×
Ad

ರಕ್ತಸಿಕ್ತ ಲ್ಯಾಟಿನ್ ಅಮೆರಿಕ: ಪ್ರತಿರೋಧದ ಮೂಲಕ ಸ್ವಾತಂತ್ರ್ಯದ ಮರುವ್ಯಾಖ್ಯಾನ

Update: 2026-01-09 11:49 IST

ಮಡುರೊ ಬಂಧನವನ್ನು ಸಂಭ್ರಮಿಸುವವರು ಇತಿಹಾಸ ಓದಬೇಕಿದೆ. ಅವರು ಸಮರ್ಥರೋ, ಭ್ರಷ್ಟರೋ, ನಿರಂಕುಶವಾದಿಯೋ ಅಥವಾ ವಿನಾಶಕರೋ ಎಂಬುದನ್ನು ನಿರ್ಧರಿಸಬೇಕಿರುವುದು ವೆನೆಝುವೆಲಾದ ಜನ; ವಾಶಿಂಗ್ಟನ್, ಲಂಡನ್, ಬರ್ಲಿನ್ ಅಥವಾ ಬ್ರಸೆಲ್ಸ್ ಅಲ್ಲ. ಬಲಿಷ್ಠ ದೇಶಗಳು ತಮಗೆ ಸಹಕರಿಸದ/ಉಪಯುಕ್ತವಲ್ಲದ ಸರಕಾರಗಳನ್ನು ಕೆಳಗಿಳಿಸುವ ಹಕ್ಕು ತಮಗಿದೆ ಎಂದು ಕೊಂಡಲ್ಲಿ, ಅದು ಸಾಮ್ರಾಜ್ಯಶಾಹಿಯ ಪುನರುತ್ಥಾನ ಆಗಲಿದೆ.

ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಜ.3, 2026ರಂದು ಅಮೆರಿಕದ ಡೆಲ್ಟಾ ಫೋರ್ಸ್ ಅಪಹರಿಸಿದೆ. ಇದು 1989ರ ಪನಾಮ ಆಕ್ರಮಣದ ನಂತರ ಲ್ಯಾಟಿನ್ ಅಮೆರಿಕದಲ್ಲಿ ನಡೆದ ನೇರ ಮಿಲಿಟರಿ ಹಸ್ತಕ್ಷೇಪ. ಈ ಕಾರ್ಯಾಚರಣೆಯು ಟ್ರಂಪ್ ಆಡಳಿತದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ (ನ್ಯಾಷನಲ್ ಸೆಕ್ಯುರಿಟಿ ಸ್ಟ್ರಾಟೆಜಿ) 2025ರ ಭಾಗ. ಅಮೆರಿಕವು ಪಶ್ಚಿಮ ಗೋಳಾರ್ಧದಲ್ಲಿ ತನ್ನ ಆಧಿಪತ್ಯದ ಮರುಸ್ಥಾಪನೆಗೆ ಮನ್ರೋ ಸಿದ್ಧಾಂತದ ಜಾರಿಗೆ ಮುಂದಾಗಿದೆ.

