ಕುಸಿಯುತ್ತಿರುವ ಬಿಜೆಪಿ ಕೋಟೆ
ಜಂತರ್ ಮಂತರ್‌ನ ಹೋರಾಟವನ್ನು ಹತ್ತಿಕ್ಕಲು ಲಾಠಿ, ಅಶ್ರುವಾಯುಗೂ ವಿದ್ಯಾರ್ಥಿಗಳು ಹೆದರಲಿಲ್ಲ.ಜಲ ಫಿರಂಗಿಯ ರಭಸದ ನೀರಿನ ಹೊಡೆತಕ್ಕೂ ಸೊಪ್ಪುಹಾಕಲಿಲ್ಲ. ಪೊಲೀಸರ ಯಾವುದೇ ಬಲ ಪ್ರಯೋಗ ವಿದ್ಯಾರ್ಥಿಗಳ ಎದೆ ಗುಂದಿಸಲಿಲ್ಲ. ಮೊದಲು ದಿಲ್ಲಿಗೆ ಮಾತ್ರ ಸೀಮಿತವಾಗಿದ್ದ ಹೋರಾಟ ನಂತರ ದೇಶ ವ್ಯಾಪಿಯಾಯಿತು. ಇಂಥದೇ ಮಾದರಿಯ ಯುವಜನರ ಹೋರಾಟ ಪಕ್ಕದ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಸರಕಾರಗಳನ್ನೇ ಉರುಳಿಸಿದ್ದವು. ಹೀಗಾಗಿ ಕೇಂದ್ರದ ಮೋದಿ ಸರಕಾರ ದಿಗಿಲುಗೊಂಡು ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಿತು.
ನೀಟ್ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸೋರಿಕೆಯ ಹಗರಣದ ವಿರುದ್ಧ ಹೊಸ ಪೀಳಿಗೆಯ ಯುವಕರು,ವಿದ್ಯಾರ್ಥಿಗಳು ರಾಜಧಾನಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಹೋರಾಟವನ್ನು ಆರಂಭಿಸಿದಾಗ ಕೇಂದ್ರ ಸರಕಾರ ಈ ನೋವಿಗೆ ಸ್ಪಂದಿಸಲಿಲ್ಲ. ಅಷ್ಟೇ ಅಲ್ಲ ಶಾಂತಿಯುತ ಚಳವಳಿ ನಡೆಸಿದವರನ್ನು ಅನೇಕ ಕೇಂದ್ರ ಸಚಿವರು, ದೇಶದ್ರೋಹಿಗಳು, ಭಯೋತ್ಪಾದಕರು ಎಂದೆಲ್ಲ ಕರೆದರು. ಸಾಮಾಜಿಕ ಜಾಲ ತಾಣದಲ್ಲಿ ಭಂಡ ಭಕ್ತರು ಅತ್ಯಂತ ಅಸಭ್ಯ ಭಾಷೆಯಲ್ಲಿ ಕಾರಿಕೊಂಡರು. ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಬೇಕಿದ್ದ ಹಾಗೂ ಪೊಲೀಸರ ದೊಣ್ಣೆ ಏಟು ತಿಂದ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯರಾತ್ರಿ ವೀಡಿಯೊದಲ್ಲಿ ಕಾಣಿಸಿಕೊಂಡು ಚಳವಳಿಗಾರ ವಿದ್ಯಾರ್ಥಿಗಳು ನನ್ನ ತಾಯಿಯನ್ನು ಅಸಭ್ಯ ವಾಗಿ ಬೈದರು,ನಾನು ಅವರನ್ನು ಕ್ಷಮಿಸಿದ್ದೇನೆ ಎಂದು ತಾನೇ ಜನರ ಸಿಂಪತಿ ಗಿಟ್ಟಿಸಲು ಯತ್ನಿಸಿದರು. ಏತನ್ಮಧ್ಯೆ ಎರಡು ವಾರ ತಡವಾಗಿ ಕಾಣಿಸಿಕೊಂಡ ಆರೆಸ್ಸೆಸ್ ಸರ ಸಂಘಚಾಲಕ ಮೋಹನ್ ಭಾಗವತ್ ಅವರು ಜೆನ್‌ಝಿ ಪ್ರತಿಭಟನೆ ಪ್ರಾಮಾಣಿಕವಾಗಿತ್ತು, ಅವರನ್ನು ದೇಶ ದ್ರೋಹಿಗಳು ಎಂದು ಕರೆಯುವುದು ಸರಿಯಲ್ಲ ಎಂದರು.
