Raichur | ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಕಾಂಗ್ರೆಸ್ ಸಂಸದನ ವಜಾಕ್ಕೆ ಬಿಜೆಪಿ ಆಗ್ರಹ
ರಾಯಚೂರು: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ವಜಾಗೊಂಡಿದ್ದಾರೆ ಎನ್ನಲಾದ ಮಣಿಪುರದ ಇನ್ನರ್ ಮಣಿಪುರ ಕ್ಷೇತ್ರದ ಕಾಂಗ್ರೆಸ್ ಸಂಸದ ಹಾಗೂ ಜೆಎನ್‌ಯು ಪ್ರಾಧ್ಯಾಪಕ ಡಾ. ಅಂಗೊಂಚಾ ಬಿಮೋಲ್ ಅಕೋಯಿಜಂ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕು. ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದವರಿಗೆ ಕಠಿಣ ಶಿಕ್ಷೆ ವಿಧಿಸುವುದರ ಜೊತೆಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅನಿತಾ ಬಸವರಾಜ, ಸಹನಾ ಹಿರೇಮಠ, ಸುಮಾ ಗಸ್ತಿ, ವಿಜಯರಾಜೇಶ್ವರಿ ಗೋಪಿಶೆಟ್ಟ, ಸುಮಂಗಲಾ, ಸೀತಾ ನಾಯಕ, ವಿಜಯಕುಮಾರ ಸಜ್ಜನ್, ಸಂತೋಷ ರಾಜಗುರು, ಮಲ್ಲಿಕಾರ್ಜುನ ಹಳ್ಳೂರು, ಡಾ. ನಾಗರಾಜ ಬಾಲ್ಕಿ, ಜೇಮ್ಸ್, ವಿಷ್ಣುವರ್ಧನ್, ಶರಣಯ್ಯಸ್ವಾಮಿ, ಎಂ. ಮಾರೆಪ್ಪ, ಜೆ. ಮೌನೇಶ, ಇ. ಶಶಿರಾಜ ಹಾಗೂ ಪಲಗುಲು ನಾಗರಾಜ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.