ಲ್ಯಾಟಿನ್ ಅಮೆರಿಕದ ಉತ್ತರ ಭಾಗದಲ್ಲಿರುವ ವೆನೆಝುವೆಲಾ, ಉತ್ತರದಲ್ಲಿ ಕೆರಿಬಿಯನ್ ಸಾಗರ, ಪೂರ್ವದಲ್ಲಿ ಗಯಾನಾ ಮತ್ತು ಪಶ್ಚಿಮದಲ್ಲಿ ಕೊಲಂಬಿಯ ಇರುವ ಸುಂದರ ನಾಡು: ವಿಶ್ವ ಸುಂದರಿ ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಬಹುಮಾನ ಪಡೆದ ದೇಶವಿದು. 16ನೇ ಶತಮಾನದಲ್ಲಿ ಸ್ಪೇನ್‌ನ ವಸಾಹತು ಆಗಿತ್ತು. ಸ್ಪೇನ್ ಸ್ಥಳೀಯರು ಮತ್ತು ಆಫ್ರಿಕದಿಂದ ಕರೆತಂದ ಗುಲಾಮರನ್ನು ಬಳಸಿಕೊಂಡು, ಇಲ್ಲಿನ ಚಿನ್ನ, ಕೃಷಿ ಉತ್ಪನ್ನಗಳನ್ನು ದೋಚಿತು. ಸಿಮೋನ್ ಬೊಲಿವಾರ್ ನೇತೃತ್ವದಲ್ಲಿ ಶುರುವಾದ ಹೋರಾಟದ ಫಲವಾಗಿ 1811ರಲ್ಲಿ ಸ್ವಾತಂತ್ರ್ಯ ಗಳಿಸಿತು; 1830ರಲ್ಲಿ ಜೋಸ್ ಅಂಟೋನಿಯೋ ಪಾಯೆಝ್ ಅವರ ನಾಯಕತ್ವದಲ್ಲಿ ಗಣರಾಜ್ಯವಾಯಿತು. ಆನಂತರ ಹಲವು ಸರ್ವಾಧಿಕಾರಿಗಳ ಹಿಡಿತದಲ್ಲಿ ಬಳಲಿ, 1958ರಲ್ಲಿ ಮಿಲಿಟರಿ ಆಡಳಿತ ಅಂತ್ಯಗೊಂಡಿತು. 20ನೇ ಶತಮಾನದ ಶುರುವಿನಲ್ಲಿ ತೈಲ ನಿಕ್ಷೇಪ ಪತ್ತೆಯಾದ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ನವಉದಾರವಾದಿ ಆರ್ಥಿಕ ನೀತಿ, ಖಾಸಗೀಕರಣ, ಬ್ರೆಟ್ಟನ್‌ವುಡ್ ಅವಳಿ(ವಿಶ್ವ ಬ್ಯಾಂಕ್ ಮತ್ತು ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆ, ಐಎಂಎಫ್)ಗಳ ಒತ್ತಡ, ಜಾಗತಿಕ ತೈಲ ಮಾರುಕಟ್ಟೆಯ ಏರಿಳಿತ ಮತ್ತು ಅಮೆರಿಕದ ಹಸ್ತಕ್ಷೇಪದಿಂದ ಅಸಮಾನತೆ ತೀವ್ರಗೊಂಡಿತು. ಇದರ ಫಲವಾಗಿ 1990ರ ದಶಕದಲ್ಲಿ ಬೊಲಿವರಿಯನ್ ಚಳವಳಿ ಆರಂಭಗೊಂಡು, 1998ರಲ್ಲಿ ಹ್ಯೂಗೋ ಚಾವೆಝ್ ಅಧ್ಯಕ್ಷರಾದರು. ತೈಲ ಉದ್ಯಮದ ರಾಷ್ಟ್ರೀಕರಣ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳ ಮೂಲಕ ಪರಿಸ್ಥಿತಿ ಸುಧಾರಿಸಿದರು. ಆನಂತರ, ನಿಕೋಲಸ್ ಮಡುರೊ ಅವಧಿಯಲ್ಲಿ ತೈಲ ಬೆಲೆ ಕುಸಿತ, ಅಮೆರಿಕ ಹೇರಿದ ದಿಗ್ಬಂಧನ ಇತ್ಯಾದಿಯಿಂದ ಆರ್ಥಿಕ ಸ್ಥಿತಿ ಬಿಗಡಾಯಿಸಿತು.

ಸಮೃದ್ಧ-ಸುಂದರ ದೇಶಗಳು

ಉತ್ತರ-ಕೇಂದ್ರ ಅಮೆರಿಕದ 7 (ಮೆಕ್ಸಿಕೋ, ಹೊಂಡುರಾಸ್, ಗ್ವಾಟೆಮಾಲ, ಎಲ್ ಸಾಲ್ವಡಾರ್, ನಿಕರಾಗುವಾ, ಕೋಸ್ಟರಿಕಾ, ಪನಾಮಾ), ದಕ್ಷಿಣ ಅಮೆರಿಕದ 10 (ವೆನೆಝುವೆಲಾ, ಅರ್ಜೆಂಟೀನಾ, ಬೊಲಿವಿಯಾ, ಬ್ರೆಝಿಲ್, ಚಿಲಿ, ಕೊಲಂಬಿಯ, ಈಕ್ವೆಡಾರ್, ಪರಗ್ವೆ, ಪೆರು, ಉರುಗ್ವೆ) ಹಾಗೂ ಕೆರಿಬಿಯನ್‌ನ 13(ಆಂಟಿಗುವಾ ಮತ್ತು ಬಾರ್ಬುಡ, ಬಹಾಮಾಸ್, ಬಾರ್ಬಡೋಸ್, ಕ್ಯೂಬಾ, ಡೊಮಿನಿಕಾ, ಡೊಮಿನಿಕನ್ ರಿಪಬ್ಲಿಕ್, ಗ್ರೆನಡಾ, ಹೈಟಿ, ಜಮೈಕಾ, ಸೈಂಟ್ ಕಿಟ್ಸ್ - ನೆವಿಸ್, ಸೈಂಟ್ ಲೂಸಿಯಾ, ಸೈಂಟ್ ವಿನ್ಸೆಂಟ್-ಗ್ರೆನಡೈನ್ಸ್ ಹಾಗೂ ಟ್ರಿನಿಡಾಡ್-ಟೊಬಾಗೊ) ದೇಶಗಳು ದೀರ್ಘಕಾಲ ವಸಾಹತುಶಾಹಿಗಳ ಅಧೀನದಲ್ಲಿ ಇದ್ದವು. ಈ ದೇಶಗಳ ಬಡತನ, ರಾಜಕೀಯ ಅನಿಶ್ಚಿತತೆ ಮತ್ತು ಪಲ್ಲಟಗಳಿಗೆ ವಸಾಹತುಶಾಹಿ ಕಾರಣ. ಬಂಡವಾಳಶಾಹಿ ಅಂಥ ಪ್ರಕ್ರಿಯೆಗಳನ್ನು ಮುಂದುವರಿಸಿತು. ಈ ದೇಶಗಳು ಅಮೆರಿಕ-ಯುರೋಪ್‌ಗೆ ಕಚ್ಚಾವಸ್ತು ಹಾಗೂ ಅಗ್ಗದ ಮಾನವ ಸಂಪನ್ಮೂಲದ ಸರಬರಾಜುದಾರರಾಗಿವೆ. 18ನೇ ಶತಮಾನದ ಆರಂಭದಲ್ಲಿ ಅಮೆರಿಕವು ಮನ್ರೋ ಡಾಕ್ಟ್ರಿನ್(1823ರಲ್ಲಿ ಅಧ್ಯಕ್ಷ ಜೇಮ್ಸ್ ಮನ್ರೋ ರೂಪಿಸಿದ ಒಪ್ಪಂದ. ಯುರೋಪಿಯನ್ ರಾಷ್ಟ್ರಗಳಿಂದ ವಸಾಹತೀಕರಣಕ್ಕೆ ನಿಷೇಧ ಮತ್ತು ವಿದೇಶಿ ಶಕ್ತಿಗಳು ಅಮೆರಿಕದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ತಡೆಯುತ್ತದೆ. ಇದನ್ನು 1904ರಲ್ಲಿ ಅಧ್ಯಕ್ಷ ಥಿಯೋಡೋರ್ ರೂಸ್ವೆಲ್ಟ್ ನವೀಕರಿಸಿದರು; ಅಮೆರಿಕವು ಲ್ಯಾಟಿನ್ ಅಮೆರಿಕದ ರಾಷ್ಟ್ರಗಳಲ್ಲಿ ಸ್ಥಿರತೆ, ಸಾಲ ಮರುಪಾವತಿ ಮತ್ತು ಸುವ್ಯವಸ್ಥೆಯನ್ನು ಖಚಿತ ಪಡಿಸಿಕೊಳ್ಳಲು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು) ಮೂಲಕ ಲ್ಯಾಟಿನ್ ಅಮೆರಿಕದಲ್ಲಿ ಯುರೋಪಿಯನ್ನರ ಪ್ರಾಬಲ್ಯ ಕಡಿಮೆಗೊಳಿಸಿ, ತನ್ನ ಹಿಡಿತ ಸಾಧಿಸಿತು.

