ಸಿಂಧನೂರು | ಕಸಾಪದಿಂದ ಜ.4ರಂದು ಜಿಲ್ಲಾ ಮಟ್ಟದ ಕಾವ್ಯ ಕಮ್ಮಟ : ಎಚ್.ಎಫ್.ಮಸ್ಕಿ
ಸಿಂಧನೂರು: ಜಿಲ್ಲಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಜ.4ರಂದು ನಗರದ ಎವಿಎಸ್ ಬ್ರಿಲಿಯಂಟ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಕಾವ್ಯ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪದ ತಾಲ್ಲೂಕಾಧ್ಯಕ್ಷ ಎಚ್.ಎಫ್.ಮಸ್ಕಿ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ಅವರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಮರ್ಶಕ ಡಾ.ವೆಂಕಟಗಿರಿ ದಳವಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಆಶಯ ನುಡಿ ವ್ಯಕ್ತಪಡಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಲಿದ್ದಾರೆ ಎಂದರು.
ಕಾವ್ಯ ಕಮ್ಮಟ ಕಾರ್ಯಕ್ರಮದಲ್ಲಿ ಗೋಷ್ಠಿಗಳನ್ನು ಹಮ್ಮಿಕೊಂಡಿದ್ದು, ಮೊದಲನೇ ಗೋಷ್ಠಿಯಲ್ಲಿ 'ಆಧುನಿಕ ಕನ್ನಡ ಕಾವ್ಯ ಪರಂಪರೆ' ವಿಷಯದ ಕುರಿತು ಗೋಷ್ಠಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ವೆಂಕಟಗಿರಿ ದಳವಾಯಿ ಭಾಗವಹಿಸಲಿದ್ದು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಸ್.ಶರಣೇಗೌಡ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ತುರ್ವಿಹಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಖಾದರ್ ಭಾಷಾ, ಅಲಬನೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಅಯ್ಯಪ್ಪ ಮೇಟಿ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುಸೇನಪ್ಪ ಅಮರಾಪುರ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಹೇಳಿದರು.
ಅನುವಾದ ಕಾವ್ಯ ಆಶಯ ಮತ್ತು ಅಭಿವ್ಯಕ್ತಿ ವಿಷಯದ ಕುರಿತು ಎರಡನೇ ಗೋಷ್ಠಿ ನಡೆಯಲಿದ್ದು, ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ.ಜಾಜಿ ದೇವೆಂದ್ರಪ್ಪ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಕಸಾಪದ ಜಿಲ್ಲಾ ಪ್ರತಿನಿಧಿ ರಮಾದೇವಿ ಶಂಭೋಜಿ ಅಧ್ಯಕ್ಷತೆವಹಿಸಲಿದ್ದಾರೆ. ಗಜಲ್ ಕವಿ ಡಾ.ಶರೀಫ್ ಹಸಮಕಲ್, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಪ್ಪ ಹೊಸಳ್ಳಿ, ದಸಾಪದ ಪ್ರ.ಕಾರ್ಯದರ್ಶಿ ರಾಮಣ್ಣ ಹಿರೇಬೇರಗಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಕಸಾಪ ತಾಲ್ಲೂಕಾಧ್ಯಕ್ಷ ಎಚ್.ಎಫ್. ಮಸ್ಕಿ ಅಧ್ಯಕ್ಷತೆವಹಿಸಲಿದ್ದಾರೆ. ಲೇಖಕಿ ಡಾ.ರೇಣುಕಾ ಕೋಡಗುಂಟಿ ಸಮಾರೋಪ ನುಡಿಯನ್ನು ವ್ಯಕ್ತಪಡಿಸಲಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಲಿದ್ದು, ಕನ್ನಡ ಸಾಹಿತ್ಯಾಸಕ್ತರು, ವಿದ್ಯಾರ್ಥಿ-ಯುವಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಹೆಚ್.ಎಫ್.ಮಸ್ಕಿ ಮನವಿ ಮಾಡಿದ್ದಾರೆ.