Raichur | ಶಾಲಾ ಮಕ್ಕಳಿಂದ ಬಿಸಿಯೂಟದ ಪಾತ್ರೆ ತೊಳೆಸಿದ ಆರೋಪ; ವಿಡಿಯೋ ವೈರಲ್
Update: 2026-07-28 19:47 IST
ರಾಯಚೂರು: ನಗರದ ನಿಜಲಿಂಗಪ್ಪ ಕಾಲೊನಿ ಬಳಿಯ ಪಿಎಂ ಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸಿದ ಪಾತ್ರೆಗಳನ್ನು ಶಾಲಾ ಮಕ್ಕಳಿಂದ ತೊಳೆಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದ್ದು, ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಧ್ಯಾಹ್ನದ ಬಿಸಿಯೂಟ ತಯಾರಿಸಿದ ಬಳಿಕ ಅಡುಗೆ ಸಿಬ್ಬಂದಿ ಪಾತ್ರೆಗಳು ಹಾಗೂ ಪ್ಲೇಟುಗಳನ್ನು ತೊಳೆಯುತ್ತಿದ್ದ ವೇಳೆ, ಕೆಲವು ಮಕ್ಕಳು ಪಾತ್ರೆಗಳನ್ನು ತೊಳೆದು ತಲೆಯ ಮೇಲೆ ಹೊತ್ತು ಅಡುಗೆ ಕೋಣೆಗೆ ಸಾಗಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಕಂಡುಬಂದಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಗೆ ಶಿಕ್ಷಣ ಪಡೆಯಲು ಬರುವ ಮಕ್ಕಳಿಂದ ಇಂತಹ ಕೆಲಸ ಮಾಡಿಸುವುದು ಖಂಡನೀಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.