ರಾಜೀನಾಮೆ ಕೊಡಬೇಕಾದವರು ಯಾರು?
ಅಯೋಧ್ಯೆಯ ರಾಮ ಮಂದಿರದ ಹೆಸರಿನಲ್ಲಿ ಲಪಟಾಯಿಸಿದ ಕೋಟ್ಯಂತರ ರೂಪಾಯಿಗಳ ಹಗರಣ ಬಟ್ಟ ಬಯಲಾಗಿದೆ.ಇಲ್ಲಿ ಬಂದು ಪೂಜೆಗೆ ಕುಳಿತಿದ್ದ ‘ವಿಶ್ವಗುರು’ ಈಗ ಮೌನಕ್ಕೆ ಜಾರಿದ್ದಾರೆ. ಇನ್ನೊಂದೆಡೆ ದೇಶದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಉದ್ಯೋಗಾವಕಾಶಗಳು ಮಾಯವಾಗಿವೆ. ಇವೆಲ್ಲದರ ವಿರುದ್ಧ ಬಹುದೊಡ್ಡ ಜನ ಹೋರಾಟ ಬೆಳೆದು ಬರುವ ದಿನಗಳು ದೂರವಿಲ್ಲ.
ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಅಪಾಯ ಎದುರಾಗಿರುವ ಇಂದಿನ ದಿನಗಳಲ್ಲಿ ಅಧಿಕಾರದಲ್ಲಿ ಇರುವವರ ಲೋಪ ದೋಷಗಳನ್ನು ಪ್ರಶ್ನಿಸುತ್ತಲೇ ಇರಬೇಕು. ಭಿನ್ನಮತವನ್ನು, ಪ್ರತಿರೋಧವನ್ನು ಪ್ರಭುತ್ವ ಹತ್ತಿಕ್ಕಲು ಮಸಲತ್ತು ನಡೆಸಿದರೆ ಅದನ್ನು ಬಲವಾಗಿ ವಿರೋಧಿಸಲೇ ಬೇಕು. ಜೊತೆಗೆ ತಕ್ಷಣದ ಸಮಸ್ಯೆಗಳ ಪರಿಹಾರಕ್ಕಾಗಿ ಚಳವಳಿ ಆರಂಭವಾದರೂ ಅದಕ್ಕೊಂದು ಗೊತ್ತು ಗುರಿ, ಸಮರ್ಥ ನಾಯಕತ್ವ ಇರಬೇಕು. ಈ ದೃಷ್ಟಿಯಿಂದ ನೀಟ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಆಂದೋಲನವನ್ನು ನಾವು ಬೆಂಬಲಿಸಲೇ ಬೇಕಾಗಿದೆ. ಇದಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಅಧಿಕಾರದಲ್ಲಿ ಇದ್ದವರಿಗೆ ನಡುಕ ಶುರುವಾಗಿದೆ. ಏತನ್ಮಧ್ಯೆ ಶನಿವಾರ ಬೆಳಗಿನ ಜಾವ ಪೊಲೀಸರು ಜಂತರ್ ಮಂತರ್‌ನ ಸತ್ಯಾಗ್ರಹ ನಡೆದ ಜಾಗಕ್ಕೆ ಬಂದು ವಾಂಗ್ಚುಕ್ ಅವರನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದರು. ಇದರಿಂದ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ತಾಳಿದೆ. ಆದರೆ ಒಂದು ತಿಂಗಳಿಂದ ಈ ಹೋರಾಟ ನಡೆದರೂ ಕೇಂದ್ರ ಸರಕಾರ ಕನಿಷ್ಠ ಕರೆದು ಮಾತಾಡಲಿಲ್ಲ. ಇದಕ್ಕೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿಯವರೂ ರಾಜೀನಾಮೆ ಕೊಡಬೇಕು ಎಂದು ಹೇಳಿದರೆ ತಪ್ಪಿಲ್ಲ.
