ಯರಗೇರಾದಲ್ಲಿ ಆ.26ರಿಂದ ‘ಕ್ರಾಂತಿಯ ಜ್ಯೋತಿ–ಪ್ರವಾದಿ ಮುಹಮ್ಮದ್ (ಸ)’ ಸೀರತ್ ಅಭಿಯಾನ
ಯರಗೇರಾ: ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನದ ಅಂಗವಾಗಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ವತಿಯಿಂದ ಆಗಸ್ಟ್ 26ರಿಂದ ಸೆಪ್ಟೆಂಬರ್ 6, 2026ರವರೆಗೆ ರಾಜ್ಯಾದ್ಯಂತ ‘ಕ್ರಾಂತಿಯ ಜ್ಯೋತಿ – ಪ್ರವಾದಿ ಮುಹಮ್ಮದ್ (ಸ)’ ಶೀರ್ಷಿಕೆಯಡಿ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಯರಗೇರಾ ಘಟಕದ ಅಧ್ಯಕ್ಷ ಜನಾಬ್ ತಖಿ ಅಹ್ಮದ್ ತಿಳಿಸಿದರು.
ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ (ಸ) ಅವರ ಸಂದೇಶವು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವಕುಲದ ಏಕತೆಯಂತಹ ಮೌಲ್ಯಗಳ ಮೇಲೆ ಆಧಾರಿತವಾಗಿದೆ. ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಅವರ ಮಾರ್ಗದರ್ಶನ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಪ್ರವಾದಿ ಮುಹಮ್ಮದ್ (ಸ) ಅವರ ಜೀವನ, ಸಂದೇಶ ಮತ್ತು ಮಾನವೀಯ ಮೌಲ್ಯಗಳನ್ನು ಕನ್ನಡ ಜನತೆಗೆ ಪರಿಚಯಿಸುವುದು, ಅವರ ಕುರಿತು ಸಮಾಜದಲ್ಲಿ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಹಾಗೂ ವಿವಿಧ ಸಮುದಾಯಗಳ ನಡುವೆ ಸೌಹಾರ್ದ ಮತ್ತು ಪರಸ್ಪರ ಬಾಂಧವ್ಯವನ್ನು ಬಲಪಡಿಸುವುದೇ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ಖ್ಯಾತ ಸಾಹಿತಿ ಯೋಗೇಶ್ ಮಾಸ್ಟರ್ ಅವರ ‘ಮಾನವ ಮನಸ್ಸಿನ ಕೃಷಿಕ – ಮನದೊಡೆಯ ಪ್ರವಾದಿ ಮುಹಮ್ಮದ್ (ಸ)’ ಹಾಗೂ ಅಬ್ದುಸ್ಸಲಾಮ್ ಪುತ್ತಿಗೆ ಅವರ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ)’ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಅಭಿಯಾನದ ಅವಧಿಯಲ್ಲಿ ವೈಯಕ್ತಿಕ ಭೇಟಿ, ವಿಚಾರಗೋಷ್ಠಿ, ಸಾರ್ವಜನಿಕ ಸಮಾವೇಶ, ಸಂವಾದ ಕಾರ್ಯಕ್ರಮ, ಸೀರತ್ ಪ್ರವಚನ, ಸೀರತ್ ಪ್ರದರ್ಶನ, ಸಮಾಜಸೇವಾ ಚಟುವಟಿಕೆಗಳು ಹಾಗೂ ಸೌಹಾರ್ದ ಸಂದೇಶ ರ್ಯಾಲಿಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಖಿ ಅಹ್ಮದ್ ಮಾಹಿತಿ ನೀಡಿದರು.
ಪ್ರವಾದಿ ಮುಹಮ್ಮದ್ (ಸ) ಅವರ ಮಾನವೀಯತೆ, ನ್ಯಾಯ, ಸಮಾನತೆ ಮತ್ತು ಸೌಹಾರ್ದದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಅಬ್ದುರ್ ರಹ್ಮಾನ್, ನಾಝಿಯಾ ಪರ್ವೀನ್, ನಾಝಿಮ್ ಹಾಗೂ ಫಾರ್ಹನ ಬೇಗಮ್ ಉಪಸ್ಥಿತರಿದ್ದರು.