×
Ad

ಪೀಡೆನಾಶಕಗಳ ಅತಿಬಳಕೆ: ಆಹಾರ, ನೀರು ವಿಷಮಯ

Update: 2026-02-20 11:06 IST

ಪೀಡೆನಾಶಕಗಳ ಶೇಷಾಂಶ ಇರುವ ಆಹಾರಗಳು ಆರೋಗ್ಯದ ಮೇಲೆ ತಾತ್ಕಾಲಿಕ ಮತ್ತು ದೀರ್ಘಕಾಲೀನ ಪರಿಣಾಮ ಬೀರುತ್ತದೆ. ಪೆಸ್ಟಿಸೈಡ್ ಆಕ್ಷನ್ ನೆಟ್‌ವರ್ಕ್-ಇಂಡಿಯಾ(ಪಿಎಎನ್-ಇಂಡಿಯಾ)ದ ಅಧ್ಯಯನದ ಪ್ರಕಾರ, ದೇಶದಲ್ಲಿ ಬಳಸುತ್ತಿರುವ 56 ಕೀಟನಾಶಕಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ; 38 ಪ್ರತಿರಕ್ಷಣ ವ್ಯವಸ್ಥೆಗೆ ಧಕ್ಕೆ ಹಾಗೂ 81 ಅಂತಸ್ರಾವಕ ಗ್ರಂಥಿ/ಹಾರ್ಮೋನ್‌ಗಳ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡುತ್ತವೆ. ಇವು ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ಸಂಜ್ಞಾನಾತ್ಮಕ ಕ್ರಿಯೆಗಳ ಮೇಲೆ ವಿಪರಿಣಾಮ ಬೀರುತ್ತವೆ. ಆಹಾರಧಾನ್ಯ ಮತ್ತು ಬೇಳೆಕಾಳುಗಳಿಗೆ ಹೋಲಿಸಿದರೆ, ತರಕಾರಿಗಳಲ್ಲಿ ಕೀಟನಾಶಕಗಳ ಶೇಷಾಂಶ ಹೆಚ್ಚು ಇರುತ್ತದೆ.

ಕುಡಿಯುವ ನೀರು, ತಿನ್ನುವ ಆಹಾರ ಹಾಗೂ ಉಸಿರಾಡುವ ಗಾಳಿ ಮಲಿನಗೊಂಡು ವಿಷಮಯವಾಗಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ದಿಲ್ಲಿ ಸೇರಿದಂತೆ ದೇಶದ ಬಹುತೇಕ ನಗರಗಳು ವಾಯುಮಾಲಿನ್ಯದಿಂದ ಬಳಲುತ್ತಿವೆ; ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಕುಡಿಯುವ ನೀರು ಚರಂಡಿ ನೀರಿನೊಂದಿಗೆ ಮಿಶ್ರಗೊಂಡು, 23 ಮಂದಿ ಮರಣ ಹೊಂದಿದ ಪ್ರಕರಣ ತೇಲುತ್ತಿರುವ ನೀರ್ಗಲ್ಲಿನ ಕಾಣುತ್ತಿರುವ ತುದಿಯಷ್ಟೇ. ಇದರೊಟ್ಟಿಗೆ ಕೃಷಿಯಲ್ಲಿ ಪೀಡೆನಾಶಕಗಳ ಅತಿ ಬಳಕೆ, ದುರ್ಬಳಕೆ ಹಾಗೂ ವಿನಾಕಾರಣ ಬಳಕೆಯಿಂದ ತಿನ್ನುವ ಆಹಾರ ಮತ್ತು ಅಂತರ್ಜಲ ವಿಷವಾಗಿ ಪರಿಣಮಿಸಿದೆ.