ನೀಟ್ ಹಗರಣದಲ್ಲಿ ಅಮಾಯಕರಾದ ವಿದ್ಯಾರ್ಥಿಗಳ ದುರಂತ ಸಾವಿನ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಹೋರಾಟಕ್ಕಾಗಿ ಬೀದಿಗಿ
ಳಿದ ವಿದ್ಯಾರ್ಥಿಗಳು ತಮ್ಮ ಪಟ್ಟು ಸಡಿಲಿಸದೇ ಹೋರಾಟವನ್ನು ಮುಂದುವರಿಸಿದ್ದಾರೆ. ಈ ಇಡೀ ಹೋರಾಟದಲ್ಲಿ ದೊಡ್ಡ ಸಂಘಟನೆ ಎಂದು ಹೇಳಿಕೊಳ್ಳುವ ಎಬಿವಿಪಿ ಎಲ್ಲೂ ಕಾಣುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಮೋದಿ ಸರಕಾರ ಕನಿಷ್ಠ ಸಹಾನುಭೂತಿಯಿಂದ ಸ್ಪಂದಿಸಲಿಲ್ಲ. ಕರೆದು ಮಾತಾಡಿಸಲಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಹೋರಾಟ ತೀವ್ರಗೊಂಡಿತು. ದಿಲ್ಲಿಯ ಜಂತರ್ ಮಂತರ್ ಹೋರಾಟದ ರಣರಂಗವಾಯಿತು. ಈ ಹಂತದಲ್ಲಿ ಅಂದರೆ ಹೋರಾಟ ತೀವ್ರಗೊಂಡ ನಂತರ ದಿಲ್ಲಿಗೆ ಬಂದು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದವರು ಸೋನಂ ವಾಂಗ್ಚ್ಚುಕ್. ಆ ನಂತರ ಇದು ಸೋನಂ ವಾಂಗ್ಚ್ಚುಕ್ ಹೋರಾಟವೆಂದು ಹೆಸರಾಯಿತು. ಸಾಮೂಹಿಕ ನಾಯಕತ್ವದ ಹೋರಾಟ ಹೋಗಿ ಸಹಜವಾಗಿ ವ್ಯಕ್ತಿ ಪ್ರಧಾನ ಹೋರಾಟವಾಯಿತು.ಅಂದರೆ ಸಾಮೂಹಿಕ ಹೋರಾಟವೊಂದು ವ್ಯಕ್ತಿ ಪ್ರಧಾನ ಚಳವಳಿಯಾಗಿ ಬದಲಾಯಿತು. ಇಷ್ಟೆಲ್ಲಾ ನಡೆದಿದ್ದರೂ ಮೋದಿ ಸರಕಾರ ಜಾಣ ಮೌನವನ್ನು ತಾಳಿತು.ಜೆಪಿ ಚಳವಳಿಯ ಹೀರೋ ಎಂದು ಬೆನ್ನು ಚಪ್ಪರಿಸಿಕೊಳ್ಳುವ ಅನಿವಾಸಿ ಪ್ರಧಾನಿ ಎಂದೇ ಹೆಸರಾದ ಪ್ರಧಾನಿ ನರೇಂದ್ರ ಮೋದಿಯವರು ಇದೇ ಸಂದರ್ಭದಲ್ಲಿ ವಿದೇಶ ಪ್ರವಾಸ ಆರಂಭಿಸಿದರು.ಅವರ ಸರಕಾರದ ಮಂತ್ರಿಗಳೂ ಬರಲಿಲ್ಲ.
