ರಾಯಚೂರು : ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಸಾಮಾಜಿಕ ಸಮಸ್ಯೆಗಳು, ಅನ್ಯಾಯ ಹಾಗೂ ಅವ್ಯವಸ್ಥೆಗಳ ವಿರುದ್ಧ ಧ್ವನಿ ಎತ್ತಿ ಹೋರಾಟ ನಡೆಸುವುದೇ ಅವರ ನೈಜ ಕರ್ತವ್ಯವಾಗಿದೆ ಎಂದು ಎಸ್‌ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕೆ. ಉಮಾ ಹೇಳಿದರು.

ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ಅ. 2ರಿಂದ 4ರವರೆಗೆ ನಡೆಯುತ್ತಿರುವ ಎಐಡಿಎಸ್‌ಒ ರಾಜ್ಯ ಮಟ್ಟದ ವಿದ್ಯಾರ್ಥಿ ಶಿಬಿರದ ಎರಡನೇ ದಿನ ‘ವಿದ್ಯಾರ್ಥಿಗಳು ರಾಜಕೀಯ ಸೇರಬೇಕೆ?’ ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಶಿಕ್ಷಣ, ಉದ್ಯೋಗ, ಮಹಿಳಾ ಸುರಕ್ಷತೆ, ಬಡತನ, ಹಸಿವು ಹಾಗೂ ಸಾಂಸ್ಕೃತಿಕ ಅಧಃಪತನ ಸೇರಿದಂತೆ ಜನರ ದೈನಂದಿನ ಬದುಕಿನ ಬಹುತೇಕ ಎಲ್ಲ ವಿಚಾರಗಳೂ ರಾಜಕೀಯದೊಂದಿಗೆ ನೇರ ಸಂಬಂಧ ಹೊಂದಿವೆ. ಹೀಗಿರುವಾಗ ವಿದ್ಯಾರ್ಥಿಗಳು ಮಾತ್ರ ರಾಜಕೀಯದಿಂದ ದೂರವಿರಬೇಕು ಎನ್ನುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಸ್ವಾರ್ಥ ರಾಜಕಾರಣದಿಂದ ದೂರವಿದ್ದು, ಖುದಿರಾಮ್ ಬೋಸ್, ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಭಗತ್ ಸಿಂಗ್ ಸೇರಿದಂತೆ ದೇಶದ ಕ್ರಾಂತಿಕಾರಿಗಳ ಆದರ್ಶಗಳಿಂದ ಪ್ರೇರಣೆ ಪಡೆದು, ಸಮಾಜದಲ್ಲಿನ ಅನ್ಯಾಯ ಮತ್ತು ಅವ್ಯವಸ್ಥೆಗಳ ವಿರುದ್ಧ ಹೋರಾಡುವ ರಾಜಕೀಯವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಸ್ಯೆಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಮತ್ತು ಸಮಾಜದ ಪರವಾಗಿ ಹೋರಾಟ ನಡೆಸುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ ಎಂದು ಕೆ. ಉಮಾ ಹೇಳಿದರು.

ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಲ್ಯಾಣ್ ಕುಮಾರ್ ವಹಿಸಿದ್ದರು. ಎಐಡಿಎಸ್‌ಒ ಮಾಜಿ ಅಖಿಲ ಭಾರತ ಅಧ್ಯಕ್ಷ ವಿ.ಎನ್. ರಾಜಶೇಖರ್, ಕೇಂದ್ರ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯರಾದ ಸುಗುಬಾಲ, ರಾಜ್ಯ ಅಧ್ಯಕ್ಷೆ ಅಶ್ವಿನಿ ಕೆ.ಎಸ್., ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ರಾಜ್ಯ ಉಪಾಧ್ಯಕ್ಷರಾದ ಹಣಮಂತ ಎಸ್.ಎಚ್., ಅಭಯ ದಿವಾಕರ್, ಅಪೂರ್ವ ಸಿ.ಎಂ., ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಹಾಗೂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ ಚಂದ್ರ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಎಐಡಿಎಸ್‌ಒ ವಿದ್ಯಾರ್ಥಿ ಕಾರ್ಯಕರ್ತರು ಶಿಬಿರದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor