ರಾಯಚೂರು: ಹಝ್ರತ್ ಶಮ್ಸ್ ಆಲಂ 556ನೇ ಉರೂಸ್‌ಗೆ ಚಾಲನೆ; ಅದ್ಧೂರಿಯಾಗಿ ನಡೆದ ಸಂದಲ್
Update: 2026-07-30 14:50 IST
ರಾಯಚೂರು, ಜುಲೈ 29: ಹಝ್ರತ್ ಸೈಯದ್ ಶಾಹ್ ಶಮ್ಸ್ ಆಲಂ ಹುಸೇನಿ (ರ.) ಅವರ 556ನೇ ಉರೂಸ್ ಷರೀಫ್ ಬುಧವಾರ ರಾತ್ರಿ ವಿಶೇಷ ಸಂದಲ್ ಕಾರ್ಯಕ್ರಮದ ಮೂಲಕ ಆರಂಭವಾಯಿತು.
ರಾತ್ರಿ ಸುಮಾರು 8 ಗಂಟೆಗೆ ದರ್ಗಾದ ಸಜ್ಜಾದೆ ನಶೀನ್ (ಪೀಠಾಧಿಪತಿ) ಸೈಯದ್ ಅಶ್ರಫ್ ರಝಾ ಹುಸೇನಿ ಅವರ ಮನೆಯಿಂದ ಗಂಧದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಶಮ್ಸ್ ಆಲಂ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು.
ಸೈಯದ್ ರಝಾ ಮುಬಶ್ಶಿರ್ ಹುಸೇನಿ ಮತ್ತು ಸೈಯದ್ ಅಲಿ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ಒಂದು ತಿಂಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮಕ್ಕೆ ಮಳೆಯ ನಡುವೆಯೂ ವಿಜೃಂಭಣೆಯಿಂದ ಚಾಲನೆ ನೀಡಿದ್ದು, ಗುರುವಾರ ಚಿರಾಗ್, ಶುಕ್ರವಾರ ಝಿಯಾರತ್ ಕಾರ್ಯಕ್ರಮ ನಡೆಯಲಿದೆ. ಸೂಫಿ ಸಂತರಾಗಿದ್ದ ಹಜರತ್ ಶಮ್ಸ್ ಆಲಂ ಬಾಬಾ ಅವರು ಹಿಂದು-ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರಿದ್ದರು.