ಹಾಗೆ ನೋಡಿದರೆ ಈ ಸೋನಂ ವಾಂಗ್ಚ್ಚುಕ್
ನಿರಶನ ಆರಂಭಿಸಿರುವುದು ಸಹಜವಾಗಿ ಅನೇಕರಿಗೆ ಅಚ್ಚರಿಯುಂಟು ಮಾಡಿತು. ಲಡಾಕ್‌ನ ಈತ ಮೊದಲಿನಿಂದಲೂ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಬೆಂಬಲಿಸುತ್ತ ಬಂದವರು. ಮೋದಿ ಸರಕಾರದ ನೀತಿ ಧೋರಣೆಗಳನ್ನು ಸಮರ್ಥಿಸುತ್ತ ಬಂದವರು. ಮೊದಲಿನಿಂದಲೂ ಅವರ ರಾಜಕೀಯ ನಿಲುವುಗಳು ಜನಪರವಾಗಿರಲಿಲ್ಲ. ಜಮ್ಮು- ಕಾಶ್ಮೀರದಲ್ಲಿ ನಡೆಯುತ್ತಿರುವ ಘನ ಘೋರ ವಿದ್ಯಮಾನಗಳ ಬಗ್ಗೆ ಅದರಲ್ಲಿ ಸರಕಾರದ ಲೋಪದ ಬಗ್ಗೆ ಟೀಕಿಸಿದವರಲ್ಲ. ಪರೀಕ್ಷೆ ಬರೆದು ಸೀಟು ಪಡೆದ ವಿದ್ಯಾರ್ಥಿಗಳು ಮುಸಲ್ಮಾನರಾಗಿದ್ದಾರೆ ಎಂಬ ಕಾರಣಕ್ಕಾಗಿ ಎಲ್ಲ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಹೊರ ಹಾಕಿರುವ ಪ್ರಕರಣ ಜಮ್ಮುವಿನಲ್ಲಿ ನಡೆದರೂ ಅದನ್ನು ಅವರು ವಿರೋಧಿಸಲಿಲ್ಲ. ಹೀಗೆ ಅನೇಕ ವಿರೋಧಾಭಾಸಗಳಿದ್ದರೂ ಈಗ ಅವರು ನಡೆಸಿದ ನಿರಶನವನ್ನು ಸಂದೇಹಿಸಬೇಕಾಗಿಲ್ಲ.
2023ರಲ್ಲಿ ಇದೇ ವಾಂಗ್ಚ್ಚುಕ್ ರಾಷ್ಟ್ರೀಯ ಶಿಕ್ಷಣ ನೀತಿ(NEP2020) ಯನ್ನು ಬೆಂಬಲಿಸಿದವರು. ಅದನ್ನು ಜಾರಿಗೆ ತಂದ ಮೋದಿ ಸರಕಾರವನ್ನು ಮತ್ತು ವಿಶೇಷವಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಅಭಿನಂದಿಸಿದವರು.(ಈಗಲೂ ಆ ನಿಲುವು ಬದಲಾಗಿಲ್ಲ) ಒಂದೆಡೆ ಹೊಸ ಶಿಕ್ಷಣ ನೀತಿಯನ್ನು ಬೆಂಬಲಿಸುವುದು, ಇನ್ನೊಂದೆಡೆ ನೀಟ್ ಹಗರಣವನ್ನು ವಿರೋಧಿಸುವುದು ಇದು ಇಬ್ಬಂದಿತನವಲ್ಲವೇ? ಇದು ಹೋರಾಟದ ದಿಕ್ಕು ತಪ್ಪಿಸುವ ಹುನ್ನಾರವೇ ಎಂಬ ಸಂದೇಹಕ್ಕೆ ಕಾರಣವಾಗಿದೆ. ಇಂಥ ವಿರೋಧಾಭಾಸ ಒಳ್ಳೆಯದಲ್ಲ. ವಾಂಗ್ಚುಕ್ ಈಗ ಬದಲಾಗಿರಬಹುದು ಎಂದು ನಂಬಬಹುದೇ?