‘ನಮ್ಮದು ಕೃಷಿ ಪ್ರಧಾನ ದೇಶ’ ಎಂಬ ಮಾತು ಕ್ಲೀಷೆ ಆಗಿದೆ. ಆದರೆ, ಕೃಷಿಕರಿಗೆ ಏನು ಕೊಟ್ಟಿದ್ದೇವೆ ಮತ್ತು ಅವರ ಕುರಿತ ನಮ್ಮ ನಿಲುವು ಏನಿದೆ? ಇತ್ತೀಚಿನ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದ ಕೃಷಿಕರ ಮೇಲೆ ಆಗುವ ಪರಿಣಾಮ ಇನ್ನೂ ಸ್ಪಷ್ಟವಾಗಿಲ್ಲ. ಸಚಿವ ಪಿಯೂಷ್ ಗೋಯಲ್ ಅವರ ‘ಹತ್ತಿಯನ್ನು ಆಮದು ಮಾಡಿಕೊಂಡು, ಸಿದ್ಧ ಉಡುಪುಗಳನ್ನು ಅಮೆರಿಕಕ್ಕೆ ರಫ್ತು ಮಾಡಿದರೆ ಬಾಂಗ್ಲಾಕ್ಕೆ ಸಿಕ್ಕಿದಂತೆ ಶೂನ್ಯ ಅನುರೂಪ(ರೆಸಿಪ್ರೋಕಲ್)ಸುಂಕ ಸೌಲಭ್ಯ ಸಿಗುತ್ತದೆ’ ಎಂಬ ಮಾತಿಗೆ ಹತ್ತಿ ಬೆಳೆಗಾರರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ದೇಶದಲ್ಲಿ 2025-26ರಲ್ಲಿ ಹತ್ತಿ ಉತ್ಪಾದನೆ 29.22 ದಶಲಕ್ಷ ಬೇಲ್(1 ಬೇಲ್‌ಗೆ 170 ಕೆಜಿ) ಮತ್ತು ಅಮೆರಿಕದಲ್ಲಿ 2024-25ರಲ್ಲಿ 14.41 ದಶಲಕ್ಷ ಬೇಲ್(1 ಬೇಲ್=217 ಕೆಜಿ) ಹತ್ತಿ ಉತ್ಪಾದನೆಯಾಗಿದೆ. ಬೀಜ, ಕೀಟನಾಶಕ ಮತ್ತು ಕಾರ್ಮಿಕ ವೇತನ ಹೆಚ್ಚಳದಿಂದ ಹತ್ತಿ ಕೃಷಿ ಲಾಭದಾಯಕವಾಗಿಲ್ಲ; ಆಮದಿನಿಂದ ದೇಶಿ ರೈತರು ಅನಿರ್ಬಂಧಿತ ಜಾಗತಿಕ ಸ್ಪರ್ಧೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಇದರಿಂದ ದೇಶಿ ಹತ್ತಿ ಬೆಲೆ ಕುಸಿಯುತ್ತದೆ ಮತ್ತು ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಬೇಳೆಕಾಳುಗಳ ಆಮದಿಗೆ ಶೂನ್ಯ ಸುಂಕದ ರಿಯಾಯಿತಿ ನೀಡಿದರೆ ತೊಗರಿ, ಉದ್ದು, ಹೆಸರು ಬೆಳೆಗಾರರು ಏನಾಗಬೇಕು? ಕಾಕತಾಳೀಯ ಎನ್ನುವಂತೆ ಸೋಯಾ ಬೆಲೆ ಕುಸಿದಿದೆ. ರೈತರು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಇದು ಒಂದು ಆಯಾಮ.

ಇನ್ನೊಂದು ಆಯಾಮವೆಂದರೆ ಹವಾಮಾನ ಬದಲಾವಣೆ, ಭೂ ಹಿಡುವಳಿ ಕುಸಿತ, ನೀರು/ವಿದ್ಯುತ್ ಕೊರತೆ, ಇಳುವರಿ ಕುಸಿತ, ಬ್ಯಾಂಕ್ ಸಾಲ ಅಲಭ್ಯತೆ, ಸಬ್ಸಿಡಿ ವಿತರಣೆಯಲ್ಲಿ ಗೊಂದಲ ಹಾಗೂ ಬೀಜ-ಕೂಲಿ ವೆಚ್ಚ ಹೆಚ್ಚಳದಿಂದ ಕೃಷಿ ಅನುತ್ಪಾದಕವಾಗಿ ಪರಿಣಮಿಸಿದೆ. ಒಂದರ್ಥದಲ್ಲಿ ಜೂಜು. ಹೀಗಿದ್ದರೂ, ಶೇ.70ರಷ್ಟು ಗ್ರಾಮೀಣ ಕುಟುಂಬಗಳು ಕೃಷಿಯನ್ನು ಅವಲಂಬಿಸಿವೆ ಮತ್ತು ಶೇ. 86ರಷ್ಟು ರೈತರ ಹಿಡುವಳಿ 2 ಹೆಕ್ಟೇರಿಗಿಂತ ಕಡಿಮೆ ಇದೆ. ಕೃಷಿ ಭೂಮಿಯಲ್ಲಿ ಶೇ. 55ರಷ್ಟು ಮಳೆಯಾಧರಿತ; ಆದರೆ, ಈ ಭೂಮಿ ಶೇ. 46ರಷ್ಟು ಆಹಾರ ಧಾನ್ಯ ಮತ್ತು ಶೇ. 60ರಷ್ಟು ಮೇವು ಉತ್ಪಾದಿಸುತ್ತದೆ. ಸಣ್ಣ/ಮಧ್ಯಮ ರೈತರು ಒಟ್ಟು ಉತ್ಪಾದನೆಯಲ್ಲಿ ಶೇ. 70ರಷ್ಟು ತರಕಾರಿ ಹಾಗೂ ಶೇ. 50ಕ್ಕಿಂತ ಹೆಚ್ಚು ಹಣ್ಣು/ದ್ವಿದಳ ಧಾನ್ಯ ಬೆಳೆಯುತ್ತಾರೆ. ಆದರೆ, ದುರ್ಬಲ ಪೂರೈಕೆ ಸರಪಳಿ, ಮೌಲ್ಯವರ್ಧನೆ ಸಮಸ್ಯೆ ಮತ್ತು ಸಣ್ಣ ಹಿಡುವಳಿಯಿಂದಾಗಿ ಉತ್ಪನ್ನಗಳನ್ನು ಮಾರಲು ಪರದಾಡುತ್ತಿದ್ದಾರೆ. ಹೇಗಾದರೂ ಸರಿ, ಬೆಳೆಯನ್ನು ಉಳಿಸಿಕೊಂಡು ಬದುಕು ನೀಗಿಸಲೇಬೇಕಾದ ತುರ್ತಿನಲ್ಲಿ ರಸಗೊಬ್ಬರ ಮತ್ತು ಪೀಡೆನಾಶಕಗಳ ಅತಿ ಬಳಕೆ ಆಗುತ್ತಿದೆ. ಇದರಿಂದ ಆಹಾರ ವಿಷವಾಗಿದೆ ಮತ್ತು ರಫ್ತು ಮಾಡಿದ ಉತ್ಪನ್ನಗಳಲ್ಲಿ ಕೀಟನಾಶಕಗಳ ಶೇಷಾಂಶದಿಂದ ದೇಶಿ ಉತ್ಪನ್ನಗಳು ನಿಷೇಧ-ನಿರ್ಬಂಧಕ್ಕೆ ಪಕ್ಕಾಗುತ್ತಿವೆ.

