ಮಲ್ಲಾಪೂರ : ಮಧ್ಯಾಹ್ನದ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು, ಶಿಕ್ಷಕರು ಅಸ್ವಸ್ಥ

Update: 2026-08-19 14:42 IST

ಅರಕೇರಾ: ತಾಲೂಕಿನ ಮಲ್ಲಾಪೂರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಮಂಗಳವಾರ ನಡೆದಿದೆ.

ಮಧ್ಯಾಹ್ನ ಶಾಲೆಯಲ್ಲಿ ಚಿತ್ರಾನ್ನ ಸೇವಿಸಿದ ಬಳಿಕ ಒಬ್ಬರ ನಂತರ ಒಬ್ಬ ವಿದ್ಯಾರ್ಥಿಗಳಿಗೆ ವಾಂತಿ ಹಾಗೂ ತಲೆಸುತ್ತು ಕಾಣಿಸಿಕೊಂಡಿದೆ. ಶಾಲೆಯ ಇಬ್ಬರು ಅತಿಥಿ ಶಿಕ್ಷಕರಿಗೂ ಅಸ್ವಸ್ಥತೆ ಕಾಣಿಸಿಕೊಂಡಿದೆ. ಅಸ್ವಸ್ಥರಾದವರನ್ನು ಅರಕೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಿಸಿಯೂಟ ಹಾಗೂ ಶುದ್ಧ ಕುಡಿಯುವ ನೀರಿನ ಗುಣಮಟ್ಟವನ್ನು ಸಮರ್ಪಕವಾಗಿ ಕಾಯ್ದುಕೊಳ್ಳದಿರುವುದರಿಂದಲೇ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಬಿಸಿಯೂಟ ಹಾಗೂ ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಮುಖಂಡರಾದ ಎ.ರಾಜಶೇಖರ ನಾಯಕ, ಕೆ.ಅನಂತರಾಜ ನಾಯಕ ಹಿರಿಯ ವೈದ್ಯ ಡಾ.ಎಚ್.ಎ ನಾಡಗೌಡ ಭೇಟಿ‌ನೀಡಿ ಮಾಹಿತಿ ಪಡೆದರು. ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಯಾವುದೇ ತೊಂದರೆ ಆಗದಂತೆ ಸೂಕ್ತ ಚಿಕಿತ್ಸೆ ನೀಡಿ ಎಂದು ಸಲಹೆ ನೀಡಿದರು.

ಬಿಇಒ ರಾಧಾದೇವಿ, ಟಿಎಚ್ಒ ಡಾ.ಬನದೇಶ, ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಕಟ್ಟಿಮನಿ, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ಬಿಆರ್ ಪಿ ಶಿವಕುಮಾರ ನಾಡಗೌಡ, ಸಿಆರ್ ಪಿ ಬಸವರಾಜ ಸಾತಲ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News