, ಕುಮಾರಿ ಮೋನ್, ದೀಪರ್ ನಾಮ್ ತಿಯಾ ರೊಂಗ್, ರಾಜ್‌ಕನ್ಯಾ, ಹೀರೆರ್ ಪ್ರಜಾಪತಿ) ಬರೆದಿದ್ದಾರೆ. ಸಾಕ್ಷ್ಯಚಿತ್ರಗಳೆಂದರೆ, ದ ಲೈಫ್ ಆಫ್ ಆದಿವಾಸಿಸ್ ಮತ್ತು ಪ್ಲೇಸಸ್ ಆಫ್ ಹಿಸ್ಟಾರಿಕಲ್ ಇಂಟೆರೆಸ್ಟ್ ಇನ್ ಬಿಹಾರ್ 1955, ಒರಾನ್ 1957, ಸಿಸರ್ಸ್ 1962, ಉಸ್ತಾದ್ ಅಲ್ಲಾವುದ್ದೀನ್ ಖಾನ್ 1963, ಫಿಯರ್/ರೆಂಡೆವೋ ಮತ್ತು ಸಿವಿಲ್ ಡಿಫೆನ್ಸ್ 1965, ಸೈಂಟಿಸ್ಟ್ಸ್ ಆಫ್ ಟುಮಾರೋ 1967, ಯೆಕ್ಯೋ/ಅಮರ್ ಲೆನಿನ್/ಪುರುಲಿಯರ್ ಚೌ 1970 ಹಾಗೂ ದರ್ಬಾರ್ ಗತಿ ಪದ್ಮಾ 1971. ಅಪೂರ್ಣ ಚಿತ್ರ/ಸಾಕ್ಷ್ಯಚಿತ್ರಗಳು 6 ಮತ್ತು 25 ಚಿತ್ರಕತೆಗಳು ಚಿತ್ರೀಕರಣಕ್ಕೆ ಮುನ್ನವೇ ನಿಲುಗಡೆಯಾದವು. ಬಿಮಲ್ ರಾಯ್ ಅವರ ಚಿತ್ರ ಮಧುಮತಿ(1958)ಗೆ ಘಟಕ್ ಕಥೆ-ಚಿತ್ರಕತೆ ಬರೆದಿದ್ದಾರೆ(ಸಹಲೇಖಕ ರಾಜಿಂದರ್ ಸಿಂಗ್ ಬೇಡಿ). ಇದು ಕ್ಲಾಸಿಕ್‌ಗಳಲ್ಲಿ ಒಂದು. ಅನೂಪ್ ಸಿಂಗ್ ನಿರ್ದೇಶಿತ ಏಕ್ತಿ ನದಿರ್ ನಾಮ್ ಮತ್ತು ಕಮಲೇಶ್ವರ್ ನಿರ್ದೇಶನದ ಮೇಘೆ ಡಾಕಾ ತಾರಾ(2013) ಅವರನ್ನು ಕುರಿತ ಚಿತ್ರಗಳು.
