×
Ad

ಲಾರಿ ಉದ್ಯಮದ ಸಮಸ್ಯೆಗಳ ಪರಿಹಾರಕ್ಕೆ ಸಂಘಟಿತ ಹೋರಾಟ ಅಗತ್ಯ: ಸಿ. ನವೀನ್‌ರೆಡ್ಡಿ

Update: 2026-06-14 21:21 IST

ರಾಯಚೂರು, ಜೂ.14: ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ (ರಿ.) ವತಿಯಿಂದ 35ನೇ ವಾರ್ಷಿಕ ಸರ್ವ ಸದಸ್ಯರ ಸಭೆ ನಗರದ ಲಿಂಗಸುಗೂರು ರಸ್ತೆಯ ಗ್ರೀನ್ ಪ್ಯಾಲೇಸ್ ಫಂಕ್ಷನ್ ಹಾಲ್‌ನಲ್ಲಿ ರವಿವಾರ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಸಿ. ನವೀನ್‌ರೆಡ್ಡಿ, ಲಾರಿ ಉದ್ಯಮ ಇಂದು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಲಾರಿ ಮಾಲೀಕರು ಒಗ್ಗಟ್ಟಿನಿಂದ ಹೋರಾಟ ನಡೆಸಿದಾಗ ಮಾತ್ರ ಸರ್ಕಾರಗಳು ಸಮಸ್ಯೆಗಳಿಗೆ ಸ್ಪಂದಿಸುತ್ತವೆ ಎಂದು ಹೇಳಿದರು.

20 ವರ್ಷಕ್ಕಿಂತ ಹಳೆಯ ವಾಹನಗಳ ಫಿಟ್‌ನೆಸ್ ಪ್ರಮಾಣಪತ್ರ ಶುಲ್ಕವನ್ನು 1,200ರಿಂದ 30,000ಕ್ಕೆ ಹೆಚ್ಚಿಸಿರುವುದು, ಡೀಸೆಲ್ ಮೇಲಿನ ತೆರಿಗೆ ಏರಿಕೆ, ಟೋಲ್ ಶುಲ್ಕದ ಭಾರ ಸೇರಿದಂತೆ ಹಲವು ಸಮಸ್ಯೆಗಳು ಲಾರಿ ಉದ್ಯಮವನ್ನು ಸಂಕಷ್ಟಕ್ಕೆ ತಳ್ಳಿವೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಲಾರಿ ಮಾಲೀಕರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದು, ಸರಕು ಸಾಗಾಣಿಕೆ ಕ್ಷೇತ್ರದ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಚಾಲಕರಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಸಜ್ಜಿತ ವಿಶ್ರಾಂತಿ ಕೇಂದ್ರಗಳ ನಿರ್ಮಾಣ, ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್‌ಗಳ ತೆರವು, ವಿಎಲ್‌ಟಿಡಿ-ಜಿಪಿಎಸ್ ಸಾಧನಗಳ ಅತಿಯಾದ ಶುಲ್ಕ ವಸೂಲಾತಿ ನಿಯಂತ್ರಣ ಸೇರಿದಂತೆ ಹಲವು ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಇಂಧನ ಹಾಗೂ ನಿರ್ವಹಣಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದರಿಂದ ಲಾರಿ ಉದ್ಯಮದ ಉಳಿವಿಗಾಗಿ ಬಾಡಿಗೆಯನ್ನು ಶೇ.15 ರಿಂದ 20ರಷ್ಟು ಹೆಚ್ಚಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಲಾರಿ ಮಾಲೀಕರು ಅನಗತ್ಯ ಸಾಲದ ಹೊರೆ ತಪ್ಪಿಸಿಕೊಂಡು ಆರ್ಥಿಕ ಶಿಸ್ತು ಕಾಪಾಡಿಕೊಳ್ಳಬೇಕು ಎಂದು ನವೀನ್‌ರೆಡ್ಡಿ ಸಲಹೆ ನೀಡಿದರು.

ಸಭೆಯಲ್ಲಿ 34ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ನಡವಳಿಕೆಗಳು, 2025-26ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳು ಹಾಗೂ 2026-27ನೇ ಸಾಲಿನ ಲೆಕ್ಕಪರಿಶೋಧಕರ ನೇಮಕಾತಿಗೆ ಸರ್ವಾನುಮತದ ಅನುಮೋದನೆ ನೀಡಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣ ಪ್ರಸಾದ್ ಅವರು ಸಂಘದ ಚಟುವಟಿಕೆಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಲಾರಿ ಮಾಲೀಕರ ದಿನನಿತ್ಯದ ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ವಿಶೇಷ ಸಮಿತಿಗಳನ್ನು ರಚಿಸಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎನ್. ಶ್ರೀನಿವಾಸರಾವ್, ಸುರೇಶ್ ಸಿಂಗನಾಳ, ಮನ್ಸೂರ್ ಇಬ್ರಾಹಿಂ, ಜಿ. ನಾರಾಯಣ ಪ್ರಸಾದ್, ಹಸನ್, ಅಜೀಂ ಪಾಷಾ, ಪವನ್ ಕುಮಾರ್, ರಾಘವೇಂದ್ರ, ರಾಮಣ್ಣ, ವಿಶ್ವನಾಥ್ ಸೇರಿದಂತೆ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಲಾರಿ ಮಾಲಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News