ರಾಯಚೂರು : ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಗುರುವಾರ ರಾಯಚೂರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಅನಾವೃಷ್ಟಿಯಿಂದ ತೀವ್ರವಾಗಿ ಬಾಧಿಸಿರುವ ಬರ ಪರಿಸ್ಥಿತಿಯ ನೇರ ವೀಕ್ಷಣೆ ಮತ್ತು ಬೆಳೆ ಹಾನಿ ಪರಿಶೀಲನೆ ನಡೆಸಿದರು.

ಕೊಪ್ಪಳ ಜಿಲ್ಲೆಯಿಂದ ಆಗಮಿಸಿ, ಮೊದಲಿಗೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಊಮಲೂಟಿ ಗ್ರಾಮದ ಊಮಲೂಟಿ ಸೀಮಾಂತರ ಬೀರಮಲ್ಲಪ್ಪ ಅವರ ಸರ್ವೇ ನಂಬರ್ 92ರಲ್ಲಿ ಸುಮಾರು 20 ಎಕರೆಯಷ್ಟು ತೊಗರಿ ಬೆಳೆಹಾನಿಯ ಹೊಲವನ್ನು ವೀಕ್ಷಣೆ ಮಾಡಿದರು.

ನಂತರ ಕಮಲಂಗಿ ಗ್ರಾಮದ ಸೆರ್ವೇ ನಂಬರ್ 14ರ ನಾಗಮ್ಮ ಗಂಡ ಶರಣೆಗೌಡ ಅವರ ಹೊಲಕ್ಕೆ ಭೇಟಿ ನೀಡಿ, ತೊಗರಿ ಬೆಳೆಯನ್ನು ವೀಕ್ಷಣೆ ಮಾಡಿದರು.

ಈ ವೇಳೆ ಡಾ. ಜಿ. ಪರಮೇಶ್ವರ್ ಅವರು ರೈತರೊಂದಿಗೆ ಮಾತನಾಡಿ, ರಾಜ್ಯದ 240 ತಾಲೂಕುಗಳಲ್ಲಿ ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಉಳಿದ ತಾಲೂಕುಗಳೂ ಸಹ ಬರಗಾಲದ ಭೀತಿಯಲ್ಲಿವೆ. ಕರಾವಳಿ ಭಾಗದ ನಾಲ್ಕರಿಂದ ಐದು ತಾಲ್ಲೂಕುಗಳನ್ನು ಹೊರತುಪಡಿಸಿ ಇಡೀ ರಾಜ್ಯವೇ ಇಂದು ಬರಗಾಲದಲ್ಲಿದೆ. ಮಳೆಯಿಲ್ಲದೆ ಮಣ್ಣು ಸಂಪೂರ್ಣವಾಗಿ ಒಣಗಿ ಸುಡುತ್ತಿದ್ದು, ರೈತರು ಬಿತ್ತಿದ ಎಲ್ಲಾ ಬೆಳೆಗಳು ನಾಶವಾಗಿವೆ. 125 ವರ್ಷಗಳ ಹಿಂದೆ ಇಂತಹ ಭೀಕರ ಬರಗಾಲ ಬಂದಿತ್ತು ಎಂದು ಹೇಳಿದರು.

ರಾಜ್ಯದ ರೈತ ಆರ್ಥಿಕ ಶಕ್ತಿಯಾಗಿದ್ದು, ಪ್ರಸ್ತುತ ಅವನು ತೀವ್ರ ಕಷ್ಟದಲ್ಲಿದ್ದಾನೆ. ಬ್ಯಾಂಕ್ ಹಾಗೂ ಇತರೆಡೆ ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರಿಗೆ ಈಗ ಕೈಯಲ್ಲಿ ಯಾವುದೇ ಫಸಲು ಸಿಗದೆ ಸಂಕಷ್ಟ ಎದುರಾಗಿದೆ. ರಾಜ್ಯ ಸರ್ಕಾರವು ರೈತರು ಮತ್ತು ಕೂಲಿ ಕಾರ್ಮಿಕರ ಪರವಾಗಿದೆ. ಕಳೆದ ಜೂನ್ ತಿಂಗಳಿನಲ್ಲೇ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಲಾಗಿದೆ. ಅಲ್ಲದೆ ವಿಧಾನ ಸೌಧದಲ್ಲಿ ವಿರೋಧ ಪಕ್ಷಗಳೊಂದಿಗೆ ಚರ್ಚಿಸಲು ನಾಲ್ಕು ದಿನಗಳ ಕಾಲ ವಿಶೇಷ ಅಧಿವೇಶನವನ್ನು ಸಹ ಕರೆಯಲಾಗಿತ್ತು ಎಂದರು.

ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಈಗಾಗಲೇ 306 ಕೋಟಿ ರೂಪಾಯಿಗಳನ್ನು ರಾಜ್ಯದ ವಿವಿಧ ಕ್ಷೇತ್ರಗಳಿಗೆ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಜಾನುವಾರುಗಳಿಗೆ ಮೇವು ಮತ್ತು ಮೇವಿನ ಕಿಟ್ ಒದಗಿಸಲು 25 ಕೋಟಿ ರೂಪಾಯಿಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮೇವು ಬ್ಯಾಂಕ್‌ಗಳಿಗೆ ನೀಡಲಾಗಿದೆ ಎಂದರು.

ನಾಲ್ಕು ಕ್ವಿಂಟಲ್ ತೊಗರಿ ಬಿತ್ತನೆ ಮಾಡಲಾಗಿದ್ದು, ಸರಿಯಾದ ಸಮಯಕ್ಕೆ ಮಳೆ ಬಾರದೆ ಬಿತ್ತನೆ ಮಾಡಿದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಎಕರೆಗೆ 50 ಸಾವಿರ ರೂ.ಗಳನ್ನು ಸರ್ಕಾರದ ವತಿಯಿಂದ ಪರಿಹಾರ ನೀಡಿ, ರೈತರಿಗೆ ಅನುಕೂಲ ಮಾಡಬೇಕು ಎಂದು ಊಮಲೂಟಿ ‌ಗ್ರಾಮದ ಹೊಲದ ಮಾಲೀಕನಾದ ಭೀರಮಲ್ಲಪ್ಪ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಆಗಿರುವ ಮಸ್ಕಿ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ಕೊಪ್ಪಳ ಲೋಕಸಭಾ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ, ಜಿಲ್ಲಾಧಿಕಾರಿ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ,   ಸಹಾಯಕ‌ ಆಯುಕ್ತರಾದ ನಾಗೇಂದ್ರ ಬಾಬು ಕುಮಾರ್,  ಡಾ.ಹಂಪಣ್ಣ ಸಜ್ಜನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌವ್ಹಾಣ್, ತಹಶಿಲ್ದಾರ್ ಅರುಣ್ ಕುಮಾರ್ ದೇಸಾಯಿ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು .

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor