×
Ad

ಜ.18ರಂದು ಮಾನ್ವಿಯಲ್ಲಿ 121 ಜೋಡಿಗಳ ಸಾಮೂಹಿಕ ವಿವಾಹ : ತಹಶೀಲ್ದಾರ್, ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

Update: 2026-01-16 20:16 IST

ಮಾನ್ವಿ: ದಾರುಸ್ಸಲಾಮ್ ಫೌಂಡೇಶನ್ ವತಿಯಿಂದ ಮಾನ್ವಿ ಪಟ್ಟಣದ ಎಪಿಎಂಸಿ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿರುವ ಮುಸ್ಲಿಂ ಸಮುದಾಯದ 121 ಜೋಡಿಗಳ ಬೃಹತ್ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಿದ್ಧತೆಗಳನ್ನು ತಹಶೀಲ್ದಾರ್ ಭೀಮರಾಯ ರಾಮಸಮುದ್ರ ಹಾಗೂ ಅಧಿಕಾರಿಗಳ ತಂಡ ಪರಿಶೀಲಿಸಿತು.

ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಸತೀಶ್ ಜಾರಕಿಹೊಳಿ, ಎನ್.ಎಸ್.ಬೋಸರಾಜು ಸೇರಿದಂತೆ ಹಲವು ಗಣ್ಯರು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ, ವೇದಿಕೆ ಹಾಗೂ ಪೆಂಡಾಲ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಲು ಅಧಿಕಾರಿಗಳು ಸೂಚಿಸಿದರು.

ಸ್ಥಳ ಪರಿಶೀಲನೆಯ ನಂತರ ಮಾತನಾಡಿದ ತಹಶೀಲ್ದಾರ್ ಭೀಮರಾಯ ರಾಮಸಮುದ್ರ, 121 ಜೋಡಿಗಳ ವಿವಾಹ ನಡೆಯುತ್ತಿರುವುದರಿಂದ ತಾಲೂಕು ಆಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ಮುಖ್ಯವಾಗಿ ಬಾಲ್ಯ ವಿವಾಹ ನಡೆಯದಂತೆ ತಡೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದ್ದು, ವಧು-ವರರ ದಾಖಲೆಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಭಾಗಯ್ಯ ನಾಯಕ ಮಾತನಾಡಿ, ಸಾಮೂಹಿಕ ವಿವಾಹವಾಗುವ ಪ್ರತಿ ಜೋಡಿಗೆ ಇಲಾಖೆಯಿಂದ 50 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಅಲ್ಲದೆ, ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸಿರುವ ಸಂಸ್ಥೆಗೆ ಪ್ರತಿ ಜೋಡಿಗೆ 5 ಸಾವಿರ ರೂ.ಗಳಂತೆ ಧನಸಹಾಯ ನೀಡಲಾಗುವುದು ಎಂದು ಮಾಹಿತಿ ನೀಡಿದರು. 

ಕಾರ್ಯಕ್ರಮದ ಆಯೋಜಕರು, ಫೌಂಡೇಶನ್ ಅಧ್ಯಕ್ಷ ಸೈಯದ್ ಅಕ್ಬರ್ ಪಾಷಾ ಹುಸೇನಿ ಮಾತನಾಡಿ, ಬಡ ಹಾಗೂ ಮಧ್ಯಮ ವರ್ಗದವರು ವಿವಾಹಕ್ಕಾಗಿ ವರ್ಷಗಟ್ಟಲೆ ದುಡಿದ ಹಣವನ್ನು ಒಂದೇ ದಿನದಲ್ಲಿ ಖರ್ಚು ಮಾಡಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇದನ್ನು ತಪ್ಪಿಸಲು ಸಾಮೂಹಿಕ ವಿವಾಹಗಳು ಜಿಲ್ಲೆ ಹಾಗೂ ರಾಜ್ಯಕ್ಕೆ ವಿಸ್ತರಣೆಯಾಗಬೇಕು. ವಿವಾಹವಾಗುವ ಜೋಡಿಗಳಿಗೆ ಗೃಹೋಪಯೋಗಿ ವಸ್ತುಗಳಾದ ಪಲಂಗು, ಅಲ್ಮಾರಿ ಹಾಗೂ ಅಡುಗೆ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜೆಸ್ಕಾಂ ಎಇಇ ವೈದ್ಯನಾಥ್, ಕಾಂಗ್ರೆಸ್ ಮುಖಂಡರಾದ ಖಾಲಿದ್ ಗುರು, ಸಿರಾಜ್ ಪಾಷಾ, ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮಾರೆಡ್ಡಿ ಭೋಗಾವತಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.








 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News