×
Ad

ರಾಯಚೂರು | ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ವಂಚನೆ : ಗುಜರಾತ್ ಮೂಲದ ಆರೋಪಿಯ ಬಂಧನ

Update: 2025-12-16 09:10 IST

ರಾಯಚೂರು: ಹಣ‌ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಕೊಡುವುದಾಗಿ ನಂಬಿಸಿ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚನೆ ಮಾಡಿದ ಗುಜರಾತ್ ಮೂಲದ ಆರೋಪಿ ಮೋಹಿತನನ್ನು ರಾಯಚೂರಿನ ಸೈಬರ್ ಅಪರಾಧ ಠಾಣೆ(ಸೆನ್ ) ಪೊಲೀಸರು ಬಂಧಿಸಿ, ಆರೋಪಿಯಿಂದ 3.50 ರೂ.ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯು 2024ರ ಡಿ.17ರಿಂದ 2025ರ ಜ.21ರ ವರೆಗೆ ಅವಧಿಯಲ್ಲಿ ಮೆಹಬೂಬ ರೆಹಮಾನ್ ಹಾಗೂ ಅವರ ಸ್ನೇಹಿತ ರಾಜಶೇಖರ ಅವರಿಗೆ ವಾಟ್ಸ್ಆ್ಯಪ್‌ನಲ್ಲಿ ಸಂಪರ್ಕ ಮಾಡಿ ವ್ಯಾಪಾರದಲ್ಲಿ ಹಣ ತೊಡಗಿಸುವಂತೆ ಹೇಳಿದ್ದರು. ಹೆಚ್ಚಿನ ಲಾಭಾಂಶ ಬರುವುದಾಗಿ ನಂಬಿಸಿ ಬ್ಯಾಂಕ್ ಖಾತೆಯಿಂದ 28,06,182 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದರು.

ಹಣವು ಗುಜರಾತಿನ ಸೂರತ್ ಜಿಲ್ಲೆಯ ಮೋಹಿತ್ ರಾಜ್ವಾನಿ, ಮದತಲಿ ರಜ್ವಾನಿ, ಅವರ ಖಾತೆಗೆ ಜಮಾ‌ ಆಗಿತ್ತು. ಹಣ ಕಳೆದುಕೊಂಡ ಸಿಂಧನೂರು ತಾ.ಪಂ ಎಂಜಿನಿಯರ್ ಮೆಹಬೂಬ ರೆಹಮಾನ್ ಅವರು ಸಿಂಧನೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ಪ್ರಕರಣವನ್ನು ಬೇದಿಸಿರುವ ಸೈಬರ್ ಅಪರಾಧ (ಸೆನ್) ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ಆರೋಪಿಯಿಂದ 3.50 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಆರೋಪಿಯ ಹಿನ್ನೆಲೆ: ಗುಜರಾತ್ ನ ಸೂರತ್ ಜಿಲ್ಲೆಯ ಆರೋಪಿ‌ ಮೋಹಿತ್‌ ವಿರುದ್ಧ ಸಿಂಧನೂರು ಮಾತ್ರವಲ್ಲದೇ ಅಂಧ್ರ ಪ್ರದೇಶದ ಕೋನಸೀಮಾ ಜಿಲ್ಲೆಯ ಮಂಡಪೇಟನಗರದ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ. ಆರೋಪಿ 13 ಸೈಬರ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಪ್ರಕರಣವನ್ನು ಸೈಬರ್ ಅಪರಾಧ ಠಾಣೆಯ ಡಿಎಸ್ ಪಿ ವೆಂಕಟೇಶ ಹೊಗಿಬಂಡಿ, ಸಿಬ್ಬಂದಿ ಪ್ರಾಣೇಶ, ಪ್ರವೀಣಕುಮಾರ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News