ಅರಾವಳಿ ಪರ್ವತಶ್ರೇಣಿ ಮೇಲೆ ಉದ್ಯಮದ ಕಾಕದೃಷ್ಟಿ
ಅರಾವಳಿಯನ್ನು ಉಳಿಸುವುದು ಎಂದರೆ ನಮ್ಮನ್ನು ನಾವು ಉಳಿಸಿಕೊಳ್ಳುವುದು. ಅರಾವಳಿಯ ನಾಶವನ್ನು ನಿಲ್ಲಿಸದಿದ್ದರೆ, ಬೆಟ್ಟವನ್ನು ಬಗೆಯುವ ಪಿತೂರಿ ಗೆಲ್ಲುತ್ತದೆ ಮತ್ತು ಭೂಮಿ-ಖನಿಜದ ದಾಹದಿಂದ ದೇಶದ ರಾಜಧಾನಿಯು ವಿಶ್ವದ ಮಾಲಿನ್ಯ ರಾಜಧಾನಿಯಾಗಿ ಬದಲಾಗುತ್ತದೆ. ಸುಪ್ರೀಂ ಅರಾವಳಿ ಕುರಿತ ವಿಚಾರಣೆಯನ್ನು ಜನವರಿ 21, 2026ಕ್ಕೆ ಮುಂದೂಡಿದ್ದು, ಗೊಂದಲ ಮತ್ತು ಅಸ್ಪಷ್ಟತೆಯನ್ನು ನಿವಾರಿಸಬೇಕು ಎಂದು ಹೇಳಿದೆ. ಪರಿಸರ ಸಚಿವಾಲಯ ಮತ್ತದೇ ಜಾರಿಕೊಳ್ಳುವ ತಾಂತ್ರಿಕ ನುಡಿಗಟ್ಟುಗಳನ್ನು ಬಳಸಿ, ನ್ಯಾಯಾಲಯದಿಂದ ಉದ್ಯಮಪರ ಆದೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆಯೇ ಎಂದು ಕಾಯ್ದುನೋಡಬೇಕಿದೆ. ಹಾಗೆ ಆದಲ್ಲಿ, ಅರಾವಳಿ ಕಾಲಕ್ರಮೇಣ ನೆಲಸಮವಾಗುತ್ತದೆ.
ಸುಪ್ರೀಂ ಕೋರ್ಟ್ ಡಿಸೆಂಬರ್ 29, 2025ರಂದು ಅರಾವಳಿಯ ಹೊಸ ವ್ಯಾಖ್ಯೆಗೆ ತಡೆ ನೀಡಿದೆ ಮತ್ತು ಈ ಸಂಬಂಧ ಅಧ್ಯಯನ ನಡೆಸಲು ಉನ್ನತಾಧಿಕಾರ ಸಮಿತಿ ರಚಿಸಬೇಕೆಂದು ಹೇಳಿದೆ. ಇದರಿಂದ ಬೀಸುವ ದೊಣ್ಣೆಯಿಂದ ಸದ್ಯಕ್ಕೆ ತಪ್ಪಿಸಿಕೊಂಡಂತಾಗಿದೆ. ಆದರೆ, ಪ್ರಶ್ನೆ ಇರುವುದು- ಪರಿಸರ ಮಂತ್ರಾಲಯದ ಅಧಿಕಾರಿಗಳು ನೀಡಿದ ವ್ಯಾಖ್ಯೆಯನ್ನು ನ್ಯಾಯಾಲಯ ಈ ಮೊದಲು ಒಪ್ಪಿದ್ದಾದರೂ ಏಕೆ? ನ್ಯಾಯಾಲಯಕ್ಕೆ ವಾಸ್ತವ ಸಂಗತಿ ತಿಳಿಸದೆ ಮುಚ್ಚಿಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ತನ್ನದೇ ಸಚಿವಾಲಯದ ಅಡಿ ಬರುವ ಭಾರತೀಯ ಅರಣ್ಯ ಸಮೀಕ್ಷೆ(ಎಫ್‌ಎಸ್‌ಐ)ಯ ಶಿಫಾರಸುಗಳನ್ನು ಕೂಡ ಪರಿಸರ ಸಚಿವಾಲಯ ಗಣನೆಗೆ ತೆಗೆದು ಕೊಳ್ಳಲಿಲ್ಲವೇಕೆ?