ದಿಲ್ಲಿಯಲ್ಲಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ದೇಶ ದ್ರೋಹಿಗಳೆಂದು ಕರೆಯುವುದು ತಪ್ಪು ಎಂದು ಭಾಗವತರು ಹೇಳಿಕೆ ನೀಡಿದ 24 ತಾಸುಗಳಲ್ಲಿ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟದಲ್ಲಿ ಪಾಲ್ಗೊಳ್ಳಲು ದಿಲ್ಲಿಯಿಂದ ಬಂದಿದ್ದ ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಅವರ ಮುಖಕ್ಕೆ ನಡು ರಸ್ತೆಯಲ್ಲಿ ಮಸಿ ಹಚ್ಚಿ ಓಡಿ ಹೋದರು.ಮಸಿ ಹಚ್ಚಿದವರು ಯಾರೆಂದು, ಯಾವ ಸಿದ್ಧಾಂತಕ್ಕೆ ಸೇರಿದವರೆಂಬುದನ್ನು ವಿವರಿಸಬೇಕಾಗಿಲ್ಲ
ಮುಖಕ್ಕೆ ಮಸಿ ಹಚ್ಚುವುದು,ಹಲ್ಲೆ ಮಾಡುವುದು ಇವರಿಗೆ ಹೊಸದಲ್ಲ.ಇದಕ್ಕೆ ಶತಮಾನಗಳ ಇತಿಹಾಸವಿದೆ. ಒಂದೂವರೆ ಶತಮಾನದ ಹಿಂದೆ ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಲು ಹೊರಟಾಗ ಇದೇ ಮನುವ್ಯಾಧಿ ಪಿಂಡಗಳು ಸಾವಿತ್ರಿಬಾಯಿಯವರ ಮೇಲೆ ಸೆಗಣಿ ಮತ್ತು ಮಸಿ ಎರಚಿದರು. ಆದರೂ ಅವರು ಹೆದರಲಿಲ್ಲ. ಅದೇ ಸೆಗಣಿ ಹಚ್ಚಿದ ಸಿರೆಯುಟ್ಟು ಪಾಠ ಮಾಡಿ ಬಂದರು. ಹೆಣ್ಣು ಮಕ್ಕಳು ಮತ್ತು ದಲಿತರು ಹಿಂದುಳಿದವರು ಅಕ್ಷರ ಕಲಿಯಬಾರದು ಎಂಬ ಸಿದ್ಧಾಂತದ ಪ್ರತಿಪಾದಕರು ಸಾವಿತ್ರಿ ಬಾಯಿ ಅವರಿಗೆ ಸೆಗಣಿ ಎರಚಿದರು. ಈಗಲೂ ಅದನ್ನೇ ಮಾಡಲು ಅವರು ಹೊರಟಿದ್ದಾರೆ.
ಭಾಗವತರು ಏನೇ ಹೇಳಲಿ, ಅವರ ಪರಿವಾರಕ್ಕೆ ಸೇರಿದವರು ಏನು ಮಾಡುತ್ತಾರೆಂಬುದಕ್ಕೆ ನಡೆದ ಘಟನೆಗಳೇ ಸಾಕ್ಷಿಯಾಗಿವೆ. ಇದೇ ಜಾರ್ಖಂಡ್ ನಲ್ಲಿ ಗಣಿಗಾರಿಕೆ ವಿರುದ್ಧ ಜನ ಜಾಗೃತಿ ಮೂಡಿಸಲು ಹೋಗಿದ್ದ ಸ್ವಾಮಿ ಅಗ್ನಿವೇಶ್ ಅವರ ಮೇಲೆ ನಡುದಾರಿಯಲ್ಲೇ ಹಲ್ಲೆ ಮಾಡಿ ಅವರು ಧರಿಸಿದ ಕಾವಿ ಉಡುಪು ಹರಿದು ನೆಲದ ಮೇಲೆ ಹಾಕಿ ಉರುಳಾಡಿಸಿ ಹೊಡೆದಿದ್ದರು. ಸಾಧು ಸಂತರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವವರಿಗೆ ಸ್ವಾಮಿ ಅಗ್ನಿವೇಶ್ ಅವರಂಥ ಸನ್ಯಾಸಿಯನ್ನು ಕಂಡರೆ ಯಾಕೆ ಅಸಮಾಧಾನ ಮತ್ತು ದ್ವೇಷ ವೆಂದರೆ ಅವರು ಇವರ ಹಿಂದುತ್ವದ ಕಪಟ ನಾಟಕಕ್ಕೆ ಬಲಿ ಬೀಳದೆ ಕೋಮುವಾದದ ವಿರುದ್ಧ ನಿರಂತರವಾಗಿ ಹೋರಾಡುತ್ತ ಬಂದಿದ್ದರು. ಜಾರ್ಖಂಡ್ ಮಾತ್ರವಲ್ಲ ಅವರು ಎಲ್ಲೇ ಕಾಣಿಸಲಿ ಅಲ್ಲಿ ಹೋಗಿ ದಾಳಿ ಮಾಡುತ್ತಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾದಾಗ ಅಂತಿಮ ದರ್ಶನಕ್ಕೆ ಹೋಗಿದ್ದ ಸ್ವಾಮಿ ಅಗ್ನಿವೇಶ್‌ರ ಮೇಲೆ ಇದೇ ರೀತಿ ಹಲ್ಲೆ ಮಾಡಿದ್ದರು. ಅದನ್ನು ಭಾಗವತರು ಎಂದೂ ತಪ್ಪೆಂದು ಹೇಳಿ ಖಂಡಿಸಲಿಲ್ಲ.
ಭಾರತೀಯರನ್ನು ಮತ ಧರ್ಮದ ಆಧಾರದಲ್ಲಿ ವಿಭಜಿಸಿ ತಮ್ಮ ಕನಸಿನ ಹಿಂದೂ ರಾಷ್ಟ್ರ ನಿರ್ಮಿಸಲು ಹೊರಟವರಿಗೆ ಅದಕ್ಕೆ ಅಡ್ಡಿಯಾಗುವವರೆಲ್ಲ ಶತ್ರುಗಳು. ಜನಸಾಮಾನ್ಯರನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಜಾತಿ ಮತವಿಲ್ಲದೇ ಎಲ್ಲರೂ ಸೇರಿ ನಡೆಸುವ ಯಾವುದೇ ಹೋರಾಟವನ್ನು ಇವರು ಇಷ್ಟ ಪಡುವುದಿಲ್ಲ.ಯಾವುದೇ ಸಮಸ್ಯೆಗೆ, ಪ್ರಶ್ನೆಗೆ ಇವರ ಬಳಿ ಉತ್ತರ ಇಲ್ಲ. ಉತ್ತರ ಕೊಡಲು ಸಾಧ್ಯವಾಗದಾಗ ಈ ರೀತಿ ದೈಹಿಕ ದಾಳಿಯನ್ನು ನಡೆಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ಶಾ ಸೇರಿ ಎರಡು ವಿಧದ ಗೂಂಡಾಗಳನ್ನು ಸಷ್ಟಿಸಿದ್ದಾರೆ. ದಾರಿಯಲ್ಲಿ ಹಲ್ಲೆ ಮಾಡಿ ಥಳಿಸುವವರು ಒಂದು ರೀತಿಯ ಗೂಂಡಾಗಳು. ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಭಾಷೆಯಲ್ಲಿ ದಾಳಿ ನಡೆಸುವವರು ಇನ್ನೊಂದು ವಿಧದ ಗೂಂಡಾಗಳು. ದೇಶದಲ್ಲಿ ನಡೆದ ಹಲವಾರು ಹೋರಾಟಗಳನ್ನು ಹತ್ತಿಕ್ಕುವಲ್ಲಿ ಇವರು ಸಫಲರಾಗಿದ್ದಾರೆ. ಶಾಹೀನ್ ಬಾಗ್, ಭೀಮಾ ಕೋರೆಗಾಂವ್ ಹೋರಾಟಗಳನ್ನು ಗೂಂಡಾಗಿರಿ ಮತ್ತು ಕೈಯಲ್ಲಿ ಇರುವ ಅಧಿಕಾರದ ಮೂಲಕ ನಿಭಾಯಿಸಿದರು. ಅದರಂತೆ ಜೆನ್ ಝಿ ಆಂದೋಲನವನ್ನು ಹಿಮ್ಮೆಟ್ಟಿಸಲು ಹೊರಟರು ಆದರೆ ಆಗಲಿಲ್ಲ. ರೈತರ ಹೋರಾಟವೂ ಒಂದು ವರ್ಷದಷ್ಟು ದೀರ್ಘ ಕಾಲ ನಡೆಯಿತು. ಅದು ಕೂಡ ಸರಕಾರಕ್ಕೆ ಬಹುದೊಡ್ಡ ಸವಾಲಾಯಿತು.ತಡವಾಗಿಯಾದರೂ ಮಣಿಯಬೇಕಾಯಿತು. ಆಗ ಮೋಹನ್ ಭಾಗವತರು ಮಧ್ಯಪ್ರವೇಶಿಸಿ ಮಾತಾಡಲಿಲ್ಲ .
ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ (ಜೆಎನ್‌ಯು) ವಿದ್ಯಾರ್ಥಿಗಳ ಚಳವಳಿಯನ್ನು ದೇಶದ್ರೋಹಿಗಳು ಎಂದು ಹೆಸರಿಟ್ಟು ಹತ್ತಿಕ್ಕಿದರು. ಆದರೂ ಜೆಎನ್‌ಯುನಲ್ಲಿ ಎಡ, ಪ್ರಗತಿಪರ ಸಂಘಟನೆಗಳನ್ನು ಹತ್ತಿಕ್ಕಲು ಆಗಲಿಲ್ಲ. ಕನ್ಹಯ್ಯ ಕುಮಾರ್ ಮೇಲೆ ದೈಹಿಕ ಹಲ್ಲೆಯೂ ನಡೆಯಿತು. ಆಗಲೂ ಮೋಹನ್ ಭಾಗವತರು ಮಾತಾಡಲಿಲ್ಲ. ಈ ಸಲ ಯಾಕೆ ಅವರು ಮಾತಾಡಲು ಮುಂದೆ ಬಂದರು? ಇದಕ್ಕೆ ಸರಳ ಉತ್ತರವೆಂದರೆ ಕಳೆದ 12 ವರ್ಷಗಳಲ್ಲಿ ಮೋದಿಯವರನ್ನು ಮುಂದಿಟ್ಟು ಕೊಂಡು ಆರೆಸ್ಸೆಸ್ ಸರಕಾರದ ಮೇಲೆ ಹೊಂದಿದ್ದ ಹಿಡಿತ ಸಡಿಲಾಗಿದೆ.ಮೋದಿಯವರ ಜನಪ್ರಿಯತೆ ಕುಸಿಯುತ್ತಿದೆ. ಅಂತಲೇ ಭಾಗವತರು ಸರಕಾರದ ಮತ್ತು ತಮ್ಮ ಸಂಘಟನೆಯ ಉಳಿವಿಗಾಗಿ ಧಾವಿಸಿದ್ದಾರೆ.
ಎಂಥ ಇಕ್ಕಟ್ಟಿನ ಪರಿಸ್ಥಿತಿ ಅವರಿಗೆ ನಿರ್ಮಾ ಣವಾಗಿದೆಯೆಂದರೆ ದಿಲ್ಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟದ ಮೇಲೆ ಲಾಠಿ, ಅಶ್ರುವಾಯು ಹಾಗೂ ಅಪಾಯಕಾರಿಯಾದ ಪೆಲೆಟ್‌ಗನ್ ಕೂಡ ಬಳಸಿದರು. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗುವುದೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ಶಾ ಅವರು ಸಂಸತ್ ಅಧಿವೇಶನ ಆರಂಭವಾಗಿ ಹದಿನೈದು ದಿನಗಳಾದರೂ ಸದನಕ್ಕೆ ಬರಲಿಲ್ಲ, ಪ್ರತಿಪಕ್ಷ ಗಳು ಇವರ ಗೈರು ಹಾಜರಿಯನ್ನು ಆಕ್ಷೇಪಿಸಿ ಪ್ರತಿಭಟಸಿದರೂ ಪ್ರಯೋಜನವಾಗಲಿಲ್ಲ. ಒಟ್ಟಾರೆ ಮೋದಿ ಜನಪ್ರಿಯತೆ ಕುಸಿಯುತ್ತಿದೆ. ಇದರಿಂದ ನಾಗಪುರದ ಗುರುಗಳು ವಿಚಲಿತರಾಗಿದ್ದಾರೆ.ಅವರಿಗೆ ತಮ್ಮ ಅಜೆಂಡಾ ಜಾರಿಗೆ ತರಲು ಇನ್ನೊಬ್ಬ ಮೋದಿ ಬೇಕಾಗಿದ್ದಾನೆ.
