×
Ad

ರಾಯಚೂರಿನಲ್ಲಿ ಭಾರಿ ಮಳೆ | ಭೂಕುಸಿತ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಸೂಚನೆ

Update: 2025-07-23 22:38 IST

ರಾಯಚೂರು: 2025ರ ಮಾನ್ಸೂನ್ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯುವ ಸಂಭವ ಇರುವ ಬಗ್ಗೆ ಭಾರತೀಯ ಹವಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದ್ದು, ಭೂಕುಸಿತ ಪೀಡಿತ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ನಿತೀಶ್ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲೆಯ ಎಲ್ಲ ತಹಶೀಲ್ದಾರ್‌ ಗಳಿಗೆ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಸಹಾಯಕ ಆಯುಕ್ತರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಸೂಚನೆ ನೀಡಿದ್ದಾರೆ.

ಪ್ರಸ್ತುತ ಮುಂಗಾರು ಹಂಗಾಮಿನ ಅವಧಿಯಲ್ಲಿ ವಾಡಿಕೆಗಿಂತ ಅತೀ ಹೆಚ್ಚಿನ ಮಳೆಯು ಆಗುವ ಸಂಭವವಿರುವುದರಿಂದ ಪ್ರವಾಹ ಮತ್ತು ಭೂ ಕುಸಿತ ಉಂಟಾಗುವ ಸಾಧ್ಯತೆಯಿರುತ್ತದೆ ಎಂದು ನವದೆಹಲಿಯ ರಾಷ್ಟ್ರೀಯ ವಿಪತ್ತು ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಆಗಬಹುದಾದ ಅವಘಡಗಳನ್ನು ನಿಯಂತ್ರಿಸಲು ಸೂಚಿಸಿರುವುದರಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಮುನ್ನಚ್ಚರಿಕೆ ಕ್ರಮವಾಗಿ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಗಳು ಹಾಗೂ ಹವಾಮಾನ ಎಚ್ಚರಿಕೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿ, ಸ್ಥಳೀಯ ಅಧಿಕಾರಿಗಳಿಗೆ ಮತ್ತು ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳ ನಾಗರಿಕರಿಗೆ ಸಂಬಂಧಿತ ಮಾಹಿತಿಯನ್ನು ತ್ವರಿತವಾಗಿ ನೀಡಬೇಕು. ಪ್ರವಾಹ ಪೀಡಿತ ಗ್ರಾಮಗಳಲ್ಲಿ ನದಿ ದಡದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಹಾಗೂ ಜನ-ಜಾನುವಾರು ಹೋಗದಂತೆ ಡಂಗೂರ ಸಾರುವುದು ಅಥವಾ ಮೈಕ್ ಮೂಲಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ.

ಕಚೇರಿಗಳಲ್ಲಿ ಕಂಟ್ರೋಲ್ ರೂಮ್ ತೆರೆದು 24 ಗಂಟೆ ಕಂಟ್ರೋಲ್ ರೂಮ್‌ಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಯನ್ನು ನಿಯೋಜಿಸುವುದು ಹಾಗೂ ಸಾರ್ವಜನಿಕರಿಗೆ ಮಾಹಿತಿಗಾಗಿ ಪತ್ರಿಕೆಗಳಲ್ಲಿ ಕಂಟ್ರೋಲ್ ರೂಮ್ ವಿವರ ನೀಡಬೇಕು. ಜಿಲ್ಲೆಯ ತಾಲೂಕು ಮಟ್ಟದಲ್ಲಿ ಪ್ರವಾಹವನ್ನು ನಿಭಾಯಿಸಲು ವಿವಿಧ ಸಮಿತಿಗಳನ್ನು ರಚಿಸಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ತಿಳಿಸಿದ್ದಾರೆ.

ತಾಲೂಕು ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಯು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಬೇಕು. ಪ್ರವಾಹ ಅಥವಾ ಮಳೆಗೆ ನಿಯೋಜಿಸಲ್ಪಟ್ಟ ತಾಲೂಕು ಮಟ್ಟದ ಅಧಿಕಾರಿ ಅಥವಾ ಸಿಬ್ಬಂದಿಗಳು ಸಹಾಯಕ ಆಯುಕ್ತರ ಅನುಮತಿಯಿಲ್ಲದೆ ರಜೆಯನ್ನು ಪಡೆಯತಕ್ಕದಲ್ಲ. ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ಸಮಿತಿಯನ್ನು ನವಿಕರಿಸಿ, ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಈ ಸಮಿತಿಯು ಸಜ್ಜಾಗಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಜವಾಬ್ದಾರಿಗಳಲ್ಲಿ ಮತ್ತು ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ಅಂತವರ ವಿರುದ್ಧ ಜಿಲ್ಲಾ ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News