ರಾಜಸ್ಥಾನ, ಹರ್ಯಾಣ, ದಿಲ್ಲಿ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿಕೊಂಡಿರುವ ಅರಾವಳಿಯ 100 ಮೀಟರ್ ಅಥವಾ ಅದಕ್ಕಿಂತ ಎತ್ತರದ ಭೂರಚನೆಗಳನ್ನು ಮಾತ್ರ ಅರಾವಳಿ ಶ್ರೇಣಿ ಎಂದು ಗುರುತಿಸಬೇಕೆಂದು ಕೇಂದ್ರ ಪರಿಸರ ಸಚಿವಾಲಯ ಶಿಫಾರಸು ಮಾಡಿತ್ತು. ಸುಪ್ರೀಂ ಕೋರ್ಟ್ ನವೆಂಬರ್ 20,2025 ರಂದು ಶಿಫಾರಸನ್ನು ಅಂಗೀಕರಿಸಿತು. ಸುಪ್ರೀಂ ಆದೇಶದ ಪ್ರಕಾರ, ಪರ್ವತ ಕನಿಷ್ಠ 100 ಮೀಟರ್ ಎತ್ತರವಿದ್ದರೆ ಮಾತ್ರ ಅದನ್ನು ಅರಾವಳಿ ಶ್ರೇಣಿಯ ಭಾಗವೆಂದು ಪರಿಗಣಿಸಲಾಗುತ್ತದೆ. ಎರಡು ಬೆಟ್ಟಗಳು ಪರಸ್ಪರ 500 ಮೀಟರ್ ಅಂತರದಲ್ಲಿದ್ದರೆ, ಎರಡರ ನಡುವಿನ ಪ್ರದೇಶವನ್ನು ಅರಾವಳಿಯ ಭಾಗವೆಂದು ಪರಿಗಣಿಸಲಾಗುತ್ತದೆ. ಕೇಂದ್ರದ ಉಸ್ತುವಾರಿಯಲ್ಲಿ ಸುಸ್ಥಿರ ಗಣಿಗಾರಿಕೆ ನಿರ್ವಹಣೆ ಯೋಜನೆ(ಎಂಪಿಎಸ್‌ಎಂ) ಸಿದ್ಧವಾಗುವವರೆಗೆ, ಗಣಿಗಾರಿಕೆಗೆ ಪರವಾನಿಗೆ ನೀಡಬಾರದು. ಆದೇಶಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾಯಿತು. ಪರಿಸರ ತಜ್ಞರ ಪ್ರಕಾರ, ನ್ಯಾಯಾಲಯ ಏಕರೂಪದ ವ್ಯಾಖ್ಯೆಯನ್ನು ಅಂಗೀಕರಿಸಿರುವುದು ನಿರಾಶಾದಾಯಕ; ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಒಲವು ತೋರುತ್ತಿದೆ. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್, ‘‘ಗಿರಿಶ್ರೇಣಿ ಸುರಕ್ಷಿತವಾಗಿದೆ. ಸರಕಾರ ಅರಾವಳಿ ಕುರಿತ ಯಾವುದೇ ನಿಯಮವನ್ನು ಸಡಿಲಿಸಿಲ್ಲ ಮತ್ತು ಅರಾವಳಿ ಸಂರಕ್ಷಣೆ ಪ್ರಧಾನಿಯವರ ಸಂಕಲ್ಪ ಕೂಡ. ಅರಾವಳಿಯ ಶೇ.0.19 ಪ್ರದೇಶವನ್ನಷ್ಟೇ ಗಣಿಗಾರಿಕೆಗೆ ಬಳಸಿಕೊಳ್ಳಲಾಗುವುದು’’ ಎಂದು ಹೇಳಿದರು. ಆದರೆ, ಜನ ಇದನ್ನು ಒಪ್ಪಲು ಸಿದ್ಧವಿರಲಿಲ್ಲ; ಪ್ರತಿಭಟಿಸಿ ರಸ್ತೆಗಿಳಿದರು. ಆನಂತರ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ನಡೆಸಿ, ತನ್ನ ಹಿಂದಿನ ಆದೇಶಕ್ಕೆ ತಡೆ ನೀಡಿತು.