ನಾನು ಕಳೆದ ಐವತ್ತು ವರ್ಷಗಳಲ್ಲಿ ಸರಕಾರವನ್ನೇ ಬದಲಿಸಿದ ಎರಡು ಮುಖ್ಯ ಹೋರಾಟಗಳನ್ನು ನೋಡಿರುವೆ. ಮೊದನೆೆಯದು 1976_-77ರಲ್ಲಿ ನಡೆದ ಜೆಪಿ ಚಳವಳಿ ಮತ್ತು ಎರಡನೇಯದು ಎರಡು ದಶಕಗಳ ಹಿಂದೆ ಅಣ್ಣಾ ಹಝಾರೆ ನೇತೃತ್ವದಲ್ಲಿ ಯುಪಿಎ ಸರಕಾರದ ವಿರುದ್ಧ ನಡೆದ ಹೋರಾಟ. ಆರಂಭದಲ್ಲಿ ಇವು ಎಲ್ಲರನ್ನೂ ಒಳಗೊಂಡ ಚಳವಳಿಗಳೆಂದು ಹೆಸರಾದರೂ ಇವುಗಳ ಹಿಂದೆ ಇದ್ದು ನಿಯಂತ್ರಿಸಿದ್ದು ಕಾರ್ಪೊರೇಟ್ ಲಾಬಿ ಮತ್ತು ಆರೆಸ್ಸೆಸ್. ಈ ಚಳವಳಿಗಳ ರಾಜಕೀಯ ಲಾಭ ಯಾರಿಗೆ ಆಯಿತೆಂಬುದರ ಬಗ್ಗೆ ವಿವರಿಸಬೇಕಾಗಿಲ್ಲ.
ಯಾವುದೇ ಒಂದು ಹೋರಾಟಕ್ಕೆ ನಿರ್ದಿಷ್ಟ ದಿಕ್ಕು ದೆಸೆ ಇರಬೇಕು. ಒಂದು ತಾತ್ವಿಕ ಹಿನ್ನೆಲೆ, ನಿರ್ದಿಷ್ಟ ಸಾಮಾಜಿಕ, ಆರ್ಥಿಕ ಕಾರ್ಯಕ್ರಮ ಇರಬೇಕು. ನಾಯಕತ್ವ ವಹಿಸಿಕೊಂಡವರಲ್ಲಿ ದೂರದೃಷ್ಟಿ ಇರಬೇಕು. ಜೆಪಿ ಚಳವಳಿಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ವಿರೋಧಿಸುವುದು ಮತ್ತು ಬದಲಿಸುವುದು ಏಕೈಕ ಕಾರ್ಯಕ್ರಮವಾಗಿತ್ತು.
ಸರಕಾರದ ವಿರುದ್ಧ ಬಂಡೇಳುವಂತೆ ಜೆಪಿ ಅವರು ಸೇನಾಪಡೆಗಳು ಹಾಗೂ ಪೊಲೀಸರಿಗೆ ಬಹಿರಂಗವಾಗಿ ಕರೆ ನೀಡಿದರು. ಇದು ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣವಾಯಿತು. ಜೆಪಿ ಚಳವಳಿಯ ಪರಿಣಾಮವಾಗಿ ಗಾಂಧೀಜಿ ಹತ್ಯೆಯ ನಂತರ ಜನರಿಂದ ತಿರಸ್ಕರಿಸಲ್ಪಟ್ಟಿದ್ದ ಆರೆಸ್ಸೆಸ್‌ಗೆ ಮತ್ತೆ ಸಾಮಾಜಿಕ ಮಾನ್ಯತೆ ದೊರಕಿತು.
