ರಾಯಚೂರು ಉತ್ಸವದಲ್ಲಿ ಸಂವಿಧಾನ ಜಾಗೃತಿ, ಮಹನೀಯರ ಸ್ತಬ್ಧಚಿತ್ರಕ್ಕೆ ಮಹಾಂತೇಶ ಭವಾನಿ ಆಗ್ರಹ
ದೇವದುರ್ಗ: ಫೆ.6 ರಿಂದ 8 ರವರೆಗೆ ನಡೆಯಲಿರುವ ರಾಯಚೂರು ಜಿಲ್ಲಾ ಉತ್ಸವದ ಪ್ರವೇಶ ದ್ವಾರಗಳಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಸೇರಿದಂತೆ ನಾಡಿನ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಬೇಕು ಎಂದು ಎಂಆರ್‌ಎಚ್‌ಎಸ್ ಜಿಲ್ಲಾಧ್ಯಕ್ಷ ಹಾಗೂ ಛಲವಾದಿ ಮಹಾಸಭಾ ತಾಲೂಕಾಧ್ಯಕ್ಷ ಮಹಾಂತೇಶ ಭವಾನಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ರಥಯಾತ್ರೆಯ ವೇಳೆ ಸಂವಿಧಾನ ಓದು ಮತ್ತು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಮುಖ್ಯ ವೇದಿಕೆಯಲ್ಲಿ ಸಂವಿಧಾನ ಪೀಠಿಕೆಯ ಸಾಮೂಹಿಕ ವಾಚನಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ದೇವದುರ್ಗ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಸ್ಥಳಗಳಾದ ಕೊಪ್ಪರ ಶ್ರೀ ಲಕ್ಷ್ಮೀ ನರಸಿಂಹ, ಗೂಗಲ್ ಅಲ್ಲಮಪ್ರಭು, ಅಣ್ಣೇಮಲ್ಲೇಶ್ವರ, ಗಬ್ಬೂರಿನ ದೇವಸ್ಥಾನ ಹಾಗೂ ಚಂದನಕೇರಿಯ ಮಹನೀಯರ ಕುರಿತಾದ ಸ್ತಬ್ಧಚಿತ್ರಗಳನ್ನು ಮೆರವಣಿಗೆಯಲ್ಲಿ ಸೇರಿಸಬೇಕು. ಈ ಉತ್ಸವ ಕೇವಲ ಜಿಲ್ಲಾ ಕೇಂದ್ರಕ್ಕೆ ಸೀಮಿತವಾಗಬಾರದು. ಪ್ರತಿ ತಾಲೂಕಿನ ವಿವಿಧ ರಂಗಗಳ ಸಾಧಕರಿಗೆ ವೇದಿಕೆಯಲ್ಲಿ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಕಸಾಪ ತಾಲೂಕಾಧ್ಯಕ್ಷ ಎಚ್. ಶಿವರಾಜ ಮಾತನಾಡಿ, ಉತ್ಸವದ ಭಾಗವಾಗಿ ನಡೆಯುವ ಗಾಳಿಪಟ ಉತ್ಸವ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಡಳಿತವು ಯಾವುದೇ ಕಾರಣ ನೀಡಿ ಮಹನೀಯರ ಸ್ಮರಣೆಯನ್ನು ಕೈಬಿಟ್ಟರೆ ಅಥವಾ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಗೋಷ್ಠಿಯಲ್ಲಿ ಎಚ್ಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಪುರಸಭೆ ಸದಸ್ಯ ಮಾನಪ್ಪ ಮೇಸ್ತ್ರಿ, ಚಂದ್ರಶೇಖರ ಛಲವಾದಿ, ವೆಂಕಟೇಶ ಜಾಲಹಳ್ಳಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.