ಅತ್ಯಂತ ಪುರಾತನ ಪರ್ವತ ಶ್ರೇಣಿ
ಅರಾವಳಿ 2 ಶತಕೋಟಿ ವರ್ಷ ವಯಸ್ಸಿನ, ವಿಶ್ವದ ಅತ್ಯಂತ ಪುರಾತನ ಪರ್ವತ ಶ್ರೇಣಿ. ಸುಣ್ಣಕಲ್ಲು, ತಾಮ್ರ, ಸತು ಮತ್ತು ಟಂಗ್‌ಸ್ಟನ್ ನಿಕ್ಷೇಪವಲ್ಲದೆ, ಇದರ ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಕಾಯ್ದಿಟ್ಟ ಮತ್ತು ಸಂರಕ್ಷಿತ ಅರಣ್ಯ ಇದೆ. ಅರಾವಳಿ-ದಿಲ್ಲಿ ಪರ್ವತ ಸಾಲಿನಲ್ಲಿ ಸತು, ಗ್ರಾಫೈಟ್, ಮಾಲಿಬ್ಡಿನಂ, ನಿಯೋಬಿಯಂ, ತವರ, ಲಿಥಿಯಂ ಮತ್ತು ಅಪರೂಪದ ಖನಿಜ(ರೇರ್ ಅರ್ಥ್ ಮೂಲಧಾತು)ಗಳು ಇವೆ. 200ಕ್ಕೂ ಅಧಿಕ ದೇಶಿ-ವಲಸೆ ಹಕ್ಕಿ ಪ್ರಭೇದಗಳು, 10ಕ್ಕೂ ಅಧಿಕ ಚಿಟ್ಟೆ ಮತ್ತು ಹುಲಿ-ಚಿರತೆ ಸೇರಿದಂತೆ ಹಲವು ಸರೀಸೃಪ-ಸ್ತನಿ ಪ್ರಭೇದಗಳಿವೆ. ಈ ಪರ್ವತಶ್ರೇಣಿಯು ರಾಜಸ್ಥಾನ, ಹರ್ಯಾಣ, ದಿಲ್ಲಿ ಮತ್ತು ಗುಜರಾತ್ ರಾಜ್ಯಗಳಿಗೆ ನೈಸರ್ಗಿಕ ವರದಾನ. ಅಂತರ್ಜಲ ಮರುಪೂರಣ, ಮಳೆನೀರಿನ ಸಂರಕ್ಷಣೆ, ಮರುಭೂಮೀಕರಣದ ತಡೆ, ಜೀವವೈವಿಧ್ಯ ರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಹಲವು ಸಮಿತಿ, ಸ್ಪಷ್ಟ ವ್ಯಾಖ್ಯೆ ಇಲ್ಲ
2024ರಲ್ಲಿ ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯಲ್ಲಿ ಕೇಂದ್ರ ಪರಿಸರ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಚಾಲಕ; ನಾಲ್ಕು ರಾಜ್ಯಗಳ ಕಾರ್ಯದರ್ಶಿಗಳು, ಸುಪ್ರೀಂ ಕೋರ್ಟ್ ನೇಮಿಸಿದ ಕೇಂದ್ರೀಯ ಉನ್ನತಾಧಿಕಾರ ಸಮಿತಿ, ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಗಣಿ ಸಚಿವಾಲಯಕ್ಕೆ ಸೇರಿದೆ), ಜಿಯಾಲಜಿಕಲ್ ಸಮೀಕ್ಷೆ(ಜಿಎಸ್‌ಐ), ಅರಣ್ಯ ಸಮೀಕ್ಷೆ (ಎಫ್‌ಎಸ್‌ಐ)ಯ ತಲಾ ಒಬ್ಬರು ಪ್ರತಿನಿಧಿ ಇದ್ದರು. ಆದರೆ, ಸಮಿತಿಯಲ್ಲಿ ಸ್ವತಂತ್ರ ವಿಜ್ಞಾನಿಗಳು ಅಥವಾ ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿ ಇಲ್ಲವೇ ಸಾಮಾಜಿಕ ವಿಜ್ಞಾನಿ ಇರಲಿಲ್ಲ. ಬಾಬುಗಳು ತಜ್ಞರಾಗಲು ಸಾಧ್ಯವಿಲ್ಲ.
3 ಸಮಿತಿಗಳು ಒಂದು ವರ್ಷ ಕಾಲ ಉಪಗ್ರಹ ಚಿತ್ರಗಳು ಮತ್ತು ವಿವಿಧ ವೈಜ್ಞಾನಿಕ ಸಂಸ್ಥೆಗಳ ನೆರವಿನಿಂದ ಪ್ರಯತ್ನಿಸಿದರೂ, ಅರಾವಳಿ ಶ್ರೇಣಿಗೆ ಅನ್ವಯವಾಗುವಂಥ ವ್ಯಾಖ್ಯೆ ನೀಡುವಲ್ಲಿ ವಿಫಲವಾದವು. ಸುಪ್ರೀಂ ಕೋರ್ಟ್ ‘‘ಮೇ 9, 2025ರ ಆದೇಶದಂತೆ ರಚನೆಯಾದ ಸಮಿತಿ ತನ್ನ ಶಿಫಾರಸುಗಳನ್ನು ಸಲ್ಲಿಸದೆ ಇದ್ದರೆ, ಸಮಿತಿಯ ಸದಸ್ಯರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುತ್ತದೆ’’ ಎಂದು ಆಗಸ್ಟ್ 12, 2025ರಂದು ಎಚ್ಚರಿಸಿತು. ಆಗಸ್ಟ್ 2025ರಲ್ಲಿ ರಚನೆಯಾದ ಎಫ್‌ಎಸ್‌ಐ ಮಹಾನಿರ್ದೇಶಕನ ನೇತೃತ್ವದ ಹೊಸ ತಾಂತ್ರಿಕ ಉಪಸಮಿತಿಯು ಸರ್ವಸಮ್ಮತ ವ್ಯಾಖ್ಯೆ ನೀಡುವಲ್ಲಿ ವಿಫಲವಾಯಿತು. ಬದಲಾಗಿ, ಪರಿಸರ ಸಂರಕ್ಷಣೆ ಮತ್ತು ಕೇಂದ್ರದ ರಾಷ್ಟ್ರೀಯ ಖನಿಜ ಕಾರ್ಯನೀತಿ 2019ನ್ನು ಸಮತೋಲಗೊಳಿಸುವ ಪ್ರಯತ್ನಕ್ಕೆ ಲಕ್ಷ್ಯ ನೀಡಿತು.