ಘಟಕ್ ಅವರ ಸಿನೆಮಾಗಳು ಅನಿರ್ದಿಷ್ಟ ಮೋಹಕತೆ, ಕಲ್ಪನೆಯಲ್ಲಿ ನಾವೀನ್ಯತೆ, ಅಂಕುಶವಿಲ್ಲದ ಕ್ರಿಯಾಶೀಲ ಚೈತನ್ಯ ಮತ್ತು ದಿನನಿತ್ಯದ ಬದುಕಿನ ನಿಷ್ಕೃಷ್ಟ ಚಿತ್ರಣದಿಂದ ಸೆಳೆಯುತ್ತವೆ. ಸಾಮಾನ್ಯ ನಿರ್ದೇಶಕನ ಕೈಯಲ್ಲಿ ಮೆಲೋಡ್ರಾಮಾ(ಭಾವೋದ್ರೇಕ, ಗೋಳು ಕರೆಯುವಿಕೆ) ಆಗಬಹುದಾದ ಚಿತ್ರಗಳನ್ನು ಉನ್ನತ ಕಲೆಯನ್ನಾಗಿಸುವ ಪ್ರತಿಭೆ ಅವರಲ್ಲಿ ಇತ್ತು. ಹಿನ್ನೆಲೆ ಶಬ್ದ, ಸಂಗೀತ ಮತ್ತು ದೃಶ್ಯತೆಯನ್ನು ಅಸಾಂಪ್ರದಾಯಿಕವಾಗಿ ಬಳಸುತ್ತಿದ್ದರು. ಜನ ನಾಟ್ಯ ಮಂಚ್ ಹಾಗೂ ಇಪ್ಟಾ(ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್)ದಲ್ಲಿ ಕಲಿತ ರಂಗಭೂಮಿಯ ತಂತ್ರಗಳನ್ನು ಸಿನೆಮಾದಲ್ಲಿ ಬಳಸಿದರು. ಪಠ್ಯಕತೆಯನ್ನು ಆಧರಿಸಿ, ಒಂದು ದೃಶ್ಯ ಇಲ್ಲವೇ ದೃಶ್ಯಾವಳಿಯನ್ನು ವಿಸ್ತರಿಸಲಾಗುತ್ತದೆ. ಆದರೆ, ಘಟಕ್ ಇದನ್ನು ತದ್ವಿರುದ್ಧವಾಗಿ ಮಾಡುತ್ತಿದ್ದರು. ಅಪರಿಚಿತ ಕೋನ, ಮಸೂರ, ನೆರಳು-ಬೆಳಕಿನ ಬಳಕೆ, ಸಂಗೀತದ ಮೂಲಕ ತೀವ್ರತೆ ತರುತ್ತಿದ್ದರು. ಅವರ ಸಿನೆಮಾಗಳಲ್ಲಿ ದೃಶ್ಯತೆಯಷ್ಟೇ ಮುಖ್ಯ ಸ್ಥಾನ ಹಿನ್ನೆಲೆ ಶಬ್ದ-ಸಂಗೀತಕ್ಕೆ ಇದೆ. ಅವುಗಳನ್ನು ನಾಟಕೀಯ ಪರಿಣಾಮಕ್ಕಾಗಿ ಬಳಸುತ್ತಿದ್ದರು. ಹಲವು ಪದರಗಳ ಶಬ್ದಗಳು, ಸಂಗೀತ, ಸಂಭಾಷಣೆಯನ್ನು ಒಳಗೊಂಡ ಸೌಂಡ್ ಟ್ರ್ಯಾಕ್‌ನಿಂದ ದೃಶ್ಯ ಹಾಗೂ ಸಿನೆಮಾದ ಒಟ್ಟಾರೆ ಪರಿಣಾಮ ಹೆಚ್ಚುತ್ತಿತ್ತು. ಅವರ ಚಿತ್ರಗಳ ಸಂಗೀತ ನಿರ್ದೇಶಕ ಅವರೇ!
ರೇ-ಘಟಕ್ ಸಂಬಂಧ
