ರೈತರನ್ನು ಸಂಕಷ್ಟದಲ್ಲಿ ಇರಲು ಬಿಡುವುದಿಲ್ಲ : ಡಿಸಿಎಂ ಜಿ.ಪರಮೇಶ್ವರ್
ರಾಯಚೂರು : ರೈತ ಸಮುದಾಯ, ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ರೈತರನ್ನು ಯಾವುದೇ ಕಾರಣಕ್ಕೂ ಸಂಕಷ್ಟದಲ್ಲಿ ಇರಲು ಬಿಡುವುದಿಲ್ಲ. ಅವರಿಗೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಅವರು ಗುರುವಾರ ಜಿಲ್ಲೆಯ ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದಲ್ಲಿ ಬರ ಪರಿಸ್ಥಿತಿಯನ್ನು ವೀಕ್ಷಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ರೈತರಿಗೆ ಆಗಿರುವ ಭೀಕರ ನಷ್ಟವನ್ನು ಗಮನಿಸಿ ಈಗಾಗಲೇ ಮುಂಗಡವಾಗಿ ಪರಿಹಾರ ನೀಡುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಕುಡಿಯುವ ನೀರು, ಮೇವು ಹಾಗೂ ಬರ ನಿರ್ವಹಣೆಗಾಗಿ ಸಾಕಷ್ಟು ಹಣವನ್ನು ಕಾಯ್ದಿರಿಸಲಾಗಿದೆ. ರಾಜ್ಯದಲ್ಲಿ ಬರ ನಿರ್ವಹಣೆಗೆ ಸುಮಾರು 329 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರದ ನಿಯಮದಂತೆ ಶೇ.33ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿದ್ದರೆ ಪ್ರತಿ ಹೆಕ್ಟೇರ್‌ಗೆ 8,500 ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ ಮೊದಲನೇ ಕಂತಿನಲ್ಲಿ 1,250 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ವಿದ್ಯುತ್ ಕಡಿತಕ್ಕೆ ಸಂಬಂಧಿಸಿದಂತೆ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿಲ್ಲ. ಬರಗಾಲದ ಈ ಪರಿಸ್ಥಿತಿಯಲ್ಲಿ ರೈತರು ಹಾಗೂ ಬಡವರ ಹಿತಾಸಕ್ತಿ ಕಾಪಾಡಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.
ಈ ವೇಳೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರೂ ಆಗಿರುವ ಮಸ್ಕಿ ಕ್ಷೇತ್ರದ ಶಾಸಕ ಆರ್. ಬಸನಗೌಡ ತುರ್ವಿಹಾಳ, ಕೊಪ್ಪಳ ಲೋಕಸಭಾ ಸಂಸದ ಕೆ. ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಜಿಲ್ಲಾಧಿಕಾರಿ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಸಹಾಯಕ ಆಯುಕ್ತ ನಾಗೇಂದ್ರ ಬಾಬು ಕುಮಾರ್, ಡಾ. ಹಂಪಣ್ಣ ಸಜ್ಜನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌವ್ಹಾಣ್, ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.