ಸಚಿವನ ಅಪರಾತಪರ
ಹೊಸ ವ್ಯಾಖ್ಯೆಯು ಅರಾವಳಿಯ ಹೆಚ್ಚು ಭಾಗವನ್ನು ಗಣಿಗಾರಿಕೆಗೆ ತೆರೆಯುವ ಮೂಲಕ ಪರಿಸರಕ್ಕೆ ಹಾನಿಯುಂಟು ಮಾಡಲಿದೆ ಎನ್ನುವ ಯಾವುದೇ ವರದಿ ‘ತಪ್ಪು ಮಾಹಿತಿ’ ಎಂದು ಟೈಮ್ಸ್ ನೆಟ್‌ವರ್ಕ್ ಆಯೋಜಿಸಿದ್ದ ಇಂಡಿಯಾ ಇಕನಾಮಿಕ್ ಎನ್‌ಕ್ಲೇವ್ 2025ರಲ್ಲಿ ಸಚಿವ ಯಾದವ್ ಹೇಳಿದರು. ‘‘ನಾವು ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ; ಗುಡ್ಡಗಾಡು ಪ್ರದೇಶದಲ್ಲಿ ನಿಯಮ ಸಡಿಲಿಕೆ ಮಾಡಿಲ್ಲ. ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ(ಐಸಿಎಫ್‌ಆರ್‌ಇ)ಯಿಂದ ಅನುಮತಿ ಸೇರಿದಂತೆ ಹಲವು ಷರತ್ತುಗಳ ಅನ್ವಯ ಶೇ. 0.19 ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆಸಬಹುದು; ದಿಲ್ಲಿಯಲ್ಲಿ ಎಲ್ಲಿಯೂ ಗಣಿಗಾರಿಕೆಗೆ ಅವಕಾಶವಿಲ್ಲ. ಕೇವಲ 1,048 ಬೆಟ್ಟಗಳು ರಕ್ಷಣೆಗೊಳಗಾಗುತ್ತವೆ ಎಂಬ ಅಂಕಿಅಂಶ ಎಲ್ಲಿಂದ ಬಂತು?’’ ಎಂದು ಕೇಳಿದರು. ಡಿಸೆಂಬರ್ 22ರಂದು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ‘‘ಅಕ್ರಮ ಗಣಿಗಾರಿಕೆ ತಡೆಗಟ್ಟಲು ಅರಾವಳಿ ಪರ್ವತ ಶ್ರೇಣಿಯ ಸರಿಯಾದ ವ್ಯಾಖ್ಯೆ ಅಗತ್ಯವಿದೆ’’ ಎಂದು ಹೇಳಿದರು.
ರಾಜಸ್ಥಾನದಲ್ಲಿರುವ ಶೇ.90ರಷ್ಟು ಬೆಟ್ಟಗಳು 30ರಿಂದ 80 ಮೀಟರ್ ಎತ್ತರ ಇವೆ. ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ 100 ಮೀಟರಿಗಿಂತ ಹೆಚ್ಚು ಎತ್ತರದ ಬೆಟ್ಟಗಳು ಮಾತ್ರ ಅರಾವಳಿ ಎಂದು ಅರ್ಹತೆ ಪಡೆಯುತ್ತವೆ. ‘ಈ ವ್ಯಾಖ್ಯೆಯು ಅರಾವಳಿಯ ಹೆಚ್ಚಿನ ಭಾಗವನ್ನು ಗಣಿಗಾರಿಕೆಯಂಥ ವಾಣಿಜ್ಯ ಚಟುವಟಿಕೆಗೆ ಮುಕ್ತಗೊಳಿಸುತ್ತದೆ. ಹೊಸ ವ್ಯಾಖ್ಯೆಯಿಂದ ಎಷ್ಟು ಬೆಟ್ಟಗಳು ಅರಾವಳಿ ಶ್ರೇಣಿಯ ಭಾಗವಾಗಿರುತ್ತವೆ ಮತ್ತು ಎಷ್ಟು ಗುಡ್ಡಗಳು ಮಣ್ಣುಗೂಡುತ್ತವೆ ಎಂಬುದನ್ನು ಸಚಿವರು ತಿಳಿಸಬೇಕು’ ಎಂದು ಪರಿಸರ ಕಾರ್ಯಕರ್ತರು ಹೇಳುತ್ತಾರೆ.
ಪ್ರತಿಭಟನೆ
700 ಕಿ.ಮೀ. ಉದ್ದ ವ್ಯಾಪಿಸಿರುವ ಪರ್ವತಶ್ರೇಣಿಯ ಹೆಚ್ಚು ಪಾಲು ರಾಜಸ್ಥಾನದಲ್ಲಿದೆ. ಡಿಸೆಂಬರ್ 21ರಂದು ಜೋಧ್‌ಪುರ, ಉದಯಪುರ ಮತ್ತು ಸಿಕಾರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಉದಯಪುರದಲ್ಲಿ ವಕೀಲರು ಪ್ರತಿಭಟಿಸಿದರು. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ನೇರವಾಗಿ ವರದಿ ಮಾಡುತ್ತಿದ್ದ ಕೇಂದ್ರೀಯ ಉನ್ನತಾಧಿಕಾರ ಸಮಿತಿಯನ್ನು ಕೇಂದ್ರ ಸರಕಾರವು ಪರಿಸರ ಸಚಿವಾಲಯದಡಿ ಏಕೆ ತಂದಿತು? ಕೇವಲ ಶೇ.0.19 ಅರಾವಳಿ ಬೆಟ್ಟಗಳು ಮಾತ್ರ ಗಣಿಗಾರಿಕೆಗೆ ತೆರೆದುಕೊಳ್ಳುತ್ತವೆ ಎಂಬ ಯಾದವ್ ಅವರ ಹೇಳಿಕೆಯು ‘ದಾರಿ ತಪ್ಪಿಸುವಂಥದ್ದು ಮತ್ತು ತಪ್ಪು’ ಎಂದು ಹೇಳಿದರು.
ಸಚಿವ ಯಾದವ್ ಪ್ರಕಾರ, ನಾಲ್ಕು ರಾಜ್ಯಗಳ 34 ಜಿಲ್ಲೆಗಳ ಒಟ್ಟು ವಿಸ್ತೀರ್ಣ 1.44 ಲಕ್ಷ ಚದರ ಕಿಲೋಮೀಟರ್‌ಗಳಲ್ಲಿ ಶೇ.0.19ರಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತದೆ; ಆದರೆ, ಎಷ್ಟು ಪ್ರದೇಶವನ್ನು ಗಣಿಗಾರಿಕೆಯಿಂದ ಹೊರಗಿಡಲಾಗುತ್ತದೆ? ಗಣಿಗಾರಿಕೆ ಹಾಗೂ ಇತರ ಅಭಿವೃದ್ಧಿ ಯೋಜನೆಗಳಿಗೆ ಎಷ್ಟು ಭೂಮಿ ಲಭ್ಯವಾಗಲಿದೆ ಎಂಬ ಸ್ಪಷ್ಟತೆ ಇಲ್ಲ. ‘‘ಸಾರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದ ಗಡಿಗಳನ್ನು ಮರುವ್ಯಾಖ್ಯಾನಿಸಲು ಯಾದವ್ ಈ ಕೆಲಸಕ್ಕೆ ಮುಂದಾಗಿದ್ದಾರೆ. ಅರಾವಳಿ ನಮ್ಮ ನೈಸರ್ಗಿಕ ಪರಂಪರೆಯ ಭಾಗವಾಗಿದ್ದು, ಅದರ ಮರುಸ್ಥಾಪನೆ ಮತ್ತು ಸಂರಕ್ಷಣೆ ಅಗತ್ಯವಿದೆ. ಮೋದಿ ಸರಕಾರ ಭಾರತೀಯ ಅರಣ್ಯ ಸಮೀಕ್ಷೆಯಂತಹ ವೃತ್ತಿಪರ ಸಂಸ್ಥೆಯ ಶಿಫಾರಸುಗಳನ್ನು ಏಕೆ ನಿರ್ಲಕ್ಷಿಸಿದೆ? ಅರಾವಳಿಯ ಮರುವ್ಯಾಖ್ಯೆ ಏಕೆ ಬೇಕು? ಮತ್ತು ಯಾರಿಗೆ ಪ್ರಯೋಜನ ಮಾಡಿಕೊಡಲು?’’ ಎಂದು ಸಂಸದ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
2010ರಲ್ಲಿ ಎಫ್‌ಎಸ್‌ಐ ರಾಜಸ್ಥಾನದಲ್ಲಿ ಕಂಡುಕೊಂಡ ಮಾರ್ಗದರ್ಶಿ ಸೂತ್ರದನ್ವಯ, 115 ಮೀಟರಿಗಿಂತ ಅಧಿಕ ಎತ್ತರ ಮತ್ತು 3 ಡಿಗ್ರಿಗಿಂತ ಹೆಚ್ಚು ಇಳಿಜಾರು ಇರುವಂಥವು ಅರಾವಳಿ ಪರ್ವತ ಶ್ರೇಣಿ. ಈ ಸೂತ್ರದ ಪ್ರಕಾರ, ರಾಜಸ್ಥಾನದ 15 ಜಿಲ್ಲೆಗಳ 40,480 ಚದರ ಕಿಮೀ ಅರಾವಳಿ ಪರ್ವತಶ್ರೇಣಿಯಾಗಿತ್ತು. ಮ್ಯಾಗ್ಸೆಸೆ ಪುರಸ್ಕೃತ ರಾಜೇಂದ್ರ ಸಿಂಗ್ ಅವರ ಪ್ರಕಾರ, 100 ಮೀಟರಿಗಿಂತ ಎತ್ತರದ ಬೆಟ್ಟ ಇರುವುದು 1,048 ಚದರ ಕಿ.ಮೀ.ಯಲ್ಲಿ ಮಾತ್ರ. ಇದು ಒಟ್ಟು ಅರಾವಳಿಯ ಶೇ. 8.7. ಎಫ್‌ಎಸ್‌ಐನ ಆಂತರಿಕ ದಾಖಲೆಗಳೂ ಇದನ್ನೇ ಹೇಳುತ್ತವೆ; ರಾಜಸ್ಥಾನದಲ್ಲಿರುವ 12,081 ಅರಾವಳಿ ಬೆಟ್ಟಗಳಲ್ಲಿ 1,048 ಮಾತ್ರ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರವಿದೆ. ಪ್ರಕರಣದ ಅಮಿಕಸ್ ಕ್ಯೂರಿ ಕೆ. ಪರಮೇಶ್ವರ್, 100 ಮೀಟರ್‌ಗಿಂತ ಕಡಿಮೆ ಎತ್ತರದ ಬೆಟ್ಟಗಳು ಗಣಿಗಾರಿಕೆಗೆ ತೆರೆದುಕೊಳ್ಳುತ್ತವೆ; ಇದರಿಂದ ಅರಾವಳಿ ತನ್ನ ನಿರಂತರತೆ ಮತ್ತು ಸಮಗ್ರತೆಯನ್ನು ಕಳೆದುಕೊಳ್ಳುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದರು. ನ್ಯಾಯಾಲಯದ ಮುಂದಿನ ಆದೇಶದವರೆಗೆ, ಹರ್ಯಾಣ ಮತ್ತು ರಾಜಸ್ಥಾನದಲ್ಲಿ ಗಣಿಗಾರಿಕೆಗೆ ಹೊಸ ಪರವಾನಿಗೆ ಅಥವಾ ಅಸ್ತಿತ್ವದಲ್ಲಿರುವ ಪರವಾನಿಗೆಗಳ ನವೀಕರಣಕ್ಕೆ ಅನುಮತಿ ನೀಡಬಾರದು ಎಂದು ಸಲಹೆ ನೀಡಿದ್ದರು. ಆದರೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ರಾಜಸ್ಥಾನದ ಗಣಿಗಾರಿಕೆ ಒಕ್ಕೂಟದ 13 ವಕೀಲರು ವಿರೋಧಿಸಿ, ‘ಅಮಿಕಸ್ ಕ್ಯೂರಿಯವರ ಸಲಹೆ ಲಕ್ಷಾಂತರ ಕಾರ್ಮಿಕರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ’ ಎಂದು ವಾದಿಸಿದ್ದರು.
