ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ; ಮನುವಾದ ಜೀವಂತವಾಗಿಡುವ ಹುನ್ನಾರ: ಗಿರಿಯಪ್ಪ ನೆಲಹಾಳ

Update: 2026-08-19 14:20 IST

ರಾಯಚೂರು: ಇತ್ತೀಚೆಗೆ ನಡೆದ ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣ ಮಾಡಿದ ಬಳಿಕ ಗಂಗಾಜಲ ಶುದ್ಧೀಕರಣ ಮಾಡಿದ್ದು ಖಂಡನೀಯ. ಒಬ್ಬ ದಲಿತ ವರ್ಗದ ನಾಯಕರು ರಾಷ್ಟ್ರ ಮಟ್ಟದಲ್ಲಿ‌ ಬೆಳೆದಿದ್ದನ್ನು ಸಹಿಸದ ಮನುವಾದಿಗಳು ಅವರಿಗೆ ಅವಮಾನ ಮಾಡಿದ್ದು ಅವರ ವಿರುದ್ಧ ಎಸ್ ಸಿ,ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗಿರಿಯಪ್ಪ ನೆಲಹಾಳ ಒತ್ತಾಯಿಸಿದರು.

ಅವರು ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿ, ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ ಕಾರ್ಯಕ್ರಮದ ಬಳಿಕ ಶುದ್ಧೀಕರಣ ಹೆಸರಿನಲ್ಲಿ ಶ್ರೀರಾಮ ಸೇನೆ ಅಂಧ ಭಕ್ತರು ಮನುಸ್ಮೃತಿ ಯನ್ನು ಹೇರುತ್ತಿದ್ದಾರೆ. ಇದಕ್ಕೆ ನೇರ ಹೊಣೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಆರೆಸ್ಸೆಸ್‌ ನಾಯಕ ಮೋಹನ್ ಭಾಗವತ್ ಅವರೇ. ಈ ಘಟನೆಯನ್ನು ಖಂಡಿಸದೆ ಅವಮಾನ ಮಾಡಿದ ಆ ಸಂಘಟನೆಗೂ ಬಿಜೆಪಿಗೂ ಸಂಭಂಧವಿಲ್ಲ ಎಂದು ಹೇಳಿಕೆ ನೀಡಿರುವುದು ಅವರು ಪರೋಕ್ಷವಾಗಿ ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಜಾತ್ಯತೀತ ರಾಷ್ಟ್ರವನ್ನು ಜಾತಿಗಳಿಂದ‌ ಒಡೆದು ಮನುಸ್ಮೃತಿ ಯನ್ನು ಜೀವಂತವಾಗಿಡುವ‌ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಕಳೆದ 7-8 ದಶಕಗಳ ಹಿಂದೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಇದೇ ಮನುಸ್ಮೃತಿಯ ವಿಚಾರಧಾರೆಯ ವೀರ ಸಾವರ್ಕರ್, ಗೋಳ್ವಾಲ್ಕರ್ ಎಂಬ ಮತೀಯ ವಾದಿಗಳು ಬಾಬಾ ಸಾಹೇಬರ ಸಿದ್ಧಾಂತಗಳಿಗೆ ಅವಮಾನ ಮತ್ತು ದೌರ್ಜನ್ಯ ಎಸಗಿ ಸಿದ್ಧಾಂತ ಅಡಗಿಸುವ ಯತ್ನ ನಿರಂತರವಾಗಿ ಮಾಡುತ್ತಿದ್ದಾರೆ. ಇದು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಈಗಾಗಲೇ ಬಿಜೆಪಿ, ಆರೆಸ್ಸೆಸ್ ನಾಯಕರ ಪೊಳ್ಳು ಭರವಸೆ,‌ ಸಿದ್ಧಾಂತವನ್ನು ದೇಶದ ಜನರು ತಿರಸ್ಕರಿಸಿದ್ದಾರೆ ಇದಕ್ಕೆ ದೆಹಲಿಯ ಜಂತರ ಮಂತರ್ ನಲ್ಲಿ‌ GenZ ಸಮುದಾಯದ ದೊಡ್ಡ ಹೋರಾಟವೇ ಸಾಕ್ಷಿಯಾಗಿದೆ.