ವಾಸ್ತವ ಸಂಗತಿ ಏನೆಂದರೆ 2026ನೇ ಸಾಲಿನ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲಾದ ನಂತರ ಜೂನ್ 21ರಂದು ಎರಡನೇ ಸಲ ಮತ್ತೆ ಪರೀಕ್ಷೆ ನಡೆಸಲಾಯಿತಾದರೂ ವಿದ್ಯಾರ್ಥಿಗಳ ಜಂತರ್ ಮಂತರ್ ಹೋರಾಟ ನಿಲ್ಲಲಿಲ್ಲ. ನೀಟ್ ಹಗರಣಕ್ಕೆ ಕಾರಣನಾದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿದ್ಯಾರ್ಥಿಗಳು ಪಟ್ಟು ಹಿಡಿದರು.ಕೊನೆಗೆ ಬೇರೆ ದಾರಿಯಿಲ್ಲದೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರು.ಮೋದಿಯವರ 12 ವರ್ಷಗಳ ಆಡಳಿತದಲ್ಲಿ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಎಂ.ಜೆ.ಅಕ್ಬರ್ ರಾಜೀನಾಮೆಯನ್ನು ಬಿಟ್ಟರೆ ಯಾವ ಮಂತ್ರಿಯೂ ರಾಜೀನಾಮೆ ಕೊಟ್ಟಿರಲಿಲ್ಲ. ಅಂದಿನಿಂದಲೇ ಸರಕಾರದ ಅಧೋಗತಿ ಆರಂಭವಾಯಿತು.
ಜಂತರ್ ಮಂತರ್‌ನ ಹೋರಾಟವನ್ನು ಹತ್ತಿಕ್ಕಲು ಲಾಠಿ, ಅಶ್ರುವಾಯುಗೂ ವಿದ್ಯಾರ್ಥಿಗಳು ಹೆದರಲಿಲ್ಲ.ಜಲ ಫಿರಂಗಿಯ ರಭಸದ ನೀರಿನ ಹೊಡೆತಕ್ಕೂ ಸೊಪ್ಪುಹಾಕಲಿಲ್ಲ. ಪೊಲೀಸರ ಯಾವುದೇ ಬಲ ಪ್ರಯೋಗ ವಿದ್ಯಾರ್ಥಿಗಳ ಎದೆ ಗುಂದಿಸಲಿಲ್ಲ. ಮೊದಲು ದಿಲ್ಲಿಗೆ ಮಾತ್ರ ಸೀಮಿತವಾಗಿದ್ದ ಹೋರಾಟ ನಂತರ ದೇಶ ವ್ಯಾಪಿಯಾಯಿತು. ಇಂಥದೇ ಮಾದರಿಯ ಯುವಜನರ ಹೋರಾಟ ಪಕ್ಕದ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಸರಕಾರಗಳನ್ನೇ ಉರುಳಿಸಿದ್ದವು. ಹೀಗಾಗಿ ಕೇಂದ್ರದ ಮೋದಿ ಸರಕಾರ ದಿಗಿಲುಗೊಂಡು ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಿತು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಉದ್ಯೋಗ ಇಲ್ಲದ ಯುವಕರು ಜಿರಳೆಗಳು,ಪರಾವಲಂಬಿಗಳು ಇದ್ದಂತೆ ಎಂಬ ಮಾತನ್ನು ಆಡಿದ್ದರು.ಈ ಹೇಳಿಕೆಯನ್ನೇ ಬಳಸಿಕೊಂಡ ದೂರದ ಅಮೆರಿಕದ ಬಾಸ್ಟನ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಭಿಜೀತ್ ದೀಪ್ಕೆ ಅವರು ಮಾರನೇ ದಿನದಿಂದಲೇ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ವೇದಿಕೆಯನ್ನು ಹುಟ್ಟು ಹಾಕಿದರು. ಯಾವುದೇ ಹೋರಾಟಕ್ಕೆ ಒಂದು ಸಿದ್ಧಾಂತ ಇರಬೇಕಾಗುತ್ತದೆ.ಈ ಚಳವಳಿ ನಡೆಸುತ್ತಿರುವ ಸಿಜೆಪಿಗೆ ಗಾಂಧಿ, ಡಾ.ಅಂಬೇಡ್ಕರ್ ಮತ್ತು ಜವಾಹರಲಾಲ್ ನೆಹರೂ ವಿಚಾರ ಧಾರೆ ದಾರಿದೀಪವಾಗಿದೆ. ಎಂದು ಹೇಳುವ ಮೂಲಕ ತಮ್ಮ ತಾತ್ವಿಕ ನಿಲುವನ್ನು ಅದರ ನಾಯಕ ಅಭಿಜೀತ್ ದೀಪ್ಕೆ ಸ್ಪಷ್ಟ ಪಡಿಸಿದ್ದಾರೆ.
