Raichur | ಚಾರು ಮಜುಂದಾರ್ ಹುತಾತ್ಮ ದಿನ ಆಚರಣೆ

ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದಿಂದ ಶ್ರದ್ಧಾಂಜಲಿ

Update: 2026-07-28 20:08 IST

ರಾಯಚೂರು: ಭಾರತದ ಕ್ರಾಂತಿಕಾರಿ ಕಮ್ಯುನಿಸ್ಟ್ ಚಳುವಳಿಯ ಪ್ರಮುಖ ನಾಯಕ ಹಾಗೂ ಸಿಪಿಐ(ಎಂಎಲ್) ಸ್ಥಾಪಕರಾದ ಕಾಮ್ರೇಡ್ ಚಾರು ಮಜುಂದಾರ್ ಅವರ ಹುತಾತ್ಮ ದಿನವನ್ನು ಯರಿಗೇರಾ ಗ್ರಾಮ ಘಟಕದ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ವತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಚಾರು ಮಜುಂದಾರ್ ಅವರು ತಮ್ಮ ಇಡೀ ಜೀವನವನ್ನು ಶೋಷಿತರು, ದಲಿತರು, ಆದಿವಾಸಿಗಳು, ರೈತರು, ಕೃಷಿ ಕಾರ್ಮಿಕರು ಹಾಗೂ ದುಡಿಯುವ ವರ್ಗದ ವಿಮೋಚನೆಗಾಗಿ ಸಮರ್ಪಿಸಿದ್ದರು. ಅವರ ತ್ಯಾಗ, ಹೋರಾಟ ಹಾಗೂ ಕ್ರಾಂತಿಕಾರಿ ಚಿಂತನೆಗಳು ಇಂದಿಗೂ ಜನರ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟಗಳಿಗೆ ಪ್ರೇರಣೆಯಾಗಿವೆ ಎಂದು ಹೇಳಿದರು.

ಪ್ರಸ್ತುತ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನಿಕ ಹಕ್ಕುಗಳು ಹಾಗೂ ಜನರ ಬದುಕಿನ ಮೇಲೆ ದಾಳಿಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ನಿರುದ್ಯೋಗ, ಬೆಲೆ ಏರಿಕೆ, ರೈತ ವಿರೋಧಿ ನೀತಿಗಳು, ಕಾರ್ಮಿಕರ ಹಕ್ಕುಗಳ ಮೇಲಿನ ದಾಳಿ ಹಾಗೂ ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ರಾಜಕಾರಣವನ್ನು ಎದುರಿಸಲು ವಿಶಾಲ ಜನಪರ ಚಳುವಳಿಗಳನ್ನು ಕಟ್ಟುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಮ್ರೇಡ್ ಚಾರು ಮಜುಂದಾರ್ ಅವರ ಹುತಾತ್ಮ ದಿನವನ್ನು ಕೇವಲ ಸ್ಮರಣಾ ದಿನವಾಗಿ ಆಚರಿಸುವುದಷ್ಟೇ ಅಲ್ಲದೆ, ಫ್ಯಾಸಿಸ್ಟ್ ಪ್ರವೃತ್ತಿಗಳ ವಿರುದ್ಧ ಜನರನ್ನು ಸಂಘಟಿಸಿ ಹೋರಾಟಗಳನ್ನು ಬಲಪಡಿಸುವ ಸಂಕಲ್ಪ ದಿನವನ್ನಾಗಿ ಆಚರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿ ಅಜೀಜ್ ಜಾಗೀರ್ದಾರ್, ಮುಖಂಡರಾದ ಹನೀಫ್ ಅಬಕಾರಿ, ಜಗದೀಶ್, ಜಿಲಾನಿ, ನರಸಪ್ಪ, ಭೀಮಯ್ಯ, ಮಾರೆಣ್ಣ, ನಿಸಾರ್ ಹಾಗೂ ದೇವಪ್ಪ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News