Devadurga | ಬೀಡಾಡಿ ದನಗಳ ವಿರುದ್ಧ ಪುರಸಭೆ ಕಾರ್ಯಾಚರಣೆ : 20 ದನಗಳನ್ನು ಗೋಶಾಲೆಗೆ ಸಾಗಿಸಿದ ಅಧಿಕಾರಿಗಳು
ವಾರ್ತಾಭಾರತಿ ವರದಿ ಫಲಶ್ರುತಿ
ದೇವದುರ್ಗ : ಪಟ್ಟಣದ ಮುಖ್ಯರಸ್ತೆಗಳಲ್ಲಿ ಬೀಡಾಡಿ ದನಗಳಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದು ಹಾಗೂ ಅಪಘಾತಗಳಿಗೆ ಕಾರಣವಾಗುತ್ತಿರುವ ಕುರಿತು ವಾರ್ತಾಭಾರತಿ ವರದಿ ಪ್ರಕಟಿಸಿದ ಬೆನ್ನಲ್ಲೇ ಪುರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ ನೇತೃತ್ವದಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿ 20 ಬೀಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಲಾಗಿದೆ.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ದನಗಳನ್ನು ಎಲ್ಲೆಂದರಲ್ಲಿ ಬಿಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಈ ಕುರಿತು ಹಲವು ಬಾರಿ ವಾರ್ತಾಭಾರತಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿಯನ್ನು ಗಮನಿಸಿ ಪುರಸಭೆ ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ಕೈಗೊಂಡಿರುವುದಕ್ಕೆ ಪಟ್ಟಣದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಾರ್ತಾಭಾರತಿ ಪತ್ರಿಕೆಗೆ ಧನ್ಯವಾದ ತಿಳಿಸಿದ್ದಾರೆ.
ರಸ್ತೆಗೆ ಬೀಡಾಡಿ ದನಗಳನ್ನು ಬಿಡುವ ಮಾಲೀಕರ ವಿರುದ್ಧ ಮುಂದಿನ ದಿನಗಳಲ್ಲೂ ಕ್ರಮ ಕೈಗೊಳ್ಳಲು ಪುರಸಭೆ ನಿರ್ಧರಿಸಿದೆ. ಪ್ರತಿ 15 ದಿನಕ್ಕೊಮ್ಮೆ ಕಾರ್ಯಾಚರಣೆ ನಡೆಸಿ ಬೀಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ದನಕರುಗಳನ್ನು ರಸ್ತೆಗೆ ಬಿಡದೆ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ ಮನವಿ ಮಾಡಿದ್ದಾರೆ.
ಬೀಡಾಡಿ ದನಗಳನ್ನು ರಸ್ತೆಗೆ ಬಿಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಾಗ ಮಾತ್ರ ಮಾಲಕರು ಎಚ್ಚೆತ್ತುಕೊಳ್ಳುತ್ತಾರೆ. ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ ಹಾಗೂ ಅಧಿಕಾರಿಗಳು ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿರುವುದು ಶ್ಲಾಘನೀಯ. ಸಮಸ್ಯೆಯ ಕುರಿತು ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದ ವಾರ್ತಾಭಾರತಿ ಪತ್ರಿಕೆಗೆ ಧನ್ಯವಾದ ಸಲ್ಲಿಸುತ್ತೇನೆ.
-ಮೋಹನ್ ಬಲ್ಲಿದವ್, ಭೀಮ್ ಆರ್ಮಿ ಪ್ರಧಾನ ಕಾರ್ಯದರ್ಶಿ, ದೇವದುರ್ಗ