ವೆನೆಝುವೆಲಾ ಅತಿ ಹೆಚ್ಚು ತೈಲ ನಿಕ್ಷೇಪ(ಜಾಗತಿಕ ನಿಕ್ಷೇಪದಲ್ಲಿ ಶೇ.19.35 ಪಾಲು) ಇರುವ ದೇಶವಾದ್ದರಿಂದ, ಅಮೆರಿಕ ತೈಲ ನಿಕ್ಷೇಪಗಳನ್ನು ಕೈವಶ ಮಾಡಿಕೊಳ್ಳಲು ಆರ್ಥಿಕ ದಿಗ್ಬಂಧನ, ರಾಜತಾಂತ್ರಿಕ ಸಮಸ್ಯೆ ಸೃಷ್ಟಿ, ಸೈಬರ್ ಯುದ್ಧ ಮತ್ತು ಸರಕಾರ ಉರುಳಿಸುವ ಕುತಂತ್ರಗಳನ್ನು ಮಾಡುತ್ತಿದೆ. ಪ್ರಶ್ನಿಸಿದರೆ, ‘ತನ್ನ ಹಿತ್ತಿಲನ್ನು ಕಾಯ್ದುಕೊಳ್ಳುವ ಪ್ರಯತ್ನ’ ಎಂದು ಸಮರ್ಥಿಸಿಕೊಳ್ಳುತ್ತಿದೆ. ಮಡುರೋ ಸೆರೆಗೆ ಅಮೆರಿಕ ನೀಡಿರುವ ಕಾರಣಗಳೆಂದರೆ, ಮಾದಕ ವಸ್ತು ಪೂರೈಕೆ-ಉಗ್ರಗಾಮಿಗಳ ಚಟುವಟಿಕೆ ತಡೆಯುವಲ್ಲಿ ವೈಫಲ್ಯ, ಸೆರೆಮನೆಗಳಿಂದ ಅಪರಾಧಿಗಳು ಹಾಗೂ ಮಾನಸಿಕ ಆಸ್ಪತ್ರೆಗಳ ರೋಗಿಗಳು ಅಮೆರಿಕಕ್ಕೆ ವಲಸೆ ಹೋಗಲು ನೆರವು ಹಾಗೂ ರಶ್ಯ-ಚೀನಾದ ಕಡೆಗೆ ವಾಲುವಿಕೆ. ಮಡುರೊ ಭಾರೀ ಪ್ರಮಾಣದಲ್ಲಿ ತೈಲ ಮೇಲೆತ್ತುವಿಕೆಗೆ ವಿರೋಧ ವ್ಯಕ್ತಪಡಿಸಿದ್ದರು ಮತ್ತು ಅಮೆರಿಕದ ಕಂಪೆನಿಗಳಿಗೆ ಈ ಕ್ಷೇತ್ರದಲ್ಲಿ ಅವಕಾಶ ನಿರಾಕರಿಸಿದ್ದರು. ಇದರಿಂದ ವೆನೆಝುವೆಲಾದ ತೈಲ ಎತ್ತುವಿಕೆ-ಸಂಶ್ಲೇಷಣೆ ಕ್ಷೇತ್ರದಲ್ಲಿ ಅಮೆರಿಕದ ಪಾಲು ನಗಣ್ಯವಾಗಿತ್ತು; ಚೀನಾ ಕಚ್ಚಾ ತೈಲದ ಪ್ರಮುಖ ಆಮದುದಾರ ದೇಶ. ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿದೆ. ಮಡುರೊ ಈ ದೇಶಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದರು ಮತ್ತು ತೈಲ ವಹಿವಾಟಿನಲ್ಲಿ ಡಾಲರ್ ಬದಲು ಚೀನಾದ ಕರೆನ್ಸಿ ಯುವಾನ್ ಬಳಸುತ್ತಿದ್ದರು. ಈ ದೇಶಗಳು ಒಗ್ಗಟ್ಟು ಹಾಗೂ ಸ್ವಾವಲಂಬನೆ ಸಾಧಿಸುವುದು ಅಮೆರಿಕಕ್ಕೆ ಅಪಥ್ಯ. ಚೀನಾ-ರಶ್ಯ ಜೊತೆಗೆ ಸಂಬಂಧವಿರುವ ಸ್ವತಂತ್ರ ಇಲ್ಲವೇ ಎಡ ಪಂಥೀಯ ಸರಕಾರಗಳನ್ನು ಉರುಳಿಸಿ, ಕೈಬೊಂಬೆ ಸರಕಾರವನ್ನು ನೇಮಿಸುವುದು ಅಮೆರಿಕದ ಕಾರ್ಯತಂತ್ರ. ಮಡುರೊ ಅಕ್ರಮ ಸೆರೆ ಅಂಥ ಪ್ರಯತ್ನದ ಮುಂದುವರಿದ ಭಾಗ.

ಬಂಧನದ ಪರ-ವಿರೋಧ

ಮಡುರೊ ಬಂಧನ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಮತ್ತು ಅಂತರ್‌ರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ರಶ್ಯ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಖಂಡಿಸಿವೆ. ಆದರೆ, ಲ್ಯಾಟಿನ್ ಅಮೆರಿಕದ ಪ್ರತಿಕ್ರಿಯೆ ಭಿನ್ನವಾಗಿದೆ. ಬ್ರೆಝಿಲ್‌ನ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ‘‘ಅಪಾಯಕಾರಿ ಪೂರ್ವನಿದರ್ಶನ. ಹಿಂಸಾಚಾರ, ಅವ್ಯವಸ್ಥೆ ಮತ್ತು ಅಸ್ಥಿರತೆಗೆ ಕಾರಣವಾಗಲಿದೆ’’ ಎಂದಿದ್ದಾರೆ. ಕೊಲಂಬಿಯದ ಗುಸ್ಟಾವೊ ಪೆಟ್ರೋ, ಮೆಕ್ಸಿಕೋದ ಕ್ಲೌಡಿಯಾ ಶೀನ್‌ಬಾಮ್, ಚಿಲಿಯ ಗೇಬ್ರಿಯಲ್ ಬೋರಿಕ್ ಮತ್ತು ಉರುಗ್ವೆಯ ವಿದೇಶಾಂಗ ಸಚಿವಾಲಯವು ಮಡುರೊ ಬಂಧನ ವಿಶ್ವ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ದೂರಿದ್ದಾರೆ. ಆದರೆ, ಅರ್ಜೆಂಟೀನಾದ ಕ್ಸೇವಿಯರ್ ಮಿಲೀ, ಈಕ್ವೆಡಾರ್‌ನ ಡೇನಿಯಲ್ ನೊಬೊವಾ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಧ್ರುವೀಕರಣದಿಂದ ಲ್ಯಾಟಿನ್ ಅಮೆರಿಕ-ಕೆರಿಬಿಯನ್ ರಾಷ್ಟ್ರಗಳ ನಡುವಿನ ಬಿರುಕುಗಳು ಇನ್ನಷ್ಟು ಆಳವಾಗುತ್ತವೆ. ವೆನೆಝುವೆಲಾದ ನೆರೆಯ ದೇಶಗಳು ತಕ್ಷಣದ ಪರಿಣಾಮ ಎದುರಿಸುತ್ತವೆ. ಬ್ರೆಝಿಲ್‌ನ ಲುಲಾ ಅವರ ಎಡಪಂಥೀಯ ಸರಕಾರವು ಅಮೆರಿಕದ ಕಟುಟೀಕಾಕಾರ. ವೆನೆಝುವೆಲಾದಲ್ಲಿ ಚಾವಿಸ್ತಾ ಅನುಯಾಯಿಗಳ ನಡುವೆ ಕಾದಾಟ ಆರಂಭವಾದರೆ, ವಲಸೆ ಮತ್ತು ಹಿಂಸಾಚಾರ ಹೆಚ್ಚುತ್ತದೆ. ಇದಕ್ಕೆ ಪ್ರತಿಯಾಗಿ, ಕೈಬೊಂಬೆ ಸರಕಾರದಿಂದ ತೈಲ ಉತ್ಪಾದನೆ ಸ್ಥಿರಗೊಳ್ಳಬಹುದು ಮತ್ತು ಪ್ರಾದೇಶಿಕ ಒತ್ತಡ ಕಡಿಮೆಯಾಗಬಹುದು. ಆದರೆ, ಇದರಿಂದ ದೇಶದ ಸಾಂಸ್ಥಿಕ ಕೊಳೆಯುವಿಕೆ ವೇಗ ಪಡೆದುಕೊಳ್ಳಲಿದೆ.

ಮಡುರೊ ಬಂಧನವನ್ನು ಸಂಭ್ರಮಿಸುವವರು ಇತಿಹಾಸ ಓದಬೇಕಿದೆ. ಅವರು ಸಮರ್ಥರೋ, ಭ್ರಷ್ಟರೋ, ನಿರಂಕುಶವಾದಿಯೋ ಅಥವಾ ವಿನಾಶಕರೋ ಎಂಬುದನ್ನು ನಿರ್ಧರಿಸಬೇಕಿರುವುದು ವೆನೆಝುವೆಲಾದ ಜನ; ವಾಶಿಂಗ್ಟನ್, ಲಂಡನ್, ಬರ್ಲಿನ್ ಅಥವಾ ಬ್ರಸೆಲ್ಸ್ ಅಲ್ಲ. ಬಲಿಷ್ಠ ದೇಶಗಳು ತಮಗೆ ಸಹಕರಿಸದ/ಉಪಯುಕ್ತವಲ್ಲದ ಸರಕಾರಗಳನ್ನು ಕೆಳಗಿಳಿಸುವ ಹಕ್ಕು ತಮಗಿದೆ ಎಂದು ಕೊಂಡಲ್ಲಿ, ಅದು ಸಾಮ್ರಾಜ್ಯಶಾಹಿಯ ಪುನರುತ್ಥಾನ ಆಗಲಿದೆ. ಅಮೆರಿಕದ ಅಧ್ಯಕ್ಷರು ಅಂತರ್‌ರಾಷ್ಟ್ರೀಯ ಕಾನೂನನ್ನು ಗೌರವಿಸಿದ ನಿದರ್ಶನ ಕಡಿಮೆ. ಅಮೆರಿಕ 120 ವರ್ಷಗಳಲ್ಲಿ ಅಂದಾಜು 35 ದೇಶಗಳ ಸರಕಾರಗಳನ್ನು ಉರುಳಿಸಿದೆ; 1898ರಲ್ಲಿ ಫಿಲಿಪ್ಪೀನ್ಸ್, 2001ರಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಸರಕಾರ, 2003ರಲ್ಲಿ ಇರಾಕ್‌ನ ಸದ್ದಾಂ ಹುಸೇನ್ ಸರಕಾರ ಹಾಗೂ 2011ರಲ್ಲಿ ಲಿಬಿಯಾದ ಮುಅಮ್ಮರ್ ಗದ್ದಾಫಿ ಸರಕಾರ. ಇರಾಕ್‌ನಲ್ಲಿ ಈವರೆಗೆ ದೃಢ ಸರಕಾರ ರಚನೆಯಾಗಿಲ್ಲ. ಅಮೆರಿಕವು ಇರಾನ್ ಮೇಲೆ ಬಾಂಬ್ ದಾಳಿ, ಯಮನ್ ಧ್ವಂಸ, ಕ್ರಿಶ್ಚಿಯನ್ ಸಮುದಾಯದ ರಕ್ಷಣೆ ನೆಪದಲ್ಲಿ ನೈಜೀರಿಯದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿದೆ ಮತ್ತು ಗಾಝಾದಲ್ಲಿ ಮಾರಣಹೋಮ ನಡೆಸುತ್ತಿರುವ ಇಸ್ರೇಲ್‌ನ್ನು ಬೆಂಬಲಿಸಿದೆ; ಅಮೆರಿಕದಲ್ಲಿ ಜನರು ಪ್ರತಿಭಟನೆ ನಡೆಸಿದಾಗ, ಸೇನಾಪಡೆಗಳ ಬಳಕೆ ಸಾಮಾನ್ಯ ಆಗಿಬಿಟ್ಟಿದೆ; ವಲಸಿಗರಿಗೆ ಬೇಡಿ ತೊಡಿಸಿ ಸಾಮೂಹಿಕ ಗಡಿಪಾರು ಮತ್ತು ವಿಮಾನಗಳಲ್ಲಿ ಸಾಲ್ವಡಾರ್ ಜೈಲಿಗೆ ರವಾನಿಸಲಾಗಿದೆ. ಟ್ರಂಪ್ ಪಟ್ಟಿಯಲ್ಲಿ ಗ್ರೀನ್‌ಲ್ಯಾಂಡ್, ಇರಾನ್, ಕೊಲಂಬಿಯ, ಮೆಕ್ಸಿಕೋ ಮತ್ತು ಕ್ಯೂಬಾ ಕೂಡ ಇವೆ.

ವೆನೆಝುವೆಲಾ ಆರ್ಥಿಕ ಸಂಕಷ್ಟದಲ್ಲಿದ್ದರೂ, ಅದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪ್ರಮುಖ ಆಟಗಾರ. ಅದು ಬೀಜಿಂಗ್‌ನಿಂದ ತೆಗೆದುಕೊಂಡ ಹಲವು ಶತಕೋಟಿ ಡಾಲರ್ ಸಾಲ, ತೈಲ ವ್ಯವಹಾರ ಹಾಗೂ ಮಾಸ್ಕೊದಿಂದ ಶಸ್ತ್ರಾಸ್ತ್ರ ಸರಬರಾಜು ಮತ್ತು ಗುಪ್ತಚರ ಸಹಕಾರಗಳು ವಾಶಿಂಗ್ಟನ್‌ನ್ನು ಕೆರಳಿಸಿದೆ; ಮಡುರೊ ಸೆರೆ ಮೂಲಕ ತನ್ನ ವಿರುದ್ಧ ಇರುವ ಪ್ರಾದೇಶಿಕ ಸರಕಾರಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಆದರೆ, ಇದರಿಂದ ಅಮೆರಿಕದ ವಿರುದ್ಧ ಒಕ್ಕೂಟ ರಚನೆಗೆ ಪ್ರಚೋದಿಸಿದಂತೆ ಆಗಲಿದೆ; ಚೀನಾದ ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್ ಅಥವಾ ರಶ್ಯದಿಂದ ತೈಲ ಪಾಲುದಾರಿಕೆ ವೇಗಗೊಳ್ಳಬಹುದು. ಅಮೆರಿಕದ ಕಾಂಗ್ರೆಸ್ ಸೇನಾ ಕಾರ್ಯಾಚರಣೆಗೆ ಒಪ್ಪಿಗೆ ನೀಡಿಲ್ಲ; ಮಾದಕ ದ್ರವ್ಯ ಹರಿವು ಮತ್ತು ಸ್ವಯಂ ರಕ್ಷಣೆಯ ನೆಪ ನೀಡಿ ಬಂಧಿಸಲಾಗಿದೆ. ಇದು ಸಾಮ್ರಾಜ್ಯಶಾಹಿಯ ನಿರೀಕ್ಷಿತ ವರ್ತನೆ. ರಶ್ಯ ಉಕ್ರೇನ್‌ನ್ನು ಅತಿಕ್ರಮಿಸಿದಾಗ, ಪಾಶ್ಚಿಮಾತ್ಯ ದೇಶಗಳು ಕಟುವಾಗಿ ಪ್ರತಿಕ್ರಿಯಿಸಿದವು. ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ ಎಂದ ವ್ಲಾದಿಮಿರ್ ಪುಟಿನ್ ಅವರ ಹೇಳಿಕೆಯನ್ನು ಸಾಮೂಹಿಕವಾಗಿ ತಿರಸ್ಕರಿಸಲಾಯಿತು. ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರಾನ್ಸ್‌ನ ಇಮ್ಯಾನುಯೆಲ್ ಮ್ಯಾಕ್ರಾನ್, ಜರ್ಮನಿಯ ಚಾನ್ಸೆಲರ್ ಸೇರಿದಂತೆ ಎಲ್ಲರೂ ಬಳಸಿದ ಪದ-ಆಕ್ರಮಣ. ಆದರೆ, ವೆನೆಝುವೆಲಾದ ವಿಷಯದಲ್ಲಿ ಮೌನ ಏಕೆ? ‘ದೊಡ್ಡಣ್ಣ’ನ ಭಯವೇ? ಇಂಥ ದ್ವಂದ್ವ ನೀತಿಯಿಂದ ಅಮೆರಿಕ ಮತ್ತು ಅದರ ಪ್ರತಿಸ್ಪರ್ಧಿಗಳ ನಡುವಿನ ಹಗೆ ತೀಕ್ಷ್ಣಗೊಳ್ಳುತ್ತದೆ. ಭ್ರಷ್ಟಾಚಾರ, ದಮನ ಅಥವಾ ಮಾನವೀಯತೆಯ ವಿರುದ್ಧದ ಅಪರಾಧದ ನೆಪದಲ್ಲಿ ಬೇರೆ ದೇಶಗಳ ಮೇಲೆ ಮಿಲಿಟರಿ ಆಕ್ರಮಣವನ್ನು ಸಮರ್ಥಿಸಿಕೊಳ್ಳಲು ಆಗುವುದಿಲ್ಲ; ಇದು ಮುಂದುವರಿದರೆ, ಯಾವುದೇ ದೇಶ ಸುರಕ್ಷಿತವಾಗಿ ಉಳಿಯಲು ಸಾಧ್ಯವಿಲ್ಲ.

ಚೀನಾ, ರಶ್ಯದ ಅತಿಕ್ರಮಣ

ವಿಶ್ವ ಸಂಸ್ಥೆಯ ಸುರಕ್ಷತಾ ಮಂಡಳಿ(ಯುಎನ್‌ಎಸ್‌ಸಿ)ಯ ಅನುಮತಿಯಿಲ್ಲದೆ ಸ್ವತಂತ್ರ ದೇಶವೊಂದರ ಮೇಲೆ ದಾಳಿ ನಡೆಸುವಂತಿಲ್ಲ; ನಡೆಸಿದಲ್ಲಿ ಅದು ಯುದ್ಧಾಪರಾಧ ಆಗಲಿದೆ. ಧ್ರುವೀಕರಣಗೊಂಡ ಜಗತ್ತಿನಲ್ಲಿ ದುರ್ಬಲ ರಾಷ್ಟ್ರಗಳು ಯಾವುದಾದರೊಂದು ಗುಂಪಿನಲ್ಲಿ ಗುರುತಿಸಿಕೊಳ್ಳಲೇಬೇಕಿರುವ ಅನಿವಾರ್ಯ ಸೃಷ್ಟಿಯಾಗಿದೆ. ದುರಂತವೆಂದರೆ, ಇನ್ನೊಂದು ಗುಂಪು ಕೂಡ ಇಂಥದ್ದೇ ಕೆಲಸ ಮಾಡುತ್ತಿದೆ; ತೈವಾನ್‌ನ ಮೇಲೆ ಕಣ್ಣಿಟ್ಟಿರುವ ಚೀನಾ, ಭೌಗೋಳಿಕೋಆರ್ಥಿಕ ಒತ್ತಡ ಹೇರುತ್ತಿದೆ. ಡಿಸೆಂಬರ್ 2025ರಲ್ಲಿ ನಡೆದ ಜಸ್ಟೀಸ್ ಮಿಷನ್ ಸೇನಾ ಪ್ರದರ್ಶನದಲ್ಲಿ ತೈವಾನ್‌ನ ಕರಾವಳಿ ತೀರದ ಅತಿ ಸನಿಹದಲ್ಲೇ ಬಲಾಬಲ ಪ್ರದರ್ಶಿಸಿತು. ಚೀನಾದ ಮುಖ್ಯಸ್ಥ ಕ್ಸಿ ಜಿನ್‌ಪಿಂಗ್, ತೈವಾನ್‌ನ ಮರು ಸೇರ್ಪಡೆಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಘೋಷಿಸಿದರು. ಟಿಬೆಟ್ ಅತಿಕ್ರಮಣವಲ್ಲದೆ, ಅಂದಾಜು 3,488 ಕಿ.ಮೀ. ಉದ್ದದ ಭಾರತ-ಚೀನಾ ಗಡಿಯಲ್ಲಿ ಅದರ ಸೇನೆ ಆಗಾಗ ಕಿರಿಕಿರಿ ಮಾಡುತ್ತಿರುತ್ತದೆ. ಅದೇ ರೀತಿ ರಶ್ಯದ ಪುಟಿನ್, ಉಕ್ರೇನ್ ಆಕ್ರಮಣ ಹಿಂಪಡೆಯಲು ಸಿದ್ಧವಿಲ್ಲ. ರಶ್ಯ ಉಕ್ರೇನ್‌ನ ಟೈಟಾನಿಯಂ, ಗ್ರಾಫೈಟ್, ಲಿಥಿಯಂ, ಯುರೇನಿಯಂ ಮತ್ತು ವಿರಳ ಭಸ್ಮಧಾತು(ರೇರ್ ಅರ್ಥ್ ಎಲಿಮೆಂಟ್ಸ್)ಗಳ ಮೇಲೆ ಕಣ್ಣಿಟ್ಟಿದೆ; ಇವು ಹಸಿರು ಇಂಧನ/ತಂತ್ರಜ್ಞಾನಕ್ಕೆ ಅತ್ಯಂತ ಮುಖ್ಯವಾದಂಥವು. ಈ ಕ್ಷೇತ್ರದಲ್ಲಿ ಚೀನಾದ ಪ್ರಾಬಲ್ಯವನ್ನು ಮುರಿಯಲು ಅಮೆರಿಕ, ಉಕ್ರೇನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆಫ್ರಿಕಾ ಸೇರಿದಂತೆ ಬಡ ರಾಷ್ಟ್ರಗಳಿಗೆ ಬೇರೆ ಆಯ್ಕೆಗಳೇ ಇಲ್ಲವಾಗಿದೆ.

