ಅರುಣಾಂಶು ಗಿರಿ ಅವರು ರಾಯಚೂರು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ
ರಾಯಚೂರು : ಸಿಐಡಿ ಎಸ್‌ಪಿ ಆಗಿದ್ದ ಅರುಣಾಂಶು ಗಿರಿ ಅವರು ರಾಯಚೂರು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಸಿಐಡಿ ಎಸ್‌ಪಿ ಹುದ್ದೆಯಿಂದ ರಾಯಚೂರಿಗೆ ಅವರನ್ನು ವರ್ಗಾವಣೆ ಮಾಡಲಾಗಿದೆ.
2015ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅರುಣಾಂಶು ಗಿರಿ ಅವರು ಬಿಇ ಹಾಗೂ ಎಂಬಿಎ ಪದವೀಧರರಾಗಿದ್ದು, ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ. ಇವರು ಹಿಂದೆ ಮಂಗಳೂರು ನಗರದಲ್ಲಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆಗಿ ಸೇವೆ ಸಲ್ಲಿಸಿದ್ದು, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಂ.ಪುಟ್ಟಮಾದಯ್ಯ ಅವರಿಗೆ ಕಲಬುರಗಿಯ ಪಿಟಿಸಿ (ಪೊಲೀಸ್ ತರಬೇತಿ ಕೇಂದ್ರ) ಪ್ರಾಂಶುಪಾಲರಾಗಿ ಡಿಐಜಿಪಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.
ಬೀಳ್ಕೊಡುಗೆ ಸಮಾರಂಭ :
ಪುಟ್ಟಮಾದಯ್ಯ ಅವರಿಗೆ ಮುಂಬಡ್ತಿ ದೊರೆತ ಹಿನ್ನೆಲೆಯಲ್ಲಿ ಗುರುವಾರ ರಾಯಚೂರು ಜಿಲ್ಲಾ ಪೊಲೀಸ್ ಮುಖ್ಯಾಲಯದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿಶ್ ಹಾಗೂ ಕುಮಾರಸ್ವಾಮಿ ಅವರು ಪುಟ್ಟಮಾದಯ್ಯ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಸಮಾರಂಭದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.