ರೇ ಮತ್ತು ಘಟಕ್ ನಡುವೆ ವೈಮನಸ್ಸು ಇತ್ತು; ಸೌಹಾರ್ದ ಸಂಬಂಧ ಇರಲಿಲ್ಲ ಎಂಬ ತಪ್ಪು ಕಲ್ಪನೆ ಬಹಳ ಜನರಲ್ಲಿ ಇದೆ. ಆದರೆ, ಅದು ಸುಳ್ಳು. ಘಟಕ್ 1963ರಲ್ಲಿ ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್‌ಗೆ ಉಪಪ್ರಾಚಾರ್ಯ ಮತ್ತು ಸಿನೆಮಾ ನಿರ್ದೇಶನದ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅವರನ್ನು ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ನೇಮಕ ಮಾಡಬೇಕೆಂದು ಆಗಿನ ವಾರ್ತಾ ಮತ್ತು ಪ್ರಚಾರ ಸಚಿವೆ ಇಂದಿರಾ ಗಾಂಧಿ ಅವರಿಗೆ ರೇ ಶಿಫಾರಸು ಮಾಡಿದ್ದರು. ರೇ ಒಮ್ಮೆ ‘‘ಘಟಕ್ ರಕ್ತನಾಳದಲ್ಲೇ ಸಿನೆಮಾ ಹರಿಯುತ್ತಿದೆ’’ ಎಂದು ಶ್ಲಾಘಿಸಿದ್ದರು. ನಿರ್ದಿಷ್ಟ ಸನ್ನಿವೇಶವೊಂದರ ಪರಿಣಾಮವನ್ನು ಹಿನ್ನೆಲೆ ಶಬ್ದ-ಸಂಗೀತ ಹೇಗೆ ವರ್ಧಿಸುತ್ತದೆ ಮತ್ತು ವೀಕ್ಷಕರಿಗೆ ಹೊಸ ಆಯಾಮವನ್ನು ನೀಡುತ್ತದೆ ಎಂಬುದನ್ನು ಹಾಗೂ ಸಿನೆಮಾ ಕಟ್ಟುವಿಕೆ ಕುರಿತ ರಾಜಿಯಾಗದ ಮನೋಭಾವ ಮತ್ತು ಭಾವತೀವ್ರತೆ(ಮೆಲೋಡ್ರಾಮಾ) ಕುರಿತು ವಿದ್ಯಾರ್ಥಿಗಳಿಗೆ ಕಲಿಸಿದರು. ತರಗತಿಯಲ್ಲಿ ಒಮ್ಮೆ ಸತ್ಯಜಿತ್ ರೇ ಅವರ ‘ಅಪರಾಜಿತೊ’ ಪ್ರದರ್ಶನದ ವೇಳೆ ‘‘ಇದು ಒಂದು ಮಹಾನ್ ಚಿತ್ರ’’ ಎಂದು ಶ್ಲಾಘಿಸಿದ್ದರು. ಹೀಗಿದ್ದರೂ, ಇಬ್ಬರ ನಡುವಿನ ಸಂಬಂಧ ಕುರಿತ ತಪ್ಪು ಕಲ್ಪನೆಗಳು ಉಳಿದೇ ಇದ್ದವು. ‘‘ಮೃತ ಘಟಕ್ ಅವರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ ನನ್ನನ್ನು ನೋಡಿದ ಕೆಲವರು, ನೀನು ಅವರನ್ನು ಕೊಂದೆ ಎಂದು ದೂಷಿಸಿದರು’’ ಎಂದು ರೇ, ಖ್ಯಾತ ನಿರ್ದೇಶಕ ಆಡೂರ್ ಗೋಪಾಲಕೃಷ್ಣನ್ ಅವರಿಗೆ ಒಮ್ಮೆ ಹೇಳಿದ್ದರು. ಘಟಕ್ ಕುರಿತ ಇನ್ನೊಂದು ತಪ್ಪು ಕಲ್ಪನೆ-ಮದ್ಯಪಾನಕ್ಕೆ ಸಂಬಂಧಿಸಿದೆ. ಆದರೆ, ಒಂದೇ ಒಂದು ದಿನ ಅವರು ತರಗತಿಗೆ ಮದ್ಯ ಸೇವಿಸಿ ಬಂದಿರಲಿಲ್ಲ ಎಂದು ಆಡೂರ್ ಹೇಳುತ್ತಾರೆ.
