×
Ad

ʼಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿʼ ವಯೋಮಿತಿ ಸಡಿಲಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ : ಜಿ.ಪರಮೇಶ್ವರ್‌

"ಧರ್ಮಸ್ಥಳ ಪ್ರಕರಣದಲ್ಲಿ ಎಸ್‍ಐಟಿ ವೇಗ ಕಳೆದುಕೊಂಡಿಲ್ಲ"

Update: 2025-09-12 14:08 IST

ಬೆಂಗಳೂರು : ʼಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯ ವಯೋಮಿತಿ ಸಡಿಲಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ಬೇರೆ ಬೇರೆ ರಾಜ್ಯದಲ್ಲಿ ಏನಿದೆ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದೇವೆʼ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಹೇಳಿದರು.

ಸದಾಶಿವನಗರದಲ್ಲಿ ಮಾತಾನಾಡಿದ ಅವರು, ಸುಮಾರು ವರ್ಷಗಳಿಂದ ಕಾನ್‌ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಎರಡು,‌ ಮೂರು ವರ್ಷ ವಯೋಮಿತಿ ಹೆಚ್ಚಳ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಅನೇಕ ಸಂದರ್ಭಗಳಲ್ಲಿ ನನ್ನನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಡಿಜಿಯವರಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.

ಬೇರೆ ರಾಜ್ಯದಲ್ಲಿ ವಯೋಮಿತಿ ಎಷ್ಟು ವರ್ಷ ಇದೆ. ಪರಿಶೀಲನೆ ಮಾಡಿ, ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸೂಚನೆ ಕೊಟ್ಟಿದ್ದೇನೆ. ಪ್ರಸ್ತಾವನೆ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸ್ ದಂಪತಿ ಅಂತರ್ ಜಿಲ್ಲಾ ವರ್ಗಾವಣೆ‌ ಸರಕಾರದ ಆದೇಶದಂತೆ ನಡೆಯುತ್ತಿದೆ ಎಂದು ತಿಳಿಸಿದರು.

ಯಾರೇ ಕಾನೂನು ವಿರುದ್ಧವಾಗಿ ನಡೆದುಕೊಂಡಿದ್ದರೆ ಕ್ರಮ :

ಮದ್ದೂರು ಘಟನೆಯ ವಿಚಾರದಲ್ಲಿ ನಾವು ಮೊದಲಿಂದ ಹೇಳುತ್ತಿದ್ದೇವೆ. ಇದರಲ್ಲಿ ರಾಜಕೀಯ ಮಾಡಬೇಡಿ. ಪೊಲೀಸರಿಗೆ ಬಿಡಿ, ಕಲ್ಲು ಹೊಡೆದವರನ್ನು ಹಿಡಿದು, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಮುಸಲ್ಮಾನ ಅಗಿರಲಿ, ಹಿಂದೂ ಆಗಿರಲಿ, ಮತ್ತೊಬ್ಬ ಆಗಿರಲಿ, ಯಾರೇ ಕಾನೂನು ವಿರುದ್ಧವಾಗಿ ನಡೆದುಕೊಂಡಿದ್ದರೆ ಕ್ರಮ ತೆಗೆದುಕೊಳ್ಳುತ್ತಾರೆ. ಈ ವಿಚಾರವನ್ನು ಪೊಲೀಸರಿಗೆ ಬಿಟ್ಟುಬಿಡಬೇಕು. ಅದೆಲ್ಲ ಬಿಟ್ಟು, ಇವರು ಹೋಗಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿ, ಮತ್ತೇ ಜನರನ್ನೆಲ್ಲ ಎಬ್ಬಿಸುವುದು ಸರಿಯಲ್ಲ ಎಂದರು.

