ರಾಯಚೂರು | ಆಶಾಪುರ ಸಿಸಿ ರಸ್ತೆ ಬಿರುಕು: ತನಿಖೆಗೆ ದಸಂಸ ಆಗ್ರಹ
ರಾಯಚೂರು, ಅ.3: ನಗರದ ಆಶಾಪುರ ಸಿಸಿ ತೀವ್ರ ಹದಗೆಟ್ಟಿದ್ದು ರಸ್ತೆಯುದ್ದಕ್ಕೂ ಭಾರೀ ಬಿರುಕುಗಳು ಕಾಣಿಸಿಕೊಂಡಿದ್ದು, ಅಪಘಾತಗಳಿಂದ ಸಾವು ನೋವುಗಳಾಗಿವೆ. ಕಾಮಗಾರಿ ಕುರಿತು ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶರಣಪ್ಪ ದಿನ್ನಿ ಒತ್ತಾಯಿಸಿದ್ದಾರೆ.
ಈ ಕುರಿತು ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಅವರು, ಸಿಸಿ ರಸ್ತೆ ಮಾಡಿದ ಕೆಲವೇ ದಿನಗಳಲ್ಲಿ ಹಾಳಾಗಿದ್ದು ರಸ್ತೆಯುದ್ದಕ್ಕೂ ಭಾರಿ ಬಿರುಕುಗಳು ಕಾಣಿಸಿಕೊಂಡಿವೆ. ಬಿರುಕುಗಳಲ್ಲಿ ದ್ವಿ ಚಕ್ರ ವಾಹನ ಸಿಲುಕಿ ಅಪಘಾತಗಳಾಗುತ್ತಿವೆ. ಇತ್ತೀಚೆಗೆ ಉಡಮಗಲ್ ಖಾನಾಪುರದಿಂದ ಆಶಾಪುರ ರಸ್ತೆ ಮಾರ್ಗವಾಗಿ ಹೋಗುವಾಗ ಬಿರುಕು ಬಿಟ್ಟ ಜಾಗದಲ್ಲಿ ವಾಹನ ಸಿಲುಕಿ ಉರುಳಿಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಸವಾರ ಮೃತಪಟ್ಟಿದ್ದಾನೆ. ಈ ಹಿಂದೆಯೂ ಒಂದು ಸಾವಾಗುತ್ತು, ಕಳಪೆ ಕಾಮಗಾರಿ ಯಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕೋಟ್ಯಂತರ ರೂ. ಗುತ್ತಿಗೆ ದಾರ ಹಾಗೂ ಇಂಜಿನಿಯರ್ ಕಳಪೆ ಕಾಮಗಾರಿ ಮಾಡಿ ಸುಳ್ಳು ಬಿಲ್ಲುಗಳನ್ನು ಎತ್ತಿ ಪಾವತಿ ಮಾಡಿಕೊಂಡಿದ್ದು, ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.