ಹೊಸ ವ್ಯಾಖ್ಯೆಯು ‘ಹಿಮ್ಮುಖ ನಡೆ’ ಮತ್ತು ಪರ್ವತ ಶ್ರೇಣಿಗೆ ಹಾನಿಕರ; ಅರಾವಳಿಯನ್ನು ಗಣಿಗಾರಿಕೆಗೆ ತೆರೆಯುವಿಕೆಯಿಂದ ಜನ, ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆ ಮೇಲೆ ಪರಿಣಾಮ ಆಗಲಿದೆ. ಇದು ದಿಲ್ಲಿಯ ಗಾಳಿಯ ಗುಣಮಟ್ಟವನ್ನು ಇನ್ನಷ್ಟು ಹದಗೆಡಿಸುತ್ತದೆ; ರಾಷ್ಟ್ರ ರಾಜಧಾನಿ ಸುಮಾರು ಎರಡು ತಿಂಗಳಿನಿಂದ ಮಾಲಿನ್ಯದಿಂದ ಉಸಿರುಗಟ್ಟಿದ್ದು ಜನ ಹೈರಾಣಾಗಿದ್ದಾರೆ. ಅಂತರ್‌ರಾಷ್ಟ್ರೀಯ ಪರ್ವತ ದಿನವಾದ ಡಿಸೆಂಬರ್ 11ರಂದು ‘ಪೀಪಲ್ ಫಾರ್ ಅರಾವಳಿಸ್’ ಅಭಿಯಾನ ಪ್ರಾರಂಭಿಸಿತು. ಅಭಿಯಾನವು ಡಿಸೆಂಬರ್ 22ರ ಪತ್ರಿಕಾ ಪ್ರಕಟಣೆಯಲ್ಲಿ ದಿಲ್ಲಿ, ಹರ್ಯಾಣ, ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿರುವ ಅರಾವಳಿ ಜಿಲ್ಲೆಗಳು ಎಷ್ಟು, ಅವುಗಳ ಹೆಸರು ಏನು? ಎಫ್‌ಎಸ್‌ಐ ವ್ಯಾಖ್ಯೆಯನ್ವಯ ಅರಾವಳಿಯ ಬೆಟ್ಟಗಳ ಸಂಖ್ಯೆ ಎಷ್ಟು ಮತ್ತು ಹೊಸ ವ್ಯಾಖ್ಯೆ ಪ್ರಕಾರ ಅರಾವಳಿಯಲ್ಲಿರುವ ಬೆಟ್ಟಗಳ ಪಟ್ಟಿ ಮಾಡುವಂತೆ ಸಚಿವ ಯಾದವ್ ಅವರನ್ನು ಕೋರಿದೆ.
ಪರಿಸರ ಸಚಿವಾಲಯದ ಮಾಹಿತಿ ಪ್ರಕಾರ, ರಾಜಸ್ಥಾನ, ಗುಜರಾತ್ ಮತ್ತು ಹರ್ಯಾಣದ 278 ಚದರ ಕಿ.ಮೀ. ಪ್ರದೇಶದಲ್ಲಿ ಈಗಾಗಲೇ ಗಣಿಗಾರಿಕೆ ನಡೆಯುತ್ತಿದೆ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ, ಪರಿಸರ ಸಂರಕ್ಷಣೆ ಕಾಯ್ದೆ ಹಾಗೂ ಅರಣ್ಯ ಹಕ್ಕುಗಳ ಕಾಯ್ದೆಯಡಿ ಅರಾವಳಿ ಶ್ರೇಣಿಯಲ್ಲಿರುವ ಸಂರಕ್ಷಿತ ಪ್ರದೇಶಗಳು ಮತ್ತು ಮೀಸಲು ಅರಣ್ಯಗಳನ್ನು ರಕ್ಷಿಸಬೇಕಿದೆ. ಅರಾವಳಿಯ ಹಲವು ಭಾಗಗಳು ಕಂದಾಯ ಭೂಮಿ ಯಾಗಿದ್ದು, ಗಣಿಗಾರಿಕೆಯಿಂದ ಕಣ್ಮರೆಯಾಗಲಿವೆ. ಅರಾವಳಿ ಪರ್ವತ ಮತ್ತು ಗಿರಿಶ್ರೇಣಿಯನ್ನು ಪ್ರತ್ಯೇಕ ಘಟಕ ಎಂದು ಪರಿಗಣಿಸಬಾರದು. ಸಣ್ಣ ಬೆಟ್ಟಗಳು, ಹುಲ್ಲುಗಾವಲು ಮತ್ತು ಅರಾವಳಿಯ ಇತರ ಪ್ರದೇಶಗಳು ಸಂರಕ್ಷಿತ ಪ್ರದೇಶ ಅಥವಾ ಮೀಸಲು ಅರಣ್ಯದ ಅಡಿಯಲ್ಲಿ ಬರುವುದಿಲ್ಲ. ಪರ್ವತ ಶ್ರೇಣಿಯು ಸಾಮುದಾಯಿಕ ಭೂಮಿ, ಹುಲ್ಲುಗಾವಲು ಮಾತ್ರವಲ್ಲದೆ, ಸ್ಥಳೀಯ ನದಿಗಳಿಗೆ ಜಲಾನಯನ ಪ್ರದೇಶದಂತೆ ಕಾರ್ಯನಿರ್ವ ಹಿಸುತ್ತದೆ.
