ರಾಯಚೂರು ಉತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿಗಳ ಸೂಚನೆ : ಜ.31ರಿಂದ 2 ದಿನಗಳ ಕಾಲ 'ಮಕ್ಕಳ ಉತ್ಸವ'
ಪರಿಷ್ಕೃತ ದಿನಾಂಕದಂತೆ ಜಿಲ್ಲಾ ಉತ್ಸವ ಯಶಸ್ವಿಗೊಳಿಸಿ : ಡಿಸಿ ನಿತೀಶ್ ಕೆ.
ರಾಯಚೂರು : ಪರಿಷ್ಕೃತ ದಿನಾಂಕದಂತೆ ಫೆ.5, 6 ಮತ್ತು 7ರಂದು ನಡೆಯಲಿರುವ ರಾಯಚೂರು ಜಿಲ್ಲಾ ಉತ್ಸವದ ಎಲ್ಲಾ ಕಾರ್ಯಕ್ರಮಗಳು ಯಾವುದೇ ಲೋಪವಿಲ್ಲದೆ ಅಚ್ಚುಕಟ್ಟಾಗಿ ಜರುಗಬೇಕು. ಇದಕ್ಕಾಗಿ ಎಲ್ಲಾ ಉಪಸಮಿತಿಗಳು ಸಮನ್ವಯದಿಂದ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ನಿತೀಶ್ ಕೆ. ನಿರ್ದೇಶನ ನೀಡಿದರು.
ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಮಿತಿ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ಸವದ ದಿನಾಂಕ ಮುಂದೂಡಲ್ಪಟ್ಟಿರುವುದರಿಂದ ಸಿದ್ಧತೆಗೆ ಹೆಚ್ಚಿನ ಸಮಯ ಲಭಿಸಿದೆ. ಈ ಅವಕಾಶವನ್ನು ಬಳಸಿಕೊಂಡು ಕಾರ್ಯಕ್ರಮಗಳನ್ನು ಮತ್ತಷ್ಟು ಅರ್ಥಪೂರ್ಣವಾಗಿ ರೂಪಿಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ವಿರಮಿಸದೆ ನಿರಂತರವಾಗಿ ಕೆಲಸ ಮಾಡಬೇಕು. ಕೆಲವು ಕ್ರೀಡಾ ಸ್ಪರ್ಧೆಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಕಾರ್ಯಕ್ರಮಗಳಲ್ಲಿ ಬದಲಾವಣೆ ಇರುವುದಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದರು.
ಜಿಲ್ಲಾ ಉತ್ಸವದ ಮುನ್ನೋಡಿಯಾಗಿ ಜನವರಿ 31 ಮತ್ತು ಫೆಬ್ರವರಿ 1ರಂದು ಎರಡು ದಿನಗಳ ಕಾಲ 'ಮಕ್ಕಳ ಉತ್ಸವ' ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲೆಯ ಪ್ರತಿಭಾನ್ವಿತ ಮಕ್ಕಳಿಗೆ ವೇದಿಕೆ ಕಲ್ಪಿಸುವುದು ಇದರ ಉದ್ದೇಶವಾಗಿದ್ದು, ವಯೋಮಾನಕ್ಕೆ ಅನುಗುಣವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವ್ಯಾಪಕ ಪ್ರಚಾರ ನೀಡಲು ಸೂಚಿಸಲಾಯಿತು.
ಉತ್ಸವದ ಯಶಸ್ಸಿಗೆ ಸ್ವಯಂಪ್ರೇರಿತರಾಗಿ ಕೆಲಸ ಮಾಡುವ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಸ್ವಯಂಸೇವಕರ ಸೇವೆಯನ್ನು ಬಳಸಿಕೊಳ್ಳಬೇಕು. ಪ್ರಚಾರ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಪ್ರತಿಯೊಂದು ಕಾರ್ಯಕ್ರಮಕ್ಕೂ ಹೆಚ್ಚಿನ ಜನರು ಸಾಕ್ಷಿಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ, ಬಸವಣೆಪ್ಪ ಕಲಶೆಟ್ಟಿ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.