ಅಮೆರಿಕಕ್ಕೆ ಸೇನಾ ಕಾರ್ಯಾಚರಣೆಯಿಂದ ಅಲ್ಪಾವಧಿಯಲ್ಲಿ ಲಾಭ ಆಗಬಹುದು; ವೆನೆಝುವೆಲಾದಲ್ಲಿ ಕೈಗೊಂಬೆ ಸರಕಾರ, ಅಗ್ಗದ ತೈಲ ಇತ್ಯಾದಿ. ಆದರೆ, ಇದರಿಂದ ವಿಪರಿಣಾಮ ಖಂಡಿತ. ಲ್ಯಾಟಿನ್ ಅಮೆರಿಕ ಬಹುಧ್ರುವೀಯತೆ ಕಡೆಗೆ ನಡೆದಿದೆ; ಅಮೆರಿಕದ ದುಷ್ಕೃತ್ಯದ ವಿರುದ್ಧ ಎಲ್ಲ ದೇಶಗಳು ಒಗ್ಗೂಡಬಹುದು. ಅಮೆರಿಕಕ್ಕೆ ಈ ಹಿಂದೆ ಕ್ಯೂಬಾ ಮತ್ತು ವಿಯಟ್ನಾಂ ಮರೆಯಲಾಗದ ಹೊಡೆತ ನೀಡಿವೆ. ಸಾಮ್ರಾಜ್ಯಶಾಹಿಗೆ ಪ್ರತಿರೋಧ ಒಂದು ನಿರಂತರ ಪ್ರತಿಕ್ರಿಯೆ; ಸಣ್ಣ ದೇಶಗಳು ದೊಡ್ಡ ದೇಶಗಳ ಕರುಣೆಯಿಂದ ಬದುಕಿಲ್ಲ ಮತ್ತು ಸೇನೆಯ ಬಲದಿಂದ ನೈತಿಕ ಅಧಿಕಾರ ಬರುವುದಿಲ್ಲ. ಮಡುರೊ ಸರ್ವಾಧಿಕಾರಿ ಎಂದು ದೂರಬಹುದು. ಆದರೆ, ಇಂಗ್ಲೆಂಡ್‌ನ ‘ದ ಇಕನಾಮಿಸ್ಟ್’ ಪತ್ರಿಕೆಯ ಇಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್‌ನ ಪ್ರಜಾಪ್ರಭುತ್ವ ಸೂಚ್ಯಂಕ (ಡೆಮಾಕ್ರಸಿ ಇಂಡೆಕ್ಸ್) 2024ರ ಪ್ರಕಾರ, ಜಾಗತಿಕ ಜನಸಂಖ್ಯೆಯ ಶೇ.7ಕ್ಕಿಂತ ಕಡಿಮೆ ಜನ ಮಾತ್ರ ಸಂಪೂರ್ಣ ಎನ್ನಬಹುದಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದಾರೆ; ಉಳಿದವರು ರಾಜಪ್ರಭುತ್ವ, ಸೇನಾಡಳಿತ, ಕುಟುಂಬ ಆಡಳಿತ ಇಲ್ಲವೇ ಟೊಳ್ಳು ಚುನಾವಣೆ ವ್ಯವಸ್ಥೆಯಿಂದ ಆಳಲ್ಪಡುತ್ತಿದ್ದಾರೆ(ಭಾರತದಲ್ಲಿರುವಂತೆ). ಬಲಿಷ್ಠ ದೇಶಗಳ ನಡುವೆ ಕಚ್ಚಾ ತೈಲ, ವಿರಳ ಮೂಲಧಾತುಗಳು ಹಾಗೂ ದತ್ತಾಂಶಕ್ಕಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಸಾಮ್ರಾಜ್ಯಶಾಹಿಗಳ ಈ ಅಂದಾದುಂದಿಯಲ್ಲಿ ವೆನೆಝುವೆಲಾದಂಥ ಸಮೃದ್ಧ-ಸುಂದರ ದೇಶಗಳು ಮತ್ತು ಅವುಗಳ ಜನರು ಕಷ್ಟಕ್ಕೀಡಾಗುತ್ತಾರೆ. ಇದು ದುರಂತ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಾಧವ ಐತಾಳ್

contributor

Similar News