ಸರಪಳಿ ಪ್ರತಿಕ್ರಿಯೆ

ನವೆಂಬರ್ 14, 2023ರಂದು ಯುರೋಪಿಯನ್ ಕಮಿಷನ್, ಜರ್ಮನಿಗೆ ರಫ್ತಾಗಿದ್ದ ಅರಿಶಿನದ ಪುಡಿಯಲ್ಲಿ ಹಲವು ದೇಶಗಳಲ್ಲಿ ನಿಷೇಧಿತ ಕ್ಲೋರ್‌ಪೈರಿಫಾಸ್ ಕೀಟನಾಶಕದ ಶೇಷಾಂಶ ಇದೆ ಎಂದು ಹೇಳಿತು. ಮಕ್ಕಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂಬ ವೈಜ್ಞಾನಿಕ ಆಧಾರದ ಹಿನ್ನೆಲೆಯಲ್ಲಿ ಈ ಕೀಟನಾಶಕವನ್ನು ಯುರೋಪಿನಲ್ಲಿ ನಿಷೇಧಿಸಲಾಗಿದೆ. 2020ರಲ್ಲಿ ದೇಶದಲ್ಲಿ ನಿಷೇಧಿಸಲು ಉದ್ದೇಶಿಸಿದ್ದ 27 ಅತಿ ವಿಷಯುಕ್ತ ಪೀಡೆನಾಶಕಗಳಲ್ಲಿ ಕ್ಲೋರ್‌ಪೈರಿಫಾಸ್ ಕೂಡ ಒಂದು. ಆದರೆ, ಸರಕಾರ ಉದ್ಯಮದ ವಿರೋಧದ ಹಿನ್ನೆಲೆಯಲ್ಲಿ ಉಲ್ಟಾ ಹೊಡೆದು, ನಿಷೇಧವನ್ನು 4 ಕೀಟನಾಶಕಗಳಿಗೆ ಸೀಮಿತಗೊಳಿಸಿತು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯದ ಮಾಹಿತಿ ಪ್ರಕಾರ, 2020-21ರಲ್ಲಿ 63,000 ಟನ್ ಪೀಡೆನಾಶಕಗಳು ಬಳಕೆಯಾಗಿವೆ. ಬಿತ್ತನೆ ಬೀಜಗಳನ್ನು ಕೀಟನಾಶಕದಲ್ಲಿ ಅದ್ದುವ ಮೂಲಕ ಆರಂಭಗೊಳ್ಳುವ ಈ ಕ್ರಿಯೆ, ಕಟಾವಿನವರೆಗೆ ಮುಂದುವರಿಯುತ್ತದೆ. ಹವಾಮಾನ ಬದಲಾವಣೆಯಿಂದ ಹೊಸ ಕೀಟ-ರೋಗಗಳು ಹೆಚ್ಚಿದ್ದು, ಅದಕ್ಕೆ ಅನುಗುಣವಾಗಿ ಪೀಡೆನಾಶಕ ಬಳಕೆಯೂ ಹೆಚ್ಚಿದೆ. ಕೃಷಿ ದುಬಾರಿಯಾಗಿರುವುದರಿಂದ, ಬೆಳೆಯನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.

ಪೀಡೆನಾಶಕಗಳ ಶೇಷಾಂಶ ಇರುವ ಆಹಾರಗಳು ಆರೋಗ್ಯದ ಮೇಲೆ ತಾತ್ಕಾಲಿಕ ಮತ್ತು ದೀರ್ಘಕಾಲೀನ ಪರಿಣಾಮ ಬೀರುತ್ತದೆ. ಪೆಸ್ಟಿಸೈಡ್ ಆಕ್ಷನ್ ನೆಟ್‌ವರ್ಕ್-ಇಂಡಿಯಾ(ಪಿಎಎನ್-ಇಂಡಿಯಾ)ದ ಅಧ್ಯಯನದ ಪ್ರಕಾರ, ದೇಶದಲ್ಲಿ ಬಳಸುತ್ತಿರುವ 56 ಕೀಟನಾಶಕಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ; 38 ಪ್ರತಿರಕ್ಷಣ ವ್ಯವಸ್ಥೆಗೆ ಧಕ್ಕೆ ಹಾಗೂ 81 ಅಂತಸ್ರಾವಕ ಗ್ರಂಥಿ/ಹಾರ್ಮೋನ್‌ಗಳ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡುತ್ತವೆ. ಇವು ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ಸಂಜ್ಞಾನಾತ್ಮಕ ಕ್ರಿಯೆಗಳ ಮೇಲೆ ವಿಪರಿಣಾಮ ಬೀರುತ್ತವೆ. ಆಹಾರಧಾನ್ಯ ಮತ್ತು ಬೇಳೆಕಾಳುಗಳಿಗೆ ಹೋಲಿಸಿದರೆ, ತರಕಾರಿಗಳಲ್ಲಿ ಕೀಟನಾಶಕಗಳ ಶೇಷಾಂಶ ಹೆಚ್ಚು ಇರುತ್ತದೆ. ಆಹಾರ ಧಾನ್ಯಗಳಲ್ಲಿ ಇರಬಹುದಾದ ಗರಿಷ್ಠ ಶೇಷಾಂಶ ಮಟ್ಟ(ಎಂಆರ್‌ಎಲ್)ವನ್ನು ನಿಗದಿಪಡಿಸಲಾಗಿದೆ.

ವರ್ಗೀಕರಣ ಮತ್ತು ಮಾರುಕಟ್ಟೆಯ ಅಗಾಧತೆ

ಪೀಡೆನಾಶಕಗಳು ಎನ್ನುವುದು ಕೀಟನಾಶಕ, ಕಳೆನಾಶಕ, ಶಿಲೀಂಧ್ರನಾಶಕ, ದಂಶಕ ನಾಶಕ, ಚಿಗಟ ಮತ್ತು ದುಂಡು-ಜಂತು ಹುಳನಾಶಕಗಳನ್ನು ಒಳಗೊಂಡ ಗುಂಪು. ಇವುಗಳಲ್ಲಿ 3 ವಿಧ; ನಿರ್ದಿಷ್ಟ ಗುರಿ ಇರುವಂಥವು (ಉದಾಹರಣೆಗೆ, ಕೀಟನಾಶಕ, ಸಸ್ಯನಾಶಕ, ಶಿಲೀಂಧ್ರನಾಶಕ), ಪ್ರತಿಕ್ರಿಯೆ ವಿಧಾನ (ನರ ವಿಷ, ಬೆಳವಣಿಗೆ ನಿಯಂತ್ರಕ ಇತ್ಯಾದಿ) ಮತ್ತು ರಾಸಾಯನಿಕ ರಚನೆ (ಉದಾ: ಆರ್ಗಾನೋಫಾಸ್ಫೇಟ್, ಪೈರೆಥ್ರಾಯ್ಡ್ಸ್ ಇತ್ಯಾದಿ). ಹೆಚ್ಚು ಬಳಕೆಯಲ್ಲಿರುವ ಮಾನೊಕ್ರೊಟೋಫಾಸ್(ಪಕ್ಷಿಗಳು/ಮನುಷ್ಯರಿಗೆ ತೀವ್ರ ವಿಷಕರ; ಸೆಪ್ಟಂಬರ್ 2023ರಲ್ಲಿ ನಿಷೇಧಿಸಲಾಯಿತು), ಪೈರೆಥ್ರಾಯ್ಡ್ಸ್(ಬವಳಿ ಬರುವಿಕೆ/ ಪ್ರಜ್ಞೆ ತಪ್ಪುವಿಕೆಯಲ್ಲದೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ) ಹಾಗೂ ಶಿಲೀಂಧ್ರನಾಶಕಗಳು ಕಣ್ಣು ಮತ್ತು ಚರ್ಮಕ್ಕೆ ಹಾನಿಕರ. ಪೀಡೆನಾಶಕ ಉದ್ಯಮ ಅಗಾಧವಾದದ್ದು; ಜಗತ್ತಿನಲ್ಲಿ ವರ್ಷಕ್ಕೆ 3 ಶತ ಕೋಟಿ ಟನ್ ಪೀಡೆನಾಶಕ ಬಳಕೆಯಾಗುತ್ತಿದ್ದು, ಇದರ ಮೌಲ್ಯ 40 ಶತಕೋಟಿ ಡಾಲರ್. ಏಶ್ಯದಲ್ಲಿ ಭಾರತಕ್ಕೆ ಮೂರನೇ ಸ್ಥಾನ. ನಮ್ಮ ದೇಶದಲ್ಲಿ 339 ಪೀಡೆನಾಶಕಗಳು ನೋಂದಣಿಯಾಗಿವೆ. ಇವುಗಳಲ್ಲಿ 118ನ್ನು ಅತಿ ಹೆಚ್ಚು ಅಪಾಯಕಾರಿ(ಎಚ್‌ಎಚ್‌ಪಿಎಸ್) ಎಂದು ವರ್ಗೀಕರಿಸಲಾಗಿದೆ ಎಂದು ಪೆಸ್ಟಿಸೈಡ್ ಆಕ್ಷನ್ ನೆಟ್‌ವರ್ಕ್ ಇಂಡಿಯಾ ಹೇಳುತ್ತದೆ. ಈ ವಲಯವನ್ನು ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ (ಸಿಐಬಿಆರ್‌ಸಿ) ನಿಯಂತ್ರಿಸುತ್ತದೆ.

ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಕೀಟಗಳಿಂದ ಅಂದಾಜು ಶೇ.30ರಷ್ಟು ಬೆಳೆ ಹಾನಿ ಆಗುತ್ತಿದೆ ಮತ್ತು ಇದರ ಮೌಲ್ಯ 90,000 ಕೋಟಿ ರೂ. 2024ರಲ್ಲಿ ಮಾರಾಟವಾದ ಪೀಡೆನಾಶಕಗಳ ಮೊತ್ತ 31,600 ಕೋಟಿ ರೂ. ಮತ್ತು ವಾರ್ಷಿಕ ಬೆಳವಣಿಗೆ ಶೇ.8 ಇದೆ. 2018ರಿಂದ ಪೀಡೆನಾಶಕಗಳ ಆಮದು ಶೇ.15ರಷ್ಟು ಹೆಚ್ಚಿದೆ. ಕೃಷಿ ಭೂಮಿಯ ಶೇ.40ರಷ್ಟರಲ್ಲಿ ಮತ್ತು ಶೇ.50ರಷ್ಟು ತರಕಾರಿ-ಹಣ್ಣುಗಳ ಕೃಷಿಯಲ್ಲಿ ಪೀಡೆನಾಶಕಗಳು ಬಳಕೆಯಾಗುತ್ತಿವೆ. ರಾಜ್ಯಗಳಲ್ಲಿ ಮಹಾರಾಷ್ಟ್ರಕ್ಕೆ ಮೊದಲ ಸ್ಥಾನ. ಆನಂತರ ಉತ್ತರಪ್ರದೇಶ, ಪಂಜಾಬ್, ತೆಲಂಗಾಣ, ಹರ್ಯಾಣ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್ ಹಾಗೂ ಕರ್ನಾಟಕ (ವಾರ್ಷಿಕ 1,669 ಮೆಟ್ರಿಕ್ ಟನ್). ರಾಜ್ಯದಲ್ಲಿ ಹೆಚ್ಚು ಬಳಕೆಯಾಗುತ್ತಿರುವುದು- ಗ್ಲೈಫೋಸೇಟ್ ಶೇ. 41 ಮತ್ತು ಶೇ. 71, ಎಮಾಮಾಕ್ಟಿನ್ ಬೆಂಜೋಯೇಟ್ ಶೇ. 5, ಕೊರಾಜೆನ್ ಶೇ. 18.5 ಮತ್ತು ಪೆಕ್ಸಾಲಾನ್ ಶೇ. 10 (ಮಾಹಿತಿ; ಡಿಪಿಪಿಕ್ಯುಎಸ್-ಸಸ್ಯ ರಕ್ಷಣೆ, ಸಂಪರ್ಕರೋಧ ಹಾಗೂ ಸಂಗ್ರಹಣೆ ನಿರ್ದೇಶನಾಲಯ). ಮಳೆ ಬಂದಾಗ ಇಲ್ಲವೇ ನೀರು ಹರಿಸಿದಾಗ, ಬೆಳೆಗೆ ಹೊಡೆದ ಪೀಡೆನಾಶಕಗಳು ಭೂಮಿಯಲ್ಲಿ ಇಂಗಿ ಅಂತರ್ಜಲವನ್ನು ವಿಷಮಯಗೊಳಿಸುತ್ತಿವೆ.

ಸರಕಾರದ ಉಪಕ್ರಮಗಳು

ಎಪ್ರಿಲ್-ಮೇ 1958ರಲ್ಲಿ ಕೇರಳ ಮತ್ತು ಮದ್ರಾಸ್ (ಈಗ ತಮಿಳುನಾಡು)ನಲ್ಲಿ ಸಂಭವಿಸಿದ ವಿಷಪ್ರಾಶನ ಘಟನೆಯಲ್ಲಿ 100ಕ್ಕೂ ಹೆಚ್ಚು ಜನ ಸಾವಿಗೀಡಾದರು. ಗೋಧಿಯನ್ನು ಸಾಗಿಸುವಾಗ ಪ್ಯಾರಾಥಿಯಾನ್(ಇನ್ನೊಂದು ಹೆಸರು-ಫಾಲಿಡಾಲ್. ಒಂದು ಆರ್ಗನೊಫಾಸ್ಫೇಟ್ ಕೀಟನಾಶಕ) ಮಿಶ್ರಗೊಂಡಿದ್ದು ದುರಂತಕ್ಕೆ ಕಾರಣ. ಈ ಪ್ರಕರಣವು ಕೀಟನಾಶಕಗಳ ಕಾಯ್ದೆ 1968 ಜಾರಿಗೆ ಕಾರಣವಾಯಿತು. ಈಗ ಕೀಟನಾಶಕಗಳ ಸಂಖ್ಯೆ ಹೆಚ್ಚಿರುವುದರಿಂದ, ಆ ಕಾಯ್ದೆ ಅಪ್ರಸ್ತುತವಾಗಿದೆ. ಪಿಎಎನ್-ಇಂಡಿಯಾ ಆರ್‌ಟಿಐ ಮೂಲಕ ಪಡೆದ ಮಾಹಿತಿ ಪ್ರಕಾರ, ವ್ಯಾಪಕವಾಗಿ ಬಳಕೆಯಲ್ಲಿರುವ 62 ಕೀಟನಾಶಕಗಳು ‘ಪರಿಭಾವಿತ ನೋಂದಣಿ’ ಆಗಿದ್ದು, ಇವುಗಳಿಗೆ ಎಂಆರ್‌ಎಲ್ ನಿಗದಿಗೊಳಿಸಿಲ್ಲ. 2008ರಲ್ಲಿ ಕೀಟನಾಶಕ ಕಾಯ್ದೆಯನ್ನು ಉತ್ತಮಗೊಳಿಸುವ ಪ್ರಯತ್ನ ನಡೆಯಿತು. ಕೆಲವು ಉತ್ತಮ ಅಂಶಗಳಿದ್ದ ಕೀಟನಾಶಕ ಮಸೂದೆ 2020ನ್ನು ಉದ್ಯಮದ ಒತ್ತಡದಿಂದ ಬದಿಗೊತ್ತಿ, ಸ್ಥಾಯಿ ಸಮಿತಿಗೆ ರವಾನಿಸಲಾಯಿತು; ಕಡತ ಈವರೆಗೆ ಮಿಸುಕಾಡಿಲ್ಲ. ಇದರಿಂದ 1968ರಿಂದ ಬಳಕೆಯಲ್ಲಿರುವ ಕೀಟನಾಶಕಗಳಲ್ಲದೆ, ನೋಂದಣಿಯೇ ಆಗದವನ್ನೂ ಯಥೇಚ್ಛವಾಗಿ ಬಳಸಲಾಗುತ್ತಿದೆ.

ಕೇಂದ್ರ ಸರಕಾರ 2005-06ರಲ್ಲಿ ಕೀಟನಾಶಕಗಳಲ್ಲಿ ಶೇಷಾಂಶದ ಪರಾಮರ್ಶೆಗೆ ರಾಷ್ಟ್ರೀಯ ಕಾರ್ಯಕ್ರಮವನ್ನು ಆರಂಭಿಸಿತು. 20 ವರ್ಷಗಳ ಬಳಿಕವೂ ಈ ಸಂಬಂಧ ಸಾಕಷ್ಟು ದತ್ತಾಂಶ ಸಂಗ್ರಹವಾಗಿಲ್ಲ; ಇದೊಂದು ಗಂಭೀರ ಸಮಸ್ಯೆ ಆಗಿದ್ದರೂ, ನಿರ್ಲಕ್ಷಿಸಲಾಗಿದೆ. ದಿಲ್ಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ(ಐಎಆರ್‌ಐ) ನೇತೃತ್ವದಲ್ಲಿ ಕೀಟನಾಶಕ ಶೇಷಾಂಶ ಕುರಿತ ಅಖಿಲ ಭಾರತ ಕಾರ್ಯಜಾಲ ಯೋಜನೆ(ಎಐಎನ್‌ಪಿ-ಪಿ ಆರ್) ಚಾಲ್ತಿಯಲ್ಲಿದೆ. 2019ರಲ್ಲಿ ಭಾರತೀಯ ಆಹಾರ ಸುರಕ್ಷೆ ಮತ್ತು ಪ್ರಮಾಣಕ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಪರಿಶೀಲಿಸಿದ ತರಕಾರಿ, ಹಣ್ಣು, ಸಂಬಾರ ಪದಾರ್ಥ, ಕರಿಬೇವು, ಅಕ್ಕಿ, ಗೋಧಿ, ಬೇಳೆ ಕಾಳು, ಮೊಟ್ಟೆ, ಮಾಂಸ ಮತ್ತು ನೀರಿನ 23,660 ಮಾದರಿಗಳಲ್ಲಿ ಶೇ.20ರಲ್ಲಿ(4,510) ಕೀಟನಾಶಕ ಶೇಷಾಂಶ ಪತ್ತೆಯಾಯಿತು. ಆದರೆ, ಇದರಲ್ಲಿ ಕೇವಲ ಶೇ.2.2ರಷ್ಟರಲ್ಲಿ ಮಾತ್ರ ಶೇಷಾಂಶವು ಗರಿಷ್ಠ ಮಟ್ಟವನ್ನು ಮೀರಿದೆ ಎಂದಿತು. ಸಮಸ್ಯೆ ಏನೆಂದರೆ, ದೇಶ ನಿಗದಿಪಡಿಸಿರುವ ಎಂಆರ್‌ಎಲ್, ಅಮೆರಿಕ/ಯುರೋಪ್ ನಿಗದಿಪಡಿಸಿರುವ ಸುರಕ್ಷಾ ಮಿತಿಗೆ ಅನುಗುಣವಾಗಿಲ್ಲ. ಇದರಿಂದ ದೇಶದಿಂದ ರಫ್ತಾದ ಉತ್ಪನ್ನಗಳು ವಿದೇಶದಲ್ಲಿ ನಿರ್ಬಂಧ/ನಿಷೇಧಕ್ಕೆ ಒಳಗಾಗುತ್ತಿವೆ. ಇದರ ಜೊತೆಗೆ, ಬೇರೆ ದೇಶಗಳಲ್ಲಿ ನಿಷೇಧಿಸಿದ ಅಥವಾ ನಿರ್ಬಂಧಿಸಿರುವ ಕೀಟನಾಶಕಗಳು ಆಮದಾಗುತ್ತಿವೆ. 2013ರಲ್ಲಿ 66 ಕೀಟನಾಶಕಗಳ ಪರಾಮರ್ಶನಕ್ಕೆ ನೇಮಿಸಿದ ಸಮಿತಿ, 2015ರಲ್ಲಿ ನೀಡಿದ ಹಲವು ಶಿಫಾರಸುಗಳು ಕಡತದಲ್ಲೇ ಉಳಿದುಕೊಂಡಿವೆ. 2022ರಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯವು 46 ಪೀಡೆನಾಶಕಗಳನ್ನು ಹಾಗೂ 5 ಪೀಡೆನಾಶಕಗಳ ಆಮದು ನಿಷೇಧಿಸಿತು; 8ರ ನೋಂದಣಿ ಹಿಂಪಡೆಯಿತು ಹಾಗೂ 9ರ ಬಳಕೆ ಮೇಲೆ ಮಿತಿ ಹೇರಿತು. ಸಮಸ್ಯೆಯ ಅಗಾಧತೆಯನ್ನು ಪರಿಗಣಿಸಿದರೆ, ಇದು ಏನೇನೂ ಸಾಲದು.

ರಾಸಾಯನಿಕ ಕೀಟನಾಶಕಗಳಿಗೆ ಪರ್ಯಾಯ ಎನ್ನಲಾದ ಜೈವಿಕ ಕೀಟನಾಶಕಗಳು ಕೂಡ ದುರ್ಬಲ ನಿಯಂತ್ರಣ ವ್ಯವಸ್ಥೆಯಿಂದ ಸಮಸ್ಯೆ ಸೃಷ್ಟಿಸಿವೆ. ಹಲವು ಕೀಟನಾಶಕಗಳನ್ನು ಮಿಶ್ರಗೊಳಿಸಿ, ‘ಸ್ವಾಭಾವಿಕ ಕೀಟನಾಶಕ’ ಎಂದು ಮಾರಲಾಗುತ್ತಿದೆ. ಜೊತೆಗೆ, ಇವು ದುಬಾರಿ ಕೂಡ. ಅಕ್ರಮ ಇಲ್ಲವೇ ನಕಲು ಕೀಟನಾಶಕಗಳಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯ ವಿಚಕ್ಷಣ ದಳಕ್ಕೆ ದೂರುಗಳು ಹೆಚ್ಚುತ್ತಲೇ ಇವೆ. ಆದರೆ, ದಂಧೆ ಮಾತ್ರ ನಿಂತಿಲ್ಲ. ಕೀಟನಾಶಕಗಳಲ್ಲಿ ವಿಷ ವಸ್ತು ‘ನಿಗದಿಪಡಿಸಿದ ಮಿತಿ’ಯಲ್ಲಿ ಇದ್ದರೂ, ಅದರಿಂದ ಜೈವಿಕ ವೈವಿಧ್ಯಕ್ಕೆ ಹಾನಿ ತಪ್ಪುವುದಿಲ್ಲ; ಮಣ್ಣಿನ ಆರೋಗ್ಯವನ್ನು ಹೆಚ್ಚಿಸುವ ಎರೆಹುಳು, ಅಕಶೇರುಕಗಳು ಹಾಗೂ ಶಿಲೀಂಧ್ರಗಳ ಮೇಲೆ ವಿಪರಿಣಾಮ ಬೀರುತ್ತದೆ. ಕೀಟನಾಶಕಗಳ ಬಳಕೆ, ದುಷ್ಪರಿಣಾಮ ಕುರಿತ ಮಾಹಿತಿಯಲ್ಲಿ ಪಾರದರ್ಶಕತೆ ಇಲ್ಲ. ಕೀಟನಾಶಕಗಳ ಅಧಿಕ ಬಳಕೆಯನ್ನು ತಡೆಯಬೇಕೆಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಜನವರಿ 2023ರಲ್ಲಿ ಎಫ್‌ಎಸ್‌ಎಸ್‌ಎಐಗೆ ನೋಟಿಸ್ ನೀಡಿತ್ತು. ಪ್ರಾಧಿಕಾರ ಈ ಸಂಬಂಧ ಆಯೋಗಕ್ಕೆ ವರದಿ ಸಲ್ಲಿಸಿತು; ಆದರೆ, ವರದಿ ಬಹಿರಂಗಗೊಳ್ಳಲಿಲ್ಲ. ಕೀಟನಾಶಕ ಶೇಷಾಂಶ ಕುರಿತು ನಿಯತವಾಗಿ ಪರಾಮರ್ಶನ ನಡೆಯದೆ ಇರುವುದರಿಂದ, ಅಮೆರಿಕದ ರಾಪಿಡ್ ಅಲರ್ಟ್ ಸಿಸ್ಟಮ್ ಫಾರ್ ಫುಡ್ ಆಂಡ್ ಫೀಡ್(ಆರ್‌ಎಎಸ್‌ಎಫ್‌ಎಫ್) ಅಥವಾ ಆಹಾರ ಮತ್ತು ಔಷಧ ಆಡಳಿತ(ಎಫ್‌ಡಿಎ) ನೀಡುವ ಮಾಹಿತಿಯನ್ನೇ ಅವಲಂಬಿಸ ಬೇಕಾಗಿ ಬಂದಿದೆ.

ಅಮೆರಿಕ ಮತ್ತು ಯುರೋಪಿನಲ್ಲಿ ನಿಕೋಟಿನಾಯ್ಡ್(ಇವು ಪರಾಗಸ್ಪರ್ಶ ಮಾಡುವ ದುಂಬಿಗಳಿಗೆ ಅಪಾಯಕರ)ಗಳನ್ನು ನಿರ್ಬಂಧಿಸಲಾಗಿದೆ; ಯುರೋಪ್ ನಿಗದಿಪಡಿಸಿದಕ್ಕಿಂತ ಅಧಿಕ ನಿಕೋಟಿನಾಯ್ಡ್ ಅಂಶ ಇರುವ ಕೀಟನಾಶಕಗಳ ರಫ್ತು ನಿಷೇಧಿಸಿದೆ. ನಮ್ಮಲ್ಲೂ ನಕಲು ಪೀಡೆನಾಶಕಗಳನ್ನು ತೊಡೆಯಲು ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸಬೇಕು; ಲಾಬಿಗೆ ಮಣಿಯದೆ ಅಪಾಯಕರ ಪೀಡೆನಾಶಕಗಳನ್ನು ನಿಷೇಧಿಸಬೇಕು. ಅವುಗಳ ಬಳಕೆಯಿಂದ ಜನಾರೋಗ್ಯ ಮತ್ತು ಜೈವಿಕ ವೈವಿಧ್ಯಕ್ಕೆ ತಗಲುವ ಧಕ್ಕೆ ಬಗ್ಗೆ ರೈತರು ಮತ್ತು ಗ್ರಾಹಕರಲ್ಲಿ ಅರಿವು ಮೂಡಿಸಬೇಕು. ರಾಸಾಯನಿಕ ಕೃಷಿಯ ವ್ಯಾಪ್ತಿಯನ್ನು ಪರಿಗಣಿಸಿದರೆ, ಸಾವಯವ ಕೃಷಿಯನ್ನು ಉತ್ತೇಜಿಸಲು ನಡೆದಿರುವ ಪ್ರಯತ್ನಗಳು ಸಾಲದು. ರೈತರ ಉತ್ಪನ್ನಗಳಿಗೆ ನ್ಯಾಯಸಮ್ಮತ ಬೆಲೆ ನೀಡಿದರೆ, ಅವರ ಸಬಲೀಕರಣ ತನ್ನಿಂತಾನೇ ಆಗುತ್ತದೆ. ‘2022-23ರೊಳಗೆ ರೈತರ ಆದಾಯ ದುಪ್ಪಟ್ಟು’ ಘೋಷಣೆ ಇಲ್ಲವೇ ನೇರ ನಗದು ವರ್ಗಾವಣೆ ಮೂಲಕ ಬಿಡಿಗಾಸು ಹಂಚುವುದರಿಂದ ರಾಜಕೀಯ ಪಕ್ಷಗಳಿಗೆ ಪ್ರಯೋಜನ ಆಗಬಹುದು; ಆದರೆ, ರೈತರ ಉದ್ಧಾರ ಸಾಧ್ಯವಿಲ್ಲ. ಜನರಿಗೆ ಸುರಕ್ಷಿತ ಆಹಾರದ ಹಕ್ಕು ಇದೆ; ಇದಕ್ಕಾಗಿ ಅವರಲ್ಲಿ ಜಾಗೃತಿ ಮೂಡಬೇಕಿದೆ. ಅವರು ತಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಾಧವ ಐತಾಳ್

contributor

Similar News