ಮಹೇಶ್ ಶೆಟ್ಟಿ ತಿಮರೋಡಿ ದೂರು ಕೊಟ್ಟಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೂರು ತೆಗೆದುಕೊಳ್ಳಬೇಕಾ, ಬೇಡವೇ ಎಂಬುದನ್ನು ಎಸ್‌ಐಟಿಯವರು ಪರಿಶೀಲಿಸುತ್ತಾರೆ. ಪ್ರಕರಣ ಬೇರೆ ಬೇರೆ ದಿಕ್ಕಿಗೆ ಹೋಗುವಂತ ಪ್ರಯತ್ನ ನಡೆದರೆ, ಎಸ್‌ಐಟಿಯವರು ಬೇರೆ ರೀತಿ ತನಿಖೆ ಮಾಡುತ್ತಾರೆ ಎಂದು ಹೇಳಿದರು.

ಯಾರೋ ಕೊಟ್ಟ ಹೇಳಿಕೆ ಮೇಲೆ ನಾವು ತೀರ್ಮಾನ ಮಾಡುವುದಿಲ್ಲ. ಎಸ್‌ಐಟಿ ಮುಂದೆ ಏನು ದೂರು ಕೊಟ್ಟಿರುತ್ತಾರೆ. ಅದಕ್ಕೆ ಸಾಕ್ಷ್ಯ ಕೊಟ್ಟಿರುತ್ತಾರೆ. ಅದೆಲ್ಲವನ್ನು ನೋಡಿ ಎಸ್‌ಐಟಿಯವರು ತೀರ್ಮಾನ ಮಾಡುತ್ತಾರೆ. ಸರಕಾರದ ಅನುಮತಿ ಬೇಕೆಂದರೆ ಕೇಳುತ್ತಾರೆ. ಸದ್ಯಕ್ಕೆ ಯಾವುದೇ ಅನುಮತಿ ಕೇಳುವುದಕ್ಕೆ ಬಂದಿಲ್ಲ ಎಂದರು.

ಪ್ರತಿನಿತ್ಯ ನಾವು ಏನು ಮಾಡುತ್ತಿದ್ದೇವೆ ಎಂದು ಎಸ್‌ಐಟಿಯವರು, ಮಾಧ್ಯಮಕ್ಕಾಗಲಿ ಅಥವಾ ಸಾರ್ವಜನಿಕರಿಗಾಗಲಿ ಹೇಳುವುದಿಲ್ಲ. ಅನೇಕ ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ. ಇದರಿಂದ ಎಸ್‌ಐಟಿ ವೇಗ ಕಳೆದುಕೊಂಡು ಬಿಟ್ಟಿದೆ, ತನಿಖೆ ನಡೆಯುತ್ತಿಲ್ಲ ಅಂದುಕೊಳ್ಳಬಾರದು. ಅನೇಕ ವಿಚಾರಗಳಲ್ಲಿ ಸಂಪೂರ್ಣ ಮಾಹಿತಿ ಬರುವವರೆಗೂ ಎಸ್‌ಐಟಿಯವರು ನಮಗೂ ಹೇಳುವುದಿಲ್ಲ ಎಂದರು.

ಧರ್ಮಸ್ಥಳ ಆರೋಪ ಪ್ರಕರಣದಲ್ಲಿ ಚಿನ್ನಯ್ಯನ ಬೆಂಬಲವಾಗಿ ನಿಂತವರನ್ನು ಬಂಧಿಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರನ್ನು ಬಂಧಿಸಬೇಕು, ಯಾವಾಗ ಬಂಧಿಸಬೇಕು ಎಂಬುದನ್ನು ನಾವು ಎಸ್‌ಐಟಿಯವರಿಗೆ ಹೇಳಕ್ಕಾಗುತ್ತದೆಯೇ? ಮಾಧ್ಯಮದವರು ಹೇಳಿದನ್ನು ಗಣನೆಗೆ ತೆಗೆದುಕೊಂಡು ಕೂಡಲೇ ಬಂಧಿಸಲು ಆಗುವುದಿಲ್ಲ. ಅವರಿಗೆ ಏನು ಮಾಹಿತಿ ಇದೆ, ಬೇಕಾದ ಅಗತ್ಯ ಪುರಾವೆ, ಸಾಕ್ಷ್ಯ ಸಿಗಬೇಕಲ್ಲ. ಅದನ್ನು ನೋಡಿಕೊಂಡು ಆನಂತರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News