ಲಿಂಗಸುಗೂರು: ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ
ಲಿಂಗಸುಗೂರು (ಮಸ್ಕಿ): ನಗರದ ಕೃಷಿ ವಿಜ್ಞಾನ ಕೇಂದ್ರ, ರಾಯಚೂರು ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಘಟಕ, ಲಿಂಗಸೂಗೂರು ವತಿಯಿಂದ ಮಸ್ಕಿ ತಾಲೂಕಿನ ನೆಲಕೋಳ ಗ್ರಾಮದ ನೂರಬೀ ಗಂ ಮಹ್ಮದ್ ಜಾಫರ್ ಅವರ ಹೊಲದಲ್ಲಿ "ರೈತರೊಂದಿಗೆ ಒಂದು ದಿನ" ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ಎ. ಆರ್. ಕುರುಬರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ತಿಮ್ಮಣ್ಣ, ವಿಜ್ಞಾನಿಗಳಾದ ಡಾ. ಸನ್ಮತಿ ನಾಯಕ್, ಡಾ. ಮಲ್ಲಾರೆಡ್ಡಿ, ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ. ವಾಣಿಶ್ರೀ, ರೇಣುಕಾ, 80ಕ್ಕೂ ಹೆಚ್ಚು ರೈತರು ಮತ್ತು ಕೃಷಿ ಸಖಿಯರು ಭಾಗವಹಿಸಿದ್ದರು.
ಒಂದೂವರೆ ಎಕರೆ ಜಮೀನಿನಲ್ಲಿ ಸುಗಂಧರಾಜ, 3 ತಳಿ ಮಲ್ಲಿಗೆ, ಸೂರ್ಯಕಾಂತಿ, ತೆಂಗು, ನುಗ್ಗೆ ಮತ್ತು ತರಕಾರಿ ಬೆಳೆ ಬೆಳೆದು ಅಂದಾಜು 7 ಲಕ್ಷ ವಾರ್ಷಿಕ ಆದಾಯ ಗಳಿಸುತ್ತಿರುವ ವಿಷಯ ಮತ್ತು ಬರಗಾಲ ನಿರ್ವಹಣೆಯಲ್ಲಿ ತೋಟಗಾರಿಕೆ ಬೆಳೆಗಳ ಮಹತ್ವದ ಬಗ್ಗೆ ರೈತರು ಮತ್ತು ಕೃಷಿ ಸಖಿಯರೊಂದಿಗೆ ನೇರ ಸಂವಾದ ನಡೆಸಿ, ಚರ್ಚಿಸಿ, ಮಾಹಿತಿ ನೀಡಲಾಯಿತು.