ರೇ, ಸೇನ್ ಮತ್ತು ಘಟಕ್
ಮೂವರೂ ನಗರ ಕುರಿತು ಬೇರೆಯದೇ ಸಂವೇದನೆ ಹೊಂದಿದ್ದಾರೆ. ರೇ ಅವರಿಗೆ ಕೋಲ್ಕತಾ ಸಾಮಾಜಿಕೋ-ರಾಜಕೀಯ ಘಟಕವಾಗಿದ್ದು, ಅಲ್ಲಿ ಮನುಷ್ಯರು ತಮ್ಮ ಪಾತ್ರ ನಿರ್ವಹಿಸುತ್ತಿರುತ್ತಾರೆ; ಸೇನ್ ಅವರಿಗೆ ಕೋಲ್ಕತಾ ಒಂದು ಮಾಂತ್ರಿಕ ಮತ್ತು ನಿಗೂಢ ನಗರ. ಆದರೆ, ಘಟಕ್ ಅವರಿಗೆ ಕೋಲ್ಕತಾ ಒಂದು ಪಾತ್ರ. ನಿರ್ವಸಿತರಿಗೆ ನೆಲೆ ನೀಡಿರುವಂಥದ್ದು; ಮೇಲ್ನೋಟಕ್ಕೆ ಕರುಣೆರಹಿತ ಹಾಗೂ ಕ್ಷೇಮದ ಕಡೆಗೆ ಗಮನವಿಲ್ಲದ ಕಠಿಣನಂತೆ ಕಾಣಿಸಿದರೂ, ಹುದುಗಿದ ಮಾನವೀಯ ಮಿಡಿತಗಳಿರುವ ನಗರ. ಅವರ ಮೊದಲ ಚಿತ್ರ ‘ಬಾರಿ ಥೇಕೆ ಪಾಲಿಯೆ’ಯಲ್ಲಿ ತಂದೆಯನ್ನು ಇಷ್ಟಪಡದ ತುಂಟ ಬಾಲಕನೊಬ್ಬ ಇದ್ದಾನೆ. ಆತ ‘ರಾತ್ರಿ ಕೂಡ ಬೆಳಕು ಇರುವ ನಗರ’ಕ್ಕೆ ಓಡಿಹೋಗುತ್ತಾನೆ. ಸೂರ್ಯ ಮೂಡುತ್ತಿರುವ ಹೌರಾ ಸೇತುವೆ ಮೂಲಕ ಕೋಲ್ಕತಾವನ್ನು ಪರಿಚಯಿಸಲಾಗುತ್ತದೆ. ಇಂದಿಗೂ ನೂರಾರು ಚಿತ್ರಗಳಲ್ಲಿ ಕೋಲ್ಕತಾವನ್ನು ತೋರಿಸುವುದು ಹೀಗೆಯೇ; ಕನಸುಗಳು ನನಸಾಗದೆ ಇದ್ದರೂ, ಬದುಕುಳಿಯುವ ತಾಣದಂತೆ. ಟ್ರಾಮ್‌ಗಳ ನಾಪತ್ತೆ ಮತ್ತು ಸರ್ವವ್ಯಾಪಿಯಾಗಿರುವ ಮೊಬೈಲ್ ಹೊರತುಪಡಿಸಿದರೆ, 1958ರ ಕೋಲ್ಕತಾ ಹೆಚ್ಚೇನೂ ಬದಲಾಗಿಲ್ಲ; ಸಂಜೆ ವೇಳೆ ಹೌರಾ ಮೇಲೆ ಕಿಕ್ಕಿರಿದ ಜನ, ಹೊರೆ ಹೊತ್ತ ಕಾರ್ಮಿಕರ ನಡಿಗೆ ಮತ್ತು ಓಟದ ನಡುವಿನ ಚಲನೆ, ಚೀಲ ತುಂಬಿದ ಗಾಡಿ ಎಳೆಯುವ ವ್ಯಕ್ತಿ ಇತ್ಯಾದಿ ಬಿಂಬಗಳು ಅಂತೆಯೇ ಇವೆ. ಬಹುಮಹಡಿ ಕಟ್ಟಡಗಳ ಎದುರು ಪೆಟ್ಟಿಗೆ ಅಂಗಡಿಗಳು, ಸಣ್ಣ ವ್ಯಾಪಾರಿಗಳು, ಚಪ್ಪಲಿ-ಕೊಡೆ ರಿಪೇರಿ ಮಾಡುವವರು ಇದ್ದಾರೆ. ಕಾರ್ಮಿಕರು ನಿಂತರೆ ಕೋಲ್ಕತಾ ಸ್ತಬ್ಧವಾಗುತ್ತದೆ. ಜನದಟ್ಟಣೆಯಿಂದ ತುಳುಕುತ್ತಿರುವ ರಸ್ತೆಯಲ್ಲಿರುವ ಪ್ರತಿಯೊಬ್ಬರಲ್ಲೂ ಇನ್ನೊಂದು ಮೇಘೆ ಡಾಕಾ ತಾರಾ ಇಲ್ಲವೇ ಸುಬರ್ಣರೇಖದಂಥ ಕತೆ ಇರಬಹುದು. ಇದು ಕೋಲ್ಕತಾ ಮಾತ್ರವಲ್ಲ; ಎಲ್ಲ ನಗರಗಳಿಗೂ ಅನ್ವಯಿಸುವ ಸಾರ್ವಕಾಲಿಕ ಸತ್ಯ. ಆದರೆ, ಹೌರಾ ಸೇತುವೆಯಡಿ ಸಾಕಷ್ಟು ನೀರು ಹರಿದಿದೆ. ಆಗಿನ ವಲಸಿಗರು ಈಗ ಸಿಟಿ ಆಫ್ ಜಾಯ್ ಭಾಗವಾಗಿದ್ದಾರೆ; ಆದರೆ, ಅವರಲ್ಲಿ ಎಲ್ಲರನ್ನೂ ನಗರ ಒಳಗೊಂಡಿದೆಯೇ? ಪ್ರಾಯಶಃ ಇಲ್ಲ.