ಇಂಥ ನಿರ್ಧಾರಕ್ಕೆ ಬರುವ ಮುನ್ನ ನ್ಯಾಯಾಲಯ ಪರ್ವತಶ್ರೇಣಿಯನ್ನು ಆಧರಿಸಿದ ಜನರನ್ನು ಏಕೆ ಭಾಗೀದಾರರೆಂದು ಪರಿಗಣಿಸಲಿಲ್ಲ ಎನ್ನುವುದು ಪ್ರಶ್ನೆ. ಪರಿಸರ ಸಂರಕ್ಷಣೆ, ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಬಹುಮುಖ್ಯ ಮಾಹಿತಿಗಳು ಸಾರ್ವಜನಿಕ ಕ್ಷೇತ್ರದಲ್ಲಿ ಇರುವುದಿಲ್ಲ; ಇದರಿಂದ ಈ ಬಗ್ಗೆ ಜನರಿಗೆ ಏನೂ ಗೊತ್ತಿರುವುದಿಲ್ಲ. ನ್ಯಾಯಾಲಯಗಳು ಅಧಿಕಾರಶಾಹಿ ನೀಡಿದ ಮಾಹಿತಿಯನ್ನು ಆಧರಿಸುತ್ತವೆ. ಇಂಥ ವ್ಯವಸ್ಥೆ ಜನಪರ ಕಾರ್ಯನೀತಿಗೆ ಮಾರಕ. ಹವಾಮಾನ ಬದಲಾವಣೆ ಉಪಶಮನ, ವಾಯುಮಾಲಿನ್ಯ, ತ್ಯಾಜ್ಯ ನಿರ್ವಹಣೆ, ಕೃಷಿ-ಮೀನುಗಾರಿಕೆಯ ಸುಸ್ಥಿರತೆ ಮತ್ತು ಜೈವಿಕ ವೈವಿಧ್ಯವನ್ನು ಆಧರಿಸಿದ ಪರಿಸರ ಸಾಧನೆ ಸೂಚ್ಯಂಕ (ಇಪಿಐ) ಪಟ್ಟಿಯಲ್ಲಿ ದೇಶದ ಸ್ಥಾನ ಪಾತಾಳ ತಲುಪಿದೆ(180ರಲ್ಲಿ 176). ಯಾಲೆ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯ ನೀಡುವ ಇಪಿಐ, ಅವೈಜ್ಞಾನಿಕ ಎಂದು ಸರಕಾರ ತಳ್ಳಿಹಾಕಿದೆ!
ಅರಾವಳಿಯನ್ನು ಉಳಿಸುವುದು ಎಂದರೆ ನಮ್ಮನ್ನು ನಾವು ಉಳಿಸಿಕೊಳ್ಳುವುದು. ಅರಾವಳಿಯ ನಾಶವನ್ನು ನಿಲ್ಲಿಸದಿದ್ದರೆ, ಬೆಟ್ಟವನ್ನು ಬಗೆಯುವ ಪಿತೂರಿ ಗೆಲ್ಲುತ್ತದೆ ಮತ್ತು ಭೂಮಿ-ಖನಿಜದ ದಾಹದಿಂದ ದೇಶದ ರಾಜಧಾನಿಯು ವಿಶ್ವದ ಮಾಲಿನ್ಯ ರಾಜಧಾನಿಯಾಗಿ ಬದಲಾಗುತ್ತದೆ. ಸುಪ್ರೀಂ ಅರಾವಳಿ ಕುರಿತ ವಿಚಾರಣೆಯನ್ನು ಜನವರಿ 21, 2026ಕ್ಕೆ ಮುಂದೂಡಿದ್ದು, ಗೊಂದಲ ಮತ್ತು ಅಸ್ಪಷ್ಟತೆಯನ್ನು ನಿವಾರಿಸಬೇಕು ಎಂದು ಹೇಳಿದೆ. ಪರಿಸರ ಸಚಿವಾಲಯ ಮತ್ತದೇ ಜಾರಿಕೊಳ್ಳುವ ತಾಂತ್ರಿಕ ನುಡಿಗಟ್ಟುಗಳನ್ನು ಬಳಸಿ, ನ್ಯಾಯಾಲಯದಿಂದ ಉದ್ಯಮಪರ ಆದೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆಯೇ ಎಂದು ಕಾಯ್ದುನೋಡಬೇಕಿದೆ. ಹಾಗೆ ಆದಲ್ಲಿ, ಅರಾವಳಿ ಕಾಲಕ್ರಮೇಣ ನೆಲಸಮವಾಗುತ್ತದೆ.