ನಾನು ಕಂಡ ಇನ್ನೊಂದು ಹೋರಾಟವೆಂದರೆ ಎರಡು ದಶಕಗಳ ಹಿಂದೆ ನಡೆದ ಅಣ್ಣಾ ಹಝಾರೆ ನೇತೃತ್ವದ ಹೋರಾಟ. ಅಣ್ಣಾ ಹಝಾರೆ ಗಾಂಧಿಟೋಪಿ ಹಾಕಿಕೊಂಡು ದಿಲ್ಲಿಗೆ ಬಂದು ಧರಣಿ ಆರಂಭಿಸಿದರು. ಬಾಬಾ ರಾಮ್‌ದೇವ್ ಅವರಂಥ ಆಷಾಢಭೂತಿಗಳು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಟೆಲಿಕಾಂ ಹಗರಣದ ಸುಳ್ಳು ಆರೋಪ ಮಾಡಿ ಕೇಂದ್ರ ಸಚಿವ ಎ. ರಾಜಾ ರಾಜೀನಾಮೆ ಕೊಡುವಂತೆ ಮಾಡಿದರು. ಇದಕ್ಕೆ ನಿರ್ದಿಷ್ಟ ಕಾರ್ಯಕ್ರಮ ಇರಲಿಲ.್ಲ ಯುಪಿಎ ಸರಕಾರವನ್ನು ತೆಗೆದು ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಒಳ ಗುರಿಯಾಗಿತ್ತು. ಅದು ಈಡೇರಿದ ನಂತರ ಮಹಾರಾಷ್ಟ್ರದ ತನ್ನ ಊರಿಗೆ ಹೋದ ಅಣ್ಣಾ ಹಝಾರೆ ಸುದೀರ್ಘ ಮೌನ ತಾಳಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. ಅದು ಬಂದ ನಂತರ ದೇಶದಲ್ಲಿ ಏನೇನು ಆಗಿದೆ ಎಂಬ ಬಗ್ಗೆ ವಿವರಿಸಬೇಕಾಗಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳು ಈಗ ಅಪಾಯದಲ್ಲಿ ಇವೆ.
ಚುನಾವಣೆ ಮೂಲಕ ಅಧಿಕಾರಕ್ಕೆ ಬಂದ ಫ್ಯಾಶಿಸ್ಟ್ ಸರ್ವಾಧಿಕಾರದ ವಿರುದ್ಧ ಹೋರಾಟ ಸಮಗ್ರವಾಗಿರಬೇಕು. ಸಾಂವಿಧಾನಿಕ ಸಂಸ್ಥೆಗಳಾದ ಚುನಾವಣಾ ಆಯೋಗ, ಯೋಜನಾ ಆಯೋಗ, ನ್ಯಾಯಾಂಗ ಹೀಗೆ ಎಲ್ಲವನ್ನೂ ಸ್ವಾಧೀನಪಡಿಸಿಕೊಳ್ಳುವ ಮೂಲಕ ಪ್ರಭುತ್ವದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಫ್ಯಾಶಿಸ್ಟ್
ಶಕ್ತಿಗಳನ್ನು ಹಿಮ್ಮೆಟ್ಟಿಸುವುದು ಈಗ ಅಷ್ಟು ಸುಲಭವಲ್ಲ. ಹಿಂದೆ ಇಂಥ ಜನಪ್ರಿಯ ಚಳವಳಿಗಳ ಮೂಲಕವೇ ತನ್ನ ಬಲವನ್ನು ಹೆಚ್ಚಿ
ಸಿಕೊಳ್ಳುತ್ತ ಬಂದವರು ಈಗ ಈ ಚಳವಳಿಯನ್ನೂ ಹೈಜಾಕ್ ಮಾಡುತ್ತಾರಾ ಎಂಬ ಸಂದೇಹ ಸಹಜವಾಗಿ ಬರುತ್ತದೆ. ಚಳವಳಿಗಳು ಹೈಜಾಕ್ ಆಗುವುದನ್ನು ತಡೆಯುವುದೇ ಇಂದಿನ ಬಹುದೊಡ್ಡ ಸವಾಲಾಗಿದೆ.