ಹಿಂದಿ ಸಿನೆಮಾ ಮೇಲೆ ಛಾಯೆ
ನವ್ಯ(ಹೊಸ ಅಲೆ, ಆರ್ಟ್ ಹೌಸ್) ಸಿನೆಮಾಗಳು ಯುದ್ಧೋತ್ತರ ಇಟಲಿಯ ನವವಾಸ್ತವವಾದ ಮತ್ತು ಫ್ರೆಂಚ್ ನವ್ಯ ಅಲೆಯಿಂದ ಸ್ಫೂರ್ತಿ ಪಡೆದಿವೆ. ವಾಸ್ತವವಾದಿ ಸಿನೆಮಾದಲ್ಲಿ ಸರಳವಾದ, ರೇಖಾತ್ಮಕವಾದ ದೃಶ್ಯಾವಳಿಗಳ ಸರಣಿ ಇರುತ್ತದೆ. ಘಟಕ್ ಅವರ ವಾಸ್ತವವಾದಿ ಸಿನೆಮಾಗಳಲ್ಲಿಯೂ ಮೆಲೋಡ್ರಾಮಾ ಇರುತ್ತಿತ್ತು. ಎಫ್‌ಟಿಟಿಐಯಲ್ಲಿ ಶಿಕ್ಷಕರಾಗಿದ್ದರಿಂದ ಮತ್ತು ಭಾವಾತಿರೇಕವನ್ನು ಸಂವಹನಕ್ಕೆ ಬಳಸಿದ್ದರಿಂದ, ಅವರ ಛಾಯೆಯನ್ನು ಹಲವು ನಿರ್ದೇಶಕರಲ್ಲಿ ನೋಡಬಹುದು. ಅಡೂರ್ ಗೋಪಾಲಕೃಷ್ಣನ್, ಮಣಿ ಕೌಲ್, ಕುಮಾರ್ ಶಹಾನಿ, ಸಯೀದ್ ಅಖ್ತರ್ ಮಿರ್ಜಾ ಮಾತ್ರವಲ್ಲದೆ, ಸಂಜಯ್ ಲೀಲಾ ಬನ್ಸಾಲಿ, ವಿಧು ವಿನೋದ್ ಛೋಪ್ರಾ ಅವರ ಪ್ರಭಾವಕ್ಕೆ ಸಿಲುಕಿದವರು. ಪಾಯಲ್ ಕಪಾಡಿಯಾ ಅವರ ಸಾಕ್ಷ್ಯಚಿತ್ರ ‘ಎ ನೈಟ್ ಆಫ್ ನೋಯಿಂಗ್ ನಥಿಂಗ್’ನಲ್ಲಿ ಎಫ್‌ಟಿಟಿಐಯಲ್ಲಿರುವ ಘಟಕ್ ಅವರ ಮ್ಯೂರಲ್ ಇದೆ.