2014 ರಲ್ಲಿ ಇದೇ ಮನುವಾದಿಗಳ ವಂಶಸ್ಥರಾದ ಮೋದಿಯವರು ಬಾಬಾ ಸಾಹೇಬ ಅಂಬೇಡ್ಕರ್ ಅವರ ಪಾದಗಳನ್ನು ನಮಿಸಿ ಲೋಕಸಭೆ ಪ್ರವೇಶಿಸಿದ್ದರು. ಈಗ ಅವರ ವಿಚಾರಧಾರೆಯುಳ್ಳ‌ ಖರ್ಗೆ ಸೇರಿದಂತೆ ಅನೇಕರನ್ನು ಗುರಿಯಾಗಿಸಿ ಬೌದ್ಧಿಕ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಮಿತ್ ಷಾ ಅವರು ಒಮ್ಮೆ ಲೋಕಸಭೆಯಲ್ಲಿ ಮಾತನಾಡುತ್ತಾ ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದನ್ನು ಬಿಟ್ಟು ಶಿವನನ್ನು ಸ್ಮರಿಸಿದರೆ ಸ್ವರ್ಗ ಲಭಿಸುತಿತ್ತು ಎಂದು ಮಾತನಾಡಿದ್ದು ಹಾಸ್ಯಾಸ್ಪದ. ಯಾಕೆಂದರೆ ಈ ದೇಶದ ಸಂವಿಧಾನ ಒಂದೇ ಧರ್ಮವನ್ನು ಪ್ರೋತ್ಸಾಹಿಸುವುದಿಲ್ಲ ಎಲ್ಲಾ‌ಧರ್ಮಗಳಿಗೂ ಸಮಾನ ಅವಕಾಶನೀಡಿದೆ. ಇವರ ಪಾಪಕೃತ್ಯ ಮುಂದಿನ ದಿನಗಳಲ್ಲಿ ಅಂತ್ಯಕಾಲದಲ್ಲಿ ಕರ್ಮವನ್ನು ಅನುಭವಿಸುವುದು ಭಾರತೀಯರು ಎದುರು ನೋಡುತ್ತಿದ್ದಾರೆ.

ಇವತ್ತಲ್ಲ ನಾಳೆ, ಮುಂದಿನ ಕಾಲಘಟ್ಟದಲ್ಲಿ ಇದೇ ಮನುವಾದದ ಕುಡಿಗಳು ಖರ್ಗೆ ಅವರನ್ನು ಕೈ ಮುಗಿದು ಗೌರವಿಸಿ ಅವರ ಸಿದ್ಧಾಂತ ವನ್ನು ಹೊಗಳುವ ಕಾಲ ದೂರವಿಲ್ಲ ಎಂದು ಹೇಳಿದರು.

ಖರ್ಗೆ ಅವರಿಗೆ ಆದ ಅವಮಾನ ದೇಶದ ದಲಿತ, ಶೋಷಿತ, ಧ್ವನಿ ಇಲ್ಲದ ಸಮುದಾಯಕ್ಕೂ ಆದ ಅನ್ಯಾಯ. ಇದು ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯ ಉಲ್ಲಂಘನೆ ಯಾಗಿದೆ. ಈ ಕೂಡಲೇ ದುಶ್ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಬಂಧಿಸಿ ಇದಕ್ಕೆ ಕುಮ್ಮಕ್ಕು ನೀಡಿದ ದುಷ್ಠ ಶಕ್ತಿಗಳಿಗೆ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಈ ದೇಶದ ಜನ ನಿಮಗೆ ತಕ್ಕ ಪಾಠ ಕಲಿಸುವ ಕಾಲ‌ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News