×
Ad

ಲಿಂಗಸುಗೂರು | ಮರ್ಯಾದೆ ಹತ್ಯೆ ನಿಷೇಧ ಕಾಯ್ದೆ ಜಾರಿಗಾಗಿ ಆಗ್ರಹಿಸಿ ಪತ್ರ ಚಳವಳಿ

Update: 2026-01-02 15:03 IST

ಲಿಂಗಸುಗೂರು : ರಾಜ್ಯದಲ್ಲಿ ಮರ್ಯಾದೆ ಹತ್ಯೆಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಉದ್ದೇಶದಿಂದ ವಿಶೇಷ ಕಾಯ್ದೆ ರಚಿಸಿ ಜಾರಿಗೊಳಿಸಬೇಕೆಂದು ಆಗ್ರಹಿಸಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಮಿತಿಯಿಂದ ಹಟ್ಟಿ ಪಟ್ಟಣದಲ್ಲಿ ಪತ್ರ ಚಳವಳಿ ನಡೆಸಲಾಯಿತು.

ತಾಲೂಕಿನ ಹಟ್ಟಿ ಪಟ್ಟಣದ ಕ್ಯಾಂಪ್ ಬಸ್ ನಿಲ್ದಾಣದ ಸಮೀಪದ ಅಂಚೆ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಅಂಚೆ ಪೆಟ್ಟಿಗೆಯಲ್ಲಿ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ರಮೇಶ ವೀರಾಪೂರು ಮಾತನಾಡಿ, ಮುಂದಿನ ಬಜೆಟ್ ಅಧಿವೇಶನದಲ್ಲೇ ಮರ್ಯಾದೆ ಹತ್ಯೆ ನಿಷೇಧ ಕುರಿತ ಮಸೂದೆಯನ್ನು ಮಂಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಇಂತಹ ಅಮಾನುಷ ಘಟನೆಗಳು ಮರುಕಳಿಸದಂತೆ ಸುರಕ್ಷಿತ ವಾತಾವರಣ ನಿರ್ಮಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದರು.

ಮಹಿಳೆಯರು ಸಮಾಜದಲ್ಲಿ ನಿರ್ಭೀತಿಯಿಂದ ಬದುಕಲು ಸುರಕ್ಷಿತ ಪರಿಸರ ನಿರ್ಮಾಣ ಅಗತ್ಯವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನ ಹಕ್ಕುಗಳಿದ್ದರೂ ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಉಪಾಧ್ಯಕ್ಷೆ ಕೆ.ಎಸ್. ಶಾಂತಾ, ಸಾಹೀರಾ ಖಾನ್, ರಜಿಯಾಬೇಗಂ, ದುರುಗಮ್ಮ, ದೇವಮ್ಮ, ಅಂಬಮ್ಮ, ಲಕ್ಷ್ಮೀ, ಜಯಮ್ಮ, ವಾಯಿದಾ, ಹುಸೇನಬೀ, ಸಮಂಗಲಾ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಕೆಪಿಆರ್‌ಎಸ್ ಮುಖಂಡ ಮಹಾಂತೇಶ ಹಾಗೂ ಸಿಐಟಿಯು ಮುಖಂಡರಾದ ಅಲ್ಲಾಭಕ್ಷ ಹಾಜಿಬಾಬು ಕಟ್ಟಿಮನಿ, ನಾಗರಾಜ್ ಕಮತೂರು ಸೇರಿದಂತೆ ಇತರರು ಭಾಗವಹಿಸಿದ್ದರು.








Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News