ಘಟಕ್ ತಮ್ಮ ಚಿತ್ರಗಳಲ್ಲಿ ಶಬ್ದವನ್ನು ಮನಶಾಸ್ತ್ರೀಯ ತಂತ್ರವಾಗಿ ಬಳಸುತ್ತಿದ್ದರು. ಮೇಘೆ ಡಾಕಾ ತಾರಾದಲ್ಲಿ ನಾಯಕಿ ನೀತಾ(ಸುಪ್ರಿಯಾ ಚೌಧುರಿ) ಕೃತಘ್ನ ಕುಟುಂಬದ ಜವಾಬ್ದಾರಿ ಹೊರಲು ವಿದ್ಯಾಭ್ಯಾಸ ನಿಲ್ಲಿಸುತ್ತಾಳೆ; ಸ್ನೇಹಿತ ಅವಳನ್ನು ತೊರೆದು, ಆಕೆಯ ತಂಗಿಯನ್ನು ವಿವಾಹವಾಗುತ್ತಾನೆ; ಅಷ್ಟಲ್ಲದೆ, ಕ್ಷಯಕ್ಕೆ ತುತ್ತಾಗುತ್ತಾಳೆ! ಅವಳ ನೋವನ್ನು ತೋರಿಸಲು ಘಟಕ್, ಚಾಟಿ ಶಬ್ದವನ್ನು ಬಳಸುತ್ತಾರೆ. ಸ್ನೇಹಿತನ ಅಪಾರ್ಟ್‌ಮೆಂಟಿನಲ್ಲಿ ಬೇರೆ ಹುಡುಗಿ ಇರುವುದನ್ನು ಗ್ರಹಿಸಿ, ಮೆಟ್ಟಿಲಿನಿಂದ ಇಳಿಯುವಾಗ ಚಾಟಿ ಸದ್ದು ಕೇಳಿಬರುತ್ತದೆ. ತಂಗಿಯ ವಿವಾಹದಲ್ಲಿ ಹಾಡಲು ಅಭ್ಯಾಸ ಮಾಡುತ್ತಿರುವಾಗ ಕುಸಿಯುತ್ತಾಳೆ. ಆಗ ಪದೇಪದೇ ಚಾಟಿ ಸದ್ದು ಅನುರಣಿಸುತ್ತದೆ. ಸುಬರ್ಣರೇಖಾ ಚಿತ್ರದ ನಾಯಕಿ ಸೀತಾ(ಮಾಧಬಿ ಮುಖರ್ಜಿ), ಸಹೋದರ ಈಶ್ವರನಿಂದ ಬೇರೆಯಾಗುತ್ತಾಳೆ; ದುರಂತವೊಂದರಲ್ಲಿ ಪತಿಯನ್ನು ಕಳೆದುಕೊಳ್ಳುತ್ತಾಳೆ ಮತ್ತು ಬದುಕಲು ವೇಶ್ಯಾವೃತ್ತಿಯನ್ನು ಅವಲಂಬಿಸುತ್ತಾಳೆ; ಆಕಸ್ಮಿಕವೋ ಎಂಬಂತೆ ಆಕೆಯ ಮೊದಲ ಗಿರಾಕಿಯೇ ಸೋದರ! ಇಂಥ ನಾಟಕೀಯ-ಭಾವನಾತ್ಮಕ ದೃಶ್ಯಗಳು ಬಾಲಿವುಡ್‌ನಲ್ಲಿ ದಂಡಿಯಾಗಿರುತ್ತವೆ. ಬನ್ಸಾಲಿ ಅವರ ದೇವದಾಸ್ ಚಿತ್ರದಲ್ಲಿ ನಾಯಕ ತಂದೆಯನ್ನು ಧಿಕ್ಕರಿಸಿ, ಮನೆ ಬಿಟ್ಟು ಹೊರಟಾಗ ಇಂಥದ್ದೇ ಸದ್ದು ಕೇಳಿಬರುತ್ತದೆ. ಮೇಘೆ ಡಾಕಾ ತಾರಾ, ಸುಬರ್ಣರೇಖಾ, ತಿತಾಶ್ ಏಕ್ತಿ ನದಿರ್ ನಾಮ್ ಚಿತ್ರಗಳಲ್ಲಿ ನಾಯಕ/ನಾಯಕಿ ಸಾಯುತ್ತಾರೆ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದನ್ನು ಬನ್ಸಾಲಿ ಅವರ ಚಿತ್ರಗಳಲ್ಲೂ ಕಾಣಬಹುದು. ಜೊತೆಗೆ, ಪಾತ್ರಗಳಲ್ಲಿ ಹುಚ್ಚುತನದ ಎಳೆಗಳು ಇರುತ್ತವೆ- ಗೆಳತಿ ಪಾರೋಳನ್ನು ತಂದೆ ಅವಮಾನಿಸಿದ್ದರಿಂದ, ಮದ್ಯ ಸೇವಿಸಿ ಸಾಯುವ ದೇವದಾಸ್(ಶಾರುಕ್ ಖಾನ್) ಇಲ್ಲವೇ ಮೃತ ತಂದೆಯೊಂದಿಗೆ ಮಾತಾಡುವ ಸಮೀರ್(ಸಲ್ಮಾನ್ ಖಾನ್, ಹಮ್ ದಿಲ್ ಚುಕೆ ಸನಂ) ಅಥವಾ ಪತ್ನಿ ಮಸ್ತಾನಿಯನ್ನು ತಾಯಿ ಮತ್ತು ಹಿರಿಯ ಮಗ ನಾನಾ ಸಾಹೇಬ್ ಸೆರೆಯಲ್ಲಿಟ್ಟಿದ್ದಾರೆ; ಅವರ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಭ್ರಮಿಸುತ್ತ ಸಾಯುವ ಒಂದನೇ ಬಾಜಿರಾಯ(ರಣವೀರ್ ಕಪೂರ್) ಇವರೆಲ್ಲರೂ ಚಂಚಲ-ದುರ್ಬಲ ಮನಸ್ಥಿತಿಯವರು. ಜೊತೆಗೆ, ಘಟಕ್ ಬಾಲಿವುಡ್‌ನಲ್ಲಿ ಸಾಕಷ್ಟು ಬಳಕೆಯಾಗಿರುವ ಪುನರ್ಜನ್ಮ ಕಲ್ಪನೆಯನ್ನು ಬಿಮಲ್ ರಾಯ್ ಅವರ ‘ಮಧುಮತಿ’ ಸಿನೆಮಾದ ಚಿತ್ರಕತೆಯಲ್ಲಿ ಅಳವಡಿಸಿದ್ದರು. ಈ ಸಿನೆಮಾದ ನೆರಳು ಸುಭಾಷ್ ಘಾಯ್ ಅವರ ಕರ್ಜ್(1980) ಮತ್ತು ಫರಾ ಖಾನ್ ಅವರ ಓ ಶಾಂತಿ ಓಂ(2007)ರಲ್ಲಿ ಇದೆ.
ಬಾಲ್ಯ ಸ್ನೇಹಿತರು ಆನಂತರ ಪ್ರೇಮಿಗಳಾಗುವುದು ಇನ್ನೊಂದು ಥೀಮ್; ಸುಬರ್ಣರೇಖಾದಲ್ಲಿ ಸೀತಾ ಮತ್ತು ಅಭಿರಾಂ ಬಾಲ್ಯ ಸ್ನೇಹಿತರಾಗಿದ್ದು, ದೊಡ್ಡವರಾದ ಬಳಿಕ ಪ್ರೀತಿಸುತ್ತಾರೆ. ಮೇಘೆ ಡಾಕಾ ತಾರಾದಲ್ಲಿ ಸೀತಾ, ಶಿಕ್ಷಕ ತಂದೆಯ ವಿದ್ಯಾರ್ಥಿಯಾಗಿದ್ದ ಸನತ್‌ನ ಗೆಳೆತನ ಮಾಡುತ್ತಾಳೆ. ಇದನ್ನು ವಿಧು ವಿನೋದ್ ಛೋಪ್ರಾ ಅನುಸರಿಸಿದ್ದಾರೆ. ಪರಿಂದಾದಲ್ಲಿ ಕರಣ್(ಅನಿಲ್ ಕಪೂರ್) ಮತ್ತು ಪಾರೋ(ಮಾಧುರಿ ದೀಕ್ಷಿತ್) ಹಾಗೂ ಮಿಷನ್ ಕಾಶ್ಮೀರ್‌ನಲ್ಲಿ ಅಲ್ತಾಫ್(ಹೃತಿಕ್ ರೋಷನ್) ಮತ್ತು ಸೂಫಿಯಾ (ಪ್ರೀತಿ ಜಿಂಟಾ) ಬಾಲ್ಯ ಸ್ನೇಹಿತರು.
ಬದುಕಿದ್ದಾಗ ಸಿಗದ ಗೌರವ
ಜೀವಿತಾವಧಿಯಲ್ಲಿ ಅವರ ಸಿನೆಮಾಗಳು ಯಾವುದೇ ಅಂತರ್‌ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿಲ್ಲ ಮತ್ತು ಅವರು ವಿದೇಶ ಪ್ರವಾಸ ಮಾಡಲಿಲ್ಲ. ಚಿತ್ರ ವಿಮರ್ಶಕಿ ಅಲಕಾ ಸಹಾನಿ ತಮ್ಮ ಲೇಖನ ‘ಎ ರಿವರ್ ನೇಮ್ಡ್ ರಿತ್ವಿಕ್’(ಇಂಡಿಯನ್ ಎಕ್ಸ್ ಪ್ರೆಸ್‌ನಲ್ಲಿ ಪ್ರಕಟಿತ)ದಲ್ಲಿ ರಿತ್ವಿಕ್ ಸಾವಿಗೆ ಕೆಲ ದಿನಗಳ ಮುನ್ನ ಮಗಳು ಸಂಹಿತಾಗೆ ‘ಸಾವಿನ ಬಳಿಕ ನನ್ನ ಚಿತ್ರಗಳನ್ನು ಶ್ಲಾಘಿಸುತ್ತಾರೆ ಎಂದು ಸಮಾಧಾನ ಪಡಿಸಿದ್ದರು’ ಎಂದಿದ್ದಾರೆ. ಮರಣಾನಂತರ ಸಾಲುಸಾಲು ಚಿತ್ರೋತ್ಸವಗಳಲ್ಲಿ ಅವರ ಚಿತ್ರಗಳ ರೆಟ್ರಾ ಸ್ಪೆಕ್ಟಿವ್‌ಗಳು ನಡೆದವು. ಈ ಜೀವನದಲ್ಲಿ ನ್ಯಾಯ ಪಡೆಯುವುದು ಕಷ್ಟ ಎಂದು ತಮ್ಮ ಕೃತಿಗಳ ಮೂಲಕ ಹೇಳಿದ್ದ ಘಟಕ್, ಸಾವಿನ ನಂತರ ತಮ್ಮನ್ನು ಜನ ಶ್ಲಾಘಿಸುತ್ತಾರೆ ಎಂದು ಸರಿಯಾಗಿಯೇ ಊಹಿಸಿದ್ದರು. ನಾನು ಅವರ ಬಹುತೇಕ ಸಿನೆಮಾಗಳನ್ನು ನೋಡಿದ್ದು ಬೆಂಗಳೂರಿನ ಬದಾಮಿ ಹೌಸ್‌ನಲ್ಲಿ(ಜಾರ್ಜ್ ಓಕ್ಸ್ ಕಟ್ಟಡ); ಅದೀಗ ಇತಿಹಾಸ ಸೇರಿದೆ. ಆದರೆ, ಜಗತ್ತಿನಲ್ಲಿ ಸಿನೆಮಾಗಳು ಇರುವವರೆಗೆ ಘಟಕ್ ಚಿರಸ್ಥಾಯಿಯಾಗಿರುತ್ತಾರೆ ಮತ್ತು ಅವರ ಚಿತ್ರಗಳು ಬಡವರು-ವಲಸಿಗರ ಕಣ್ಣೀರು ಒರೆಸುತ್ತಲೇ ಇರುತ್ತವೆ. ಪ್ರೊಪಗಾಂಡಾ ಸಿನೆಮಾಗಳು ಕಸದ ಬುಟ್ಟಿ ಸೇರುತ್ತವೆ!