ಈ ವಿದ್ಯಾರ್ಥಿ ಹೋರಾಟದ ಜೊತೆಗೆ ಬಿಹಾರದಲ್ಲಿ ನಡೆದ ಬಂಕಿಪುರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತು ಜನ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ಅವರು ಗೆಲುವು ಸಾಧಿಸಿದರು.ಇದು ಕಳೆದ ಮೂರು ದಶಕಗಳಿಂದ ಬಿಜೆಪಿಯ ಭದ್ರ ಕೋಟೆ ಎಂದು ಹೆಸರಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಇದೇ ಊರಿನವರು.ಇದಲ್ಲದೆ ಮಧ್ಯಪ್ರದೇಶದ ವಿಧಾನ ಸಭಾ ಉಪ ಚುನಾವಣೆಯಲ್ಲಿ ಕೂಡ ಬಿಜೆಪಿ ಪರಾಭವ ಗೊಂಡಿತು. ಇದಲ್ಲದೆ ಅಯೋಧ್ಯೆಯ ರಾಮ ಮಂದಿರದ ಹುಂಡಿಯ ಲೂಟಿಯ ಹಗರಣದಲ್ಲಿ ಸಿಕ್ಕವರು ಯಾರೆಂಬುದು ಈಗಾಗಲೇ ಬಟ್ಟ ಬಯಲಾಗಿದೆ.ಅವರಾರು ಹೊರಗಿನವರಲ್ಲ. ಟ್ರಸ್ಟಿಗಳೇ ದಗಾಕೋರರು. ಇದರ ಪೋಷಕರಾಗಿದ್ದ ಆರೆಸ್ಸೆಸ್ ನಾಯಕ ಬಯ್ಯಾಜಿ ಜೋಶಿ ರಾಜೀನಾಮೆ ನೀಡಿದ್ದಾರೆ. ಈ ಎಲ್ಲ ಘಟನೆಗಳಿಂದ ಕೇಂದ್ರದ ಬಿಜೆಪಿ ಸರಕಾರದ ನೇತೃತ್ವ ವಹಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಮಾತ್ರವಲ್ಲ ಸಂಘ ಪರಿವಾರದ ಪ್ರಭಾವ ಕಡಿಮೆಯಾಗಿರುವುದು ಸ್ಪಷ್ಟವಾಗಿದೆ.ಅಂತಲೆ ಬಿಜೆಪಿಯ ಸೈದ್ಧಾಂತಿಕ ಗುರುವಾದ ಆರೆಸ್ಸೆಸ್‌ನ ಸರ ಸಂಘಚಾಲಕರು ಮಧ್ಯ ಪ್ರವೇಶಿಸಿ ಮಾತಾಡುವ ಅನಿವಾರ್ಯತೆ ಉಂಟಾಗಿದೆ.
ಈಗ ಕೋಮು ಆಧಾರದ ವಿಭಜನೆಯೂ ಸಾಧ್ಯವಿಲ್ಲ. ಹೊಸ ಪೀಳಿಗೆಯ ಯುವಕರು ಜನಾಂಗ ದ್ವೇಷದ ಸಿದ್ಧಾಂತವನ್ನು ಒಪ್ಪುವುದಿಲ್ಲ. ಇನ್ನು ನರೇಂದ್ರ ಮೋದಿಯವರ ಹೆಸರಿನಲ್ಲಿ ಕತ್ತೆಯನ್ನು ನಿಲ್ಲಿಸಿ ಗೆಲ್ಲಿಸಬಹುದೆಂಬ ದಿನಗಳೂ ಮುಗಿದು ಹೋದವು.ಮೋದಿಯವರ ಪ್ರಭಾವವೂ ಈಗ ಉಳಿದಿಲ್ಲ.ಈ ಹಿನ್ನೆಲೆಯಲ್ಲಿ 2027ರ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣಾ ಫಲಿತಾಂಶ ಕುತೂಹಲಕರವಾಗಿದೆ.