ಅವರಿಗೆ ಮನುವಾದಿ ಹಿಂದೂ ರಾಷ್ಟ್ರ ನಿರ್ಮಾಣದ ಸ್ಷಷ್ಟ ಗುರಿಯಿದೆ.ತಮ್ಮ ಗುರಿ ಸಾಧನೆಗಾಗಿ ಏನನ್ನು ಮಾಡಲೂ ಅವರು ಹೇಸುವುದಿಲ್ಲ. ಈ ಗುರಿ ಸಾಧನೆಗಾಗಿ ಸಾವಿರಾರು ಸಂಘಟನೆಗಳನ್ನು ಅವರು ಹುಟ್ಟು ಹಾಕಿದ್ದಾರೆ. ತಮ್ಮ ಜೀವ ವಿರೋಧಿ ಸಿದ್ಧಾಂತಕ್ಕೆ ವಿರೋಧಿಗಳಾದ ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಅಂಬೇಡ್ಕರ್, ಜ್ಯೋತಿಬಾ ಫುಲೆ ಅಂಥವರ ಫೋಟೊಗಳನ್ನು ಅವರು ಬಳಸಿಕೊಳ್ಳುತ್ತಾರೆ.ಆದರೆ ಅವರು ಹೇಳಿದ ವಿಚಾರಗಳು ಮತ್ತು ತತ್ವ ಸಿದ್ಧಾಂತಗಳನ್ನು ಎಲ್ಲೂ ಹೇಳುವುದಿಲ್ಲ.ಬದಲಿಗೆ ಗೋಳ್ವ್ವಾಲ್ಕರ್, ಹೆಡ್ಗೆವಾರ್, ಸಾವರ್ಕರ್ ಅವರ ತತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಾರೆ. ಇದೆಲ್ಲ ಈಗ ಯಾಕೆ ಹೇಳಬೇಕಾಯಿತೆಂದರೆ ನಮ್ಮ ಹೋರಾಟಗಳು ದಾರಿ ತಪ್ಪದಂತೆ ನೋಡಿಕೊಳ್ಳಬೇಕಾದರೆ ಈ ಎಚ್ಚರ ಇರಬೇಕು.
ದೇಶದ ದುಡಿಯುವ ಜನ, ಆದಿವಾಸಿಗಳು, ದಲಿತ, ದಮನಿತ ಸಮುದಾಯಗಳು, ಹೋರಾಡುತ್ತಲೇ ಇದ್ದಾರೆ. ಅನೇಕ ಕಾರ್ಮಿಕ ನಾಯಕರನ್ನು, ಚಿಂತಕರನ್ನು ಜೈಲಿಗೆ ಹಾಕಲಾಗಿದೆ. ಆದರೂ ಮಾಧ್ಯಮಗಳಲ್ಲಿ ಅವುಗಳು ಸುದ್ದಿಯಾಗುವುದಿಲ್ಲ.
ಹಿಂದೂ ರಾಷ್ಟ್ರದ ಕನಸು ಕಾಣುತ್ತಿರುವವರು ಈಗ ಬಿಕ್ಕಟ್ಟಿನ ಸುಳಿಗೆ ಸಿಲುಕಿದ್ದಾರೆ.
ಅಯೋಧ್ಯೆಯ ರಾಮ ಮಂದಿರದ ಹೆಸರಿನಲ್ಲಿ ಲಪಟಾಯಿಸಿದ ಕೋಟ್ಯಂತರ ರೂಪಾಯಿಗಳ ಹಗರಣ ಬಟ್ಟ ಬಯಲಾಗಿದೆ.ಇಲ್ಲಿ ಬಂದು ಪೂಜೆಗೆ ಕುಳಿತಿದ್ದ ‘ವಿಶ್ವಗುರು’ ಈಗ ಮೌನಕ್ಕೆ ಜಾರಿದ್ದಾರೆ. ಇನ್ನೊಂದೆಡೆ ದೇಶದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಉದ್ಯೋಗಾವಕಾಶಗಳು ಮಾಯವಾಗಿವೆ. ಇವೆಲ್ಲದರ ವಿರುದ್ಧ ಬಹುದೊಡ್ಡ ಜನ ಹೋರಾಟ ಬೆಳೆದು ಬರುವ ದಿನಗಳು ದೂರವಿಲ್ಲ.
ಈ ಹಿನ್ನ್ನೆಲೆಯಲ್ಲಿ ಈಗ ಯಾವುದೇ ಚಳವಳಿ, ಹೋರಾಟಗಳು ಬರೀ ಬೇಡಿಕೆಗಳಿಗಾಗಿ ನಡೆಯದೇ ನಿರ್ದಿಷ್ಟ ತತ್ವ, ಸಿದ್ಧಾಂತಗಳ ಆಧಾರದಲ್ಲಿ ನಡೆಯಬೇಕಾಗಿದೆ.