ಮಸ್ಕಿ | ಶಾಲಾ ಸಮಯದಲ್ಲಿ ಬಸ್ ಬಿಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಬಸ್ ಡಿಪೋಗೆ ಮುತ್ತಿಗೆ
ಮಸ್ಕಿ : ತಾಲ್ಲೂಕಿನ ವಿವಿಧ ಗ್ರಾಮಗಳ ಶಾಲಾ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಸ್‌ಗಳು ಸಂಚರಿಸದಿರುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ, ಮಸ್ಕಿ ಬಸ್ ಡಿಪೋಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ವೆಂಕಟಾಪುರ, ಹೂವಿನಬಾವಿ, ಮೇದಿಕಿನಾಳ, ನಾಗರಬೆಂಚಿ, ಕಾಟಗಲ ಸೇರಿದಂತೆ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು, ಶಾಲಾ ಸಮಯಕ್ಕೆ ಬಸ್‌ಗಳು ಬಾರದೆ ಇರುವುದರಿಂದ ನಿತ್ಯವೂ ಶಾಲೆಗೆ ತಡವಾಗಿ ತಲುಪಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಮಸ್ಕಿಯ ಹೊಸ ಬಸ್ ನಿಲ್ದಾಣದಿಂದ ಬಸ್ ಡಿಪೋವರೆಗೆ ಸುಮಾರು ಒಂದೂವರೆ ಕಿಲೋಮೀಟರ್ ಪಾದಯಾತ್ರೆ ನಡೆಸಿ, ಬಸ್ ಡಿಪೋ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಘಟಕದ ವ್ಯವಸ್ಥಾಪಕರಾದ ಆದಪ್ಪ ಕುಂಬಾರ ಅವರಿಗೆ ಶಾಲಾ ಸಮಯಕ್ಕೆ ಅನುಗುಣವಾಗಿ ಬಸ್‌ಗಳನ್ನು ಬಿಡುವಂತೆ ಆಗ್ರಹಿಸಿದರು.
ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಘಟಕ ವ್ಯವಸ್ಥಾಪಕ ಆದಪ್ಪ ಕುಂಬಾರ ಅವರು, ನಾಳೆಯಿಂದಲೇ ಶಾಲಾ ಸಮಯಕ್ಕೆ ತಕ್ಕಂತೆ ಬಸ್‌ಗಳು ಸರಿಯಾಗಿ ಸಂಚರಿಸುವಂತೆ ಎಲ್ಲ ಬಸ್ ನಿರ್ವಾಹಕರಿಗೂ ಸೂಚನೆ ನೀಡಲಾಗುವುದು. ವಿದ್ಯಾರ್ಥಿಗಳು ಸಹ ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಿ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು ಎಂದು ಭರವಸೆ ನೀಡಿದರು.